ಕಡಬ ಶ್ರೀನಿವಾಸ್
ಕಡಬ ಶ್ರೀನಿವಾಸ್
ಕಲಾವಿದ ಕಡಬ ಶ್ರೀನಿವಾಸ್ ಅವರು ಜಾನಪದ ಹಾಸ್ಯ ಜಾದೂಗಾರರಾಗಿದ್ದು ವಿಶೇಷವಾಗಿ ತಮ್ಮ ಜಾನಪದ ಹಾಸ್ಯ ಜಾದೂ ರಸಮಂಜರಿಗಳಿಂದ ಪ್ರಸಿದ್ಧರಾಗಿದ್ದಾರೆ.
ಶ್ರೀನಿವಾಸ್ ಅವರು 1961ರ ಸೆಪ್ಟೆಂಬರ್ 20ರಂದು ಜನಿಸಿದರು. ಇವರು ಗುಬ್ಬಿ ತಾಲೂಕಿನ ಕಡಬ ಗ್ರಾಮದವರು. ತಾಯಿ ವೆಂಕಟಲಕ್ಷ್ಮಮ್ಮ. ತಂದೆ ವೆಂಕಟಗಿರಿಯಪ್ಪ. ಶಾಲೆಯಲ್ಲಿ 5ನೇ ತರಗತಿಯಲ್ಲಿದ್ದಾಗಲೇ ಇವರಿಗೆ ಜಾದೂ ಗೀಳು ಹತ್ತಿತು. ಈ ನಿಟ್ಟಿನಲ್ಲಿ ಇವರಿಗೆ ಮೊದಲು ಗುರುವಾದವರು ಚಿಕ್ಕನಾಯಕನಹಳ್ಳಿ ತಾಲೂಕಿನ ಹಂದನಕೆರೆ ಕರಿಯಣ್ಣ ಶೆಟ್ಟಿ ಅವರು. ನಂತರ ಅಂತಾರಾಷ್ಟ್ರೀಯ ಜಾದೂಗಾರ ಎಂ.ಸಿ.ಸರ್ಕಾರ್ ಗರಡಿಯಲ್ಲಿ ಇನ್ನಷ್ಟು ಇಂದ್ರಜಾಲ ವಿದ್ಯೆ ಕಲಿಯುವ ಅವಕಾಶ ಗಳಿಸಿಕೊಂಡರು.
ಕಡಬ ಶ್ರೀನಿವಾಸ್ ಕಳೆದ ನಾಲ್ಕು ದಶಕಗಳಿಂದ ಜಾದೂ ಮಾಡುವ ಮೂಲಕ ದೇಶದೆಲ್ಲೆಡೆ ಸಂಚರಿಸಿ ಜಾದೂ ವಿಶೇಷತೆಯನ್ನು ಸಾರುತ್ತಿದ್ದು ಯಕ್ಷಿಣಿ, ಇಂದ್ರಜಾಲ, ಮೋಡಿ ಕಲೆ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತ ಹೆಸರಾಗಿದ್ದಾರೆ.
ಶ್ರೀನಿವಾಸ್ ಅವರು ವಿಶೇಷವಾಗಿ ಹಾಸ್ಯಭರಿತವಾದ ಜಾದೂ ಪ್ರದರ್ಶನಗಳಿಗೆ ಒತ್ತುಕೊಡುತ್ತ ಬಂದಿದ್ದಾರೆ. ಈ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಾಗಿ 1982ರಲ್ಲಿ ತುಮಕೂರಿನ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ 1 ತಿಂಗಳು ಏರ್ಪಡಿಸಿದ್ದ ಧ್ವನಿ ಮತ್ತು ಬೆಳಕಿನ ಕಾರ್ಯಕ್ರಮದಲ್ಲಿ ಶ್ರೀ ಕೃಷ್ಣದೇವರಾಯನ ನಾಟಕ ಪ್ರದರ್ಶನದಲ್ಲಿ ತೆನಾಲಿರಾಮನ ಪಾತ್ರ ಅಭಿನಯಿಸಿ ಹಾಸ್ಯ ಜಾದೂಗಾರನಾಗಿ
ಹೊರಹೊಮ್ಮಿದರು. ಜಾದೂ ಕಾರ್ಯಕ್ರಮದಲ್ಲಿ ಕನ್ನಡದ ಜಾನಪದ ಹಾಡುಗಳನ್ನು ಬಳಕೆ ಮಾಡಿಕೊಂಡು ಜಾದೂ ಮಾಡುವ ಶ್ರೀನಿವಾಸ್ ಜಾನಪದ ವೇಷ, ಭೂಷಣದ ಜತೆಗೆ ಜಾನಪದ ಪರಿಕರಗಳನ್ನು ಬಳಸಿಕೊಂಡು ಎಲ್ಲ ವರ್ಗದ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಹೀಗೆ ಇವರು ದೇಶದಾದ್ಯಂತ ಬೇಡಿಕೆಯುಳ್ಳ ಮೋಡಿಗಾರನೆನಿಸಿದ್ದಾರೆ. ಶ್ರೀನಿವಾಸ್ ಅವರು ಪ್ರಸಿದ್ಧ ವೇದಿಕೆಗಳಲ್ಲಿ ಮಾತ್ರವಲ್ಲದೆ ಅನಾಥಾಶ್ರಮ, ವೃದ್ಧಾಶ್ರಮ, ಆಸ್ಪತ್ರೆಗಳಿಗೂ ಭೇಟಿ ನೀಡಿ ನೊಂದ ಜೀವಿಗಳಿಗೆ ಚೈತನ್ಯ ತುಂಬಲು ಸಹ ತಮ್ಮ ಜಾದೂ ಕಲೆ ಬಳಸಿದ್ದಾರೆ.
ಕಡಬ ಶ್ರೀನಿವಾಸ್ ಅವರಿಗೆ ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ, ನಾಡಪ್ರಭು ಕೆಂಪೇಗೌಡ ಪ್ರಶಸ್ತಿ, ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ ಕನ್ನಡ ಸೇವಾರತ್ಚ, ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಪ್ರಶಸ್ತಿ, ಜಾನಪದ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳು ಸಂದಿವೆ.
ಶ್ರೀನಿವಾಸ್ ಅವರ ಪತ್ನಿ ಶಾರದಾ ಅವರೂ ತಮ್ಮ ಪತಿಯವರ ಜಾದು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತ ಬಂದಿದ್ದಾರೆ. ಪುತ್ರಿಯರಾದ ಜ್ಯೋತಿ, ತೇಜಸ್ವಿನಿ ಹಾಗೂ ಪುತ ಹಿತೈಷ್ ಕಡಬ ಅವರಿಗೂ ರಕ್ತಗತವಾಗಿ ಜಾದೂ ಕಲೆ ಒಲಿದುಬಂದಿದೆ.
ಮಹಾನ್ ಕಲಾವಿದ ಕಡಬ ಶ್ರೀನಿವಾಸ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಹೇಳುತ್ತ ಅವರಿಗೂ ಅವರ ಸಮಸ್ತ ಕುಟುಂಬಕ್ಕೂ ಶುಭಕೋರೋಣ. ನಮಸ್ಕಾರ.
Happy birthday to Great Magician and Folk artiste Kadaba Srinivas 🌷🌷🌷
ಗುಬ್ಬಿ ತಾಲೂಕು ಕಡಬದ ಜಾದುಗಾರರಿಗೆ ಶ್ರೀ ಶ್ರೀನಿವಾಸಣ್ಣನವರಿಗೆ ಕಡಬ ಗ್ರಾಮದ ಶ್ರೀ ಶನೇಶ್ವರ ಸ್ವಾಮಿ ಶ್ರೀ ಬಸವಣ್ಣ ಸ್ವಾಮಿ ಅವರು ಒಳ್ಳೆಯದನ್ನು ಮಾಡಲಿ ಎಂದು ಕೇಳುವ ಕಡಬದ ರಮೇಶ್
ಪ್ರತ್ಯುತ್ತರಅಳಿಸಿಶೇಖಪ್ಪ ಕಿನ್ನರಿ ಸುಡಗಾಡ ಸಿದ್ದ ಜಾನಪದ ಕಲಾವಿದರು ವಿಜಯನಗರ ಜಿಲ್ಲೆ ಹೊಸಪೇಟೆ ತುಂಬಾ ಹೃದಯಪೂರ್ವಕ ಧನ್ಯವಾದಗಳು ಸರ್
ಪ್ರತ್ಯುತ್ತರಅಳಿಸಿ