ಕ್ಷಮಾ.ವಿ.ಭಾನುಪ್ರಕಾಶ್
ಕ್ಷಮಾ.ವಿ.ಭಾನುಪ್ರಕಾಶ್
ಕ್ಷಮಾ.ವಿ.ಭಾನುಪ್ರಕಾಶ್ ಕನ್ನಡದಲ್ಲಿನ ವಿಜ್ಞಾನ ಬರಹಗಾರರಲ್ಲಿ ಎದ್ದು ಕಾಣುವ ಹೆಸರು. ಇವರು ವಿಜ್ಞಾನ ಶಿಕ್ಷಕಿ, ಕಂಠದಾನ ಕಲಾವಿದೆ, ರಂಗಭೂಮಿ ಕಲಾವಿದೆ, ಪರಿಸರಪ್ರೇಮಿ, ಕವಯತ್ರಿ ಮತ್ತು ಗಾಯಕಿ.
ಜೂನ್ 27, ಕ್ಷಮಾ ಅವರ ಜನ್ಮದಿನ. ಇವರು ಬೆಂಗಳೂರಿನವರು. ತಂದೆ ವಸಂತಕುಮಾರ್ ಬರಹಗಾರರು. ತಾಯಿ ಜಯಶ್ರೀ ಕನ್ನಡ ಉಪನ್ಯಾಸಕಿ. ಪತಿ ಭಾನುಪ್ರಕಾಶ್ ಐಟಿ ಕ್ಷೇತ್ರದ ಉದ್ಯೋಗಿ ಮತ್ತು ಪರಿಸರ ತಜ್ಞರು. ಕ್ಷಮಾ ಅವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಮೈಕ್ರೋಬಯಾಲಜಿಯಲ್ಲಿ ಮಾಸ್ಟರ್ಸ್ ಮಾಡಿದ್ದಾರೆ.
ಕ್ಷಮಾ.ವಿ.ಭಾನುಪ್ರಕಾಶ್ ಅವರು ಲೆಗಸಿ ಕಾಲೇಜಿನಲ್ಲಿ ವಿಜ್ಞಾನ ಉಪನ್ಯಾಸಕಿಯಾಗಿದ್ದಾರೆ.
ಕ್ಷಮಾ ಅವರು ಕನ್ನಡದಲ್ಲಿ ವಿಜ್ಞಾನ ಪುಸ್ತಕಗಳ ಲೇಖಕರು. ಆಕಾಶವಾಣಿಯಲ್ಲಿ ಕನ್ನಡದಲ್ಲಿ ವಿಜ್ಞಾನ ಆಧಾರಿತ ರೇಡಿಯೋ ಧಾರಾವಾಹಿಗಳ ಸಾಹಿತ್ಯ ರಚನಕಾರರು. ಆಕಾಶವಾಣಿಯಲ್ಲಿ ಪ್ರಸಾರವಾಗುವ ʼನಿತ್ಯವಿಜ್ಞಾನʼದ ಲೇಖಕರು ಹಾಗೂ ನಿರೂಪಕರಲ್ಲಿ ಒಬ್ಬರು. ಇವರು ʼರಿಸರ್ಚ್ ಮ್ಯಾಟರ್ಸ್ʼ ಸಂಸ್ಥೆಯ ಕನ್ನಡ ವಿಭಾಗದ ಮಾಜಿ ಸಂಪಾದಕರು. ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯ ಹಾಗೂ ಗುಬ್ಬಿ ಲ್ಯಾಬ್ಸ್‌ಗಾಗಿ ಇವರು ಹಲವಾರು ವಿಜ್ಞಾನ ಲೇಖನಗಳನ್ನು ಅನುವಾದಿಸಿದ್ದಾರೆ. ಇವರ 300ಕ್ಕೂ ಹೆಚ್ಚು ವಿಜ್ಞಾನ ಲೇಖನಗಳು ಪ್ರಮುಖ ಕನ್ನಡ ದಿನಪತ್ರಿಕೆಗಳು ಮತ್ತು ನಿಯತಕಾಲಿಕಗಳಲ್ಲಿ ಪ್ರಕಟವಾಗಿವೆ.
ಕ್ಷಮಾ ಅವರ ಪ್ರಕಟಿತ ಕೃತಿಗಳಲ್ಲಿ 'ಒರಿಗಾಮಿಯಲ್ಲರಳಿದ ಸಾಧಕ', 'ವಿಜ್ಞಾನ ಲೋಕದ ಜ್ಞಾನಕುಸುಮಗಳು' (50 ಸಾಧಕಿಯರು), 'ಜೀವಿಜ್ಞಾನ' - ಪರಿಸರ ಮತ್ತು ಜೀವವಿಜ್ಞಾನದ ಸರಳ ಲೇಖನಗಳು (ಭಾಗ 1 ಮತ್ತು ಭಾಗ 2), 'ಸಂಶೋಧನ ಸಂಪದ', 'ದೇಹದೇಗುಲದಲ್ಲಿ ಅನ್ಯಜೀವಿಗಳು', ‘ಪ್ರತಿಜೀವಕಗಳ ಪ್ರಪಂಚ' ಕೃತಿಗಳು ಸೇರಿವೆ. ‘ಭಾವೋನ್ಮಾದಿನಿ' ಇವರ ಕವಿತೆಗಳ ಸಂಕಲನ.
ಕ್ಷಮಾ ಅವರು ವಿಜ್ಞಾನ ಶಿಕ್ಷಕಿ ಮತ್ತು ಬರಹಗಾರ್ತಿಯಲ್ಲದೆ ಕಂಠದಾನ ಕಲಾವಿದೆ, ರಂಗಭೂಮಿ ಕಲಾವಿದೆ, ಪರಿಸರಪ್ರೇಮಿ ಮತ್ತು ಗಾಯಕಿ. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವೂ ಸೇರಿದಂತೆ ಅನೇಕ ವೇದಿಕೆಗಳಲ್ಲಿ ಅಹ್ವಾನಿತರಾಗಿ ವಿಚಾರ ಪ್ರಸ್ತುತಿ ಮಾಡಿದ್ದಾರೆ.
ಕ್ಷಮಾ ಅವರಿಗೆ ‘ವಿಜ್ಞಾನ ಲೋಕದ ಜ್ಞಾನಕುಸುಮಗಳು’ ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ‘ ಗೌರು ಭಟ್ ದತ್ತಿ ನಿಧಿ ಪ್ರಶಸ್ತಿ’, ಗಾರ್ಡನ್ ಸಿಟಿ ವಿಶ್ವವಿದ್ಯಾಲಯದ ವಿಜ್ಞಾನ ಕ್ಷೇತ್ರದ ಪುರಸ್ಕಾರಗಳೂ ಸೇರಿದಂತೆ ಹಲವು ಗೌರವಗಳು ಸಂದಿವೆ.
ಆತ್ಮೀಯರಾದ ಬಹುಮುಖಿ ಪ್ರತಿಭಾನ್ವಿತ ಸಾಧಕರಾದ ಕ್ಷಮಾ.ವಿ.ಭಾನುಪ್ರಕಾಶ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ನಮಸ್ಕಾರ.
Happy birthday Kshama V Bhanuprakash🌷🌷🌷

ಕಾಮೆಂಟ್‌ಗಳು