ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಮೇಗರವಳ್ಳಿ ಸುಬ್ರಹ್ಮಣ್ಯ


 ಮೇಗರವಳ್ಳಿ ಸುಬ್ರಹ್ಮಣ್ಯ 


ಮೇಗರವಳ್ಳಿ ಸುಬ್ರಹ್ಮಣ್ಯ ನಾಡಿನ ಹೆಸರಾಂತ ವ್ಯಂಗ್ಯಚಿತ್ರಕಾರರಲ್ಲಿ ಒಬ್ಬರು.

ಮೇಗರವಳ್ಳಿಯವರಾದ ಸುಬ್ರಹ್ಮಣ್ಯ ಅವರ  ಪ್ರಸಕ್ತ ನೆಲೆ ಶಿವಮೊಗ್ಗ. ಸೆಪ್ಟೆಂಬರ್ 1, ಇವರ ಜನ್ಮದಿನ.  ಇವರು ಕಲಾ ಕುಟುಂಬದಿಂದ ಬಂದವರಲ್ಲ.  ಆದಾಗ್ಯೂ,  ವ್ಯಂಗ್ಯಚಿತ್ರಕಾರರಿಗೆ ಇರಬೇಕಾದ ಶ್ರದ್ಧೆ, ಜಗತ್ತನ್ನು ಸೂಕ್ಷ್ಮವಾಗಿ ಅವಲೋಕಿಸುವ, ಒಳಗಣ್ಣು, ಹಾಸ್ಯಪ್ರಜ್ಞೆ, ಕಲಾತ್ಮಕತೆ ಮುಂತಾದ  ಸಕಲವನ್ನೂ ರೂಢಿಸಿಕೊಂಡಿರುವ ಸುಬ್ರಹ್ಮಣ್ಯ ಅವರು ಸಣ್ಣ ವಯಸ್ಸಿನಿಂದಲೇ ವ್ಯಂಗ್ಯಚಿತ್ರ ರಚನೆಯತ್ತ ಆಕರ್ಷಿತರಾದರು.  

ಖ್ಯಾತ ವ್ಯಂಗ್ಯಚಿತ್ರಕಾರ ಎಸ್‌.ಕೆ. ನಾಡಿಗ್‌ ಅವರ ಕೃತಿಗಳಿಂದ ಪ್ರೇರೇಪಿತರಾದ ಸುಬ್ರಹ್ಮಣ್ಯ ಅವರು, ಆಚಾರ್ಯ ಚಿತ್ರಕಲಾ ಭವನದಲ್ಲಿ ಚಿತ್ರಕಲೆಯನ್ನು ಅಭ್ಯಸಿಸಿದರು. 

ಸಮಕಾಲೀನ ಸಮಾಜದತ್ತ  ವ್ಯಂಗ್ಯದ ನೋಟ ಬೀರುವ ಮೇಗರವಳ್ಳಿಯವರ ರೇಖೆಗಳು ನಾಡಿನ ಎಲ್ಲ ಪ್ರಸಿದ್ಧ ನಿಯತಕಾಲಿಕಗಳಲ್ಲಿ ನಲಿಯುತ್ತ ಬಂದಿವೆ.  ಇವರು ರಚಿಸಿದ ಪಕ್ಷಿ ತಜ್ಞ ಸಲೀಂ ಅಲಿ   ರೇಖಾಚಿತ್ರಕ್ಕೆ ರಾಷ್ಟ್ರ ಮಟ್ಟದ ಪ್ರಶಸ್ತಿಯೂ ಸೇರಿದಂತೆ, ಇವರಿಗೆ ಅನೇಕ ಪ್ರಶಸ್ತಿ ಗೌರವಗಳು ಸಂದಿವೆ.

ಸುಬ್ರಹ್ಮಣ್ಯ ಅವರು ಜಿಲ್ಲಾ ಆರೋಗ್ಯ ಕೇಂದ್ರದಲ್ಲಿ ಉದ್ಯೋಗ ನಿರ್ವಹಿಸಿ ನಿವೃತ್ತರಾಗಿದ್ದು, ನಿವೃತ್ತಿಯ ನಂತರದಲ್ಲಿ ಹೆಚ್ಚಿನ ಸಮಯವನ್ನು ತಮ್ಮ ಕಲೆಗೆ ನೀಡುತ್ತಿದ್ದಾರೆ. ಭಾರತೀಯ ವ್ಯಂಗ್ಯಚಿತ್ರಕಾರರ ಸಂಸ್ಥೆಯ ವತಿಯಿಂದ ನಡೆದ ಇವರ ವ್ಯಂಗ್ಯಚಿತ್ರೋತ್ಸವವೂ ಸೇರಿದಂತೆ, ಅನೇಕ ಪ್ರದರ್ಶನಗಳಲ್ಲಿ ಇವರ ಕಲಾಕೃತಿಗಳು ಲೋಕಮೆಚ್ಚುಗೆ ಗಳಿಸಿವೆ.

ಮೇಗರವಳ್ಳಿ ಸುಬ್ರಹ್ಮಣ್ಯ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.  ನಮಸ್ಕಾರ.

Happy birthday Megaravalli Subramanya 🌷🌷🌷



ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ