ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಮತ್ತೆ ಭೇಟಿಯಾಗ್ತೀನಿ ನಿನ್ನ


 ನಿನಗ ನಾ ತಿರುಗಿ ಭೇಟಿಯಾಗ್ತೇನಿ

ಹೆಂಗ, ಎಲ್ಲಿ ಗೊತ್ತಿಲ್ಲ 

ಬಹುಶಃ ನಿನ್ನ ಕಲ್ಪನೆಯ ಒಂದು ಎಳೆಯಾಗಿ 
ನಿನ್ನ ಕ್ಯಾನ್ವಾಸಿನ ಮ್ಯಾಲಿಳಿತೀನಿ

 ಇಲ್ಲಾ... ಕ್ಯಾನ್ವಾಸಿನ ಮ್ಯಾಲಿನ
ರಹಸ್ಯಮಯಿ ಗೆರಿಯಾಗಿ 
ಮೈಮರೆತು ನಿನ್ನ ದಿಟ್ಟಿಸ್ತೀರ್ತಿನಿ 

ಇಲ್ಲ ಅಂದ್ರ ಸೂರ್ಯಕಿರಣ ರೇಖೆಯಾಗಿ 
ನಿನ್ನದೇ ಬಣ್ಣದೊಳಗ ಮಿಂದೇಳ್ತೀನಿ
ಇಲ್ಲಾಂದ್ರ, ರಂಗಿನ ತೋಳಿನಾಗ ಕುಂತು 
ನಿನ್ನ ಕ್ಯಾನ್ವಾಸ್ ಭರ್ತಿ ತುಂಬಕೋತೀನಿ  


ಗೊತ್ತಿಲ್ಲ ನೋಡು! ಎಲ್ಲಿ, ಹೆಂಗ ಅಂತ
ಆದ್ರ ನಿನ್ನ ಜರೂರು ಭೇಟಿಯಾಗ್ತೀನಿ

ಇಲ್ಲಾಂದ್ರ ಒಂದು ಚಶ್ಮಾ ಆಗ್ತೇನಿ

ಜಲಪಾತದಿಂದ ನೀರಧಾರೆ ಎದ್ದಾಂಗ  
ಒಂದು ನೀರ ಹನಿಯಾಗ್ತಿನಿ ನಾ 
ನಿನ್ನ ದೇಹನ ತಾಕ್ತೇನಿ 
ತಂಪೆರೆಯೋ ಹನಿಯಂತೆ ಮತ್ತೆ 
ನಿನ್ನೆದೆಯ ವತ್ತಿನಾಗ ಹರಿತೀನಿ 

ನಂಗೆ ಮತ್ತೇನೂ ಗೊತ್ತಿರಲಿಕ್ಕಿಲ್ಲ
ಆದ್ರ ಇಷ್ಟು ಮಾತ್ರ ಖಾತ್ರಿ ಗೊತ್ತದ
ಈ ಸಮಯ ಏನೋ ಮಾಡ್ತದ 
ಈ ಜನ್ಮ ನನ್ನೊಟ್ಟಿಗೇ ನಡೀತದ

ಈ ದೇಹ ಕೊನೆಗಾಣ್ತದ
ಕೊನೆಗೊಂದು ದಿನ ಎಲ್ಲಾನೂ 
ಮುಗಿದು ಹೋಗ್ತದ
ಆದ್ರ ಚೇತನದ ಆ ಎಳೆಗಳು
ಬ್ರಹ್ಮಾಂಡದ ಕಣಗಳಾಗಿ ಸುತ್ತಿರ್ತಾವ 

ನಾನು ಆ ಕಣದ ಎಳೆ ಬಿಡಿಸ್ಕಂತೇನಿ 
ಮತ್ತೆ ನಿನ್ನ ಭೇಟಿಯಾಗತೆನಿ 

ಎಲ್ಲಿ, ಹೆಂಗ ಗೊತ್ತಿಲ್ಲ...
ಆದ್ರ ಮತ್ತೆ ಭೇಟಿಯಾಗ್ತೀನಿ ನಿನ್ನ 

– ಅಮೃತಾ ಪ್ರೀತಂ
ಅನುವಾದ - ರಶ್ಮಿ

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ