ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ದೀಪಕ್ ಚೋಪ್ರಾ



 ದೀಪಕ್ ಚೋಪ್ರಾ 

ವೃತ್ತಿಯಲ್ಲಿ ವೈದ್ಯರಾದ ದೀಪಕ್ ಚೋಪ್ರಾ ಅವರು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರೇರಣಾತ್ಮಕ ಗುರುವಾಗಿ ಪ್ರಸಿದ್ಧರಾಗಿದ್ದಾರೆ.  ಆಧ್ಯಾತ್ಮಕ ನೆಲೆಯಲ್ಲಿ ಉನ್ನತ ಮೌಲ್ಯಗಳ ಆರೋಗ್ಯದಾಯಕ ಬದುಕನ್ನು ಪ್ರತಿಪಾದಿಸುತ್ತಿರುವ ಅವರ ಕ್ರಾಂತಿಕಾರಕ ಚಿಂತನೆಗಳು ವಿಶ್ವದಾದ್ಯಂತ ಅಪಾರ ಜನಪ್ರಿಯತೆ ಗಳಿಸಿವೆ. ವೈದ್ಯಕೀಯ ಕ್ಷೇತ್ರದಲ್ಲಿನ ಉತ್ತುಂಗದ ಸಾಧನೆಗಳಾದ ಎಂಡಿ ಮತ್ತು ಎಫ್ಎಸಿಪಿ ಅಂತಹ ಸಾಧನೆಗಳನ್ನು ಮಾಡಿದ್ದರೂ ಭಾರತೀಯ ಆಧ್ಯಾತ್ಮಿಕ ನೆಲೆಗಳಾದ ಯೋಗ, ಉನ್ನತೀಕರಣ ಧ್ಯಾನ ಸ್ವರೂಪಗಳ ಮೂಲಕ  ಮಾನವೀಯ ಬದುಕನ್ನು ಉತ್ತಮ ಸ್ಥಿತಿಗೆ ಕೊಂಡೊಯ್ಯವುದರ ಬಗೆಗಿನ ಅವರ ಕಾರ್ಯಗಳು ಕ್ರಾಂತಿಕಾರಕವೆನಿಸಿವೆ. 

ದೀಪಕ್ ಚೋಪ್ರಾ ಅವರು  1946ರ ಅಕ್ಟೋಬರ್ 22ರಂದು ನವದೆಹಲಿಯಲ್ಲಿ ಜನಿಸಿದರು.  ತಾಯಿ ಪುಷ್ಪಾ.  ತಂದೆ ಕ್ರಿಶನ್ ಲಾಲ್ ಚೋಪ್ರಾ ಹೃದ್ರೋಗ ತಜ್ಞರಾಗಿದ್ದು, ನವದೆಹಲಿಯ ಮೂಲ್‌ಚಂದ್ ಖೈರತಿ ರಾಮ್ ಆಸ್ಪತ್ರೆಯಲ್ಲಿ 25 ವರ್ಷಗಳ ಕಾಲ ವೈದ್ಯಕೀಯ ಮತ್ತು ಹೃದ್ರೋಗ ವಿಭಾಗದ ಮುಖ್ಯಸ್ಥರಾಗಿದ್ದರು, ಬ್ರಿಟಿಷ್ ಸೈನ್ಯದಲ್ಲಿ ಲೆಫ್ಟಿನೆಂಟ್ ಆಗಿದ್ದರು ಮತ್ತು ಬರ್ಮಾದಲ್ಲಿ ಸೇನಾ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದರು. ಇವರ ತಾತ ಬ್ರಿಟಿಷ್ ಭಾರತೀಯ ಸೇನೆಯಲ್ಲಿ ಸಾರ್ಜೆಂಟ್ ಆಗಿದ್ದರು ಮತ್ತು ಭಾರತದ ವೈಸರಾಯ್ ಲಾರ್ಡ್ ಮೌಂಟ್ ಬ್ಯಾಟನ್ ಅವರ ವೈದ್ಯಕೀಯ ಸಲಹೆಗಾರರಾಗಿದ್ದರು.

ಚೋಪ್ರಾ ಅವರು 1970 ರಲ್ಲಿ ಅಮೆರಿಕ ದೇಶಕ್ಕೆ‌ ವಲಸೆ ಹೋಗುವ ಮೊದಲು ಭಾರತದಲ್ಲಿ ವೈದ್ಯಕೀಯ ಅಧ್ಯಯನ ಮಾಡಿದರು. ಮುಂದೆ ಆಂತರಿಕ ವೈದ್ಯಕೀಯದಲ್ಲಿ ರೆಸಿಡೆನ್ಸಿ ಮತ್ತು ಅಂತಃಸ್ರಾವಶಾಸ್ತ್ರದಲ್ಲಿ ಫೆಲೋಶಿಪ್ ಅನ್ನು ಪೂರ್ಣಗೊಳಿಸಿದರು. ಪರವಾನಗಿ ಪಡೆದ ವೈದ್ಯರಾಗಿ, 1980 ರಲ್ಲಿ ಅವರು ನ್ಯೂ ಇಂಗ್ಲೆಂಡ್ ಮೆಮೋರಿಯಲ್ ಹಾಸ್ಪಿಟಲ್ (NEMH) ನಲ್ಲಿ ಸಿಬ್ಬಂದಿ ಮುಖ್ಯಸ್ಥರಾದರು. 

ದೀಪಕ್ ಚೋಪ್ರಾ ಅವರು 1985 ರಲ್ಲಿ ಟ್ರಾನ್ಸೆಂಡೆಂಟಲ್ ಮೆಡಿಟೇಶನ್ (ಟಿಎಮ್) ಪ್ರವರ್ತಕರಾದ ಮಹರ್ಷಿ ಮಹೇಶ್ ಯೋಗಿ ಅವರನ್ನು ಭೇಟಿಯಾಗಿ ಅವರ ಕಾರ್ಯಕ್ರಮಗಳಲ್ಲಿ ಸಕ್ರಿಯರಾದರು. ಸ್ವಲ್ಪ ಸಮಯದ ನಂತರ, ಚೋಪ್ರಾ ಅವರು ಮಹರ್ಷಿ ಆಯುರ್ವೇದ ಆರೋಗ್ಯ ಕೇಂದ್ರವನ್ನು ಸ್ಥಾಪಿಸಲು ನ್ಯೂ ಇಂಗ್ಲೆಂಡ್ ಮೆಮೋರಿಯಲ್ ಹಾಸ್ಪಿಟಲ್ನಲ್ಲಿನ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. 1993 ರಲ್ಲಿ ವಿಶ್ವಪ್ರಸಿದ್ಧ‍ 'ದಿ ಓಪ್ರಾ ವಿನ್‌ಫ್ರೇ ಶೋ'ನಲ್ಲಿ ಇವರ ಸಂದರ್ಶನ ನಡೆದು ವಿಶ್ವದಾದ್ಯಂತ  ಪ್ರಚಾರ ಪಡೆದರು. 

ದೀಪಕ್ ಚೋಪ್ರಾ ಅವರು ಮುಂದೆ  ಮಹರ್ಷಿ ಮಹೇಶ್ ಯೋಗಿ ಅವರ ಟ್ರಾನ್ಸೆಂಡೆಂಟಲ್ ಮೆಡಿಟೇಶನ್ (ಟಿಎಮ್) ಯೋಜನೆಯನ್ನು ತೊರೆದು ಶಾರ್ಪ್ ಹೆಲ್ತ್‌ಕೇರ್‌ನ ಮೈಂಡ್-ಬಾಡಿ ಮೆಡಿಸಿನ್ ಕೇಂದ್ರದ ಕಾರ್ಯನಿರ್ವಾಹಕ ನಿರ್ದೇಶಕರಾದರು. 1996 ರಲ್ಲಿ, ಚೋಪ್ರಾ ಸೆಂಟರ್ ಫಾರ್ ವೆಲ್ ಬೀಯಿಂಗ್ ಎಂಬ ಸಂಸ್ಥೆಯನ್ನು ಸ್ಥಾಪಿಸಿದರು.

ಒಬ್ಬ ವ್ಯಕ್ತಿಯು "ಪರಿಪೂರ್ಣ ಆರೋಗ್ಯ" ಅಂದರೆ "ರೋಗದಿಂದ ಮುಕ್ತವಾದ, ಯಾವ ನೋವೂ ಕಾಡದ" ಮತ್ತು "ಎಂದಿಗೂ ಮುಪ್ಪಿಲ್ಲದ ಅಥವಾ ಸಾವಿಲ್ಲದ" ಸ್ಥಿತಿಯನ್ನು ಪಡೆಯಲು ಸಾಧ್ಯವಿದೆ ಎಂದು ಚೋಪ್ರಾ ನಂಬಿದ್ದಾರೆ. "ಮಾನವ ತನ್ನ ಮನಸ್ಸಿನ ಸಹಾಯದಿಂದ ತನ್ನೊಳಗಿನ

ವಯಸ್ಸಾಗುವ  ದ್ರವದ ಹರಿವನ್ನು ಬದಲಿಸಬಹುದು, ಅದರ ವೇಗವನ್ನು, ನಿಧಾನಗೊಳಿಸಬಹುದು, ಸ್ವಲ್ಪ ಸಮಯದವರೆಗೆ ನಿಲ್ಲಿಸಲೂಬಹುದು"  ಇತ್ಯಾದಿ ಚಿಂತನೆಗಳನ್ನು ಅವರು ಅಭಿವ್ಯಕ್ತಿಗೊಳಿಸಿದರು. ಜೊತೆಗೆ ಅಭ್ಯಾಸಗಳ ಮುಖೇನ ನಿರಂತರವೆನಿಸುವ ಕ್ರಾನಿಕಲ್ ಸ್ವರೂಪದ ಕಾಯಿಲೆಗಳನ್ನು ಗುಣಪಡಿಸಬಹುದು ಎಂದೂ ಪ್ರತಿಪಾದಿಸಿದ್ದಾರೆ. 

ಚೋಪ್ರಾ ಅವರು ಸ್ಯಾನ್ ಡಿಯಾಗೋದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಫ್ಯಾಮಿಲಿ ಮೆಡಿಸಿನ್ ಮತ್ತು ಸಾರ್ವಜನಿಕ ಆರೋಗ್ಯದ ಕ್ಲಿನಿಕಲ್ ಪ್ರೊಫೆಸರ್ ಆಗಿದ್ದಾರೆ ಮತ್ತು ಗ್ಯಾಲಪ್ ಸಂಸ್ಥೆಯಲ್ಲಿ ಹಿರಿಯ ವಿಜ್ಞಾನಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಗ್ಲ್ಯಾಸ್ಗೋದ ರಾಯಲ್ ಕಾಲೇಜ್ ಆಫ್ ಫಿಸಿಶಿಯನ್ಸ್ ಮತ್ತು ಸರ್ಜನ್ಸ್‌ನಲ್ಲಿ ಗೌರವಾನ್ವಿತ ಫೆಲೋ ಆಗಿದ್ದಾರೆ. ಅವರು ಹಲವಾರು ನ್ಯೂಯಾರ್ಕ್ ಟೈಮ್ಸ್ ಬೆಸ್ಟ್ ಸೆಲ್ಲರ್ಸ್ ಸೇರಿದಂತೆ ನಲವತ್ಮೂರು ಭಾಷೆಗಳಿಗೆ ಅನುವಾದಿಸಲಾದ 90ಕ್ಕೂ ಹೆಚ್ಚು ಪುಸ್ತಕಗಳ ಲೇಖಕರಾಗಿದ್ದಾರೆ. ಕಳೆದ ಮೂವತ್ತು ವರ್ಷಗಳಿಂದ, ಚೋಪ್ರಾ ಧ್ಯಾನ ಕ್ರಾಂತಿಯ ಮುಂಚೂಣಿಯಲ್ಲಿದ್ದಾರೆ.  ಅವರ 93 ನೇ ಪುಸ್ತಕ, 'ಲಿವಿಂಗ್ ಇನ್ ದಿ ಲೈಟ್’ ಪ್ರಾಚೀನ ಭಾರತೀಯ ಅಭ್ಯಾಸವಾದ  ರಾಜಯೋಗದ ಬಗೆಗೆ ಬೆಳಕು ಚೆಲ್ಲುವುದಾಗಿದ್ದು ಸ್ವಯಂ-ಸಾಕ್ಷಾತ್ಕಾರ,  ಆನಂದ ಮತ್ತು ಸಂಪೂರ್ಣತೆಯ ಗಳಿಕೆಗಾಗಿನ ಕ್ರಮಗಳ  ಕುರಿತು ತಿಳಿಸುತ್ತದೆ. ಟೈಮ್ ನಿಯತಕಾಲಿಕವು ಡಾ. ಚೋಪ್ರಾರನ್ನು "ಅಗ್ರ 100 ಪ್ರಭಾವಿ ವ್ಯಕ್ತಿಗಳಲ್ಲಿ ಒಬ್ಬರು" ಎಂದು ಹೆಸರಿಸಿದೆ.

ದೀಪಕ್ ಚೋಪ್ರಾ ಅವರ ಕೃತಿಗಳಲ್ಲಿ Digital Dharma, Quantum Body, Living in the Light, Mindful Moments, Abundance, Total Meditation, Metahuman ಮುಂತಾದ ಪ್ರಸಿದ್ಧ ಕೃತಿಗಳು ಸೇರಿವೆ. 

ದೀಪಕ್ ಚೋಪ್ರಾ ಅವರು "ಹೆಚ್ಚು ಶಾಂತಿಯುತ, ನ್ಯಾಯಯುತ, ಸುಸ್ಥಿರ, ಆರೋಗ್ಯಕರ ಮತ್ತು ಸಂತೋಷದಾಯಕ ಸಮಾಜವನ್ನು ಬೆಂಬಲಿಸುವುದು,  ಸಾಮೂಹಿಕ ಯೋಗಕ್ಷೇಮಕ್ಕಾಗಿ ಜನರ ವ್ಯಕ್ತಿಗತ ರೂಪಾಂತರವನ್ನು ಸಶಕ್ತಗೊಳಿಸುವುದು ನನ್ನ ಧ್ಯೇಯ" ಎನ್ನುತ್ತಾರೆ.

On the birthday of author, new age Guru and alternative medicine advocate Dr. Deepak Chopra 🌷🙏🌷


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ