ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ದಾಸರೆಂದರೆ



*ಶ್ರೀ ಪುರಂದರ ದಾಸರ ಸ್ತುತಿ*

ದಾಸರೆಂದರೆ ಪುರಂದರದಾಸರಯ್ಯ ||ಪ||

ವಾಸುದೇವ ಕೃಷ್ಣನ್ನ ಸೂಸಿ ಪೂಜಿಸುವ||ಅ.ಪ||

ಗ್ರಾಸಕಿಲ್ಲದೆ ಪೋಗಿ ಪರರ ಮನೆಗಳ ಪೊಕ್ಕು 
ದಾಸನೆಂದು ತುಲಸಿ ಮಾಲೆ ಧರಿಸಿ
ಬೇಸರಿಲ್ಲದೆ ಅವರ ಕಾಡಿ ಬೇಡಿ ಬಳಲಿಸುತ ಕಾಸುಗಳಿಸುವ ಪುರುಷನವ ದಾಸನೇ ||1||

ಡಂಭಕದಿ ಹರಿಸ್ಮರಣೆಮಾಡಿ ಜನರಾ ಮುಂದೆ
ಸಂಭ್ರಮದಿ ತಾನುಂಬ ಊಟ ಬಯಸಿ
ಅಂಬುಜೋದ್ಭವ ಪಿತನ ಆಗಮಗಳರಿಯದಲೆ
ತಂಬೂರಿ ಮೀಟಲವ ಹರಿದಾಸನೇ ||2||

ಯಾಯವಾರವ ಮಾಡಿ ವಿಪ್ರರಿಗೆ ಮೃಷ್ಟಾನ್ನ ಪ್ರೀಯದಲಿ ತಾನೊಂದು ಕೊಡದ ಲೋಭಿ
ಮಾಯ ಸಂಸಾರದಲಿ ಮಮತೆ ಹೆಚ್ಚಾಗಿಟ್ಟು ಗಾಯನವ ಮಾಡಲವ ದಾಸನೇನೈಯ್ಯಾ ||3||

ಪಾಠಕನ ತೆರದಲ್ಲಿ ಪದಗಳನೆ ತಾ ಬೊಗಳಿ 
ಕೂಟ ಜನರ ಮನವ ಸಂತೋಷಪಡಿಸಿ
ಗೂಟ ನಾಮಗಳಿಟ್ಟುಕೊಂಡ್ಹಿರಿಯ ತಾನೆನುತ,
ತೂಟಕವ ಮಾಡಲವ ದಾಸನೇನೈಯ್ಯಾ ||4||

ನೀತಿಯೆಲ್ಲವನರಿತು ನಿಗಮವೇದ್ಯನ  
ನಿತ್ಯ ವಾತ ಸುತನಲ್ಲಿಹನ ವರ್ಣಿಸುತ್ತಾ
ಗೀತ ನರ್ತನದಿಂದ ಕೃಷ್ಣನ್ನ ಪೂಜಿಸುವ 
ಪೂತಾತ್ಮ ಪುರಂದರ ದಾಸರಿವರೈಯ್ಯಾ ||5||
_______________

ಪರಿಶುದ್ಧವಾದ ಭಕ್ತಿಯೇ ಕನ್ನಡದ ಹರಿದಾಸ ಸಾಹಿತ್ಯ ರಚನೆಗೆ ನಾಂದಿಯಾಯಿತು. ಈ ಕೀರ್ತನ ಕೈಂಕರ್ಯದ ಕ್ಷೇತ್ರವು ಕ್ರಮವಾಗಿ ವಿಸ್ತರಿಸಿ, ಅವರ ರಚನೆಗಳು ಮಧ್ವಸಿದ್ದಾಂತದ  ಮತ್ತು ಶ್ರೀಮದ್ಭಾಗವತದ ಸಾರವನ್ನು ಗ್ರಹಿಸಿ ಹೇಳಲುಪಕ್ರಮಿಸಿದವು. ಆದರೆ ತಾಳ-ತಂಬೂರಿಗಳನ್ನು ಹಿಡಿದುಕೊಂಡು ಗೆಜ್ಜೆ ಕಟ್ಟಿಕೊಂಡು ಕುಣಿಯುತ್ತ ಹಾಡುತ್ತಿದ್ದ ಹರಿದಾಸರ ಪರಂಪರೆ ಸಾಕಷ್ಟು ಹಿಂದಿನಿಂದಲೇ ಇತ್ತೆಂದು ಕಾಣುತ್ತದೆ. ತಂಬೂರಿಯೆಂದರೆ ಈಗಿನಂತಿನ ತಂಬೂರಿಯಲ್ಲ. ಅದು, ವಿಜಯನಗರದ ಕಾಲದಲ್ಲಾಗಲೇ ಕರ್ನಾಟಕದಲ್ಲಿ ನೀಲಗಾರರೆಂದೂ ತಂಬೂರಿಯವರೆಂದೂ, ತೆಲಂಗಾಣಾಂಧ್ರದಲ್ಲಿ ಬುರ್ರಕಥಾದವರೆಂದು ಹೆಸರುವಾಸಿಯಾಗಿದ್ದ ಈ ಜನರು ಕಥಾಕಾರರಾಗಿದ್ದು ಮಟ್ಟುಗಳಲ್ಲಿ ಹಾಡಿಕೊಂಡು ಚಾರಣರಾಗಿಯೇ ಇದ್ದು, ಕಥಾನಕಗಳನ್ನು ಸೃಜಿಸಿ ಹಾಡುತ್ತಿದ್ದರು. ಈ ಕಾಲದಲ್ಲಿ ಒಂದು ಅಥವಾ ಎರಡು ತಂತಿಗಳಿದ್ದ ಈ ತಂಬೂರಿಯು ಜನಪದ ವಾದ್ಯವಾಗಿದ್ದು, ಆನಂತರದ ಅನತಿಕಾಲದಲ್ಲಿಯೇ ಬದಲಾಗುತ್ತಿದ್ದ, ಇಂದಿನ ನೆಲೆಯನ್ನು ಕಂಡ ಭಾರತೀಯ ಸಂಗೀತದ ಅನುಕೂಲಕ್ಕೆ ತಕ್ಕಂತೆ ಇಂದಿನ ಶ್ರುತಿವಾದ್ಯವಾಗಿ ತಂಬೂರಿಯು ರೂಪುಗೊಂಡಿತು.

ಈ ಕಾಲಕ್ಕಾಗಲೇ ಬಹಳವಾದ ರೂಢಿಯಲ್ಲಿ ಭಜನೆ ಸಂಪ್ರದಾಯವಿದ್ದುದರಿಂದ ಲಯಬದ್ಧವಾದ ರಚನೆಗಳನ್ನೂ, ಸುಲಭವಾದ ಭಾಷೆಯ ಕನ್ನಡ ರಚನೆಗಳೂ ರಚಿತವಾಗಿದ್ದು, ಕಥಾನಕಗಳನ್ನೂ ಲಯಬದ್ಧವಾಗಿ ಶ್ರುತಿಬದ್ಧವಾಗಿ ಜಾನಪದೀಯವಾಗಿ ಹಾಡುತ್ತಿದ್ದರು. 

ಇದನ್ನು ಗಮನಿಸಿದಾಗ ಈ ನೃತ್ಯಗಾಯನ ಸಹಿತವಾದ ಕೀರ್ತನ ಪರಂಪರೆಯ ಸಂಗೀತದ ಪ್ರಪಿತಾಮಹರೆಂದು ಖ್ಯಾತಿವೆತ್ತ ಶ್ರೀಪಾದರಾಜರಿಗಿಂತ ಮೊದಲೇ ಎಂದರೆ ೧೪ನೆಯ ಶತಮಾನದಿಂದ ಮೊದಲೇ ಈ ಹರಿದಾಸ ಸಾಹಿತ್ಯದ ಆರಂಭವಾಗಿದ್ದಿರಬೇಕು. 

ವ್ಯಾಸರಾಯರು ಪುರಂದರದಾಸರನ್ನು ಹೊಗಳಿದ ಸುಪ್ರಸಿದ್ಧವಾದ ಈ ''ದಾಸರೆಂದರೆ ಪುರಂದರದಾಸರಯ್ಯ'' ಎಂಬ  ರಚನೆಯ ಇಂಗಿತವು ಗಮನಿಸುವಂತಿದೆ. ಏಕೆಂದರೆ ಪುರಂದರದಾಸರನ್ನು ಸ್ತುತಿಸುವ ನೆಪದಲ್ಲಿ ಶ್ರೀ ವ್ಯಾಸರಾಯರು ನಿಜವಾದ ಆರ್ಥದಲ್ಲಿ ದಾಸರು ಹೇಗಿರಬೇಕು ಎಂದು ಇದರಲ್ಲಿ ಹೇಳಿದ್ದಾರೆ. ಜೊತೆಗೆ ಕೃತಕರಾದ, ಬೂಟಾಟಿಕೆಯ ಹರಿದಾಸರು ಯಾರು ಎಂಬ ವಿವರಣೆಯೂ ಈ ಹಾಡಿನಲ್ಲಿದೆ.

ಕೃಪೆ: ರೋಹಿಣಿ ಸುಬ್ಬುರತ್ನಂ Rohini Subbarathnam 🌷🙏🌷

 




 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ