ರಾಜು ತಾಳಿಕೋಟೆ
ರಾಜು ತಾಳಿಕೋಟೆ ನಿಧನ
Respects to departed soul Theatre Artiste Raju Talikote 🌷🙏🌷
ಉತ್ತರ ಕರ್ನಾಟಕದ ಜನಪ್ರಿಯ ಹಿರಿಯ ರಂಗ ಕಲಾವಿದ, ಧಾರವಾಡ ರಂಗಾಯಣ ಕೇಂದ್ರದ ನಿರ್ದೇಶಕ ಮತ್ತು ಚಲನಚಿತ್ರ ಕಲಾವಿದ ರಾಜು ತಾಳಿಕೋಟೆ ಅವರು ಇಂದು (ಅಕ್ಟೋಬರ್ 13, 2025) ನಿಧನರಾಗಿದ್ದಾರೆ.
ರಾಜು ತಾಳಿಕೋಟೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಚಿಕ್ಕಸಿಂದಗಿ ಗ್ರಾಮದ ಮೂಲದವರಾಗಿದ್ದರು. ಅವರ ಮೂಲ ಹೆಸರು ರಾಜೇಸಾಬ ಮುಕ್ತುಂಸಾಬ್ ತಾಳಿಕೋಟಿ. ತಮ್ಮ ತಂದೆ - ತಾಯಿಯ ನಾಲ್ಕು ಮಕ್ಕಳಲ್ಲಿ ಕೊನೆಯವರು ರಾಜು. ತಂದೆ- ತಾಯಿ 'ಖಾಸ್ಗತೇಶ್ವರ ನಾಟ್ಯ ಸಂಘ' ಸ್ಥಾಪಿಸಿದ್ದರು. ತಾಳಿಕೋಟೆ ಖಾಸ್ಗತೇಶ್ವರ ಮಠದ ಪ್ರಸಾದ ನಿಲಯಕ್ಕೆ ವರ್ಷಕ್ಕೆ ಅರ್ಧ ಚೀಲ ಜೋಳ ಮತ್ತು ರೂ 75 ನೀಡಿ ತಾಯಿ ಶಾಲೆಗೆ ಸೇರಿಸಿದ್ದರು. ಆಗಲೇ ಸಂಗೀತಾಭ್ಯಾಸ ಮಾಡಿದರು. ಆದರೆ ನಾಲ್ಕನೆಯ ತರಗತಿ ಓದುವಾಗ 11ನೇ ವಯಸ್ಸಿನಲ್ಲಿ ತಂದೆ -ತಾಯಿಗಳಿಬ್ಬರೂ ತೀರಿ ಹೋಗಿದ್ದರಿಂದ ರಾಜು ಅವರ ಓದು ಮೊಟಕಾಯಿತು. ಹೊಟ್ಟೆಪಾಡಿಗೆ ಹಲವು ಕೆಲಸಗಳನ್ನು ಮಾಡಬೇಕಾಯಿತು. ಹೋಟೆಲ್‌ನಲ್ಲಿ ಸಪ್ಲೈಯರ್ ಆಗಿ, ಲಾರಿ ಕ್ಲೀನರ್, ಗೇಟ್ ಕೀಪರ್ ಆಗಿ ಹೀಗೆ ಹೊಟ್ಟೆಪಾಡಿಗಾಗಿ ಹಲವಾರು ಕೆಲಸ ಮಾಡುತ್ತ ಬಂದ ಅವರು, ಚಿತ್ತರಗಿ ನಾಟಕ ಕಂಪನಿಯಲ್ಲಿ ಗೇಟ್ ಕೀಪರ್ ಆಗಿ, ಪ್ರಚಾರ ಕಲಾವಿದನಾಗಿ, ಪರದೆ ಎಳೆಯುತ್ತ ಗ್ರೀನ್ ರೂಂ ಕಲಾವಿದರಾದರು. ಪಾತ್ರಧಾರಿಯೊಬ್ಬ ಕೈ ಕೊಟ್ಟ ವೇಳೆ ಬಣ್ಣ ಹಚ್ಚಿದ ರಾಜು ಅವರು ಮತ್ತೆ ಹಿಂತಿರುಗಿ ನೋಡಲಿಲ್ಲ. ಅವರೊಳಗಿನ ಕಲಾವಿದ ಬೆಳಕಿಗೆ ಬಂದಿದ್ದೇ ತಡ, ತಂದೆ -ತಾಯಿ ಕಟ್ಟಿ ಬೆಳೆಸಿದ್ದ ಖಾಸ್ಗತೇಶ್ವರ ನಾಟ್ಯ ಸಂಘಕ್ಕೆ ಅಣ್ಣನ ಜೊತೆ ಸೇರಿ 1983ರಲ್ಲಿ ಮರುಜೀವ ತುಂಬಿದರು.
ರಾಜು ಅವರು ಜೀವನದ ಬಹುಪಾಲು ಸಮಯವನ್ನು ಉತ್ತರ ಕರ್ನಾಟಕದ ಹಳ್ಳಿಗಳಲ್ಲಿ ನಾಟಕಗಳ ಮೂಲಕ ಜನರನ್ನು ರಂಜಿಸುವುದರಲ್ಲಿಯೇ ಕಳೆದಿದ್ದರು. ರಾಜು ತಾಳಿಕೋಟಿಯವರು ಉತ್ತರ ಕರ್ನಾಟಕದ ಶೈಲಿಯ ಭಾಷೆ ಮತ್ತು ಉಡುಗೆ-ತೊಡುಗೆಯೊಂದಿಗೆ ಹಾಸ್ಯ ಮತ್ತು ಬೋಧಪ್ರದ ಪಾತ್ರಗಳನ್ನು ಮಾಡುತ್ತಿದ್ದರಿಂದ ಅಪಾರ ಜನಪ್ರಿಯತೆ ಗಳಿಸಿದ್ದರು. ಅದರಲ್ಲೂ ವಿಶೇಷವಾಗಿ, ಕುಡುಕನ ಪಾತ್ರಗಳಲ್ಲಿ ಅವರ ಅಭಿನಯ ಅತ್ಯಂತ ಲೀಲಾಜಾಲವಾಗಿರುತ್ತಿತ್ತು. 'ಕಲಿಯುಗದ ಕುಡುಕ', 'ಕುಡುಕರ ಸಾಮ್ರಾಜ್ಯ', ಮತ್ತು 'ಅಸಲಿ ಕುಡುಕ' ಅವರ ಪ್ರಖ್ಯಾತ ನಾಟಕಗಳಾಗಿದ್ದು, ಈ ನಾಟಕಗಳ ಆಡಿಯೊ ಕ್ಯಾಸೆಟ್‌ಗಳು ಕೂಡ ಆ ಕಾಲದಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಮನೆಮಾತಾಗಿದ್ದವು.
ರಂಗಭೂಮಿಯಲ್ಲಿ ಅಪಾರ ಅನುಭವ ಪಡೆದ ನಂತರ ರಾಜು ಅವರು ಕನ್ನಡ ಚಲನಚಿತ್ರ ರಂಗಕ್ಕೆ ಪ್ರವೇಶಿಸಿದರು. ಪ್ರಖ್ಯಾತ ನಿರ್ದೇಶಕ ಯೋಗರಾಜ್ ಭಟ್ ಅವರ 'ಮನಸಾರೆ' (2009) ಚಿತ್ರದ ಮೂಲಕ ಅವರು ಜನಪ್ರಿಯತೆ ಗಳಿಸಿದರು. ನಂತರ 'ಪಂಚರಂಗಿ', 'ಮತ್ತೊಂದ್ ಮದುವೇನಾ..!' ಮತ್ತು 'ಮೈನಾ' ಸೇರಿದಂತೆ ಹಲವಾರು ಚಿತ್ರಗಳಲ್ಲಿ ತಮ್ಮದೇ ಆದ ವಿಶಿಷ್ಟ ಹಾಸ್ಯ ಶೈಲಿಯ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದರು. ರಾಜು ತಾಳಿಕೋಟೆ ಅವರು ಕಿರಿತೆರೆಯ 'ಬಿಗ್ ಬಾಸ್' 7 ಸೀಸನ್ನಿನ ಸ್ಫರ್ಧಿಯಾಗಿದ್ದರು.
2024 ವರ್ಷದಲ್ಲಿ ಕರ್ನಾಟಕ ಸರ್ಕಾರವು ರಾಜು ತಾಳಿಕೋಟೆ ಅವರನ್ನು ಧಾರವಾಡ ರಂಗಾಯಣ ನಿರ್ದೇಶಕರನ್ನಾಗಿ ನೇಮಕ ಮಾಡಿತ್ತು.
ಅಗಲಿದ ಕಲಾ ಚೇತನಕ್ಕೆ ನಮನ.

ಕಾಮೆಂಟ್‌ಗಳು