ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಕೆ. ರಾಜಕುಮಾರ್


 ಕೆ. ರಾಜಕುಮಾರ್


ಕೆ. ರಾಜಕುಮಾರ್ ಅವರು ಕನ್ನಡಪರ ಹೋರಾಟಗಳಲ್ಲಿ ಕಳೆದ 45 ವರ್ಷಗಳಿಂದ ಸಕ್ರಿಯವಾಗಿ ಭಾಗಿಯಾಗುತ್ತ ಬಂದಿರುವ ಹಿರಿಯ ಕನ್ನಡ ಕಾರ್ಯಕರ್ತರು. ಕನ್ನಡದ ಪರಿಚಾರಕರು. ಉತ್ತಮ ವಾಗ್ಮಿ ಮತ್ತು ಬರಹಗಾರರು. 

ಮೂಲತಃ ಕೋಲಾರದವರಾದ ರಾಜಕುಮಾರ್ 1958ರ ಅಕ್ಟೋಬರ್ 16ರಂದು ಜನಿಸಿದರು.  ತಂದೆ ಆರ್. ಕೃಷ್ಣಮೂರ್ತಿ. ತಾಯಿ ಕೆ. ಪ್ರಮೀಳಮ್ಮ. ಕೋಲಾರದಲ್ಲಿ ಪ್ರಾಥಮಿಕ ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲಿ ಪಡೆದ ಕೆ. ರಾಜಕುಮಾರ್‌ ಉನ್ನತ ಶಿಕ್ಷಣವನ್ನು ಬೆಂಗಳೂರಿನಲ್ಲಿ ಪಡೆದರು.

ಕೆ.‍ ರಾಜಕುಮಾರ್ ಕನ್ನಡ ಪುಸ್ತಕಗಳನ್ನು ಹೊತ್ತು, ಊರೂರು ಅಲೆದು, ಮಾರಿ, ಕನ್ನಡ ಚಟುವಟಿಕೆಗಳಿಗೆ ಇಂಬುಕೊಟ್ಟು ತಮಗಿರುವ ಕನ್ನಡಾಭಿಮಾನವನ್ನೇ ಬದುಕಾಗಿಸಿಕೊಂಡು, ತಮ್ಮಲ್ಲಿನ ಈ ಪ್ರೀತಿ ಒಂದಿನಿತೂ ಕುಂದದ ಹಾಗೆ ನಿರಂತರ ಕನ್ನಡದಲ್ಲೇ ಕ್ರಿಯಾಶೀಲರಾಗಿರುವವರು.

ಕೆ. ರಾಜಕುಮಾರ್ ಎಂಬತ್ತರ ದಶಕದಲ್ಲಿ ಬೆಂಗಳೂರಿನ ಸಾಹಿತಿಗಳ ಕಲಾವಿದರ ಬಳಗದ ಸಂಚಾಲಕರಾಗಿದ್ದರು. ಇವರು ಕಳೆದ 45 ವರ್ಷಗಳಿಂದ ಈ ನಾಡಿನಲ್ಲಿ ನಡೆದ ಎಲ್ಲ ಕನ್ನಡಪರ ಹೋರಾಟಗಳ ಮುಂಚೂಣಿಯಲ್ಲಿ ನಿಂತು ಭಾಗಿಯಾದವರು. ಕನ್ನಡದ ಸಾಧನೆ ಮತ್ತು ಸಮಸ್ಯೆಗಳನ್ನು ಅಂಕಿ, ಅಂಶಗಳ ಸಮೇತ ಮಂಡಿಸುವಲ್ಲಿ ನಿಷ್ಣಾತರಾದ ರಾಜಕುಮಾರ್, ಅವಕ್ಕೆ ಕಾರ್ಯಸಾಧುವಾದ ಪರಿಹಾರದ ಮಾರ್ಗಗಳನ್ನೂ ಸೂಚಿಸಿದ್ದಾರೆ. ಈ ಕಾರಣಕ್ಕಾಗಿ ವಿದ್ವಜ್ಜನರು ಇವರನ್ನು ಕನ್ನಡ ಅಂಕಿ ಅಂಶಗಳ ಅಭಿಜ್ಞ ಎಂದು ಕರೆಯುತ್ತಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ತರಬೇತಿ ವಿಭಾಗದ ರಾಜ್ಯ ಸಂಚಾಲಕರಾಗಿ ನಾಡಿನ ಹಲವೆಡೆ ನಾಡು-ನುಡಿಗೆ ಸಂಬಂಧಿಸಿದ ಕಾರ್ಯಾಗಾರಗಳನ್ನು ನಡೆಸುತ್ತ ಬಂದ ಶ್ರೇಯ ಇವರದು.

ಕೆ. ರಾಜಕುಮಾರ್ 2004-2008 ಅವಧಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡನುಡಿ ಪತ್ರಿಕೆಯ ಸಂಪಾದಕರಾಗಿದ್ದರು. ಅನಂತರ ಇಬ್ಬರು ಆಡಳಿತಾಧಿಕಾರಿಗಳ ಅವಧಿಯಲ್ಲಿ (2008) ಗೌರವ ಸಲಹೆಗಾರರಾಗಿ ಕಾರ್ಯನಿರ್ವಹಿಸಿದ್ದರು. ಪರಿಷತ್ತಿನೊಂದಿಗೆ 40 ವರ್ಷಗಳಿಗೂ ಮೀರಿದ ನಿಕಟ ನಂಟು ಇವರದು. ಇವರ ಕನ್ನಡ ಪರಿಚಾರಿಕೆ ಹಾಗೂ ಸಾಹಿತ್ಯ ಸೇವೆಯನ್ನು ಪರಿಗಣಿಸಿ ಕನ್ನಡ ಸಾಹಿತ್ಯ ಪರಿಷತ್ತು  ಇವರನ್ನು 2020ರ ವರ್ಷದಿಂದ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿದೆ.

ಕೆ. ರಾಜಕುಮಾರ್ ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕನ್ನಡ ಬಲ್ಲ ಅಧಿಕಾರಿಗಳಿಗಾಗಿ ಏರ್ಪಡಿಸುವ ಆಡಳಿತ ಕನ್ನಡ ಕಾರ್ಯಶಿಬಿರಗಳ ನಿರ್ದೇಶಕರಾಗಿ 1991ರಿಂದ ಇದುವರೆಗೆ ಒಟ್ಟು 120 ಶಿಬಿರಗಳನ್ನು ನಡೆಸಿ ದಾಖಲೆ ಸ್ಥಾಪಿಸಿದ್ದಾರೆ.  ಕನ್ನಡ ಲೇಖಕಿಯರಿಗಾಗಿ '10 ದಿನಗಳ ಅವಧಿಯ ಭಾಷಣ ಕಲೆ' ಕಮ್ಮಟವನ್ನು ನಡೆಸಿದ್ದರು. ಕರ್ನಾಟಕ ಸರ್ಕಾರದ ವತಿಯಿಂದ 30 ವರ್ಷಗಳ ಕಾಲ ಕನ್ನಡ ಬಾರದವರಿಗೆ ಕನ್ನಡ ಬೋಧನೆ ತರಗತಿಗಳನ್ನು ನಡೆಸಿದ್ದಾರೆ. ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಮತ್ತು ಭಾರತೀಯ ಸ್ಟೇಟ್ ಬ್ಯಾಂಕಿನ ಸಿಬ್ಬಂದಿ ಮತ್ತು ಅಧಿಕಾರಿ ವರ್ಗ ಹಲವು ತಂಡಗಳಲ್ಲಿ ಇದರ ಪ್ರಯೋಜನ ಪಡೆದಿವೆ. ಕನ್ನಡ ಕಾರ್ಯಕರ್ತರಲ್ಲಿ ಅರಿವು ಮತ್ತು ಜಾಗೃತಿ ಮೂಡಿಸಲು, ಕನ್ನಡದ ಕೆಲಸಕ್ಕೆ ಅವರನ್ನು ಅಣಿಗೊಳಿಸಲು ಕನ್ನಡ ಸಾಹಿತ್ಯ ಪರಿಷತ್ತಿಗಾಗಿ ಕನ್ನಡ ಕಾರ್ಯಕರ್ತರ ಕಮ್ಮಟವನ್ನು ರೂಪಿಸಿ ರಾಜ್ಯದ ಎಲ್ಲಾ ಕೇಂದ್ರಗಳಲ್ಲಿ 1992ರಿಂದ ಮೊದಲುಗೊಂಡಂತೆ ಅನುಷ್ಠಾನಗೊಳಿಸಿದ್ದಾರೆ. ಇವರು ನಡೆಸುವ ಕ್ವಿಜ್ ಕರ್ನಾಟಕ,  ಕ್ವಿಜ್ ಇಂಡಿಯ ರಸಪ್ರಶ್ನೆ ಕಾರ್ಯಕ್ರಮ, ಷೇರು ಮಾಹಿತಿ ಕಮ್ಮಟ, ಪುಸ್ತಕ ಪ್ರಕಾಶನ ಕಮ್ಮಟ, ಲೇಖನ ಕಮ್ಮಟ ಹಾಗೂ ಕನ್ನಡ ಕಾರ್ಯಕರ್ತರ ಕಮ್ಮಟಗಳು ಅತ್ಯಂತ ವಿಶಿಷ್ಟವೂ, ಉಪಯುಕ್ತವೂ, ಬೋಧಪ್ರದವೂ ಆಗಿವೆ ಎಂಬ ಹೆಗ್ಗಳಿಕೆ ಪಡೆದಿವೆ. 

ಬೆಂಗಳೂರಿನ ಸವಿಗನ್ನಡ ಬಳಗದ ಅಧ್ಯಕ್ಷರೂ ಆಗಿರುವ ರಾಜಕುಮಾರ್ 'ಜನರಲ್ ನಾಲೆಜ್ ಕರ್ನಾಟಕ', 'ನಮ್ಮ ಕನ್ನಡನಾಡು' ಹಾಗೂ 'ಕನ್ನಡದ ಜ್ಞಾನಪೀಠ ಪ್ರಶಸ್ತಿ ವಿಜೇತರು' ಕೃತಿಗಳನ್ನು ಪ್ರಕಟಿಸಿದ್ದಾರೆ. ಈ ಮೂರೂ ಕೃತಿಗಳು ಒಟ್ಟು ಸುಮಾರು ಒಂದೂವರೆ ಲಕ್ಷದ ಪ್ರತಿಗಳು ಮಾರಾಟಗೊಂಡು ದಾಖಲೆ ಸ್ಥಾಪಿಸಿವೆ. ಇವರೇ ಪರಿಕಲ್ಪಿಸಿ ನಿರ್ಮಿಸಿರುವ 'ಸಿರಿಗನ್ನಡಂ ಗೆಲ್ಗೆ, ಭರತಭೂಮಿ ನನ್ನ ತಾಯಿ 'ಮತ್ತು 'ಬೊಂಬಾಟ್ ಹಾಸ್ಯ ಅಡಕ' ಮುದ್ರಿಕೆಗಳು ಸಾಂಸ್ಕೃತಿಕವಾಗಿ ವಿಶಿಷ್ಟವಾದವು ಎಂಬ ಮನ್ನಣೆಗೆ ಪಾತ್ರವಾಗಿವೆ. 

ಕೆ. ರಾಜಕುಮಾರ್ ತಾವು ಹೋದ ಕಡೆಯಲ್ಲೆಲ್ಲ ಕನ್ನಡ ಪುಸ್ತಕ, ಧ್ವನಿಸುರುಳಿ ಹಾಗೂ ಗಣ್ಯರ ಭಾವಚಿತ್ರಗಳನ್ನು ಹೊತ್ತು ಮಾರುವ ಮೂಲಕ ಕನ್ನಡ ಪರಿಚಾರಿಕೆಯನ್ನು ನಡೆಸಿದ್ದಾರೆ. ಇವರು ರಚಿಸಿರುವ ಕ್ವಿಜ್ ಕರ್ನಾಟಕ, ಜನರಲ್ ನಾಲೆಜ್ಕ ರ್ನಾಟಕ, ಕನ್ನಡಿಗರಿಗೆ ಉದ್ಯೋಗ, ನಮ್ಮ ಕನ್ನಡನಾಡು ಕೃತಿಗಳು ಕನ್ನಡಾಭಿಮಾನವನ್ನು ಜನಮನದಲ್ಲಿ ಜಾಗೃತಗೊಳಿಸಲು ಪೋಷಕವಾಗಿವೆ.

ಕೆ. ರಾಜಕುಮಾರ್ 2005 ರಿಂದ ಕನ್ನಡದ ಅರಿವು ಮತ್ತು ಅಭಿಮಾನ' ಎಂಬ ವಿಷಯ ಕುರಿತು ನಾಡಿನಾದ್ಯಂತ ನೂರಾರು ಉಪನ್ಯಾಸಗಳನ್ನು ನೀಡುತ್ತ ಬಂದಿದ್ದಾರೆ. ಕನ್ನಡದ ಸಾಧ್ಯತೆ-ಸಾಧನೆ ವೈಶಿಷ್ಟ್ಯಗಳನ್ನು ಸಕಾರಾತ್ಮಕವಾಗಿ ಪರಿಚಯಿಸಿ ಜನತೆಯಲ್ಲಿ ಕನ್ನಡದ ಬಗೆಗೆ ಆತ್ಮವಿಶ್ವಾಸ ಮೂಡಿಸುವಂತಹ, ಕೀಳರಿಮೆ ತೊಡೆಯುವಂತಹ ಉಪನ್ಯಾಸ ಕಾರ್ಯಕ್ರಮವಿದು. ಕರ್ನಾಟಕದ ವೈಭವ, ಸಂಸ್ಕೃತಿ-ಪರಂಪರೆಗಳನ್ನು ಪರಿಚಯಿಸುವ ಕಾರ್ಯಕ್ರಮವಿದು.

ಕೆ. ರಾಜಕುಮಾರ್ ಅವರು ದೆಹಲಿ, ತಮಿಳುನಾಡು, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಅಲ್ಲಿನ ಅಧಿಕೃತ ಭಾಷೆಗಳು ಆಡಳಿತ ಶಿಕ್ಷಣ ಹಾಗೂ ಸಮೂಹ ಮಾಧ್ಯಮಗಳಲ್ಲಿ ಹೇಗೆ ಬಳಕೆಯಾಗುತ್ತಿವೆ ಎಂಬ ಬಗೆಗೆ ವ್ಯಾಪಕವಾದ ಕ್ಷೇತ್ರಕಾರ್ಯವನ್ನು ಸ್ವಂತ ಆಸಕ್ತಿಯ ಮೇರೆಗೆ ನಡೆಸಿದ್ದಾರೆ.

ಚಾಮರಾಜಪೇಟೆ-125ನೆಯ ವರ್ಷಾಚರಣೆ ಕಾರ್ಯಕ್ರಮವನ್ನು ಪರಿಕಲ್ಪಿಸಿ, ಸಂಬಂಧಿಸಿದ ಸಮಿತಿಯ ಅಧ್ಯಕ್ಷರಾಗಿ ಎರಡು ದಿನಗಳ ಉತ್ಸವವನ್ನು ಅಭೂತಪೂರ್ವವಾಗಿ ಆಯೋಜಿಸಿ, ಮೈಸೂರು ರಾಜಪರಿವಾರದ ಡಾ. ಪ್ರಮೋದಾದೇವಿ, ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮತ್ತು ಅವರ ಮಡದಿ ತ್ರಿಷಿಕಾಕುಮಾರಿ ಒಡೆಯರ್ ಅವರನ್ನೂ ಈ ಕಾರ್ಯಕ್ರಮದಲ್ಲಿ ಒಟ್ಟಾಗಿ ಭಾಗವಹಿಸುವಂತೆ ಮಾಡಿದ ಕೀರ್ತಿ ರಾಜಕುಮಾರ್ ಅವರದು. 

ಕರ್ನಾಟಕ ಸರ್ಕಾರದ ಕನ್ನಡ ಪುಸ್ತಕ ಪ್ರಾಧಿಕಾರವು ಕೆ. ರಾಜಕುಮಾರ್ ಅವರಿಗೆ 2019ರ ಡಾ|| ಜಿ.ಪಿ. ರಾಜರತ್ನಂ ಸಾಹಿತ್ಯ ಪರಿಚಾರಕ ಪ್ರಶಸ್ತಿ ನೀಡಿ ಗೌರವಿಸಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ 2018ರಲ್ಲಿ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ನೀಡಿ ಗೌರವಿಸಿದೆ. ಕೋಲಾರ ಜಿಲ್ಲಾಡಳಿತದಿಂದ 2018ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ಸಂದಿದೆ. ಕೋಲಾರ ಜಿಲ್ಲಾಡಳಿತ 2018ರಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವ ಸಮಾರಂಭಕ್ಕೆ ವರ್ಷದ ಭಾಷಣಕಾರರನ್ನಾಗಿ ಆಹ್ವಾನಿಸಿ ಇವರನ್ನು ಗೌರವಿಸಿತು.  ಬೆಂಗಳೂರಿನ ಭಾಷಾ ಅಲ್ಪಸಂಖ್ಯಾತರ ಕನ್ನಡ ಸಂಘದಿಂದ 2004ರಲ್ಲಿ `ಕನ್ನಡ ಸನ್ಮಿತ್ರ' ಎಂಬ ಬಿರುದಿಗೆ ಪಾತ್ರರಾಗಿದ್ದಾರೆ. ಕನ್ನಡ ಸಂಘರ್ಷ ಸಮಿತಿಯು `ಕನ್ನಡ ಕಟ್ಟಾಳು ಪ್ರಶಸ್ತಿಯನ್ನು 2006ರಲ್ಲಿ ಇವರಿಗೆ ನೀಡಿ ಗೌರವಿಸಿದೆ. ಯಲಹಂಕ ವಿಧಾನಸಭಾ ಕ್ಷೇತ್ರದ ಕನ್ನಡ ಸಾಹಿತ್ಯ ಪರಿಷತ್ತು 2007ರಲ್ಲಿ 'ಕನ್ನಡ ಸಿರಿ' ಪ್ರಶಸ್ತಿಯನ್ನು ನೀಡಿ ಸನ್ಮಾನಿಸಿದೆ. ಇವರು ಕನ್ನಡ ವೈಜಯಂತಿ ಮತ್ತು ಜ್ಞಾನಸಂಪದ ಪುರಸ್ಕಾರಗಳಿಗೂ ಪಾತ್ರರಾಗಿದ್ದಾರೆ. 2016ರಲ್ಲಿ ಬೆಂಗಳೂರಿನ ಉದಯಭಾನು ಕಲಾಸಂಘವು ಉದಯಭಾನು ಸುವರ್ಣ ಸಾಹಿತ್ಯ ಪರಿಚಾರಕ ಪುರಸ್ಕಾರ ನೀಡಿ ಗೌರವಿಸಿದೆ.  2015ರಲ್ಲಿ ಶ್ರವಣಬೆಳಗೊಳದಲ್ಲಿ ನಡೆದ 81ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಇವರನ್ನು ಸನ್ಮಾನಿಸಲಾಗಿದೆ. ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು 2011ರಲ್ಲಿ ಹಾಗೂ ಕೋಲಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು 2018ರಲ್ಲಿ ಇವರನ್ನು ಸನ್ಮಾನಿಸಿವೆ. 2015ರಲ್ಲಿ ನಡೆದ ಕೋಲಾರ ತಾಲ್ಲೂಕು ಮೂರನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಇವರನ್ನು ಆಯ್ಕೆಮಾಡಿ ಗೌರವಿಸಲಾಯಿತು. 2016ರಲ್ಲಿ ಆಂಧ್ರಪ್ರದೇಶದ ಕುಪ್ಪಂನಲ್ಲಿರುವ ದ್ರಾವಿಡ ವಿಶ್ವವಿದ್ಯಾಲಯ ಇವರ ಎರಡು ವಿಶೇಷ ಉಪನ್ಯಾಸಗಳನ್ನು ಏರ್ಪಡಿಸಿತ್ತು.

ಪ್ರಜಾವಾಣಿ ಪತ್ರಿಕೆ (1996ರಲ್ಲಿ) ಕೆ. ರಾಜಕುಮಾರ್ ಅವರನ್ನು 'ಪ್ರಕಾಶನ ಮಾರ್ಗದರ್ಶಿ' ಎಂದು ಪ್ರಶಂಸಿಸಿದೆ. ಇವರ ಕನ್ನಡದ ವಿದ್ವತ್ತನ್ನು ಮೆಚ್ಚಿ ಉಷಾಕಿರಣ ಪತ್ರಿಕೆ (2005ರಲ್ಲಿ) 'ಕನ್ನಡತಜ್ಞ' ಎಂದು ಕರೆದಿದೆ. ವಿಜಯ ಕರ್ನಾಟಕ ಪತ್ರಿಕೆ (2007ರಲ್ಲಿ) ಇವರ ಪ್ರಾಮಾಣಿಕ ಕನ್ನಡಪರ ಕಾಳಜಿಯನ್ನು ಮೆಚ್ಚಿ ಕನ್ನಡಕ್ಕೆ ಆರ್ಥಿಕ ಚೈತನ್ಯವನ್ನು ತಂದುಕೊಡಲು ಶ್ರಮಿಸುತ್ತಿರುವ ಅಪರೂಪದ ವ್ಯಕ್ತಿ ಎಂದು ಶ್ಲಾಘಿಸಿ 'ಕನ್ನಡಕ್ಕೆ ಇನ್ನೊಬ್ಬ ರಾಜಕುಮಾರ' ಎಂದು ಕರೆಯಿತು. ಇಂಗ್ಲಿಷಿನ ಖ್ಯಾತ ದೈನಿಕ ದಿ ಹಿಂದೂ (2015ರಲ್ಲಿ) ಇವರ ಕನ್ನಡಪರ ಕಳಕಳಿಯನ್ನು ಶ್ಲಾಘಿಸಿ ಲೇಖನ ಪ್ರಕಟಿಸಿದೆ. 2020ರಲ್ಲಿ ವಿಶ್ವವಾಣಿ ಪತ್ರಿಕೆಯಲ್ಲಿ ಇವರ ಸಾಧನೆ ಮತ್ತು ಸೇವೆಯನ್ನು ಕುರಿತ ಅಂಕಣ ಬರೆಹ ಪ್ರಕಟವಾಗಿದೆ. ಶಿವಮೊಗ್ಗದ ನಾವಿಕ ಪತ್ರಿಕೆಯಲ್ಲೂ ಇವರ ಕುರಿತ ಅಂಕಣ ಬರೆಹ ಪ್ರಕಟವಾಗಿದೆ.

ಚಂದನ, ಸಮಯ, ಉದಯ, ಸುದ್ದಿ, ಕಸ್ತೂರಿ ದೂರದರ್ಶನ ವಾಹಿನಿಗಳಲ್ಲಿ ಕೆ. ರಾಜಕುಮಾರ್ ಅವರ ಸಂದರ್ಶನಗಳು ಪ್ರಸಾರವಾಗಿವೆ. ಆಕಾಶವಾಣಿ ಬೆಂಗಳೂರು ಕೇಂದ್ರ, ರೈನ್ ಬೋ ಕೇಂದ್ರ ಮತ್ತು ಚಿತ್ರದುರ್ಗ ಆಕಾಶವಾಣಿ ಕೇಂದ್ರಗಳಲ್ಲಿ ಇವರ ಭಾಷಣ, ಚಿಂತನ, ಪುಸ್ತಕ ಪರಿಚಯ, ರಸಪ್ರಶ್ನೆ ಕಾರ್ಯಕ್ರಮ ಮತ್ತು ಸಂದರ್ಶನಗಳು ಪ್ರಸಾರವಾಗಿವೆ.

ಕೆ. ರಾಜಕುಮಾರ್ ಕರ್ನಾಟಕ ಸಾಹಿತ್ಯ ಅಕಾಡೆಮಿ, ಕುವೆಂಪು ಕನ್ನಡ ಭಾಷಾಭಾರತಿ ಪ್ರಾಧಿಕಾರ; ಇವುಗಳ ಪ್ರಶಸ್ತಿಗಾಗಿ ಪುಸ್ತಕಗಳನ್ನು ಆಯ್ಕೆಮಾಡಲು ಮೌಲ್ಯಮಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪುಸ್ತಕ ಪ್ರಶಸ್ತಿಗಳಿಗಾಗಿ ಆಯ್ಕೆ ಮಾಡುವ ವಿಮರ್ಶಕರ ಸಮಿತಿಯ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದಾರೆ.

ಕನ್ನಡಕ್ಕಾಗಿ ಸುದೀರ್ಘ ಕಾಲದಿಂದ ದುಡಿಯುತ್ತ ಬಂದಿರುವ ಹಿರಿಯರಾದ ಕೆ. ರಾಜಕುಮಾರ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳನ್ನು ಹೇಳೋಣ. 

On the birthday of great worker of our Kannada language K. K Rajakumar Kolar 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ