ಉಮಾ ರಾವ್
ಉಮಾ ರಾವ್
ಉಮಾ ರಾವ್ ಅವರು ಬಹುಮುಖಿ ಬರಹಗಾರ್ತಿಯಾಗಿ ಹೆಸರಾಗಿದ್ದಾರೆ.
ಸೆಪ್ಟೆಂಬರ್ 1 ಉಮಾ ರಾವ್ ಅವರ ಜನ್ಮದಿನ. ಅವರು ಹುಟ್ಟಿದ್ದು ಬೆಂಗಳೂರಿನಲ್ಲಿ. ತಂದೆ ಡಾ. ಸಿ.ಎನ್.ಸ್ವಾಮಿರಾವ್ ಅವರು ಮೈಸೂರು ಮೆಡಿಕಲ್ ಕಾಲೇಜ್ ನಿಂದ ಎಂ.ಬಿ,ಬಿ.ಎಸ್. ಪದವಿ ಗಳಿಸಿ, ತುಮಕೂರಿನಲ್ಲಿ ಮೆಡಿಕಲ್ ಪ್ರಾಕ್ಟೀಷನರ್ ಆಗಿ ಕೆಲಸ ಮಾಡುತ್ತಿದ್ದರು. ತಾಯಿ ರತ್ನಾ ಅವರು ಬಿ.ಎಸ್ಸಿ(ಆನರ್ಸ್, ಫಿಸಿಕ್ಸ್) ಪದವಿ ಪಡೆದಿದ್ದರಲ್ಲದೆ ಶಾಶ್ವತಿ ಟ್ರಸ್ಟಿನಿಂದ ಸಮಾಜಸೇವೆಗಾಗಿ 'ಗಾರ್ಗಿ' ಪ್ರಶಸ್ತಿ ಪಡೆದಿದ್ದರು. ಉಮಾರವರು ಬಿ.ಎಸ್ಸಿ, ಬಿ.ಎಲ್ ಪದವಿ ಪಡೆದರು. ಮನೆಯಲ್ಲಿದ್ದ ವಾತಾವರಣ ಮತ್ತು ಪ್ರೋತ್ಸಾಹದಿಂದ ಉಮಾ ಅವರು ಚಿಕ್ಕಂದಿನಿಂದ ಉತ್ತಮ ಸಾಹಿತ್ಯದ ಓದುಗರಾಗಿ ರೂಪುಗೊಂಡರು. ಶಾಲಾ ದಿನಗಳಿಂದಲೇ ನಾಟಕಗಳಲ್ಲಿ ಪಾತ್ರವಹಿಸಲು ತೊಡಗಿದರು.
ಮುಂಬೈನಲ್ಲಿ ಉಮಾ ಅವರು ಸಾಹಿತ್ಯದಲ್ಲಿ ವಿಭಿನ್ನ ಭಾಷಾ ಸಾಹಿತ್ಯಾಸಕ್ತರ ಹಾಗೂ ಮುಂಬೈನಲ್ಲಿದ್ದ ಕನ್ನಡದ ಮಹಾನ್ ಲೇಖಕರೊಂದಿಗೆ ಸಂವಹನ ಸಾಧಿಸುತ್ತಲೇ ಅಲ್ಲಿನ ವೇದಿಕೆಗಳಲ್ಲಿನ ಅನೇಕ ರಂಗಪ್ರಯೋಗಗಳಲ್ಲಿ ಪಾತ್ರವಹಿಸಿದರು.
ಉಮಾ ಅವರು ಕನ್ನಡದಲ್ಲಿ ಸಣ್ಣ ಕತೆಗಳನ್ನು ರಚಿಸಲು ಆರಂಭಿಸಿ ಪ್ರಜಾವಾಣಿ, ಸುಧಾ, ಮಯೂರ, ಉದಯವಾಣಿ, ಕನ್ನಡ ಪ್ರಭ, ಲಂಕೇಶ್ ಪ್ರತ್ರಿಕೆ, ಕಸ್ತೂರಿ, ವಿಜಯ ಕರ್ನಾಟಕ, ತರಂಗ, ಮುಂತಾದ ಪತ್ರಿಕೆಗಳಲ್ಲಿ ಪ್ರಕಟಿಸಿದರು. ಕವಿತೆ, ಪ್ರವಾಸಕಥನ, ಜೀವನಚರಿತ್ರೆ, ಅನುವಾದ, ಟೆಲಿವಿಷನ್ ಧಾರಾವಾಹಿಗಳಿಗೆ ಅಳವಡಿಸುವ ಕಥೆಗಳು, ಮೊದಲಾದುವುಗಳಲ್ಲಿಯೂ ತಮ್ಮದೇ ಆದ ಛಾಪನ್ನು ಮೂಡಿಸಿದರು. ಕೆಂಡಸಂಪಿಗೆ, ಚುಕ್ಕು-ಬುಕ್ಕು, ಅವಧಿ, ಮೊದಲಾದ ಅಂತರ್ಜಾಲ ಪತ್ರಿಕೆಗಳಲ್ಲೂ ಅವರ ಅನೇಕ ಬರಹಗಳು ಪ್ರಕಟವಾಗುತ್ತಿವೆ.
ಉಮಾ ಅವರ ಲಂಕೇಶ್ ಪತ್ರಿಕೆಯಲ್ಲಿ ಮೂಡಿಬಂದ 'ಮುಂಬಯಿ ಡೈರಿ' ಅಪಾರ ಹೆಸರು ಮಾಡಿತು. ಮುಂದೆ ಬರವಣಿಗೆ ಹಲವಾರು ದಿಕ್ಕುಗಳಲ್ಲಿ ಹರಿಯಿತು. ಅನುವಾದ, ಕವಿತೆ, ಕತೆ, ಸಂದರ್ಶನಗಳಲ್ಲದೆ, ಮೊದಲ ಕಾದಂಬರಿ ನೂರುಸ್ವರ, ಧಾರಾವಾಹಿಯಾಗಿ ಪ್ರಕಟಗೊಂಡಿತು. ಕನ್ನಡಕ್ಕೆ ಹೊಸತಾಗಿದ್ದ ಕಿರುಕತೆಗಳ ಸರಣಿಯು ಮೂಡಿಬಂತು. ಇವರ ಕತೆಗಳು ಹಿಂದಿ, ಪಂಜಾಬಿ, ತಮಿಳು, ಭಾಷೆಗಳಿಗೆ ಅನುವಾದವಾಗಿವೆ.
ಉಮಾ ಅವರು 1994ರಲ್ಲಿ ಕೆನಡಾದ ವ್ಯಾಕೂವರ್ನಿಂದ ಬ್ರಿಟಿಷ್ ಕೊಲಂಬಿಯಾ ವಿಶ್ವವಿದ್ಯಾಲಯದ 'ಕ್ರಿಯೇಟಿವ್ ರೈಟಿಂಗ್ ವಿಭಾಗ'ದವರು ನೀಡುವ 'ಪ್ರತಿಷ್ಥಿತ ಆಂಡ್ರ್ಯೂಸ್ ಫೆಲೋಶಿಪ್' ಗಳಿಸಿ ಹಲವು ಕಾಲ ಅಲ್ಲಿ ಅಧ್ಯಯನ ಮಾಡಿ ಬಂದರು. ಹೊಸ ಸಂಸ್ಕೃತಿಯ ಪರಿಚಯ, ಹಲವಾರು ಲೇಖಕರ ಜೊತೆ ಒಡನಾಟ, ಕೆನಡಾ, ಅಮೇರಿಕಾದಲ್ಲಿನ ಸುತ್ತಾಟದ ಅನುಭವ, ಅವರ ಬರವಣಿಗೆಗೆ ಹೊಸ ಆಯಾಮವನ್ನು ತಂದುಕೊಟ್ಟಿತು.
1996ರ ಡಿಸೆಂಬರಿನಲ್ಲಿ ಉಮಾರಾವ್ ಅವರು ಕುಟುಂಬದೊಂದಿಗೆ ಬೆಂಗಳೂರಿಗೆ ಬಂದು ನೆಲೆಸಿದರು. ಮೊದಲೇ ಅಡ್ವಟೈಸಿಂಗ್ ಕ್ಷೇತ್ರದಲ್ಲಿ ಡಾಕ್ಯುಮೆಂಟರಿ ಕಮರ್ಶಿಯಲ್ಸ್ ಗಳನ್ನೂ ಬರೆದು ಅಭ್ಯಾಸಹೊಂದಿದ್ದ ಉಮಾ, 'ಈ ಟಿವಿಗೆ' ಹಲವಾರು ಕಾರ್ಯಕ್ರಮಗಳನ್ನು ಬರೆದು ನಿರ್ದೇಶಿ ಕೊಟ್ಟರು. ಅವುಗಳಲ್ಲಿ ಮುಖ್ಯವಾದದ್ದು 'ಗೀತಾ ವಿಶ್ವನಾಥ್' ಜೊತೆ ಆಂಕರ್ ಮಾಡಿದ 'ಪಂಚಮಿ' 25 ಎಪಿಸೋಡ್ ಗಳ ಟಾಕ್ ಶೋ', ವಿಖ್ಯಾತ ಚಲನಚಿತ್ರ ನಿರ್ದೇಶಕ, ಪಿ.ಎಚ್ ವಿಶ್ವನಾಥರ ನಿರ್ದೇಶನದ 'ಪ್ರೇಮಕಥೆಗಳು ಸರಣಿ', ಅಂತರ ಹೊಸಹಾದಿ, ಮಿಂಚು ಟೀಮ್ ಜೊತೆ 200 ಎಪಿಸೋಡ್ಗಳ ಧಾರಾವಾಹಿಗೆ ಕತೆ ಸಂಭಾಷಣೆ ಮುಂತಾದವು ಸೇರಿವೆ.
ಉಮಾ ರಾವ್ ಅವರ ಪ್ರಕಟಿತ ಕೃತಿಗಳಲ್ಲಿ ಅಗಸ್ತ್ಯ, ಕಡಲ ಹಾದಿ, 'ಸಿಲೋನ್ ಸುಶೀಲಾ ಹಾವಾಡಿಗ, ಮೀಸೆ ಹೆಂಗಸು, ಮತ್ತು ಇತರರು', ಉಮಾ ರಾವ್ ಕತೆಗಳು ಎಂಬ ಕಥಾಸಂಕಲನಗಳು; ನೂರುಸ್ವರ, ವನಜಮ್ಮನ ಸೀಟು ಕಾದಂಬರಿಗಳು; ಅವಳ ಸೂರ್ಯ ಎಂಬ ಕೆನೆಡಿಯನ್ ಲೇಖಕಿಯರ ಕತೆಗಳ ಅನುವಾದ; ರಾಕಿ ಪರ್ವತಗಳ ನಡುವೆ ಕ್ಯಾಬರೆ ಎಂಬ ಪ್ರವಾಸ ಕಥನ; ಇನ್ನು ಎಲ್ಲಿಗೋಟ ಪ್ರವಾಸ ಟಿಪ್ಪಣಿಗಳು, ಮುಂಬಯಿಡೈರಿ ಅಂಕಣಗಳ ಸಂಗ್ರಹ; ಬಿಸಿಲು ಕೋಲು ಖ್ಯಾತ ಸಿನಿಮಾ ಛಾಯಾಗ್ರಾಹಕ ವಿ. ಕೆ ಮೂರ್ತಿ ಯವರ ಜೀವನ ಚರಿತ್ರೆ; 'ದಲೈಲಾಮಾ'-ಸಂಕ್ಷಿಪ್ತ ಜೀವನ ಚರಿತ್ರೆ, ಮುಂತಾದವು ಸೇರಿವೆ.
ಉಮಾ ರಾವ್ ಅವರ ಬಿಸಿಲು ಕೋಲು ಕೃತಿಗೆ 2006ರ ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಮಲ್ಲಿಕಾ ಪ್ರಶಸ್ತಿ, ಸಿಲೋನ್ ಸುಶೀಲಾ ಕಥಾ ಸಂಕಲನಕ್ಕೆ 2010ರ ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ ಹಾಗೂ ಎಚ್.ವಿ.ಸಾವಿತ್ರಮ್ಮ ಜನ್ಮ ಶತಾಬ್ಧಿ ಪ್ರಶಸ್ತಿ; ಅಗಸ್ತ್ಯ, ಮುಂಬೈ ಡೈರಿ, ನೂರುಸ್ವರ ಕೃತಿಗಳಿಗೆ ಕನ್ನಡ ಸಾಹಿತ್ಯ ಪರಿಷತ್ ದತ್ತಿನಿಧಿ ಬಹುಮಾನಗಳು, ನೂರುಸ್ವರಕ್ಕೆ ಗೊರೂರು ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳು ಸಂದಿವೆ.
On the birthday of our popular writer Uma Rao
ಕಾಮೆಂಟ್‌ಗಳು