ರಾಮ ರಾಘೋಭ ರಾಣೆ
ರಾಮ ರಾಘೋಭ ರಾಣೆ
ರಾಮ ರಾಘೋಬ ರಾಣೆ ಕರ್ನಾಟಕದ ಏಕೈಕ ಪರಮವೀರ ಚಕ್ರ ವಿಜೇತರು.
ರಾಮ ರಾಘೋಬ ರಾಣೆ 1918ರ ಜೂನ್ 26ರಂದು ಕಾರವಾರ ಜಿಲ್ಲೆಯ ಚೆಂಡಿಯಾ ಎಂಬಲ್ಲಿ ಜನಿಸಿದರು. ಅವರು ಕೊಂಕಣದ ಮರಾಠಾ ಕ್ಷತ್ರೀಯ ಸಮಾಜಕ್ಕೆ ಸೇರಿದವರು. ಅವರು ಸಾಮಾನ್ಯ ಸೈನಿಕನಾಗಿ ಸೇನೆ ಸೇರಿದರು. ಸೇನೆಯಲ್ಲಿ ಜಾಣರಿಗೆ ಸಾಹಸಿಗಳಿಗೆ ಇರುವ ಸದಾವಕಾಶಗಳನ್ನು ಬಳಸಿಕೊಂಡು ಸೇನೆಯಲ್ಲಿ ಅಧಿಕಾರಿಯಾದರು. ಕಾಪ್ಸ್ ಆಫ್ ಇಂಜಿನಿಯರ್ಸ್ನಲ್ಲಿ 1947ರ ಡಿಸೆಂಬರ್ 15ರಂದು ರಾಮ ರಾಘೋಬ ರಾಣೆ ಕಮಿಶನ್ಸ್ ಅಧಿಕಾರಿಯಾದರು.
1947ರ ದೇಶ ವಿಭಜನೆಯ ಕಾಲದಲಿ ಪಾಕಿಸ್ತಾನ ಆಕ್ರಮಿಸಿಕೊಂಡ ಕೆಲವು ಭಾಗಗಳನ್ನು ಮರಳಿ ಪಡೆಯಲು ಭಾರತೀಯ ಸೇನೆ ನೌಕೇರಾದಿಂದ ರಾಜೋರಿಯತ್ತ ಮುನ್ನುಗ್ಗಿತು. 1948ರ ಎಪ್ರಿಲ್ 8ರಂದು ಸೆಕೆಂಡ್ ಲೆಫ್ಟಿನೆಂಟ್ ರಾಮ ರಾಘೋಬ ರಾಣೆ (ಬಾಂಬೆ ಇಂಜಿನಿಯರ್ಸ್ ಗ್ರೂಪ್)ಗೆ ಸಾಶೇಖಾ ಹಾಗೂ ರಾಜೋರಿ ಮಾರ್ಗದಲ್ಲಿ ಶತ್ರು ಸೇನೆ ಹುಗಿದಿಟ್ಟ ಸ್ಪೋಟಕಗಳನ್ನು ತೆರವುಗೊಳಿಸುವ ಕಾರ್ಯ ನೀಡಲಾಯಿತು. ಕಾರ್ಯಾಚರಣೆ ಪ್ರದೇಶ ಗುಡ್ಡಗಾಡಿನ ದುರ್ಗಮ ಪ್ರವೇಶವಾಗಿತ್ತು. ಶತ್ರು ಗುಂಡಿನ ಮಳೆಗರೆಯುತ್ತಿದ್ದ. 4ನೇ ಡೊಗ್ರಾದ ಒಂದು ಭಾಗವಾಗಿದ್ದ ರಾಣೆಯವರ 37ನೇ ಕಂಪನಿಯ ಒಂದು ತುಕಡಿ ಹುಗಿದಿಟ್ಟ ಸ್ಪೋಟಕಗಳನ್ನು ಸುರಕ್ಷಿತವಾಗಿ ತೆರವುಗೊಳಿಸುವ ಕಾರ್ಯಾಚರಣೆ ಆರಂಭಿಸಿತು. ತುಕಡಿಯ ಇಬ್ಬರು ಸೈನಿಕರು ಶತ್ರುದಾಳಿಗೆ ವೀರಮರಣವನ್ನಪ್ಪಿದರು. ಸ್ವತಃ ರಾಣೆ ಗಾಯಗೊಂಡರು. ಆದರೂ ಎದೆಗುಂದದೆ ಶತ್ರುಗಳ ದಾಳಿಯ ಮಧ್ಯೆಯೇ ಹುಗಿದಿಟ್ಟ ಸ್ಪೋಟಕಗಳನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು ಸತತ ಮೂರು ದಿನಗಳ ಕಾಲ ಮುಂದುವರೆಸಿದರು. ಕರ್ತವ್ಯದ ಕರೆಯನ್ನು ಮೀರಿ, ಜೀವದ ಹಂಗುತೊರೆದು ಅಪ್ರತಿಮ ಸಾಹಸ ಹಾಗೂ ಶೌರ್ಯದಿಂದ ತಮ್ಮ ತುಕಡಿಯನ್ನು ಹುರಿದುಂಬಿಸಿ 4ನೇ ಡೊಗ್ರಾ ವೇಗವಾಗಿ ಮುನ್ನುಗ್ಗುವಂತೆ ಮಾಡಿದ ಸೆಕೆಂಡ್ ಲೆಫ್ಟಿನೆಂಟ್ ರಾಮ ರಾಘೋಬ ರಾಣೆ ಅವರಿಗೆ ದೇಶದ ಅತ್ಯುನ್ನತ ಯುದ್ಧಕಾಲದ ಶೌರ್ಯ ಪ್ರಶಸ್ತಿ ‘ಪರಮವೀರ ಚಕ್ರ’ ಪದಕವನ್ನು ನೀಡಲಾಯಿತು.
ರಾಣೆಯವರು 1968ರ ವರೆವಿಗೂ ಸೇನೆಯ ಸೇವೆಯಲ್ಲಿದ್ದು ಮೇಜರ್ ಆಗಿ ನಿವೃತ್ತಿ ಹೊಂದಿದರು. ‘ಪರಮವೀರ ಚಕ್ರ ಪದಕ’ ಪಡೆದ ನಂತರ ಕೂಡ ರಾಣೆಯವರಿಗೆ ಐದು ಬಾರಿ ಶ್ಲಾಘನಾ ಪತ್ರ (ಮೆನ್ಷನ್ ಇನ್ ಡಿಸ್ಪ್ಯಾಚ್) ನೀಡಲಾಯಿತು. ಇದು ಅವರ ಸೇವಾ ತತ್ಪರತೆಯನ್ನು ಎತ್ತಿ ತೋರಿಸುತ್ತದೆ.
1994ರ ಜುಲೈ 10ರಂದು ಕರ್ನಾಟಕದ ಈ ಏಕೈಕ “ಪರಮವೀರ ಚಕ್ರ ಪದಕ” ಸಂಮಾನಿತ ರಾಮ ರಾಘೋಬ ರಾಣೆ ಇಹ ಲೋಕ ತ್ಯಜಿಸಿದರು. ಕಾರವಾರದಲ್ಲಿ ಅವರ ಪುತ್ಥಳಿ ಸ್ಥಾಪಿಸಲಾಗಿದೆ. ಚಿರನಿದ್ರೆಯಲ್ಲಿರುವ ಈ ‘ಪರಮ ವೀರ’ರಿಗೆ ಗೌರವಪೂರ್ಣ ನಮನಗಳು.
ನಿರೂಪಣೆ: ವಸಂತ ವಾಯಿ, ಭಾರತೀಯ ವಾಯುಸೇನೆಯ ನಿವೃತ್ತ ಅಧಿಕಾರಿ, ಕೃಪೆ: ಕಸ್ತೂರಿ ಮಾಸಪತ್ರಿಕೆ ಜುಲೈ 2012
On the birth anniversary of Parama Vira Chakra Rama Raghoba Rane 🌷🙏🌷
ಕಾಮೆಂಟ್‌ಗಳು