ಧರಣಿಗೆ ದೊರೆಯೆಂದು ನಂಬಿದೆ
ಧರಣಿಗೆ ದೊರೆಯೆಂದು ನಂಬಿದೆ ಇಂಥ
ಪರಮಲೋಭಿ ಎಂಬುದರಿಯೆ ಶ್ರೀಹರಿಯೆ (ಪ)
ಕಾಡಿ ಬೇಡುವರಿಗೆ ಕೊಡಲಾರದೆ ಅಂಜಿ
ಓಡಿ ನೀರೊಳು ಸೇರಿಕೊಂಡೆ ಬೇಗ
ಹೇಡಿಯ ತೆರದಲಿ ಮೋರೆಯ ತೋರದೆ
ಓಡಿ ಅರಣ್ಯದಿ ಮೃಗಗಳ ಸೇರ್ದೆ (ಚ-೧)
ಬಡವರ ಬಿನ್ನಹ ಲಾಲಿಸದೆ ಹಲ್ಲ
ಕಡು ಕೋಪದಲಿ ತೆರೆದಂಜಿಸಿದೆ
ತಡೆಯದೆ ಭಿಕ್ಷುಕನಾದರೆ ಬಿಡರೆಂದು
ಕೊಡಲಿಯ ಪಿಡಿದು ಕೋಡಗ ಹಿಂಡ ಕಾಯ್ದೆ (ಚ-೨)
ಉತ್ತಮನೆಂದರೆ ಮತ್ತೆ ಚೋರನಾದೆ
ಬತ್ತಲೆ ನಿಂತೆ ತೇಜಿಯನೇರಿದೆ
ಎತ್ತಹೋದರು ಬಿಡೆ ಮತ್ತೆ ನಿನ್ನನು ದೇವ
ಚಿತ್ತಜ ಜನಕ ಶ್ರೀ ಪುರಂದರವಿರಲ (ಚ-೩)
------------
ಸಾಹಿತ್ಯ: ಪುರಂದರದಾಸರು
ಭಾರತೀಯ ಸರ್ವಭಾಷಾ ಸಾಹಿತ್ಯ ಪರಂಪರೆಯಲ್ಲಿ ನಿಂದಾಸ್ತುತಿಗಳಿಗೆ ಮಹತ್ವದ ಸ್ಥಾನವಿದೆ. ಅದರಲ್ಲೊಂದು ರಚನೆಯಾದ
ಇದೂ ಸಹ ನಿಂದಾಸ್ತುತಿಯ ಪ್ರಕಾರಕ್ಕೆ ಸೇರಿದ ಒಂದು ದಾಸರ ಪದ. ಆದಿಪ್ರಾಸವಿರುವ ಈ ರಚನೆಯಲ್ಲಿ ಪುರಂದರದಾಸರು ದಶಾವತಾರಗಳನ್ನು ಸೂಕ್ಷ್ಮವಾಗಿ, ಸ್ವಾರಸ್ಯವಾಗಿ ಚಿತ್ರಿಸಿದ್ದಾರೆ. ಒಂದೇ ಸಾಲಿನಲ್ಲಿ ಎರಡು ಅವತಾರಗಳನ್ನು ಸಂಗ್ರಹಿಸಿರುವ ಜಾಣ್ಮೆಯನ್ನೂ ಗಮನಿಸಬೇಕು. "ಕೊಡಲಿಯ ಪಿಡಿದು” (ಪರಶುರಾಮ), “ಕೋಡಗ ಹಿಂಡ ಕಾಯ್ದೆ” (ರಾಮ) ; ಬತ್ತಲೆ ನಿಂತು (ಬುದ್ಧ) ತೇಜಿಯನೇರಿದೆ (ಕಲ್ಕಿ ).
ದಶಾವತಾರದ ರಚನೆಗಳು ದಾಸರ ಕಾಲದಲ್ಲಿ ಹೆಚ್ಚಾದವು. ಸಂಗೀತಶಾಸ್ತ್ರ ಗ್ರಂಥಗಳಲ್ಲಿ ದಶಾವತಾರ ಪ್ರಬಂಧಗಳ ಮೊದಲ ಉಲ್ಲೇಖವು ಪಂಡರೀಕವಿಠಲನ ನರ್ತನನಿರ್ಣಯದಲ್ಲಿ ಕಾಣುತ್ತದೆ.
ಹಿಂದಿನ ಮಟ್ಟಿನಲ್ಲಿ ಈ ಮೇಲಿನ ರಚನೆಯು
ಶಂಕರಾಭರಣ ರಾಗದಲ್ಲೂ ತ್ರಿವಿಡೆ ತಾಳದಲ್ಲೂ ರೂಢಿಯಿತ್ತೆಂದು ಪ್ರೊ. ಎಸ್. ಕೆ. ರಾಮಚಂದ್ರ ರಾಯರ ಪುಸ್ತಕದಲ್ಲಿ ದಾಖಲಾಗಿದೆ.
ಕೃಪೆ: ರೋಹಿಣಿ ಸುಬ್ಬುರತ್ನಂ Rohini Subbarathnam 🌷🙏🌷

ಕಾಮೆಂಟ್‌ಗಳು