ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಏಕೆ ಮಲಗಿಹೆ ಹರಿಯೆ


 ಏಕೆ ಮಲಗಿಹೆ ಹರಿಯೆ ಏಸು ಆಯಾಸ 
ಜೋಕೆಮಾಡುವ  ಬಿರುದು ಸಾಕಾಯಿತೇನೊ                ।।ಪ।।


ತಮನೊಡನೆ ಹೋರಾಡಿ ತಪಿಸಿ ಮೈ ಬೆವರಿತೊ 
ಅಮೃತಮಥನದಿ ಗಿರಿಯು ಅತಿಭಾರವಾಯ್ತೊ
ರಮಣಿಯನು ತರುವಾಗ ರಣರಂಗ ಬಹಳಾಯ್ತೊ 
ಅಮರರಿಪುವನು ಸೀಳೆ ಕರ ಸೋತಿತೊ                      ।।೧।।

ಆಕಾಶ ಭೇದಿಸಲು ಆ ಕಾಲು ಉಳುಕಿತೊ 
ಕಾಕುನೃಪರನು ಸೀಳಿ ಕರ ಸೋತಿತೊ 
ಭೂದೇವಿಯನರಸಿ ಬಳಲಿಕೆಯು ಬಹಳಾಯ್ತೊ 
ಲೋಕಭಾರವ ಇಳುಹಿ ಸಾಕುಸಾಕಾಯ್ತೊ                     ।।೨।।

ಚಪಲೆಯರ ಮೋಹಿಸಲು ಉಪಟಳವು ಬಹಳಾಯ್ತೊ 
ಅಪವಿತ್ರನಡಗಿಸಲು ಅಧಿಕ ಶ್ರಮವಾಯ್ತೊ 
ಕೃಪೆಮಾಡಿ ನೋಡಯ್ಯ ಕಣ್ಣು ತೆರೆದು ಎನ್ನಕಡೆ 
ಕಪಟನಾಟಕ ಶ್ರೀ ಗೋಪಾಲವಿಠಲ                             ।।೩।।

ಕೀರ್ತನಕಾರರು : ಗೋಪಾಲದಾಸರು

ಹರಿದಾಸರಲ್ಲಿ ಎರಡು ಬಗೆ. ವ್ಯಾಸಕೂಟ ಮತ್ತು ದಾಸಕೂಟ ಎಂದು. ವ್ಯಾಸಕೂಟ ಹರಿದಾಸರಲ್ಲಿ ಯತಿವರೇಣ್ಯರಿದ್ದರೆ ದಾಸಕೂಟದವರು ಅವರವರ ಗುರುಗಳಿಂದ ವಿಠಲ ಮಂತ್ರವನ್ನು ಪಡೆದು ದೀಕ್ಷಿತರಾದವರು. ಗೋಪಾಲದಾಸರು ವಿಟ್ಠಲ ದೀಕ್ಷೆಯನ್ನು ಪಡೆದ ಹರಿದಾಸರು.

ಹರಿದಾಸರುಗಳು ತಮ್ಮ ಆರಾಧ್ಯದೈವವಾದ ಹರಿಯನ್ನು ಸಖನಂತೆ, ಸಖಿಯಂತೆ, ತಾಯ್ತಂದೆಗಳಂತೆ, ಮಗುವಂತೆ ಭಾವಿಸಿ ಭಕ್ತಿಯಿಂದ ತಮ್ಮ ಕೀರ್ತನೆಗಳ ಮೂಲಕವಾಗಿ ಸ್ತುತಿಸಿದರು. ಗೋಪಾಲದಾಸರ ಈ ರಚನೆಯಲ್ಲಿ  ಮಲಗಿದ್ದ ಶ್ರೀರಂಗನಾಥನನ್ನು ನೋಡಿ ಸ್ವಾಮಿಯು ದಶಾವತಾರಗಳಲ್ಲಿ ಕೂರ್ಮ, ನರಸಿಂಹ, ತ್ರಿವಿಕ್ರಮ, ವಾಮನ, ಕೃಷ್ಣ ಮುಂತಾದ ಅವತಾರಗಳ ಸಮಯದಲ್ಲಿ  ಸಾಹಸ ಮಾಡಿ, ಬಳಲಿ ಹರಿಯು ನಿದ್ರಿಸಿದ್ದಾನೆಂಬ ಭಾವ. ಅವರಿಗೆ ಈ ದೇವದೇವನಾದ ಸಖನಾದ, ಸ್ವಾಮಿಯು ಮಲಗಿದ್ದನ್ನು ಕಂಡು ಕಾತರದಿಂದ ಭಗವಂತನಿಗೆ ಆಯಾಸವಾಯಿತೋ ಎಂದು ಕಾಳಜಿಯಿಂದ ಪ್ರಶ್ನಿಸುತ್ತಿದ್ದಾರೆ. ಜೊತೆಗೆ ತನ್ನನ್ನು ಕಾಪಾಡಲು ಹಿಂಜರಿದು ಹರಿಯು ನಿದ್ದೆಯ ಕಪಟನಾಟಕವನ್ನು  ಹೂಡಿದ್ದಾನೋ ಎಂಬ ಸಂಶಯವೂ ಕಾಡಿ, ಕಣ್ತೆರೆದು ನೋಡಿ ತನ್ನನ್ನು ರಕ್ಷಿಸಬೇಕೆಂದು ಹರಿಯನ್ನು ಪ್ರಾರ್ಥಿಸುತ್ತಿದ್ದಾರೆ.

ಕೃತಿ ಮತ್ತು ಭಾವಾರ್ಥ ಕೃಪೆ: ವಿದುಷಿ ರೋಹಿಣಿ ಸುಬ್ಬುರತ್ನಂ Rohini Kanchana Subbarathnam

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ