ರಶ್ಮಿ ಶ್ಯಾಂ
ರಶ್ಮಿ ಶ್ಯಾಂ
ರಶ್ಮಿ ಶ್ಯಾಂ ನಮ್ಮ ನಡುವಿನ ಮಹತ್ವದ ಕಲಾವಿದೆ. ರಶ್ಮಿ ಅವರ ತವರು ಮತ್ತು ಪತಿ ಶ್ಯಾಂಸುಂದರ್ ಅವರ ಮನೆತನಗಳೆರಡೂ ಕಲಾವಿದರ ಬೀಡು. ಇದೇ ಕಲಾವಂತಿಕೆ ರಶ್ಮಿ - ಶ್ಯಾಂಸುಂದರ್ ದಂಪತಿಗಳಲ್ಲಿ ಮಾತ್ರವಲ್ಲದೆ, ಅವರ ಮಕ್ಕಳ ಬದುಕಿನಲ್ಲೂ ಪ್ರತಿಫಲಿಸುತ್ತ ಸಾಗಿದೆ.
ಜುಲೈ 10, ರಶ್ಮಿ ಅವರ ಜನ್ಮದಿನ. ಇವರು ಹುಟ್ಟಿದ್ದು ತುಮಕೂರಿನಲ್ಲಿ. ರಶ್ಮಿ ಅವರ ತಂದೆ ಎಚ್. ನಾಗರಾಜಾಚಾರ್ ಅವರು ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯರಾಗಿದ್ದರಲ್ಲದೆ ಉತ್ತಮ ಚಿತ್ರಕಲಾವಿದರೂ ಆಗಿದ್ದರು. ತಾಯಿ ಚಂದ್ರಮ್ಮ ಗೃಹಿಣಿ. ಮೈಸೂರಿನವರಾದ ಪತಿ ಎನ್. ಶ್ಯಾಂಸುಂದರ್ ಸ್ವರ್ಣ ಕಲಾವಿದರು. ಶ್ಯಾಂಸುಂದರ್ ಅವರ ತಂದೆಯವರಾದ ಶಿಲ್ಪಿ ಪಿ. ನರಸಿಂಹಸ್ವಾಮಿ ಮತ್ತು ಅವರ ತಂದೆ ಮತ್ತು ತಾತನವರು ಅರಮನೆ ಕಲಾವಿದರಾಗಿ, ಮೈಸೂರು ಅರಮನೆ, ಚಾಮುಂಡೇಶ್ವರಿ ದೇವಸ್ಥಾನ ಹಾಗು ಮೈಸೂರು ಸಂಸ್ಥಾನದ ಹಲವು ಕಡೆ ಕಲಾಸೇವೆ ಸಲ್ಲಿಸಿ ಖ್ಯಾತರಾದವರು.
ರಶ್ಮಿ ಅವರಿಗೆ ತಮ್ಮ ತಂದೆಯವರ ಒಡನಾಟದಿಂದ ಚಿತ್ರಕಲೆಯಲ್ಲಿ ಆಸಕ್ತಿ ಮೂಡಿತು. ವಿವಾಹವಾದ ನಂತರ ಇವರ ಕಲಾಭಿರುಚಿಯನ್ನು ಕಂಡ ಇವರ ಮಾವನವರು ಮೈಸೂರು ಪೈಂಟಿಂಗ್ ಪ್ಯಾಲೇಸ್ ಆರ್ಟಿಸ್ಟ್ ರಾಮನರಸಿಂಹಯ್ಯ ಅವರ ಹತ್ತಿರ ತರಬೇತಿ ಪಡೆಯಲು ರಶ್ಮಿ ಅವರನ್ನು ಸೇರಿಸಿದರು. ಅಲ್ಲಿ ತರಬೇತಿ ಮುಗಿದ ನಂತರ ರಶ್ಮಿ ಅವರು ತಮ್ಮ ಮಾವ ಹಾಗು ಪತಿಯವರ ಮಾರ್ಗದರ್ಶನದಲ್ಲಿ ಮೈಸೂರು ಪೈಂಟಿಂಗ್ ಕಲೆಯಲ್ಲಿ ವಿಶಿಷ್ಟ ಕಲಾವಿದೆಯಾಗಿ ರೂಪುಗೊಂಡರು. ಪತಿ ಶ್ಯಾಂಸುಂದರ್ ಆಭರಣಗಳ ಕೆಲಸ ಮಾಡುವುದರಿಂದ, ಅವರ ಮಾರ್ಗದರ್ಶನದಿಂದ ರಶ್ಮಿ ಅವರು, ಜ್ಯುಯೆಲರಿ ಡಿಸೈನಿಂಗ್ ಕೂಡ ಮಾಡುತ್ತಾರೆ. ಹೀಗೆ ರಶ್ಮಿ ತಮ್ಮ ಪತಿಯವರ ವ್ಯವಹಾರಗಳಲ್ಲಿಯೂ ಸಕ್ರಿಯರಾಗಿ ಪಾಲ್ಗೊಳ್ಳುತ್ತಿದ್ದಾರೆ.
ರಶ್ಮಿ- ಶ್ಯಾಂಸುಂದರ್ ದಂಪತಿಗಳಿಗೆ ಪ್ರಿಯಾ ಮತ್ತು ಪ್ರೀತಿ ಎಂಬ ಇಬ್ಬರು ಸುಪುತ್ರಿಯರು. ಮಕ್ಕಳಿಬ್ಬರಿಗೂ ಓದಿನಲ್ಲಿ ಉತ್ತಮ ಸಾಧನೆಯ ಜೊತೆಗೆ ಚಿತ್ರಕಲೆ ಮತ್ತು ಭರತನಾಟ್ಯದಲ್ಲಿ ಆಸಕ್ತಿ ಇದ್ದು ಎಲ್ಲ ರೀತಿಯ ತರಬೇತಿ ಪಡೆಯುತ್ತಿದ್ದಾರೆ. ಜೊತೆಗೆ ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಪಡೆದಿದ್ದಾರೆ. ದೊಡ್ಡ ಮಗಳು ಪ್ರಿಯಾ, ಕೊನೆಯ ವರ್ಷದ ಇಂಜಿನಿಯರಿಂಗ್ ಓದುತ್ತಿದ್ದು, 2018ರಲ್ಲಿ 15ನೇ ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಮೊದಲನೇ ಸ್ಥಾನ ಪಡೆದು “ರಾಜ್ಯ ಕಲಾಸಿರಿ ಪ್ರಶಸ್ತಿ" ಪಡೆದಿದ್ದಾರೆ. ಎರಡನೇ ಮಗಳು ಪ್ರೀತಿ 8ನೇ ತರಗತಿಯಲ್ಲಿ ಓದುತ್ತಿದ್ದು ಕಲೆಯಲ್ಲೂ ಉತ್ತಮ ಶ್ರದ್ಧೆ ಮೂಡಿಸಿಕೊಂಡಿದ್ದಾರೆ. ರಶ್ಮಿ ಅವರ ಪತಿ ಶ್ಯಾಂಸುಂದರ್ ನ್ಯಾಷನಲ್ ಜ್ಯೂಯೆಲರಿ ಅವಾರ್ಡ್ (NJA) ಸ್ಪರ್ಧೆಯಲ್ಲಿ ಭಾಗವಹಿಸಿ ರಾಷ್ಟ್ರಕ್ಕೇ 5ನೇ ಸ್ಥಾನ ಪಡೆದಿದ್ದಾರೆ. ರಶ್ಮಿ ಅವರು ಇಷ್ಟು ದಿನಗಳ ಕಾಲ ಗೃಹಿಣಿಯ ಜವಾಬ್ದಾರಿಗಳನ್ನು ನಿಭಾಯಿಸುತ್ತಾ ಪತಿ ಮತ್ತು ಮಕ್ಕಳ ಏಳಿಗೆಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಜೊತೆಗೆ ತಮ್ಮದೇ ಆದ ಸ್ಥಾನಮಾನ ಗಳಿಸಬೇಕೆಂಬ ಸದಾಶಯದಿಂದ ಕಳೆದ ಎರಡು ವರ್ಷಗಳಿಂದ ಸಕ್ರಿಯರಾಗಿ ಮೈಸೂರು ಪೈಂಟಿಂಗ್ ಪುನರಾರಂಭಿಸಿದ್ದಾರೆ. ಈ ಸಾಂಪ್ರದಾಯಿಕ ಕಲೆಯಲ್ಲಿ ಒಳ್ಳೆಯ ಯಶಸ್ಸನ್ನು ಪಡೆಯುವ ಉದ್ದೇಶ ಇವರದಾಗಿದೆ.
ರಶ್ಮಿಯವರ ಆಸಕ್ತಿಗಳಲ್ಲಿ ಭಾವಗೀತೆಗಳನ್ನು ಕೇಳುವುದು, ಜ್ಯುವೆಲ್ಲರಿ ಡಿಸೈನಿಂಗ್, ಮತ್ತು ಅಡುಗೆಯಲ್ಲಿ ಹೊಸ ಪ್ರಯೋಗ ಮಾಡುವುದು ಮುಂತಾದವು ಸೇರಿವೆ.
ಉತ್ಸಾಹಿ ಕಲಾವಿದೆ ರಶ್ಮಿ ಶ್ಯಾಂ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಹೇಳುತ್ತ, ಕಲೆಯನ್ನೇ ಬದುಕಾಗಿಸಿಕೊಂಡಿರುವ ಅವರಿಗೂ, ಅವರ ಸಮಸ್ತ ಕುಟುಂಬದವರಿಗೂ ಶುಭಹಾರೈಕೆಗಳನ್ನು ಹೇಳೋಣ. ನಮಸ್ಕಾರ.
Happy birthday Rashmi Shyam 🌷🌷🌷
ಕಾಮೆಂಟ್‌ಗಳು