ಕೃಷ್ಣ ವಟ್ಟಂ
ಕೃಷ್ಣ ವಟ್ಟಂ
ಕೃಷ್ಣ ವಟ್ಟಂ ಅವರು ಪತ್ರಿಕಾ ಲೋಕದಲ್ಲಿ ದೊಡ್ಡ ಹೆಸರಾಗಿದ್ದವರು. ಜೊತೆಗೆ, ಪರಿಸರ ಸಂರಕ್ಷಣೆ, ವನ್ಯಜೀವಿ ಸಂರಕ್ಷಣೆ, ಸಾಂಸ್ಕೃತಿಕ ಪಾರಂಪರಿಕ ತಾಣಗಳ ಸಂರಕ್ಷಣೆಗಳೂ ಸೇರಿದಂತೆ ಕನ್ನಡ ನಾಡಿನ, ಅದರಲ್ಲೂ ವಿಶೇಷವಾಗಿ ಸಾಂಸ್ಕೃತಿಕ ನಗರವಾದ ಮೈಸೂರಿನ ಆರು ದಶಕಗಳಿಗೂ ಮೀರಿದ ಸಾಕ್ಷೀಪ್ರಜ್ಞೆ ಎನಿಸಿದ್ದರು.
ಕೃಷ್ಣ ವಟ್ಟಂ 1933ರ ಮೇ 2ರಂದು ಬಳ್ಳಾರಿಯಲ್ಲಿ ಜನಿಸಿದರು. ತಂದೆ ಶಾಮ ರಾವ್ ವಟ್ಟಂ. ತಾಯಿ ಅನಸೂಯಮ್ಮ. ಚಿಕ್ಕ ವಯಸ್ಸಿನಲ್ಲೇ ಪತ್ರಕರ್ತರಾಗಿ ರೂಪುಗೊಂಡ ಕೃಷ್ಣ ವಟ್ಟಂ
'ಮದ್ರಾಸ್ ಮೇಲ್' ಮತ್ತು 'ಟೈಮ್ಸ್ ಆಫ್ ಇಂಡಿಯಾ' ವರದಿಗಾರರಾಗಿ ತಮ್ಮ ತಂದೆ ಶಾಮರಾವ್ ವಟ್ಟಂ ಅವರ ಹೆಜ್ಜೆಗಳನ್ನು ಅನುಸರಿಸಿದರು.
ಕೃಷ್ಣ ವಟ್ಟಂ 1953ರಲ್ಲಿ ಡೆಕ್ಕನ್ ಹೆರಾಲ್ಡ್ ಮತ್ತು ಪ್ರಜಾವಾಣಿ ಪತ್ರಿಕಾ ಬಳಗಕ್ಕೆ ಸೇರಿದರು. ಬಳ್ಳಾರಿಯು ಮೈಸೂರು ರಾಜ್ಯಕ್ಕೆ ವಿಲೀನಗೊಂಡ ನಂತರ, 1959ರಲ್ಲಿ ಡೆಕ್ಕನ್ ಹೆರಾಲ್ಡ್ ಮತ್ತು ಪ್ರಜಾವಾಣಿಯ ವರದಿಗಾರರಾಗಿ ಮೈಸೂರಿಗೆ ಬಂದರು. ಮಧ್ಯೆ 1983-84ರಲ್ಲಿ ಮುಖ್ಯ ವರದಿಗಾರರಾಗಿ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸಿದ ಅವರು ಪುನಃ ಮೈಸೂರಿಗೆ ಮರಳಿದರು. 1993ರಲ್ಲಿ ಚೀಫ್ ಕರೆಸ್ಪಾಂಡೆಂಟ್ ಹುದ್ದೆಯಿಂದ ನಿವೃತ್ತರಾದರು. ಹೀಗೆ ಅವರದ್ದು ಡೆಕ್ಕನ್ ಹೆರಾಲ್ಡ್ ಮತ್ತು ಪ್ರಜಾವಾಣಿಯಲ್ಲಿ ನಿರಂತರ 40 ವರ್ಷಗಳ ಸೇವೆ ಸಂದಿತ್ತು.
ಕೃಷ್ಣ ವಟ್ಟಂ ಅವರು ಡೆಕ್ಕನ್ ಹೆರಾಲ್ಡ್‌ನಿಂದ ನಿವೃತ್ತರಾದ ನಂತರ, ಮೈಸೂರಿನ ಸ್ಥಳೀಯ ಕನ್ನಡ ದಿನಪತ್ರಿಕೆ 'ಪ್ರಜಾನುಡಿ' ಮತ್ತು ಅದರ ಇಂಗ್ಲಿಷ್ ಜೋಡಿ ಪತ್ರಿಕೆಯಾದ 'ಮೈಸೂರು ಮೇಲ್'ನಲ್ಲಿ ಸುಮಾರು ಒಂದೂವರೆ ದಶಕಗಳ ಕಾಲ ಕಾರ್ಯನಿರ್ವಹಿಸಿದರು.
ಕೃಷ್ಣ ವಟ್ಟಂ ಅವರು ಪರಿಸರವಾದಿಯಾಗಿ ಮತ್ತು ವನ್ಯಜೀವಿ ಉತ್ಸಾಹಿಯಾಗಿ ವನ್ಯಜೀವಿ ಪತ್ರಿಕೋದ್ಯಮ, ಪರಿಸರ ವಿಜ್ಞಾನ ಮತ್ತು ಪರಿಸರಕ್ಕೆ ನೀಡಿದ ಕೊಡುಗೆಗಳು ಅಪಾರವಾಗಿದೆ.
ಪರಿಸರ ವಿಜ್ಞಾನ ಮತ್ತು ಪರಿಸರದ ಬಗ್ಗೆ ಸಾರ್ವಜನಿಕರಲ್ಲಿ ಮತ್ತು ಆಡಳಿತಗಾರರಲ್ಲಿ ಅತ್ಯಲ್ಪ ಅರಿವೂ ಇಲ್ಲದ ಕಾಲದಲ್ಲಿ ಕೃಷ್ಣ ವಟ್ಟಂ ಅವರು ವಿದ್ಯಾ ಸಂಸ್ಥೆಗಳು ಮತ್ತು ಸಾರ್ವಜನಿಕ ವೇದಿಕೆಗಳಲ್ಲಿ ತಮ್ಮ ಜಾಗೃತಿ ಉಪನ್ಯಾಸಗಳ ಮೂಲಕ, ಮತ್ತು ತಾವಿದ್ದ ಪತ್ರಿಕೆಗಳಲ್ಲಿನ ಬರೆಹಗಳ ಮೂಲಕ ಪರಿಸರ ಸಂರಕ್ಷಣೆ ಮತ್ತು ವನ್ಯಜೀವಿ ಸಂರಕ್ಷಣೆಯ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಅವರು ಕರ್ನಾಟಕ ಮೃಗಾಲಯ ಪ್ರಾಧಿಕಾರದ ಸಂಸ್ಥಾಪಕ ನಿರ್ದೇಶಕರಾಗಿ, ಕರ್ನಾಟಕ ಅರಣ್ಯ ಸಲಹಾ ಮಂಡಳಿಯ ಸದಸ್ಯರಾಗಿ, ಕರ್ನಾಟಕ ರಾಜ್ಯ ವನ್ಯಜೀವಿ ಸಲಹಾ ಮಂಡಳಿಯ ಸದಸ್ಯರಾಗಿ, ಗೌರವ ವೃಕ್ಷ ವಾರ್ಡನ್, ಗೌರವ ವನ್ಯಜೀವಿ ವಾರ್ಡನ್ ಆಗಿ ಮಹತ್ವದ ಸೇವೆ ಸಲ್ಲಿಸಿದರು.
ಪತ್ರಕರ್ತರಿಗೆ ಸತ್ಯಶೋಧನೆಯ ನಿಟ್ಟಿನಲ್ಲಿ ಕಿವಿ - ಕಣ್ಣು ನೂರಾಗಿರಬೇಕು ಮತ್ತು ಪರಿಶುದ್ಧವಾಗಿರಬೇಕು ಎಂಬುದು ಕೃಷ್ಣ ವಟ್ಟಂ ಅವರ ನಿಲುವಾಗಿತ್ತು. ಇಲ್ಲಿ ಪತ್ರಕರ್ತರಾಗಿ ಮತ್ತು ವನ್ಯಜೀವಿಗಳ ಪ್ರೇಮಿಯಾಗಿ ಅವರು ಮಾಡಿದ ಕೆಲಸದ ಒಂದು ಅಪೂರ್ವ ಎಳೆಯನ್ನು ಸ್ಮರಿಸಬೇಕು. ಹುಲಿಯ ಹಾಲಿನ ಮೇವು ಚಿತ್ರೀಕರಣದ ಸಂದರ್ಭದಲ್ಲಿ ಆದ ಅಗ್ನಿ ಅನಾಹುತದ ಸಂದರ್ಭದಲ್ಲಿ, ಆನೆಗಳು ಬೆಂಕಿ ಅನಾಹುತದಲ್ಲಿ ಜೀವ ಕಳೆದುಕೊಂಡಿದ್ದರ ಬಗ್ಗೆ, ಆದ ಅನಾಹುತ ತುಂಬಾ ಅತ್ಯಲ್ಪದ್ದು ಎಂದು ಬಿಂಬಿಸುವ ಪ್ರಯತ್ನ ಬಹಳಷ್ಟು ನಡೆದಿತ್ತು. ಆಗ ಆ ಘಟನೆಯ ಕುರಿತು ಪತ್ರಿಕಾ ವರದಿಗೆ ತೊಡಗಿದ್ದ ಕೃಷ್ಣ ವಟ್ಟಂ ಅವರಿಗೆ, ಆ ಸುತ್ತಲಿನ ಪ್ರದೇಶದ ಒಂದು ಪೆಟ್ಟಿಗೆ ಅಂಗಡಿಯಲ್ಲಿ ಕೇಳಿದ "ಇಂದು ಹದಿಮೂರನೇ ಆನೆ ಅಸುನೀಗಿತು" ಎಂಬ ಮಾತು ತಮಗೇ ಬೆಂಕಿ ತಗುಲಿದ ಭಾವ ಹುಟ್ಟಿಸಿತು. ಮುಂದೆ ಆ ನಿಟ್ಟಿನಲ್ಲಿ ಅವರು ಎಲ್ಲೆಡೆಯಿಂದ ಪ್ರಮಾಣೀಕರಿಸಿ ನೀಡಿದ ವರದಿ, ರಾಜ್ಯ ಮತ್ತು ರಾಷ್ಟ್ರಮಟ್ಟಗಳಲ್ಲಿ ವ್ಯಾಪಕ ಚರ್ಚೆ ಮತ್ತು ಚಿಂತನೆಗೆ ಒಳಗಾಗಿ "ಇನ್ನು ಮುಂದೆ ಯಾವುದೇ ಕಾಡು ಪ್ರಾಣಿಗಳನ್ನು ಚಲನಚಿತ್ರದಲ್ಲಿ ಬಳಸುವಂತಿಲ್ಲ" ಎಂಬ ನೀತಿ ಕಾರ್ಯರೂಪಕ್ಕೆ ಬಂತು.
ಕೃಷ್ಣ ವಟ್ಟಂ ಅವರು ಮೈಸೂರಿನ ಸಾಂಸ್ಕೃತಿಕ ಮತ್ತು ಪಾರಂಪರಿಕ ತಾಣಗಳ ಪ್ರೇಮಿಯಾಗಿ ಮತ್ತು ಸಂರಕ್ಷರಾಗಿ ತುಂಬಾ ಸಕ್ರಿಯರಾಗಿದ್ದರು. ಪ್ರಸಿದ್ಧ ಮೈಸೂರು ಅರಸರು ಮತ್ತು ಅವರ ಪ್ರಬುದ್ಧ ದಿವಾನರುಗಳು ಮೈಸೂರಿಗರಿಗೆ ನೀಡಿದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ಬಗ್ಗೆ ಅವರು ಆಳವಾದ ಜ್ಞಾನ ಹೊಂದಿದ್ದರು. ಮೈಸೂರು ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸಲು ಸ್ಥಾಪನೆಗೊಂಡ ಮೈಸೂರು ಹೆರಿಟೇಜ್ ಟ್ರಸ್ಟ್‌ನ ಸಂಸ್ಥಾಪಕ ಸದಸ್ಯರಾಗಿ ಅವರು ಮಹತ್ವದ ಪಾತ್ರ ನಿರ್ವಹಿಸಿದ್ದರು. ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರತಿಷ್ಠಿತ ಸಂಸ್ಥೆಯಾದ ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ಸ್ ಅಂಡ್ ಕಲ್ಚರಲ್ ಹೆರಿಟೇಜ್ (INTACH)ನ ಮೈಸೂರು ವಿಭಾಗದ ಸಂಚಾಲಕರಾಗಿ 100ಕ್ಕೂ ಹೆಚ್ಚು ಪಾರಂಪರಿಕ ಕಟ್ಟಡಗಳನ್ನು ಗುರುತಿಸಲು ಕಾರಣಕರ್ತರಾದರು.
ಕೃಷ್ಣ ವಟ್ಟಂ, ಅವರು ತಮಗಿದ್ದ ಅಪಾರ ಅಧ್ಯಯನಗಳ ಆಧಾರಿತ ಜ್ಞಾನ ಮತ್ತು ಅನುಭವಗಳೊಂದಿಗೆ ಅನೇಕ ಸಂಸ್ಥೆಗಳಿಗೆ ಮಾರ್ಗದರ್ಶಕರಾಗಿದ್ದರು. ಮೈಸೂರು ವಿಶ್ವವಿದ್ಯಾನಿಲಯವು ವಿಶ್ವವಿದ್ಯಾನಿಲಯಕ್ಕಾಗಿ ಹೊಸ ಕ್ರೀಡಾ ನೀತಿಯನ್ನು ರೂಪಿಸಲು ಅವರ ಸಹಾಯವನ್ನು ತೆಗೆದುಕೊಂಡಿತು. ಮೈಸೂರು ವಿಶ್ವವಿದ್ಯಾಲಯವು ಅವರನ್ನು ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗವನ್ನು ಪುನರ್ರಚಿಸುವ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಿತ್ತು. ಇದರಿಂದಾಗಿ ಬ್ಯುಸಿನೆಸ್ ಜರ್ನಲಿಸಂ ಮತ್ತು ಸೈನ್ಸ್ ರಿಪೋರ್ಟಿಂಗ್ ಮುಂತಾದವು ಪಠ್ಯಕ್ರಮದಲ್ಲಿ ಸೇರ್ಪಡೆಗೊಂಡವು. ಮೈಸೂರು ಜಿಲ್ಲೆಯ ಬೈಲಕುಪ್ಪೆಯಲ್ಲಿ ವಲಸಿಗರಾಗಿ ನೆಲೆಸಿರುವ ಟಿಬೆಟಿಯನ್ ಜನಾಂಗದ ಕುರಿತಾದ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ವರದಿಯನ್ನು ಇನ್‌ಸ್ಟಿಟ್ಯೂಟ್ ಆಫ್ ಯೂನಿವರ್ಸಿಟಿ ಡೆವಲಪ್‌ಮೆಂಟ್ ಸ್ಟಡೀಸ್‌ಗಾಗಿ ಮಾಡಿಕೊಟ್ಟರು.
ಕೃಷ್ಣ ವಟ್ಟಂ ಅವರು ಮೈಸೂರು ವಿಶ್ವವಿದ್ಯಾನಿಲಯದ ಸೆನೆಟ್ ಸದಸ್ಯರಾಗಿ, ಭಾರತೀಯ ವಿದ್ಯಾಭವನದ ಮೈಸೂರು ಶಾಖೆಯ ಸಂಸ್ಥಾಪಕ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿದರು. ಅವರು ಮೈಸೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ವಿಭಾಗದ ಸ್ನಾತಕೋತ್ತರ ತರಗತಿಗಳಿಗೆ ಕೆಲವು ಕಾಲ ಬೋಧನೆಯನ್ನೂ ಮಾಡುತ್ತಿದ್ದರು.
ಸದಾ ಕ್ರಿಯಾಶೀಲರಾಗಿದ್ದ ಕೃಷ್ಣ ವಟ್ಟಂ ಅವರಿಗೆ ಕ್ಯಾನ್ಸರ್ ಇರುವುದು ಪತ್ತೆಯಾದಾಗ, ಅವರು ತಮ್ಮ ಚಟುವಟಿಕೆಗಳನ್ನು ಒಂದಷ್ಟು ನಿಧಾನಗೊಳಿಸಿಕೊಳ್ಳುವುದು ಅನಿವಾರ್ಯವಾಯಿತು. ಆದರೂ ತಮದೇ ಆದ ಶೈಲಿಯಲ್ಲಿ ಕ್ಯಾನ್ಸರ್ ಜೊತೆಗಿನ ಕಾಳಗದಲ್ಲಿ ಜಯಶೀಲರಾಗಿ ಗುಣಮುಖರಾದರು. ಇತರರೊಂದಿಗೆ ಸೇರಿ 'ಮಾಜಿ ಕ್ಯಾನ್ಸರ್ ರೋಗಿಗಳ ಸಂಘ'ವನ್ನು ಸ್ಥಾಪಿಸಿದರು. ಆ ಮೂಲಕ ಕ್ಯಾನ್ಸರ್ ರೋಗಿಗಳಿಗೆ ಮತ್ತು ಅವರ ಕುಟುಂದವರಿಗೆ ಕ್ಯಾನ್ಸರ್ ಎದುರಿಸುವಲ್ಲಿ ಮಾನಸಿಕ ಶಕ್ತಿ ಮತ್ತು ಸ್ಥೈರ್ಯ ತುಂಬಿದರು. ಮೈಸೂರಿನಲ್ಲಿನ ಕ್ಯಾನ್ಸರ್ ಆಸ್ಪತ್ರೆಗೆ ಹೋಗಿ ಕ್ಯಾನ್ಸರಿಗೆ ಚಿಕಿತ್ಸೆ ಪಡೆಯುತ್ತಿದ್ದವರಿಗೆ ಧೈರ್ಯ ತುಂಬುವ ಕೆಲಸ ಮಾಡಿದರು. ರೋಗಿಗಳಿಗೆ ವೈದ್ಯರು ಹೇಳುವ ಭರವಸೆಗಿಂತ, "ನೋಡಿ, ನಾನು ರೋಗಿಯಾಗಿದ್ದವ ಈಗ ಹೇಗೆ ಗುಣಮುಖನಾಗಿದ್ದೇನೆ" ಎಂದು ಆಡಿದ ಅವರ ಆತ್ಮವಿಶ್ವಾಸದ ಮಾತುಗಳು ಸ್ಪೂರ್ತಿ ನಿಡುವಂತಿರುತ್ತಿದ್ದವು.
ಕೃಷ್ಣ ವಟ್ಟಂ ಅವರು ತಾವು ಕ್ಯಾನ್ಸರ್ ವಿರುದ್ಧ ಹೋರಾಡಿ ಗೆಲುವು ಸಾಧಿಸಿದುದರ ಕುರಿತಾಗಿ “ಜಾಯ್ ಆಫ್ ಕಾನಕರಿಂಗ್ ಕ್ಯಾನ್ಸರ್: ಎ ಸ್ಪಿರಿಚುವಲ್ ಡೈಮೆನ್ಷನ್” ಎಂಬ ಇಂಗ್ಲಿಷ್ ಕೃತಿ ಮತ್ತು "ಕ್ಯಾನ್ಸರ್ ಗೆದ್ದ ಸಂತಸ" ಎಂಬ ಕನ್ನಡ ಕೃತಿಯನ್ನು ಹೊರತಂದರು.
ಕೃಷ್ಣವಟ್ಟಂ ಅವರು ತಾವು ಭೇಟಿ ಮಾಡಿದ ಮಹನೀಯರುಗಳನೇಕರಲ್ಲಿ ಡಾ. ಎಸ್. ರಾಧಾಕೃಷ್ಣನ್, ಜಯಚಾಮರಾಜೇಂದ್ರ ಒಡೆಯರ್, ಕಂಚಿಯ ಪರಮಾಚಾರ್ಯರು, ಫೀಲ್ಡ್ ಮಾರ್ಷಲ್ ಕಾರಿಯಪ್ಪ ಮುಂತಾದವರೊಡನೆ ಆದ ಅನುಭವಗಳನ್ನು ಆಪ್ತರೊಂದಿಗೆ ನೆನೆಯುತ್ತಿದ್ದರು. ಮಹಾನ್ ಬರಹಗಾರ ಆರ್. ಕೆ. ನಾರಾಯಣ್ ಅವರಂತೂ ಕೃಷ್ಣ ವಟ್ಟಂ ಅವರ ಆಪ್ತ ಒಡನಾಡಿಯೇ ಆಗಿದ್ದರು. ಆರ್. ಕೆ. ನಾರಾಯಣ್ ಮೈಸೂರಿನ ಯಾದವಗಿರಿಯ ಮನೆಯಲ್ಲಿ ಒಂಟಿಯಾಗಿದ್ದಾಗಲಂತೂ "ವಟ್ಟಂ ಬರ್ತೀರಾ" ಎಂದು ಆಗಾಗ ಕರೆ ಬರುತ್ತಲೇ ಇತ್ತು. ಆರ್. ಕೆ. ನಾರಾಯಣ್ ತಮ್ಮ ಕೊನೆಯ ದಿನಗಳಲ್ಲಿ ಮಗಳ ಮನೆಯಲ್ಲಿ ಚೆನ್ನೈನಲ್ಲಿದ್ದಾಗಲೂ ವಟ್ಟಂ ಅವರನ್ನು "ನಿಮ್ಮನ್ನು ನೋಡಬೇಕೆನಿಸಿದೆ ಬನ್ನಿ" ಎಂದಿದ್ದರು. ಅಲ್ಲಿಗೆ ಹೋಗುವುದರ ಕುರಿತು ವಟ್ಟಂ ಅವರು ನಿರ್ಧರಿಸುವ ಮೊದಲೇ, ಆರ್. ಕೆ. ನಾರಾಯಣ್ ಅವರು ನಿಧನರಾದ ಸಂದರ್ಭದಲ್ಲಿ, ಅವರನ್ನು ಇನ್ನೂ ಇರುವಾಗ ನೋಡಲು ನಿಧಾನ ಮಾಡಿ ಅವಕಾಶ ತಪ್ಪಿ ಹೋಯ್ತಲ್ಲ ಎಂಬ ಕೊರಗು ಅವರನ್ನು ಕಾಡಿತ್ತು.
ಕೃಷ್ಣ ವಟ್ಟಂ ಅವರಿಗೆ 1983ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, 1994ರಲ್ಲಿ ಕರ್ನಾಟಕ ಪತ್ರಿಕಾ ಅಕಾಡೆಮಿ ಪ್ರಶಸ್ತಿ, 1998ರಲ್ಲಿ ಆರಂಭಗೊಂಡ ಕರ್ನಾಟಕ ಸರ್ಕಾರದ ಪ್ರಪ್ರಥಮ ಪರಿಸರ ಪ್ರಶಸ್ತಿ, ಭಾರತ 50ನೇ ಸ್ವಾತಂತ್ರ್ಯೋತ್ಸವ ಆಚರಣೆಯ ಸಂದರ್ಭದಲ್ಲಿನ ಕರ್ನಾಟಕ ಸರ್ಕಾರದ ಪ್ರಶಸ್ತಿ ಮುಂತಾದ ರಾಜ್ಯ ಸರ್ಕಾರದ ಗೌರವಗಳಲ್ಲದೆ, ಹಲವಾರು ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಸ್ಥೆಗಳ ಸನ್ಮಾನ ಗೌರವಗಳೂ ಸಂದಿದ್ದವು.
ಕೃಷ್ಣ ವಟ್ಟಂ ಅವರು 2015ರ ಆಗಸ್ಟ್ 12 ರಂದು ಈ ಲೋಕವನ್ನಗಲಿದರು. ಪತ್ರಿಕಾಲೋಕದ ಹಿರಿಯರಾಗಿ, ಪರಿಸರ, ಪರಂಪರೆಗಳ ಸಂರಕ್ಷರಾಗಿ, ಸಭ್ಯ - ಸುಸಂಸ್ಕೃತ ಸಮಾಜಮುಖಿ ವ್ಯಕ್ತಿತ್ವದವರಾಗಿ ಅವರು ಸದಾ ಸ್ಮರಣೀಯರು.
ಕೃತಜ್ಞತೆಗಳು: Saraswathi Vattam
ಕಾಮೆಂಟ್‌ಗಳು