ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ನನ್ನ ಪ್ರೀತಿಯ ಕಾಗೆ


 

ನನ್ನ ಪ್ರೀತಿಯ ಕಾಗೆ
Crow my love 

ನನಗೆ ಪ್ರೀತಿಸಲು ಯಾವುದೋ ಬಣ್ಣ ಬಣ್ಣದ ಹಕ್ಕಿಯೇ ಆಗಬೇಕೆಂದೇನೂ ಇಲ್ಲ!  ನಾನು ಪ್ರಕೃತಿಯೊಂದಿಗಿದ್ದಾಗ, ನನಗ್ಯಾವುದರಲ್ಲೂ ಭೇದವಿಲ್ಲ.  ನನಗೆ ಕಾಣುವುದೆಲ್ಲ ಚಂದವೇ! ನಾ ಹೇಗೆ ಕಾಣುತ್ತೇನೆ ಮುಖ್ಯ, ಯಾವುದನ್ನ ಎಂಬುದಕ್ಕಿಂತ.  ನಾವು ಯಾವುದೂ ಸುಲಭವಾಗಿ ಕಾಣಲು ಸಿಗದೊ ಅದನ್ನು ಕಾಣಲು ಹಾತೊರೆಯುಷ್ಟು, ನಮ್ಮ ಕಣ್ಣೆದುರು ಇರುವುದಕ್ಕೆ ಮನಸ್ಸು ಕೊಡುವುದಿಲ್ಲ!

ಯು. ಆರ್. ಅನಂತಮೂರ್ತಿ ಅವರು, ಆರ್. ಕೆ. ಲಕ್ಷ್ಮಣ್ ಅವರನ್ನು ಸಂದರ್ಶಿಸಿದ ಸಂದರ್ಭದಲ್ಲಿ, "ನಿಮ್ಮ ಬಹುತೇಕ ಚಿತ್ರಗಳಲ್ಲಿ ಕಾಗೆ ಇರುತ್ತಲ್ಲ!" ಎಂದಾಗ, "ಕಾಗೆ ನಮ್ಮ ಬದುಕಿನ ಸಾಕ್ಷಿ ಪ್ರಜ್ಞೆ ಇದ್ದ ಹಾಗೆ, ಅದು ಅಸಡ್ಡೆಗೆ ಒಳಗಾದ, ಆದರೆ ತುಂಬ ಬುದ್ಧಿಶಾಲಿ ಪಕ್ಷಿ" ಎಂದಿದ್ದರು. ಅದು ಒಂದೊಂದು ಸನ್ನಿವೇಶಕ್ಕೂ ಹೊರಡಿಸುವ ಧ್ವನಿ ವಿಭಿನ್ನ ಎಂದು ಅವರು ಗುರುತಿಸುತ್ತಾರೆ.

ಕಾಗೆ, ಪ್ಯಾಸೆರಿಫಾರ್ಮೀಸ್ ಗಣದ ಕಾರ್ವಿಡೀ ಕುಟುಂಬಕ್ಕೆ ಸೇರಿದ ಕಾರ್ವಸ್ ಜಾತಿಯ ಹಕ್ಕಿ. ಪ್ರಪಂಚದ ಎಲ್ಲ ದೇಶಗಳಲ್ಲೂ ಉಂಟು. ಇದರಲ್ಲಿ ಸುಮಾರು 32 ಪ್ರಭೇಧಗಳಿವೆ. ಭಾರತದಲ್ಲಿ ಕಾರ್ವಸ್ ಮ್ಯಾಕ್ರೊರಿಂಕೋಸ್ (ಕಾಡುಕಾಗೆ) ಮತ್ತು ಕಾರ್ವಸ್ ಸ್ಪ್ಲೆಂಡೆನ್ಸ್ (ಊರುಕಾಗೆ) ಎಂಬ ಎರಡು ಪ್ರಭೇದಗಳಿವೆ. ಭಾರತದಲ್ಲಿನ ಪ್ರಭೇದಗಳು ಸಿಂಹಳ ಮತ್ತು ಬರ್ಮಗಳಲ್ಲೂ ಇವೆ. ದುಬೈನಲ್ಲಿ ನಾನು ಕಾಣುವುದೂ ಅದೇ ಎಂದು ಭಾವಿಸಿರುವೆ.

ಭಾರತದ ಊರು ಮತ್ತು ಕಾಡು ಕಾಗೆಗಳಲ್ಲಿ ಕೆಲವು ವ್ಯತ್ಯಾಸಗಳುಂಟು. ಊರುಕಾಗೆ ಸಾಮಾನ್ಯವಾಗಿ ಬಯಲುಸೀಮೆಯ ವಾಸಿ. ಮಾನವವಸತಿಗಳ ಬಳಿ ಇದು ಬಲುಸಾಮಾನ್ಯ. ಇದರ ಉದ್ದ ಸುಮಾರು 17'. ಸುಮಾರು 7" ಉದ್ದದ ಬಾಲವೂ 2" ಉದ್ದದ ಕೊಕ್ಕೂ ಇದಕ್ಕಿವೆ. ಕೊಕ್ಕು ದೃಢ. ತುದಿಯಲ್ಲಿ ನಸು ಬಾಗಿದಂತಿದೆ. ದೇಹವೆಲ್ಲ ಕಪ್ಪು ಬಣ್ಣದ್ದು. ಕಂಠಪ್ರದೇಶ ಮಾತ್ರ ಬೂದಿಬಣ್ಣದ್ದಾಗಿದೆ. ಸತ್ತ ಇಲಿ ಮುಂತಾದ ಪ್ರಾಣಿಗಳು, ಕೀಟಗಳು, ಕಾಯಿ, ಬೀಜ, ಇತರ ಹಕ್ಕಿಗಳ ಮೊಟ್ಟೆ ಮತ್ತು ಮರಿ ಇತ್ಯಾದಿ ಎಂಥ ಬಗೆಯ ಆಹಾರವನ್ನಾದರೂ ಕಾಗೆ ತಿನ್ನಬಲ್ಲದು. ಇದು ಬಲು ಚುರುಕು ಹಾಗೂ ಧೈರ್ಯಶಾಲಿ. ಬಲು ಜಾಗರೂಕ ಪ್ರಾಣಿಯೂ ಹೌದು. ಸಂಜೆಯ ಹೊತ್ತು ಕಾಗೆಗಳೆಲ್ಲ ಯಾವುದಾದರೊಂದು ಮರದಲ್ಲೊ ಬಯಲಿನಲ್ಲೊ ಒಂದು ಕಡೆ ಗುಂಪುಗೂಡಿ, ವಿಚಾರವಿನಿಮಯ ಮಾಡಿಕೊಳ್ಳುವಂತೆ ವ್ಯವಹರಿಸುತ್ತವೆ.

ಕಾಗೆ ತನ್ನ ಗೂಡನ್ನು ಮರದ ರೆಂಬೆಗಳ ಮೇಲೆ ಸಣ್ಣ ಕಡ್ಡಿಗಳಿಂದ ನಿರ್ಮಿಸುತ್ತದೆ. ಗೂಡು ಕಟ್ಟುವ ಕಾರ್ಯ ಹೆಚ್ಚಾಗಿ ಗಂಡಿನದು. ಗೂಡು ತಯಾರಾದ ಮೇಲೆ ಹೆಣ್ಣುಕಾಗೆ 4ರಿಂದ 5ರ ವರೆಗೆ ಮೊಟ್ಟೆಗಳನ್ನಿಡುತ್ತದೆ. ಕಾಗೆ ತನ್ನ ಮರಿಗಳ ಪಾಲನೆಯಲ್ಲಿ ಹೆಚ್ಚಿನ ಶ್ರದ್ದೆಯನ್ನು ವ್ಯಕ್ತಪಡಿಸುತ್ತವೆ.

ಕಾಗೆ ಬೇರೆ ಪಕ್ಷಿಗಳ ವಲಸೆ ಹೋಗುವ ಪರಿಪಾಟಿಯನ್ನು ಹೊಂದಿದ್ದರೂ ವಲಸೆಯ ಕ್ರಮ ಅತ್ಯಂತ ತಾತ್ಕಾಲಿಕವಾದುದು. ನಸುಬೆಳಕಿನಲ್ಲೇ ತನ್ನ ಗೂಡನ್ನು ತೊರೆದು ದೂರದ ಸ್ಥಳಗಳಿಗೆ ಆಹಾರಕ್ಕಾಗಿ ವಲಸೆಹೋಗಿ ಕತ್ತಲೆಗೆ ಮೊದಲೇ ಹಿಂತಿರುಗುವುದು ಇದರ ಸ್ವಭಾವ.

ಕಾಗೆ ನಗರವಾಸಕ್ಕೆ ಚೆನ್ನಾಗಿ ಹೊಂದಿಕೊಂಡಿದೆ. ಎಷ್ಟೇ ಹೊಂದಿಕೊಂಡಿದ್ದರೂ ಗುಬ್ಬಚ್ಚಿಯಂತೆ ಇದು ಮಾನವನೊಂದಿಗೆ ಸಲಿಗೆಯಿಂದ ವರ್ತಿಸದು. ಉಪಾಯವಾಗಿ ತಿಂಡಿ ತಿನಿಸನ್ನು ಎಗರಿಸುವುದರಲ್ಲದು ನಿಸ್ಸೀಮ. ಎಂಜಲನ್ನವನ್ನು, ಕಸ ಮುಸುರೆಯನ್ನು ಕಂಡಾಗ ಕಾಕಾ ಎನ್ನುತ್ತ ತನ್ನ ಬಳಗದೊಂದಿಗೆ ಪ್ರತ್ಯಕ್ಷವಾಗುತ್ತದೆ. ಚಿಕ್ಕ ಪುಟ್ಟ ಪಾತ್ರೆ ಪಡಿಗವನ್ನು ಚಮಚಗಳನ್ನು ಕದ್ದೊಯ್ಯುವುದೂ ಉಂಟು. ಮನುಷ್ಯನ ಚಲನವಲನಗಳನ್ನಿದು ಬೆಕ್ಕಿನಂತೆ ಚೆನ್ನಾಗಿ ತಿಳಿದಿದೆ. ಆಹಾರ ಸಿಕ್ಕಾಗ ಹೇಗೋ ಹಾಗೆ ಸತ್ತ ಅಥವಾ ಪೆಟ್ಟುಬಿದ್ದ ಕಾಗೆಯ ಸುತ್ತ ಗುಂಪುಗೂಡುವುದು, ಗದ್ದಲ ಮಾಡುವುದು ಇದರ ಸ್ವಭಾವ. 

ಸರ್ಪವೊಂದನ್ನು ಉಪಾಯದಿಂದ ಕೊಂದುದು, ಹೂಜಿಯಲ್ಲಿದ್ದ ಸ್ವಲ್ಪ ನೀರನ್ನು ಚತುರತೆಯಿಂದ ಕುಡಿದುದು ಮುಂತಾದ ಕಥೆಗಳಲ್ಲಿನ ಕಾಗೆಯ ಜಾಣತನ ಕೇವಲ ಕಾಲ್ಪನಿಕವೆನ್ನಲಾಗದು. ಕಾಗೆಗೆ ಬೇಟೆಯ ಎಲ್ಲ ವರಸೆಗಳೂ ತಿಳಿದಿದೆ. ಹಕ್ಕಿಗಳ ಮೊಟ್ಟೆಗಳನ್ನು ಕದಿವಲ್ಲಿ, ಸಣ್ಣ ಪುಟ್ಟ ಹಕ್ಕಿಗಳನ್ನೂ ಪ್ರಾಣಿಗಳನ್ನೂ ಹಿಡಿವಲ್ಲಿ ಇದು ನಿಸ್ಸೀಮ. ಬೇಟೆ ದೊರೆತಾಗಲಂತೂ ಉಗ್ರವಾಗಿ ವರ್ತಿಸುತ್ತದೆ. ಕೊಳೆ ಕಳಪೆಗಳನ್ನು ತಿಂದು ಪರಿಸರವನ್ನು ಶುದ್ಧಿಮಾಡುವುದರಿಂದ ಇದು ಮನುಷ್ಯನಿಗೆ ಉಪಕಾರಿ ಎನಿಸಿದೆ.

ಪುರಾಣೇತಿಹಾಸದಲ್ಲಿ ಕಾಗೆಯ ಬಗ್ಗೆ ಅನೇಕ ಉಲ್ಲೇಖಗಳಿವೆ. ಸೀತೆಯನ್ನು ಬಾಧಿಸಿದ ಕಾಕಾಸುರನನ್ನು ರಾಮಬಾಣ ಅಟ್ಟಿಹೋದ ಪ್ರಸಂಗ ರಾಮಾಯಣದಲ್ಲಿದೆ. ಶನಿದೇವನ ರಥಕ್ಕೆ ಕಾಗೆಯನ್ನು ಹೂಡಲಾಗಿದೆಯೆಂದೂ ಕರ್ಣನ ಲಾಂಛನ ಕಾಗೆಯೆಂದೂ ಹೇಳಲಾಗಿದೆ.

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ