ಹಿ ಚಿ ಬೋರಲಿಂಗಯ್ಯ
ಹಿ ಚಿ ಬೋರಲಿಂಗಯ್ಯ
ಡಾ. ಹಿತ್ತಲಪುರ ಚಿ. ಬೋರಲಿಂಗಯ್ಯ ಅವರು ಹಂಪಿಯ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾಗಿ ಮತ್ತು ಜಾನಪದ ವಿದ್ವಾಂಸರಾಗಿ ಹೆಸರಾದವರು.
ಬೋರಲಿಂಗಯ್ಯ ಅವರು 1955ರ
ಅಕ್ಟೋಬರ್ 25 ರಂದು ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗ ಹೋಬಳಿಯ ಹಿತ್ತಲಪುರ ಗ್ರಾಮದಲ್ಲಿ ಜನಿಸಿದರು. ತಂದೆ ಚಿಕ್ಕಣ್ಣ, ತಾಯಿ ಕಾಳಮ್ಮ.
ಇವರ ಪ್ರಾಥಮಿಕ ಶಿಕ್ಷಣ ಹಿತ್ತಲಪುರ, ಉಜ್ಜನಿಗಳಲ್ಲಿ ನಡೆಯಿತು. ಪ್ರೌಢಶಿಕ್ಷಣವನ್ನು ಹುಲಿಯೂರುದುರ್ಗದಲ್ಲಿ ಮುಗಿಸಿದರು. ಮುಂದೆ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮುಂದುವರೆಸಿ 1981ರಲ್ಲಿ ಜಿ.ಪಿ.ರಾಜರತ್ನಂ ಚಿನ್ನದ ಪದಕದೊಂದಿಗೆ ಕನ್ನಡ ವಿಷಯದಲ್ಲಿ ಎಂ.ಎ. ಪದವಿ ಪಡೆದರು. 'ವಿಸ್ಮೃತಿ ಮತ್ತು ಸಂಸ್ಕೃತಿ: ಒಂದು ಬುಡಕಟ್ಟಿನ ಲೋಕದೃಷ್ಟಿ ಹಿನ್ನೆಲೆಯಲ್ಲಿ ಸಂಸ್ಕೃತಿ ಚರ್ಚೆ' ಎಂಬ ಸಂಪ್ರಬಂಧಕ್ಕಾಗಿ ಕನ್ನಡ ವಿಶ್ವವಿದ್ಯಾಲಯದ ಸಮಾಜ ವಿಜ್ಞಾನ ನಿಕಾಯದಿಂದ ಪಿಎಚ್.ಡಿ. ಗಳಿಸಿದರು.
ಬೋರಲಿಂಗಯ್ಯ ಅವರು ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಹಾಗೂ ನಾಟಕ ಅಕಾಡೆಮಿಯ ರಿಜಿಸ್ಟ್ರಾರ್ ಆಗಿ, ಕನ್ನಡ ವಿಶ್ವವಿದ್ಯಾಲಯದ ಬುಡಕಟ್ಟು ಅಧ್ಯಯನ ವಿಭಾಗದ ಮುಖ್ಯಸ್ಥರಾಗಿ, ಕನ್ನಡ ವಿಶ್ವವಿದ್ಯಾಲಯದ ಸಮಾಜ ವಿಜ್ಞಾನ ಮತ್ತು ಲಲಿತ ಕಲಾ ನಿಕಾಯದ ಡೀನ್ ಆಗಿ, ಕುವೆಂಪು ಅಧ್ಯಯನ ಕೇಂದ್ರದ ಮುಖ್ಯಸ್ಥರಾಗಿ, ಡಾ. ರಾಮಮನೋಹರ ಲೋಹಿಯಾ ಅಧ್ಯಯನ ಪೀಠದ ಸಂಚಾಲಕರಾಗಿ, ಕನ್ನಡ ವಿಶ್ವವಿದ್ಯಾಲಯದ ಅಧ್ಯಯನಾಂಗ ಮತ್ತು ಪ್ರಸಾರಾಂಗಗಳ ನಿರ್ದೇಶಕರಾಗಿ, ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಕುಲಸಚಿವರಾಗಿ, ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾಗಿ ಹೀಗೆ ಅನೇಕ ಜವಾಬ್ದಾರಿಗಳನ್ನು ನಿರ್ವಹಿಸಿದವರು. ಇದಲ್ಲದೆ 1998ರಿಂದ 2001ರವರೆಗೆ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಸದಸ್ಯರಾಗಿ, 2000ದಿಂದ 2003ರವರೆಗೆ ತಂಜಾವೂರಿನ ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರದ ಸದಸ್ಯರಾಗಿ ಹಾಗೂ 2021 ರಿಂದ ಜಾನಪದ ಲೋಕದ ಅಧ್ಯಕ್ಷರಾಗಿ ಅವರ ಸೇವೆ ಸಂದಿದೆ.
ಡಾ. ಹಿ. ಚಿ. ಬೋರಲಿಂಗಯ್ಯನವರ ಪ್ರಕಟಿತ ಕೃತಿಗಳಲ್ಲಿ ಉಜ್ಜನಿ ಚೌಡಮ್ಮ, ಮಂಟೇಸ್ವಾಮಿ, ಮಂಟೇಸ್ವಾಮಿ ಮಹಾಕಾವ್ಯ, ಗಿರಿಜನ ಕಾವ್ಯ, ಸಿದ್ಧಿಯರ ಸಂಸ್ಕೃತಿ, ಕಾಡು ಕಾಂಕ್ರೀಟ್ ಮತ್ತು ಜಾನಪದ, ದಾಸಪ್ಪ-ಜೋಗಪ್ಪ, ಬುಡಕಟ್ಟು ದೈವಾರಾಧನೆ, ಹಾಲಕ್ಕಿ ಒಕ್ಕಲಿಗರ ಜ್ಞಾನ ಪರಂಪರೆ, ತಿಮ್ಮಪ್ಪಗೊಂಡ ಹಾಡಿಕ ಗೊಂಡರ ರಾಮಾಯಣ, ವಿಸ್ಮೃತಿ ಮತ್ತು ಸಂಸ್ಕೃತಿ: ಒಂದು ಬುಡಕಟ್ಟಿನ ಲೋಕದೃಷ್ಟಿ ಹಿನ್ನೆಲೆಯಲ್ಲಿ ಸಂಸ್ಕೃತಿ ಚರ್ಚೆ, ಗಿರಿಜನ ನಾಡಿಗೆ ಪಯಣ, ಗಿರಿಜನರು, ವೈ.ಕೆ.ರಾಮಯ್ಯ: ಬದುಕು ಮತ್ತು ಸಾಧನೆ, ಸುವರ್ಣ ಕರ್ನಾಟಕ ಅಭಿವೃದ್ಧಿ ಪಥ, ನಮ್ಮೊಳಗೊಂದು ಪುಟ್ಟ ಆಫ್ರಿಕಾ, ದೇಸೀ ಸಂಸ್ಕೃತಿ ಸಂಕಥನ, ಆನೆಕಾಡು (ಕಾದಂಬರಿ) ಸೇರಿವೆ. ಇದಲ್ಲದೆ ಇವರ ಸಂಪಾದಿತ ಕೃತಿಗಳಲ್ಲಿ ಕರ್ನಾಟಕದ ಜನಪದ ಕಲೆಗಳ ಕೋಶ, ಪ್ರಶಸ್ತಿ ಪಡೆದ ಮಹನೀಯರು, ಕರ್ನಾಟಕ ಜಾನಪದ, ಬುಡಕಟ್ಟು ರಾಮಾಯಣ, ಕಾಗೋಡು ಚಳವಳಿ, ಸಂಸದೀಯ ಪಟು ವೈ. ಕೆ. ರಾಮಯ್ಯ ಸೇರಿವೆ.
ಡಾ. ಹಿ. ಚಿ. ಬೋರಲಿಂಗಯ್ಯನವರಿಗೆ 2003ರಲ್ಲಿ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ 'ಜಾನಪದ ತಜ್ಞ' ಪ್ರಶಸ್ತಿ (ಜೀವಮಾನದ ಸಾಧನೆಗಾಗಿ), 2004ರಲ್ಲಿ ಮಂಟೇಸ್ವಾಮಿ ಸಾಹಿತ್ಯ ಪ್ರಶಸ್ತಿ, ಆರ್ಯಭಟ ಸಾಹಿತ್ಯ ಪ್ರಶಸ್ತಿ, ಬರೋಡದ ಭಾಷಾ ಸಂಶೋಧನಾ ಕೇಂದ್ರದ ಪ್ರಶಸ್ತಿ, ಹೊನ್ನಾವರದ ಜಾನಪದ ಪ್ರಕಾಶನದ 'ಶಿವರಾಮ ಕಾರಂತ ಪ್ರಶಸ್ತಿ', ಗುಂಡ್ಮಿ ಜಾನಪದ ಪ್ರಶಸ್ತಿ, ಕುಣಿಗಲ್ ತಾಲ್ಲೂಕು ಎರಡನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಸೇರಿದಂತೆ ಅನೇಕ ಗೌರವಗಳು ಸಂದಿವೆ.
ಸಾಧಕರಾದ ಹಿ. ಚಿ. ಬೋರಲಿಂಗಯ್ಯನವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ನಮಸ್ಕಾರ
On the birthday of Scholar Dr. Hi Chi Boralingaiah 🌷🙏🌷

ಕಾಮೆಂಟ್‌ಗಳು