ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಗಿರಿಜಾ ಶಾಸ್ತ್ರಿ


ಗಿರಿಜಾ ಶಾಸ್ತ್ರಿ 

ಡಾ.  ಗಿರಿಜಾ ಶಾಸ್ತ್ರಿ ಕನ್ನಡದ ಪ್ರಸಿದ್ಧ ಬರಹಗಾರ್ತಿ. 

ಸೆಪ್ಟೆಂಬರ್ 16, ಗಿರಿಜಾ ಶಾಸ್ತ್ರಿ ಅವರ ಜನ್ಮದಿನ.  ಇವರು ಮೂಲತಃ ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲ್ಲೂಕಿನ ಸಾಲಿಗ್ರಾಮದವರು.  ಕನ್ನಡ ಮತ್ತು ಇಂಗ್ಲಿಷ್ನಲ್ಲಿ ಸ್ನಾತಕೋತ್ತರ ಪದವಿ ಪಡೆದರು. ನಂತರ "ಆಧುನಿಕ ಕನ್ನಡದ ಸಣ್ಣಕತೆಗಳು - ಸ್ತ್ರೀವಾದಿ ಅಧ್ಯಯನ" ಮಹಾಪ್ರಬಂಧಕ್ಕೆ ಮುಂಬೈ ವಿಶ್ವವಿದ್ಯಾಲಯದಿಂದ ಪಿಎಚ್.ಡಿ ಗಳಿಸಿದರು. ಇದು ಮುಂದೆ ಹಂಪಿ ವಿಶ್ವವಿದ್ಯಾಲಯದಿಂದ ಪ್ರಕಟಗೊಂಡಿದೆ. ಪತಿ ಡಾ. ರಘುನಾಥ್ ಕೃಷ್ಣಮಾಚಾರ್ ಅವರು ಸಾಹಿತ್ಯ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಹೆಸರಾಗಿದ್ದಾರೆ. ಈ ಸಾಹಿತ್ಯ ದಂಪತಿಗಳು ಮುಂಬೈನಲ್ಲಿ ನೆಲೆಸಿದ್ದು, ನಿರಂತರವಾಗಿ ಕನ್ನಡ ಸಾಹಿತ್ಯಲೋಕದೊಡನೆ ಅನ್ಯೋನ್ಯ ಸಂಬಂಧ ಬೆಸೆದುಕೊಂಡಿದ್ದಾರೆ.

ಗಿರಿಜಾ ಶಾಸ್ತ್ರಿಯವರ ಬರಹಗಳು ಎಲ್ಲ ಪ್ರಕಾರಗಳಲ್ಲಿ ಮೂಡಿದ್ದು ವಿಶೇಷವಾಗಿ ಕವಿತೆ, ಪ್ರಬಂಧ, ಅನುವಾದಗಳಲ್ಲಿ ವಿಶಿಷ್ಟವಾಗಿ ಕಂಗೊಳಿಸಿವೆ. ಎಲ್ಲ ಪತ್ರಿಕೆ, ನಿಯತಕಾಲಿಕಗಳಲ್ಲಿ ಇವರ ಬರಹಗಳು ಮೂಡಿಬರುತ್ತಿವೆ. ಇವರು ಕನ್ನಡ ಬಳಗದ ಸ್ಮರಣ ಸಂಚಿಕೆ 'ಮುಂಬೆಳಕು' ಸಂಪಾದಕಿಯಾಗಿದ್ದರು. ಮುಂಬೈ ಲೇಖಕಿಯರ ಸಂಘದ 'ಸುಜನ'ಗೆ ’ಕಥೆ ಹೇಳೆ' ಎಂಬ ಸಂಕಲನದ ಸಂಪಾದನೆ ಮಾಡಿದ್ದರು.  ಮುಂಬೈನ  'ನೇಸರು' ಪತ್ರಿಕೆಗೆ ಸಂಪಾದಕಿಯಾಗಿದ್ದರು. 

ಗಿರಿಜಾ ಶಾಸ್ತ್ರಿ ಅವರ ಕೃತಿಗಳಲ್ಲಿ ಹೆಣ್ಣೊಬ್ಬಳ ದನಿ, ಕಥಾಮಾನಸಿ, ಆಧುನಿಕ ಭಾರತಕ್ಕೆ ನಮ್ಮ ಪರಂಪರೆಯ ಅಗತ್ಯ, ಸಾವಿತ್ರಿ, ಪುಸ್ತಕ ಮತ್ತು ನವಿಲುಗರಿ, ಸಂಗೀತದ ಒಸಗೆ ಮುಂತಾದವು ಸೇರಿವೆ. 

ಗಿರಿಜಾ ಶಾಸ್ತ್ರಿ ಅವರಿಗೆ ಹರಿಹರಶ್ರೀ ಪ್ರಶಸ್ತಿ, ಕುವೆಂಪು ಕಾವ್ಯ ಪ್ರಶಸ್ತಿ, ಸುಶೀಲಶೆಟ್ಟಿ ಸ್ಮಾರಕ ಪ್ರಶಸ್ತಿ,  ಸಂಕ್ರಮಣ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳು ಸಂದಿವೆ.

ಗಿರಿಜಾ ಶಾಸ್ತ್ರಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.  ನಮಸ್ಕಾರ.

Happy birthday Dr. Girija Shastry 🌷🌷🌷





ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ