ಮೈಥಿಲಿ ಶರಣ್ ಗುಪ್ತ
ಮೈಥಿಲಿ ಶರಣ್ ಗುಪ್ತ
ಮೈಥಿಲಿ ಶರಣ್ ಗುಪ್ತ ಆಧುನಿಕ ಹಿಂದಿ ಕವಿಗಳಲ್ಲಿ ಪ್ರಮುಖರು. ಅವರು ಖಾರಿ ಬೊಲಿ ಎಂದೆನ್ನುವ ಸಾಮಾನ್ಯ ಸಹಜ ಆಡುಭಾಷೆಯಲ್ಲಿ, ಕವಿತೆಗಳನ್ನು ಮೊದಲುಗೊಂಡು ವಿವಿಧ ಬರವಣಿಗೆಗಳನ್ನು ಮಾಡಿದವರಲ್ಲಿ ಮೊದಲಿಗರು. ಇವರು 1912 ರಲ್ಲಿ ರಾಷ್ಟ್ರಪ್ರೇಮದಿಂದ ಮೂಡಿಸಿದ ‘ಭಾರತ್-ಭಾರತಿ’, ಭಾರತದ ಸ್ವಾತಂತ್ರ್ಯಹೋರಾಟಗಾರರಲ್ಲಿ ಮೂಡಿಸಿದ ಸಂಚಲನಕ್ಕಾಗಿ ರಾಷ್ಟ್ರಪಿತ ಮಹಾತ್ಮ ಗಾಂಧಿಯವರು ಇವರನ್ನು ರಾಷ್ಟ್ರಕವಿ ಎಂದು ಹೆಸರಿಸಿದರು.
ಮೈಥಿಲಿ ಶರಣ್ ಗುಪ್ತರು ಉತ್ತರ ಪ್ರದೇಶದ, ಝಾನ್ಸಿ ತಾಲೂಕಿನ ಚಿರ್ಗಾಂವ್ ಹಳ್ಳಿಯಲ್ಲಿ 1886ರ ಆಗಸ್ಟ್ 3ರಂದು ವ್ಯಾಪಾರಸ್ಥ 'ಗಹೊಯಿ' ಸಮುದಾಯದಲ್ಲಿ ಜನಿಸಿದರು. ತಂದೆ ಸೇಥ್ ರಾಮಚರಣ್ ಅವರು ಮತ್ತು ತಾಯಿ ಕಾಶೀಬಾಯಿ. ಮೈಥಿಲಿ ಶರಣ್ ಗುಪ್ತರು ಚಿಕ್ಕವಯಸ್ಸಿನಲ್ಲಿ ಶಾಲೆಗೆ ಹೋಗಲು ಇಷ್ಟಪಡುತ್ತಿರಲಿಲ್ಲ ಎಂದು ಇವರ ತಂದೆಯವರು ಮನೆಗೇ ಶಿಕ್ಷಕರು ಬರುವ ಏರ್ಪಾಡು ಮಾಡಿದ್ದರು. ಗುಪ್ತರು ಬಾಲ್ಯದಲ್ಲೇ ಸಂಸ್ಕೃತ,ಆಂಗ್ಲ ಮತ್ತು ಬಂಗಾಳಿ ಬಾಷೆಗಳನ್ನು ಕಲಿತರು. ಮಹಾನ್ ಸಾಹಿತಿಗಳಾದ ಮಹಾವೀರ್ ಪ್ರಸಾದ್ ದ್ವೀವೇದಿ ಅವರು ಇವರ ಗುರುಗಳಾಗಿದ್ದರು.
ಮೈಥಿಲಿ ಶರಣ್ ಗುಪ್ತರಿಗೆ ಇನ್ನೂ ಒಂಭತ್ತು ವರ್ಷವಿದ್ದಾಗಲೇ ಮದುವೆಯಾಯಿತು. ತಮ್ಮ ಹನ್ನೆರಡನೆಯ ವಯಸ್ಸಿನಲ್ಲಿಯೇ ಕವಿತೆಗಳನ್ನು ಬರೆಯಲು ಆರಂಭಿಸಿದರು. ಪ್ರಸಿದ್ಧ ಸರಸ್ವತಿ ಪತ್ರಿಕೆ ಸೇರಿದಂತೆ ವಿವಿಧ ಪತ್ರಿಕೆಗಳಲ್ಲಿ ಇವರು ಕವಿತೆಗಳು ಪ್ರಕಟಗೊಳ್ಳತೊಡಗಿದವು. 1920ರಲ್ಲಿ ಇವರ ಮೊದಲ ಪ್ರಮುಖ ಕವನ ಸಂಕಲನವಾದ ‘ರಂಗ್ ಮೇನ್ ಭಂಗ್ವ’ ಅನ್ನು ಇಂಡಿಯನ್ ಪ್ರೆಸ್ ಅವರು ಪ್ರಕಟಿಸಿದರು. 'ಭಾರತ್ ಭಾರತಿ' ಸ್ವತಂತ್ರಕ್ಕಾಗಿ ಹೋರಾಡುತ್ತಿದ್ದವರ ನಡುವೆ ಜನಪ್ರಿಯವಾಯಿತು. ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯರಾಗಿ ಪಾಲ್ಗೊಂಡಿದ್ದ ಮೈಥಿಲಿ ಶರಣ್ ಗುಪ್ತರು ಅನೇಕ ಬಾರಿ ಜೈಲು ವಾಸ ಅನುಭವಿಸಿದರು. ಮಹಾತ್ಮ ಗಾಂಧಿ, ಬಾಬು ರಾಜೇಂದ್ರ ಪ್ರಸಾದ್, ನೆಹರೂ, ವಿನೋಬಾ ಭಾವೆ ಮುಂತಾದ ಹಿರಿಯರ ನಾಯಕರ ಜೊತೆ ಅವರಿಗೆ ಅನ್ಯೋನ್ಯ ಬಾಂಧವ್ಯವಿತ್ತು.
ಮೈಥಿಲಿ ಶರಣ್ ಗುಪ್ತರ ಪ್ರಸಿದ್ಧ ಕೃತಿಯಾದ 'ಸಾಕೇತ್' ರಾಮಾಯಣದ ಲಕ್ಷ್ಮಣನ ಪತ್ನಿಯಾದ ಊರ್ಮಿಳಾ ಪಾತ್ರವನ್ನು ಪ್ರಧಾನವಾಗಿಸಿದೆ. 'ಯಶೋಧರ' ಕವನವು ಗೌತಮ ಬುದ್ಧನ ಹೆಂಡತಿ ಯಶೋಧರೆಯನ್ನು ಚಿತ್ರಿಸಿದೆ. ಮೈಥಿಲಿ ಶರಣ್ ಗುಪ್ತರು ದೈವ ಭಕ್ತರಾಗಿದ್ದು, ಅವರ ಬರಹಗಳಲ್ಲಿ ದೈವಭಕ್ತಿ, ದೇಶಭಕ್ತಿ, ಸೋದರತ್ವ, ಗಾಂಧೀ ತತ್ವ, ಮಾನವೀಯತೆ, ಅನುಕಂಪ, ಮತ್ತು ಸಹಾನುಭೂತಿಗಳು ವ್ಯಾಪಕವಾಗಿ ಮೂಡಿವೆ. ಮೈಥಿಲಿ ಶರಣ್ ಗುಪ್ತರು ಉಮರ್ ಖಯ್ಯಾಮ್ ಅವರ 'ರೊಬ್ಯಾಯತ್' ಮತ್ತು ಸಂಸ್ಕೃತದ 'ಸ್ವಪ್ನವಾಸವದತ್ತ' ನಾಟಕಗಳನ್ನು ಅನುವಾದಿಸಿದ್ದಾರೆ.
ಮೈಥಿಲಿ ಶರಣ್ ಗುಪ್ತರ ಕಾವ್ಯಸಂಕಲನಗಳಲ್ಲಿ ಸಾಕೇತ್, ರಂಗ್ ಮೇನ್ ಭಂಗ್, ಮಾತೃಭೂಮಿ, ಭಾರತ್-ಭಾರತಿ, ಜಯದ್ರತ ವಧ್, ವಿಕಟ್ ಭಟ್, ಪ್ಲಾಸೀ ಕಾ ಯುದ್ಧ, ಗುರುಕುಲ್, ಕಿಸಾನ್, ಪಂಚವಟಿ, ನಿರ್ಝರ್, ಯಶೋಧರ, ಮನುಷ್ಯತ, ಕಿರಾನೋ ಕಾ ಖೇಲ್, ಅರ್ಜನ್ ಔರ್ ವಿಸರ್ಜನ್, ಕಾಬಾ-ಕಾರ್ಬಲರೆ, ಜಯಭಾರತ್, ದ್ವಾಪರ್, ಜಾಹುಶ್, ವೈಟಾಲಿಕ್, ಕುನಾಲ್, ವಿಶ್ವರಾಜ್ಯ ಮುಂತಾದವು ಸೇರಿವೆ.
ಮೈಥಿಲಿ ಶರಣ್ ಗುಪ್ತರು ತಿಲೋತ್ತಮ, ಚಂದ್ರಾಹಾಸ್, ಅನಾಘ್, ವಿಜಯ್ ಪರ್ವ ಮುಂತಾದ ನಾಟಕಗಳನ್ನು ರಚಿಸಿದ್ದರು.
ಭಾರತದ ಸ್ವಾತಂತ್ರ್ಯಾ ನಂತರದಲ್ಲಿ ಮೈಥಿಲಿ ಶರಣ್ ಗುಪ್ತರು 15 ವರ್ಷಗಳ ಕಾಲ (1964ರಲ್ಲಿ ನಿಧನರಾಗುವವರೆಗೆ) ರಾಜ್ಯಸಭೆಯಲ್ಲಿ ಗೌರವ ಸದಸ್ಯರಾಗಿ ಕೆಲಸ ಮಾಡಿದರು. ಅವರು ತಮ್ಮ ಚರ್ಚೆಗಳಲ್ಲಿ ತಮ್ಮ ಸುಲಲಿತ ಕಾವ್ಯ ಭಾಷೆಯನ್ನು ಸರಾಗವಾಗಿ ಹರಿಸುತ್ತಿದ್ದರು.
ಮೈಥಿಲಿ ಶರಣ್ ಗುಪ್ತರಿಗೆ ರಾಷ್ಟ್ರಕವಿ ಗೌರವ, ಪದ್ಮಭೂಷಣ ಪ್ರಶಸ್ತಿ, ಸಾಹಿತ್ಯ ಅಕಾಡಮಿ ಗೌರವ ಮುಂತಾದ ಅನೇಕ ಪ್ರಶಸ್ತಿ ಗೌರವಗಳು ಸಂದಿದ್ದವು.
ಮೈಥಿಲಿ ಶರಣ್ ಗುಪ್ತರು 1964 ಡಿಸೆಂಬರ್ 12 ರಂದು ನಿಧನರಾದರು.
On the birth anniversary of poet Maithili Sharan Gupt
ಕಾಮೆಂಟ್‌ಗಳು