ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಮಾನು

 
ಮಾನು

ಮಾನು ಕನ್ನಡ ಸಾಂಸ್ಕೃತಿಕ ಲೋಕದಲ್ಲಿ ಪ್ರಸಿದ್ಧರಾಗಿದ್ದ ಶಿಕ್ಷಕ, ಕಲಾವಿದ ಮತ್ತು ಬರಹಗಾರರು. ಸುಂದರ ನಿಲುವಿನ ಮಾನು ಉತ್ತಮ ಅಭಿನಯ ಮತ್ತು ಧ್ವನಿಗೆ ಹೆಸರಾಗಿದ್ದರು. 

ಮಾನಪ್ಪ ಎಂಬ ಮೂಲ ಹೆಸರಿನ ಮಾನು 1948ರ ಆಗಸ್ಟ್ 3ರಂದು ಜನಿಸಿದರು. ಅವರು  ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳ್ಳಿ ಸಮೀಪದ ಗುತ್ತಿಗೇರಿ ಎಂಬ ಊರಿನವರು. ಚಿಕ್ಕವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡ ಅವರು ಕಷ್ಟಪಟ್ಟು ವಿದ್ಯಾಭ್ಯಾಸ ಸಾಗಿಸಿದರು. ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಬಿ.ಎ.  ಓದಿದ ಅವರು, ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಎಂ.ಎ.  ವ್ಯಾಸಂಗ ನಡೆಸಿದರು. ಮಾನು ಅವರ ಪತ್ನಿ ಆಶಾ ಮಾನು Ashamanu Kabra ಅವರು ಸರ್ಕಾರಿ ಕಾಲೇಜಿನಲ್ಲಿ ಶಿಕ್ಷಕರಾಗಿದ್ದು, ಉತ್ತಮ ಶಿಕ್ಷಕರಾಗಿ ರಾಷ್ಟ್ರಪತಿಗಳಿಂದ ಶ್ರೇಷ್ಠ ಶಿಕ್ಷಕ ರಾಷ್ಟ್ರೀಯ ಪ್ರಶಸ್ತಿ ಗೌರವಾನ್ವಿತರಾಗಿದ್ದು, ಕನ್ನಡ ರಂಗಭೂಮಿಯಲ್ಲೂ ಸಕ್ರಿಯರಾಗಿದ್ದರು.  ಈ ದಂಪತಿಗೆ ಒಬ್ಬ ಪುತ್ರ ಮತ್ತು ಪುತ್ರಿ ಇದ್ದಾರೆ.

ಮಾನು ಅವರು ಬೆಂಗಳೂರಿನ ಬಿಇಎಸ್ ಕಾಲೇಜಿನಲ್ಲಿ ರೀಡರ್ ಆಗಿ ವೃತ್ತಿಯಲ್ಲಿದ್ದರು. ಓದಿನ ದಿನಗಳಿಂದಲೇ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದ ಅವರು ವೃತ್ತಿಯಲ್ಲಿರುವಾಗ ಮೊದಲು ಪಿ. ಲಂಕೇಶರ ಹಲವು ನಾಟಕಗಳಲ್ಲಿ ನಟಿಸಿದರು. ಬಿ.ವಿ. ಕಾರಂತರ 'ಸತ್ತವರ ನೆರಳು' ನಾಟಕದಲ್ಲಿ ಜಿ ವಿ ಅಯ್ಯರ್, ನಾಗಾಭರಣ, ಸುಂದರರಾಜ್ ಅವರುಗಳೊಂದಿಗೆ ನಟಿಸಿ ಹೆಸರಾದರು.  ಅಶೋಕ ಬಾದರದಿನ್ನಿ ಅವರ ಹಲವಾರು ನಾಟಕಗಳಲ್ಲಿ ನಟಿಸಿದ್ದರು.  ಇವರಿಗೆ 'ಒಥೆಲೊ' ನಾಟಕ ಪ್ರಸಿದ್ಧಿ ತಂದಿತ್ತು. ಪ್ರಸನ್ನ ಅವರ ರೆಪರ್ಟರಿಯಲ್ಲೂ ನಟಿಸಿದ್ದರು.

ಮೊದಲಿಗೆ ಗಿರಿಬಾಬು ಅವರ 'ಮನಸ್ಸಿನಂತೆ ಮಾಂಗಲ್ಯ' ಚಿತ್ರದಲ್ಲಿ ಜಯಂತಿ ಅವರೊಂದಿಗೆ ನಾಯಕರಾಗಿ ಅಭಿನಯಿಸಿದರು.  ಮುಂದೆ ಅವರು ಅನೇಕ ಕಲಾತ್ಮಕ ಮತ್ತು ವಾಣಿಜ್ಯ ಸಿನಿಮಾಗಳಲ್ಲಿ ನಟಿಸಿ ಹೆಸರಾದರು. ಲಕ್ಷ್ಮೀನಿವಾಸ, ಕಪ್ಪುಕೊಳ, ಕಾಡುಕುದುರೆ, ಪರಸಂಗದ ಗೆಂಡೆತಿಮ್ಮ, ಸುಪ್ರಭಾತ, ಉಂಡು ಹೋದ ಕೊಂಡು ಹೋದ, ಕರಿಮಾಯಿ, ತಬ್ಬಲಿಯು ನೀನಾದೆ ಮಗನೆ, ಹೃದಯಗೀತೆ, ಸೂರ್ಯ, ಕರಡಿಪುರ, ಒಂದು ಪ್ರೇಮದ ಕಥೆ, ಅರಿವು, ದೊಡ್ಡಮನೆ ಎಸ್ಟೇಟ್, ಸಂಗೀತಾ, ವೀರಪ್ಪನ್ , ಬಾ ನಲ್ಲೆ ಮಧುಚಂದ್ರಕೆ, ಸಾಮ್ರಾಟ್ ಮುಂತಾದ ಅನೇಕ ಚಿತ್ರಗಳಲ್ಲಿ ನಟಿಸಿದ್ದರು. ಮಾನು ಅವರಿಗೆ 'ತಬ್ಬಲಿಯು ನೀನಾದೆ ಮಗನೆ' ಚಿತ್ರದ ಅಭಿನಯಕ್ಕೆ ಫಿಲಂಫೇರ್ ಪ್ರಶಸ್ತಿ ಸಂದಿತ್ತು. 

ಮಾನು ಅವರು ಕುವೆಂಪು ಅವರ ಕೃತಿ ಆಧರಿಸಿದ 'ಮಲೆನಾಡಿನ ಚಿತ್ರಗಳು' ಎಂಬ 13 ಕಂತುಗಳ ಧಾರಾವಾಹಿಯನ್ನು ದೂರದರ್ಶನ ಚಂದನ ವಾಹಿನಿಗಾಗಿ ನಿರ್ಮಿಸಿ ನಿರ್ದೇಶಿಸಿದ್ದರು. 

ಬರಹಗಾರರೂ ಆಗಿದ್ದ ಮಾನು ಅವರು 'ಲಿಂಗನ ಕುಡಿ' ಎಂಬ ಕಾದಂಬರಿ ಪ್ರಕಟಿಸಿದ್ದರು.  ಅವರ ಅನೇಕ ಸಣ್ಣಕಥೆಗಳು ಪ್ರಕಟಗೊಂಡಿದ್ದವು. ‘ಗೆಳೆಯರ ಗೆಳೆಯ ಅಂಬರೀಶ್' ಎಂಬ ವ್ಯಕ್ತಿಚಿತ್ರಣವನ್ನೂ ಪ್ರಕಟಿಸಿದ್ದರು.

ಮಾನು ಅವರು ಅಕಾಡೆಮಿಕ್ ಕೌನ್ಸಿಲ್ ಸದಸ್ಯರಾಗಿ, ಕಾಸ್ಮಾಪಾಲಿಟನ್ ಕ್ಲಬ್ ಕಾರ್ಯದರ್ಶಿಯಾಗಿ, ಫೆಡರೇಷನ್ ಆಫ್ ಯೂನಿವರ್ಸಿಟಿಸ್ ಅಧ್ಯಕ್ಷರಾಗಿ, ಹೀಗೆ ಅನೇಕ ರೀತಿ ಸಕ್ರಿಯರಾಗಿದ್ದರು. 

ರಾಮಕೃಷ್ಣ ಹೆಗಡೆ ಅವರ ನವನಿರ್ಮಾಣ ವೇದಿಕೆಯ ಪರವಾಗಿ ಭಾಷಣ ನೀಡಲು ಪಯಣಿಸುತ್ತಿದ್ದ ಮಾನು ಅವರು 1996ರ ಜುಲೈ 16ರಂದು ಅರಸೀಕೆರೆ ಬಳಿಯಲ್ಲಿ ಅಪಘಾತಕ್ಕೀಡಾಗಿ ನಿಧನರಾದರು. ಕನ್ನಡ ಸಾಂಸ್ಕೃತಿಕ ಲೋಕದಲ್ಲಿ ಅವರು ಎಂದೆಂದಿಗೂ ಅಮರರು.

On the birth anniversary of Great Actor Maanu 🌷🙏🌷

 

(

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ