ಕುಂಬಳೆ ಶ್ರೀಧರ್ ರಾವ್
ಕುಂಬಳೆ ಶ್ರೀಧರ್ ರಾವ್
ಕುಂಬಳೆ ಶ್ರೀಧರ್ ರಾವ್ ಮಹಾನ್ ಯಕ್ಷಗಾನ ಕಲಾವಿದರಾಗಿ ಹೆಸರಾಗಿದ್ದವರು.
ಶ್ರೀಧರ ರಾಯರು 1948ರ ಜುಲೈ 23ರಂದು ಕಾಸರಗೋಡು ಜಿಲ್ಲೆಯ ಕುಂಬಳೆ ಸಮೀಪದ ನಾಯ್ಕಾಪುವಿನಲ್ಲಿ ಜನಿಸಿದರು. ತಂದೆ ಮಾಲಿಂಗ ಮುಕಾರಿ. ತಾಯಿ ಕಾವೇರಿ.
1962ರಲ್ಲಿ ಕಲ್ಲಾಡಿ ಕೊರಗ ಶೆಟ್ಟರ ಯಜಮಾನಿಕೆಯ ಕುಂಡಾವು ಮೇಳಕ್ಕೆ ಶ್ರೀಧರ ರಾಯರು ಬಾಲಕಲಾವಿದನಾಗಿ ಸೇರ್ಪಡೆಗೊಂಡರು. ಬಳಿಕ ಕೂಡ್ಲು, ಮೂಲ್ಕಿ, ಇರಾ, ಕರ್ನಾಟಕ ಮೇಳ ಮತ್ತು ಧರ್ಮಸ್ಥಳ ಮೇಳಗಳಲ್ಲಿ ಕುಂಬಳೆ ಶ್ರೀಧರ ರಾಯರು 6 ದಶಕಗಳ ಕಾಲ ಕಲಾಸೇವೆ ಮಾಡಿದ್ದರು. ಧರ್ಮಸ್ಥಳ ಮೇಳದಲ್ಲಿಯೇ ಸುಮಾರು ನಾಲ್ಕು ದಶಕಗಳ ಕಾಲ ತಿರುಗಾಟ ಮಾಡಿದ್ದರು.
ತೆಂಕುತಿಟ್ಟಿನ ಅಪ್ರತಿಮ ಸ್ತ್ರೀವೇಷಧಾರಿಯಾಗಿ ಕಲಾಸೇವೆ ಮಾಡಿದ್ದ ಶ್ರೀಧರ ರಾಯರು ದೇವಿ ಮಹಾತ್ಮೆಯ ದೇವಿ, ಸೀತಾ ಪರಿತ್ಯಾಗದ ಸೀತೆ, ಸುದರ್ಶನ ವಿಜಯದ ಲಕ್ಷ್ಮಿ, ದಮಯಂತಿ ಸ್ವಯಂವರದ ದಮಯಂತಿ, ಭೀಷ್ಮ ವಿಜಯದ ಅಂಬೆ ಅಲ್ಲದೆ ಅಮ್ಮು ಬಲ್ಲಾಳ್ತಿ, ಸುಭದ್ರೆ, ಸತ್ಯಭಾಮೆ, ಪ್ರಮೀಳೆ, ಶಶಿಪ್ರಭೆ ಮುಂತಾದ ಅನೇಕ ಪಾತ್ರಗಳಿಂದ ದೊಡ್ಡ ಹೆಸರು ಮಾಡಿದ್ದರು. ಅನೇಕ ಪುರುಷ ವೇಷಗಳಲ್ಲಿಯೂ ಮಿಂಚಿದ್ದರು.
ಕುಂಬಳೆ ಶ್ರೀಧರ್ ರಾವ್ ಅವರಿಗೆ ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ ಸಂದರ್ಭದಲ್ಲಿ ಸನ್ಮಾನ, ಎಡನೀರು ಮಠದ ಸನ್ಮಾನ ಮುಂತಾದ ಅನೇಕ ಗೌರವಗಳು ಸಂದಿದ್ದವು.
ಕುಂಬಳೆ ಶ್ರೀಧರ್ ರಾವ್ ಪುತ್ತೂರಿನಲ್ಲಿ 2024ರ ಜುಲೈ 5ರಂದು ನಿಧನರಾದರು. ನೆಕ್ಕಿಲಾಡಿ ಗ್ರಾಮದ ಶಾಂತಿನಗರ ಸಮೀಪದ ಬೇರಿಕೆಯಲ್ಲಿ ವಾಸವಾಗಿದ್ದ ಇವರಿಗೆ ಪತ್ನಿ ಮತ್ತು ಮೂವರು ಪುತ್ರರು ಇದ್ದಾರೆ. ಈ ಮಹಾನ್ ಕಲಾಚೇತನಕ್ಕೆ ನಮನ🌷🙏🌷
Great Yakshagana artiste Kumbale Sreedhara Rao 🌷🙏🌷
ಕಾಮೆಂಟ್‌ಗಳು