ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಜಾನ್ ಗಾಸಾರ್ಟಂಗ್


 ಜಾನ್ ಗಾಸಾರ್ಟಂಗ್


ಜಾನ್ ಗಾಸಾರ್ಟಂಗ್ ಮಹಾನ್ ಪುರಾತತ್ವಜ್ಞರೆನಿಸಿದ್ದು, ಮಧ್ಯಪ್ರಾಚ್ಯದ ಬಗ್ಗೆ ನಡೆಸಿದ ಸಂಶೋಧನೆಗಳಿಂದಾಗಿ ಪ್ರಖ್ಯಾತರಾಗಿದ್ದಾರೆ. 

ಜಾನ್ ಗಾಸಾರ್ಟಂಗ್ ಲ್ಯಾಂಡ್ಷೈರಿನ್ ಬ್ರಿಟನ್ನಿನ ಬ್ಲಾಕ್ಬರ್ನ್ನಲ್ಲಿ 1876ರ ಮೇ 5 ರಂದು ಜನಿಸಿದರು.  ಆಕ್ಸಫರ್ಡಿನ ಜೀಸಸ್ ಕಾಲೇಜಿನಲ್ಲಿ ಗಣಿತಶಾಸ್ತ್ರದ ವಿದ್ಯಾರ್ಥಿಯಾಗಿದ್ದಾಗ ಇವರಿಗೆ ರೋಮ್ ಮತ್ತು ಬ್ರಿಟಿಷ್ ಪ್ರಾಕ್ತನದಲ್ಲಿ ಆಸಕ್ತಿ ಹುಟ್ಟಿತು. ಇವರು ಪ್ರಕಟಿಸಿದ 'ರೋಮನ್ ರಿಬ್ಚೆಸ್ಟರ್' (1899) ಈ ಆಸಕ್ತಿಯ ಫಲ. 

ಜಾನ್ ಗಾಸಾರ್ಟಂಗ್ 1902ರಲ್ಲಿ ಲಿವರಪುಲ್ ವಿಶ್ವವಿದ್ಯಾಲಯದಲ್ಲಿ ಈಜಿಪ್ಟ್ ಪ್ರಾಕ್ತನಶಾಸ್ತ್ರದ ಉಪಪ್ರಾಧ್ಯಾಪಕರಾದರು. ಅದೇ ವಿಶ್ವವಿದ್ಯಾಲಯದಲ್ಲಿ 1907ರಿಂದ 1941ರ ವರೆಗೆ ಪ್ರಾಕ್ತನಶಾಸ್ತ್ರ ವಿಧಾನಗಳ ಮತ್ತು ಪ್ರಯೋಗದ ಪ್ರಾಧ್ಯಾಪಕರಾಗಿದ್ದರು. ಲಿವರ್ಪುಲ್ ಪ್ರಾಕ್ತನಶಾಸ್ತ್ರ ಸಂಸ್ಥೆಯ ಸ್ಥಾಪನೆಗೆ  ಇವರೇ ಕಾರಣ. 1899ರಲ್ಲಿ ಇವರು ವಿಲಿಯಂ ಮ್ಯಾಥ್ಯೂಸ್ ಫ್ಲಿಂಡರ್ ಪೆಟ್ರಿಯ ಅವರ ಕೈಕೆಳಗೆ ಕೆಲಸ ಮಾಡಲು ಈಜಿಪ್ಟಿಗೆ ಹೋದರು. ಮುಂದಿನ 15 ವರ್ಷಗಳ ಕಾಲ ಈಜಿಪ್ಟ್, ನ್ಯೂಬಿಯ, ಏಷ್ಯ ಮೈನರ್ಗಳಲ್ಲಿ ಉತ್ಖನನ ಮಾಡಿದರು. ಹಿಟ್ಟೈಟ್ ನಾಗರಿಕತೆಯ ವಿಚಾರದಲ್ಲಿ ಅಧಿಕಾರಯುತವಾಗಿ ಹೇಳಬಲ್ಲವರಾದರು. 1910ರಲ್ಲಿ ಪ್ರಕಟವಾದ 'ದಿ ಲ್ಯಾಂಡ್ ಆಫ್ ದಿ ಹಿಟ್ಟೈಟೀಸ್' ಎಂಬುದು ಈ ಬಗ್ಗೆ ಒಂದು ಶಿಷ್ಟ ಗ್ರಂಥ. ಇದನ್ನು ಪರಿಷ್ಕರಿಸಿ 1927ರಲ್ಲಿ 'ದಿ ಹಿಟ್ಟೈಟ್ ಎಂಪೈರ್' ಎಂಬ ಹೆಸರಿನಲ್ಲಿ ಪ್ರಕಟಿಸಿದರು. ಪ್ರಾಚೀನ ಇಥಿಯೋಪಿಯದ ರಾಜಧಾನಿ ಮೆರೊಯೀದಲ್ಲಿ ಇವರು ನಡೆಸಿದ (1910-14) ಉತ್ಖನನಗಳು ಅತ್ಯಂತ ಗಮನಾರ್ಹ ವಿಚಾರಗಳನ್ನು ಹೊರಗೆಡವಿದವು. ಅದು ರೋಮನ್ನರ ಆಕ್ರಮಣಕ್ಕೊಳಪಟ್ಟಿತ್ತೆಂಬುದು ವ್ಯಕ್ತಪಟ್ಟದ್ದು ಆಗಲೇ. ಒಂದನೆಯ ಮಹಾಯುದ್ಧದ ಕಾಲದಲ್ಲಿ ಇವರು ರೆಡ್ ಕ್ರಾಸ್ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದರು. ಇವರು ಜೆರೂಸಲೆಂನಲ್ಲಿ ಬ್ರಿಟಿಷ್ ಪುರಾತತ್ತ್ವ ಶಾಲೆಯ ಪ್ರಥಮ ನಿರ್ದೇಶಕರಾಗಿ ನೇಮಕಗೊಂಡದ್ದು 1919ರಲ್ಲಿ. ಪ್ಯಾಲೆಸ್ಟೇನಿನ ಪುರಾತತ್ತ್ವ ಇಲಾಖೆಯನ್ನು ಇವರು ವಹಿಸಿಕೊಂಡದ್ದು 1920ರಲ್ಲಿ. 1926ರಲ್ಲಿ ಈ ಎರಡು ಹುದ್ದೆಗಳಿಂದ ನಿವೃತ್ತಿ ಹೊಂದಿದ ಮೇಲೆಯೂ ಪುರಾತತ್ತ್ವ ವಿಚಾರಗಳಲ್ಲಿ ಕೆಲಸ ಮುಂದುವರಿಸಿದರು. 

1930-36ರಲ್ಲಿ ಜೆರಿಕೋದಲ್ಲಿ ಇವರು ಮಾಡಿದ ಉತ್ಖನನಗಳು ಬಲು ಅಮೂಲ್ಯವಾದಂಥವು. ನೂತನ ಶಿಲಾಯುಗ ಮತ್ತು ಕಂಚಿನ ಯುಗಗಳ ಜನವಸತಿಯ ಬಗ್ಗೆ ಅನೇಕ ಮುಖ್ಯ ಸಂಗತಿಗಳು ಆವಿಷ್ಕಾರಗೊಂಡುವು. ಇವರು ಮೆರ್ಸಿನ್ನಲ್ಲಿ ಸಂಶೋಧನೆಗೆ ಎರಡನೆಯ ಮಹಾಯುದ್ಧ ಅಡ್ಡಿಯಾಯಿತು. ಈ ಸಂಶೋಧನೆಯ ವರದಿ ಪ್ರಿ-ಹಿಸ್ಟಾರಿಕ್ ಮೆರ್ಸಿನ್ ಎಂಬ ಹೆಸರಿನಲ್ಲಿ ಪ್ರಕಟವಾದ್ದು 1953ರಲ್ಲಿ. ಆನಟೋಲಿಯದ ಬಗ್ಗೆ ನಡೆಸಿದ ಅಧ್ಯಯನಕ್ಕೆ ಮನ್ನಣೆಯಾಗಿ ಇವರು 1947-48ರಲ್ಲಿ ಆಂಕಾರದ ಬ್ರಿಟಿಷ್ ಪುರಾತತ್ತ್ವ ಶಾಲೆಯ ಪ್ರಥಮ ನಿರ್ದೇಶಕರಾಗಿ ನೇಮಕಗೊಂಡರು. 1949ರಲ್ಲಿ ಅದರ ಅಧ್ಯಕ್ಷರಾದರು. 

ಜಾನ್ ಗಾಸಾರ್ಟಂಗ್ ಲೆಬನಾನಿನ ಬೀರತ್ನಲ್ಲಿ 1956ರ ಸಪ್ಟೆಂಬರ್ 12ರಂದು ನಿಧನರಾದರು.

On the birthday anniversary of great archaeologist John Garstang

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ