ಎಸ್. ಜ್ಯೋತಿ
ಎಸ್. ಜ್ಯೋತಿ
ಜ್ಯೋತಿ ಶಾಂತರಾಜ್, ಅನೇಕ ಸಮಸ್ಯೆಗಳ ನಡುವೆಯೂ ಅರಳಿದ ಜೀವಗಳ ಬದುಕಿನ ಹಿಂದೆ ಹೋಗಿ ಆ ಬದುಕಿನ ಹಿಂದಿರುವ ಸಕಾರಾತ್ಮಕ ತಿರುಳನ್ನು ಲೋಕದ ಕಣ್ಣಿಗೆ ಕಟ್ಟುವಂತೆ ತೆರೆದಿಡುತ್ತಿರುವ ನಿಷ್ಠಾವಂತ ಸಾಹಸಿ, ಪತ್ರಕರ್ತೆ, ಅಂಕಣಗಾರ್ತಿ, ಕುಂಭ ಕಲಾವಿದೆ, ಛಾಯಾಗ್ರಾಹಕಿ, ಕಂಠದಾನ ಕಲಾವಿದೆ ಮತ್ತು ಸಮಾಜಮುಖಿ ಕಾರ್ಯಕರ್ತೆ.
ಜುಲೈ 4, ಜ್ಯೋತಿ ಶಾಂತರಾಜ್ ಅವರ ಜನ್ಮದಿನ. ಇವರು ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ದ್ವಾರಾಳು ಗ್ರಾಮಕ್ಕೆ ಸೇರಿದವರು. ತಂದೆ ಶಾಂತರಾಜು. ತಾಯಿ ಗಂಗಮ್ಮ. ಡಿಪ್ಲೋಮಾ ಇನ್ ಕೌನ್ಸೆಲಿಂಗ್, ನರ್ಸರಿ ಟೀಚರ್ಸ್ ಟ್ರೈನಿಂಗ್ ಮತ್ತು
ಡಿಪ್ಲೋಮ ಇನ್ ಜರ್ನಲಿಸಂ ಶೈಕ್ಷಣಿಕ ಸಾಧನೆಗಳ ಜೊತೆಗೆ ಮಾಸ್ ಕಮ್ಯೂನಿಕೇಷನ್ ಅಂಡ್ ಜರ್ನಲಿಸಂನಲ್ಲಿ ಉನ್ನತ ಶಿಕ್ಷಣ ಪದವಿ ಪಡೆದಿರುವ ಇವರು ಪ್ರಸಕ್ತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.
ಜ್ಯೋತಿ ಅವರು ಅಂಕಣಗಾರ್ತಿಯಾಗಿ, ಪತ್ರಕರ್ತೆಯಾಗಿ, ಕುಂಭ ಕಲಾವಿದೆಯಾಗಿ, ಧ್ವನಿ ಕಲಾವಿದೆಯಾಗಿ, ಪ್ರವಾಸಿಯಾಗಿ , ಛಾಯಾಗ್ರಾಹಕಿಯಾಗಿ ತೋರಿರುವ ಪ್ರತಿಭಾನ್ವಿತ ನೆಲೆಗಳು ಬಹುಮುಖಿಯಾದದ್ದು. ಕರ್ನಾಟಕ ಅಚೀವರ್ಸ್ ಬುಕ್ ಆಫ್ ರೆಕಾರ್ಡ್ಸ್ ಮತ್ತು ರಾಷ್ಟ್ರೀಯ ಸಾಧಕರ ದಾಖಲೆಗಳಲ್ಲಿ ತಮ್ಮ ಸಾಧನೆಗಳಿಂದ ಸೇರ್ಪಡೆಗೊಂಡಿರುವ ಹಿರಿಮೆಯೂ ಇವರದ್ದಾಗಿದೆ. ಬುಕ್ ಬ್ರಹ್ಮದಲ್ಲಿ ಬರಹಗಾರ್ತಿಯಾಗಿ, ಟಿವಿ-9 ನ ಅಂಕಣ ಬರಹಗಾರ್ತಿಯಾಗಿಯೂ ಇವರ ಸೇವೆ ಸಂದಿದೆ.
ಜ್ಯೋತಿ ಅವರು, ಒಂದು ಹಂತದಲ್ಲಿ ಬದುಕು ಮುಗಿದೇ ಹೋಯಿತು. ಅನ್ನುವ ಹಾಗಿದ್ದಾಗಲೇ ಫೀನಿಕ್ಸ್‌ನಂತೆ ತಮ್ಮ ಹವ್ಯಾಸಗಳೆಡೆಗೆ ಹೊರಳಿದರು. ಒಂದು ಸಣ್ಣ ನೋವಿಗೂ ಅಪ್ಪನನ್ನ ನೆನಪಿಸಿಕೊಂಡು ಆಳುತ್ತಿದ್ದವರು, ಕರ್ನಾಟಕದ ಎಲ್ಲಾ ಜಿಲ್ಲೆಗಳನ್ನು ಹಗಲು ರಾತ್ರಿಯೆನ್ನದೆ, ನಿದ್ರೆ ಹಸಿವೆಗಳ ಪರಿವೆಯಿಲ್ಲದೆ ಏನೋ ತಿಂದು
ಎಲ್ಲೋ ಮಲಗಿ ಒಬ್ಬಂಟಿಯಾಗಿ ಸುತ್ತಿ ಯಾರೂ ಗುರುತಿಸದ ನೂರಾರು ಜನರ ಕಥೆಯನ್ನ ಜನರ ಮುಂದೆ ತಂದಿಟ್ಟಿದ್ದಾರೆ. ಮದುವೆ ಮಕ್ಕಳಾದರೆ ತಮ್ಮ ಬದುಕನ್ನ ಮನೆಗೆ ಸೀಮಿತಗೊಳಿಸಿಕೊಳ್ಳುವ
ಎಷ್ಟೋ ಹೆಣ್ಣುಮಕ್ಕಳಲ್ಲಿ ಒಬ್ಬರಾಗದೇ ತಮ್ಮ ಮಾನಸಿಕ ಖಿನ್ನತೆ, ಸಾಮಾಜಿಕ ತೊಡರುಗಳನ್ನ ಮೆಟ್ಟಿ ಅವರೆಲ್ಲರಿಗೂ ಸ್ಫೂರ್ತಿಯಾಗಿ ನಿಂತಿದ್ದಾರೆ. ಕುಂಭ ಕಲೆ ತರಬೇತಿ ಪಡೆದು, ಅತಿ ಚಿಕ್ಕ ಮಣ್ಣಿನ
ಗಣಪತಿಗಳನ್ನು ನಿರ್ಮಿಸುವ ಮೂಲಕ ಕರ್ನಾಟಕ ಬುಕ್ ಆಫ್ ರೆಕಾರ್ಡ್ಸ್, ವಾದ್ಯ ಗಣಪತಿಯ ಕಲೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಗೌರವವನ್ನು ತಮ್ಮದಾಗಿಸಿಕೊಂಡಿದ್ದಾರೆ. ತಮ್ಮ ಈ ಎಲ್ಲ ಸಾಧನೆಯ ಹಿಂದೆ ಅಪ್ಪ, ಅಮ್ಮ, ಪತಿ ಭಾಸ್ಕರ್ ಮತ್ತು ಮಕ್ಕಳ ಪಾತ್ರವನ್ನು ಅವರು ಕೃತಜ್ಞತೆಗಳಿಂದ ಸ್ಮರಿಸುತ್ತಾರೆ.
ಮೇಲ್ಕಂಡ ಪಯಣದ ಕುರುಹಾದ ಜ್ಯೋತಿ ಅವರ ವಿಶಿಷ್ಟ ಕೃತಿ 'ಜರ್ನಿ ಆಫ್ ಜ್ಯೋತಿ' ನಾಡಿನ ಎಲ್ಲರ ಗಮನ ಸೆಳೆದಿದೆ. ಇಲ್ಲಿ ಬಣ್ಣಬಣ್ಣದ ಚಿತ್ರಗಳನ್ನು ರಚಿಸಿಯೂ ಬದುಕಿನ ಬಣ್ಣಕಳೆದುಕೊಂಡು ಹೆಣಗಾಡುತ್ತಿರುವ, ಆದರೆ ಜೀವನೋತ್ಸಾಹವನ್ನು ಕುಂದಿಸಿಕೊಳ್ಳದ ಚಿತ್ರ ಕಲಾವಿದರಿದ್ದಾರೆ, ಛಾಯಾಗ್ರಾಹಕರಿದ್ದಾರೆ, ಬೀದಿ ಬದಿಯ ವ್ಯಾಪಾರಿಗಳಿದ್ದಾರೆ, ರಂಗಭೂಮಿ-ತೊಗಲುಬೊಂಬೆಯಾಟದ ಕಲಾವಿದರಿದ್ದಾರೆ, ಸಮಾಜಸೇವೆಯಲ್ಲಿ ಬದುಕಿನ ಸಾರ್ಥಕತೆಯನ್ನು ಅನುಭವಿಸುತ್ತಿರುವ ಹೆಣ್ಣುಮಕ್ಕಳಿದ್ದಾರೆ, ಅನಾಥ ಹೆಣಗಳನ್ನು ಹುಡುಕಿತಂದು ಅವಕ್ಕೆ ಗೌರವದಿಂದ ಶವಸಂಸ್ಕಾರ ಮಾಡುವವರಿದ್ದಾರೆ, ಸಾಹಸಿ ಕೃಷಿಕರಿದ್ದಾರೆ, ಮಣ್ಣಿನ ಆಭರಣಗಳನ್ನು ತಯಾರಿಸುವವರಿದ್ದಾರೆ, ಭಿಕ್ಷೆಬೇಡುವ ಸಮುದಾಯದವರಿದ್ದಾರೆ, ತೃತೀಯ ಲಿಂಗಿಗಳಿದ್ದಾರೆ, ದೈಹಿಕನ್ಯೂನತೆಯ ನಡುವೆಯೂ ಬದುಕುವ ಹಕ್ಕನ್ನು ಸಾರ್ಥಕಗೊಳಿಸಿಕೊಂಡವರಿದ್ದಾರೆ, ಕೊಳಲುಗಳನ್ನು ತಯಾರಿಸಿ, ಅದನ್ನು ನುಡಿಸುತ್ತಾ ಮಾರುವ ಸಹೋದರರಿದ್ದಾರೆ, ಮಸಣದಲ್ಲಿ ಬದುಕು ನಡೆಸುವ ವೀರಬಾಹುಗಳಿದ್ದಾರೆ, ಸಾವನ್ನು ಗೆದ್ದವರಿದ್ದಾರೆ, ಅವಮಾನಗೊಂಡಲ್ಲೇ ಎತ್ತರಕ್ಕೆ ಬೆಳೆದು ನಿಲ್ಲಬೇಕೆಂಬ ಕನಸುಗಣ್ಣಿನವರಿದ್ದಾರೆ, ಕೌದಿ ಹೊಲಿದು ಮಾರುವವರಿದ್ದಾರೆ, ಅಸುನೀಗಿದ ಅರ್ಜುನನೆಂಬ ಆನೆಯ ಮಾವುತ ಇದ್ದಾರೆ, ಸೂಪರ್ಕಾಪ್, ಲೇಖಕರು, ಕ್ರೀಡಾಪಟುಗಳು ಎಲ್ಲರೂ ಇದ್ದಾರೆ. ಇವರೆಲ್ಲರೂ ಜ್ಯೋತಿ ಅವರ ಆಸಕ್ತಿಯ ಫಲವಾಗಿ ಈ ಪುಸ್ತಕದಲ್ಲಿ ಕಾಣಬರುವ ಸಾಹಸಮಯ ವ್ಯಕ್ತಿಚಿತ್ರಗಳು. ಮನೆ, ಮಕ್ಕಳು ಮತ್ತು ದಿನನಿತ್ಯದ ಎಲ್ಲ ಜಂಜಡಗಳ ನಡುವೆಯೂಜ್ಯೋತಿ ನಾಡಿನಾದ್ಯಂತ ಹಗಲಿರುಳೂ ಓಡಾಡಿ ಬರೆದ ಲೇಖನಗಳಿವು. ಇಲ್ಲಿರುವ ವ್ಯಕ್ತಿಗಳ ಬಗೆಗೆ ತಿಳಿದು, ಅವರಿರುವ ಊರಿಗೆ ಬಸ್ಸೋ, ಲಾರಿಯೋ, ರೈಲನ್ನೋ ಏರಿ ಓಡುವುದು. ಅಲ್ಲಿ ಸ್ಥಳೀಯರ ನೆರವಿನಿಂದ ಆಟೋ, ಬೈಕ್, ಕೆಲವೊಮ್ಮೆ ನಡಿಗೆಯ ಮೂಲಕ ತಮ್ಮ ಗಮ್ಯವನ್ನು ತಲುಪುವುದು. ತಾವು ಹುಡುಕಿಕೊಂಡು ಹೋದವರ ಸಮಯ, ಮಾತನಾಡುವ ಮನಸ್ಥಿತಿಗಾಗಿ ಕಾದುಕೊಂಡಿರುವುದು. ಸಿಕ್ಕಿದ್ದನ್ನು ತಿಂದು, ಕುಡಿದು ಕಾಲ ಹಾಕುವುದು. ಫೋಟೋ ತೆಗೆದುಕೊಳ್ಳುವುದು. ಮಾತಾಡಿದ್ದನ್ನು ನೆನಪಿಟ್ಟುಕೊಂಡು ಟಿಪ್ಪಣಿ ಮಾಡುವುದು. ಬರೆದದ್ದನ್ನು ಅಂಕಣ ರೂಪದಲ್ಲಿ ಪ್ರಕಟಿಸುವುದು ಇದಕ್ಕೆಲ್ಲ ಜ್ಯೋತಿ ವ್ಯಯಿಸಿರುವ ಹಣ ಮತ್ತು ಸಮಯಕ್ಕೆ ಬೆಲೆಕಟ್ಟಲಾಗದು. ನಯಾ ಪೈಸೆಯಷ್ಟೂ ಲಾಭದ ಉದ್ದೇಶವಿರದ ಈ ಜರ್ನಿಯಿಂದ ಜ್ಯೋತಿಗೆ ಯಾವ ಪ್ರಯೋಜನವೂ ಇಲ್ಲ. ಆದರೆ ಆ ಮೂಲಕ ಅವರು ಲೋಕಕ್ಕೆ ಕೊಟ್ಟಿರುವ ಕೊಡುಗೆಗೆ ಬೆಲೆ ಕಟ್ಟಲಾಗದು. ಇದನ್ನೆಲ್ಲ ನೋಡಿದಾಗ ಈ ಬರಹದಲ್ಲಿ ವ್ಯಕ್ತವಾಗಿರುವ ಪಾತ್ರಗಳಂತೆಯೇ ಜ್ಯೋತಿಯವರ ವ್ಯಕ್ತಿತ್ವವೂ ಸಾಹಸದ್ದಾಗಿಯೇ ಕಾಣುತ್ತದೆ.
ಮತ್ತೊಂದು ಮುಖ್ಯ ವಿಚಾರವೆಂದರೆ, ಇದನ್ನೆಲ್ಲ ಜ್ಯೋತಿ ಅವರು ಸುದ್ದಿಗೆ ಮಾತ್ರ ಬಳಸದೆ, ಅಂತಹ ಬದುಕುಗಳಿಗೆ ಸಾಧ್ಯವಿದ್ದೆಡೆ ಸಹಾಯವನ್ನೂ ಕ್ರೋಢೀಕರಿಸುವ ಹೃದಯವಂತಿಕೆ ಮೆರೆದಿದ್ದಾರೆ.
ಜ್ಯೋತಿ ಶಾಂತರಾಜ್ ಅಂತಹ ಹೃದಯವಂತ ಜ್ಯೋತಿಗಳ ಬೆಳಕು ಈ ಸಮಾಜದಲ್ಲಿ ಹಬ್ಬಿರುವ ಎಲ್ಲ ಕಾರ್ಗತ್ತಲನ್ನೂ ಹೋಗಲಾಡಿಸಲಿ ಎಂದು ಆಶಿಸುತ್ತ, ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳನ್ನು ಹೇಳೋಣ. ನಮಸ್ಕಾರ.
ಮಾಹಿತಿ ಕೃಪೆ: ಜರ್ನಿ ಆಫ್ ಜ್ಯೋತಿ ಕೃತಿಯಲ್ಲಿರುವ ಜ್ಯೋತಿ ಅವರ ಕರಿತಾದ ವಿವರಗಳು ಮತ್ತು ಈ ಕೃತಿಯಲ್ಲಿರುವ ಡಾ. ಎಚ್. ಎಸ್. ಸತ್ಯನಾರಾಯಣ ಅವರ ವಿಶಿಷ್ಟ ಮಾತುಗಳು 🌷🙏🌷
ಕೃತಜ್ಞತೆ: Sowmya Sanath 🌷🙏🌷
Happy birthday Jyothi Shantharaju 🌷🙏🌷
ಕಾಮೆಂಟ್‌ಗಳು