ಲತಾ ಗುತ್ತಿ
ಲತಾ ಗುತ್ತಿ
ಡಾ. ಲತಾ ಗುತ್ತಿ ಅವರು ನಮ್ಮ ಕನ್ನಡ ನಾಡಿನ ಪ್ರಸಿದ್ಧ ಬರಹಗಾರ್ತಿ.
ಮೂಲತಃ ಬೆಳಗಾವಿಯವರಾದ ಲತಾ 1953ರ ಆಗಸ್ಟ್ 12ರಂದು ಜನಿಸಿದರು. ತಂದೆ ನಾಗನಗೌಡ ಪಾಟೀಲರು ಸರ್ಕಾರದ ಕೃಷಿ ಅಧಿಕಾರಿಗಳಾಗಿದ್ದರು. ತಾಯಿ ಶಾಂತಾದೇವಿ ಪಾಟೀಲ. ಕರ್ನಾಟಕ ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ ಪದವಿ ಪಡೆದಿರುವ ಲತಾ ಅವರು ಮೈಸೂರು ವಿಶ್ವವಿದ್ಯಾಲಯಿಂದ ಇಂಗ್ಲಿಷಿನಲ್ಲಿ ಎಂ.ಎ. ಪದವಿಯನ್ನು ಪಡೆದಿದ್ದಾರೆ. ಇವರ 'ಪ್ರವಾಸ ಸಾಹಿತ್ಯ ವಿಶ್ವ ಸಂಸ್ಕೃತಿಗಳು' (2006) ಮಹಾ ಪ್ರಬಂಧಕ್ಕೆ ಕರ್ನಾಟಕ ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಗೌರವ ಸಂದಿದೆ. ಸೌದಿ ಅರೇಬಿಯಾ, ಕುವೈತ್, ಲಂಡನ್, ಫ್ರಾನ್ಸ್, ಇಟಲಿ, ಬೆಲ್ಜಿಯಂ, ಹಾಲೆಂಡ್, ಜರ್ಮನಿ, ಈಜಿಪ್ಟ್, ಅಮೆರಿಕಾ, ರಷ್ಯಾ ಮುಂತಾದ ಅನೇಕ ದೇಶಗಳಲ್ಲಿ ಪ್ರವಾಸ ಮಾಡಿರುವ ಇವರು ಒಟ್ಟು 15 ವರ್ಷಗಳಷ್ಟು ಕಾಲ ವಿದೇಶಗಳಲ್ಲಿ ನೆಲೆಸಿದ್ದವರು. ಪ್ರಸಕ್ತದಲ್ಲಿ ಇವರು ಬೆಂಗಳೂರಿನ ನಿವಾಸಿಯಾಗಿದ್ದಾರೆ.
ಬಹುಮುಖಿ ಬರಹಗಾರರಾದ ಲತಾ ಗುತ್ತಿ ಅವರು ವಿಶೇಷವಾಗಿ ಪ್ರವಾಸ ಕಥನ, ಕಾದಂಬರಿ, ಕಥೆ ಹಾಗೂ ಕವಿತೆಗಳಿಗೆ ಪ್ರಸಿದ್ಧರು. ಯುರೋನಾಡಿನಲ್ಲಿ , ನಾ ಕಂಡಂತೆ ಅರೇಬಿಯಾ, ಅಂಡಮಾನಿನ ಎಳೆಯನು ಹಿಡಿದು, ಚಿರಾಪುಂಜಿಯವರೆಗೆ, ರಷ್ಯಾ ಎಂದರೆ ರಷ್ಯಾ ಮುಂತಾದವು ಇವರ ಪ್ರವಾಸ ಕಥನಗಳಲ್ಲಿ ಸೇರಿವೆ. ಹೆಜ್ಜೆ , ಕರಿನೀರು, ಚದುರಂಗ ಇವರ ಕಾದಂಬರಿಗಳಲ್ಲಿ ಸೇರಿವೆ. 'ಕಡಲಾಚೆಯ ಕಥೆಗಳು’ ಇವರ ಕಥಾಸಂಕಲನ. ಸಮಕಾಲೀನ ಬಂಗಾಲಿ ಕವಿಯತ್ರಿಯರ ಕವಿತೆಗಳ ಅನುವಾದ ’ಕವಿತೆ ಉದಯಿಸಿದಾಗ’ ಕೇಂದ್ರ ಸಾಹಿತ್ಯ ಅಕಾಡೆಮಿಯಿಂದ ಪ್ರಕಟಗೊಂಡಿದೆ. ವರ್ತಮಾನ, ಗಾಂಜಾಡಾಲಿ, ಬೆಳ್ಳಿ ಹೂವು, ಸೂಜಿಗಲ್ಲು, ಇರುವಿಕೆ, ಆಕಾಶ ಗೀತೆಗಳು, ಭೂಮಿ ಬಾನಿನ ನಡುವೆ ಸಮಗ್ರ ಕಾವ್ಯ, ಕಿಚ್ಚು ಹಾಯುವ ಕಾಲ, ಸಿರಿ ಮುಂತಾದವು ಇವರ ಕಾವ್ಯ ಸಂಕಲನಗಳಲ್ಲಿ ಸೇರಿವೆ. 'ಕವಿತೆ 2010’ ರಾಜ್ಯ ಸಾಹಿತ್ಯ ಅಕಾಡೆಮಿಯಿಂದ ಪ್ರಕಟಗೊಂಡಿದೆ. ಹಲವು ಸಂಪಾದನೆಗಳನ್ನು ಮಾಡಿದ್ದಾರೆ.
ಲತಾ ಗುತ್ತಿ ಅವರಿಗೆ ಎರಡು ಬಾರಿ ಕರ್ನಾಟಕ ಅಕಾಡೆಮಿ ಪ್ರಶಸ್ತಿ ಹಲವು ಬಾರಿ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿಗಳು, ಗೊರೂರು ಸಾಹಿತ್ಯ ಪ್ರಶಸ್ತಿ, ಮಾತ್ರೋಶ್ರೀ ರತ್ನಮ್ಮ ಹೆಗಡೆ ಪ್ರಶಸ್ತಿ, ಶಿವಮೊಗ್ಗದ ಕುವೆಂಪು ಪ್ರಶಸ್ತಿ, ವಸುದೇವ ಭೂಪಾಲಂ ಪ್ರಶಸ್ತಿ, ಇನ್ಫೋಸಿಸ್ ಪ್ರತಿಷ್ಠಾನದ ಲಿಟರರಿ ಅವಾರ್ಡ್, ಸಿರಿಗನ್ನಡ ಪ್ರಶಸ್ತಿ, ನಾಡೋಜ ಬರಗೂರು ಪ್ರಶಸ್ತಿ, ಬಳ್ಳಾರಿಯ ಸಂಗಂ ಸಾಹಿತ್ಯ ಪುರಸ್ಕಾರ ಸೇರಿದಂತೆ ಅನೇಕ ಗೌರವಗಳು ಸಂದಿವೆ. ಇವರ ಬರಹಗಳು ಇತರ ಭಾಷೆಗಳಿಗೆ ಅನುವಾದಗೊಂಡಿವೆ. ವಿಶ್ವವಿದ್ಯಾಲಯದ ಪಠ್ಯಗಳಲ್ಲಿ ಸೇರ್ಪಡೆಗೊಂಡಿವೆ.
ವಿವಿಧ ಸ್ಥಳಗಳಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳು, ಸರ್ವಭಾಷಾ ಕಾವ್ಯ ಸಮ್ಮೇಳನ, ದಸರಾ ಉತ್ಸವ, ಕದಂಬ ಉತ್ಸವ, ಹಂಪಿ ಉತ್ಸವ, ಆಳ್ವಾಸ್ ನುಡಿಸಿರಿ ಸೇರಿದಂತೆ ಪ್ರತಿಷ್ಠಿತ ವೇದಿಕೆಗಳಲ್ಲಿ ಇವರು ಕಾವ್ಯವಾಚನ ಮಾಡಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಮತ್ತು ಅನೇಕ ಸಂಘ ಸಂಸ್ಥೆಗಳಲ್ಲಿ ಪುಸ್ತಕ ಪ್ರಶಸ್ತಿ ಆಯ್ಕೆ ಸಮಿತಿಯ ಸದಸ್ಯರಾಗಿ ಮತ್ತು ತೀರ್ಪುಗಾರರಾಗಿ ಕೆಲಸ ಮಾಡಿದ್ದಾರೆ. ಇವರ ಸಾಹಿತ್ಯದ ಕುರಿತು ಒಬ್ಬರು ಎಂ.ಫಿಲ್ ಮತ್ತು ಮತ್ತೊಬ್ಬರು ಪಿಎಚ್.ಡಿ ಮಾಡಿದ್ದಾರೆ. ಇವರ ಕುರಿತು ಕರ್ನಾಟಕ ವಾರ್ತಾ ಮತ್ತು ಪ್ರಸಾರ ಇಲಾಖೆ ಸಾಕ್ಷ್ಯ ಚಿತ್ರ ನಿರ್ಮಿಸಿದೆ. ಇವರ ಕಾವ್ಯವಾಚನದ ವಿಡಿಯೋವನ್ನು ಕನ್ನಡ ಸಂಸ್ಕೃತಿ ಇಲಾಖೆ ಮೂಡಿಸಿದೆ. ಇವರ ಕಾವ್ಯಗಳ ಗಾಯನದ ಸಿಡಿ ಕೂಡಾ ಪ್ರಕಟಗೊಂಡಿದೆ.
ಆತ್ಮೀಯರಾದ ಡಾ. ಲತಾ ಗುತ್ತಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ನಮಸ್ಕಾರ.
Happy birthday Dr. Lata Gutti 🌷🙏🌷

ಕಾಮೆಂಟ್‌ಗಳು