ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಎನ್. ಆರ್. ವಿಶುಕುಮಾರ್


 ಎನ್. ಆರ್. ವಿಶುಕುಮಾರ್


ಎನ್. ಆರ್. ವಿಶುಕುಮಾರ್ ಅವರು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವಿಶ್ರಾಂತ ನಿರ್ದೇಶಕರಾಗಿದ್ದು,  ಆಡಳಿತ ಮತ್ತು ಸಾಂಸ್ಕೃತಿಕ ಲೋಕದಲ್ಲಿ ಹೆಸರಾದವರು.  ಪತ್ರಿಕೋದ್ಯಮ, ಬಾನುಲಿ, ಕಿರುತೆರೆಗಳಲ್ಲಿ ವ್ಯಾಪಕ ಅನುಭವವುಳ್ಳ,  ಇವರು ಆ ಅನುಭವಗಳ ಮೂಲಕ ತಮ್ಮ ಕಾರ್ಯಕ್ಷೇತ್ರದಲ್ಲಿ ಆಳದ ಸಂತೃಪ್ತಿಯನ್ನರಸಿ ಹೊರಟವರು.  ಗಾಂಧೀ ವಿಚಾರಧಾರೆಯ ಪ್ರಸಾರ ಕಾರ್ಯದಲ್ಲೂ ಅವರು ನಿರಂತರವಾಗಿ ಸಕ್ರಿಯರು.
 
ವಿಶುಕುಮಾರ್ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ನಗುವನಹಳ್ಳಿಯಲ್ಲಿ 1958 ವರ್ಷದ ನವಂಬರ್ 4 ರಂದು ಜನಿಸಿದರು.  ಪ್ರೌಢಶಾಲೆಯವರೆಗೆ ಹುಟ್ಟೂರಿನಲ್ಲಿಯೇ ವಿದ್ಯಾಭ್ಯಾಸ ನಡೆಸಿ, ಕನಕಪುರದ ರೂರಲ್ ಕಾಲೇಜಿನಲ್ಲಿ ಪಿ ಯು ಸಿ., ಮೈಸೂರಿನ ಡಿ.ಬನುಮಯ್ಯ ಕಾಲೇಜಿನಲ್ಲಿ ಬಿ ಬಿ ಎಂ ಪದವಿ, ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಎಂ ಎಸ್ ( ಕಮ್ಯೂನಿಕೇಷನ್ ) ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದರು.
 
ವಿಶುಕುಮಾರ್ ಸೆಂಟ್ರಲ್ ಕಾಲೇಜಿನಲ್ಲಿದ್ದ ದಿನಗಳಲ್ಲಿಯೇ ಬೆಂಗಳೂರು ಆಕಾಶವಾಣಿಯ ಯುವವಾಣಿ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು.  1982ರಲ್ಲಿ ಬೆಂಗಳೂರು ದೂರದರ್ಶನ ಕೇಂದ್ರ ಆರಂಭವಾದಾಗ  ಅಲ್ಲಿ ಅಲ್ಪಕಾಲದ ಸೇವೆ ಸಲ್ಲಿಸಿದರು. ನಂತರ ಲಂಕೇಶ್ ಪತ್ರಿಕೆಯಲ್ಲಿ ನಾಲ್ಕು ವರ್ಷಗಳ ಕಾಲ ವರದಿಗಾರರಾಗಿದ್ದರು.  1988 ರಲ್ಲಿ ಸ್ವಂತ ಪತ್ರಿಕೋದ್ಯಮದ ಕನಸು ಮೂಡಿ ಮಂಡ್ಯದಲ್ಲಿ ‘ಕನ್ನಂಬಾಡಿ' ವಾರಪತ್ರಿಕೆ ಆರಂಭಿಸಿದರು.  ಹೀಗೆ ಪತ್ರಿಕೆ, ಆಕಾಶವಾಣಿ, ದೂರದರ್ಶನ ಮೂರು ಮಾಧ್ಯಮಗಳಲ್ಲಿಯೂ  ಅನುಭವ ಗಳಿಸಿಕೊಂಡರು.
 
ವಿಶುಕುಮಾರ್ ಕರ್ನಾಟಕ ಸರ್ಕಾರದ ವಾರ್ತಾ ಇಲಾಖೆಯಲ್ಲಿ ಪ್ರೊಬೇಷನರಿ ಗ್ರೂಪ್ ‘ಎ‘ ದರ್ಜೆ ಅಧಿಕಾರಿಯಾಗಿ ಸರ್ಕಾರೀ ಸೇವೆಗೆ 1990 ರಲ್ಲಿ ಸೇರ್ಪಡೆಗೊಂಡರು.  1991 ರಲ್ಲಿ ಮೈಸೂರು ಜಿಲ್ಲಾ ವಾರ್ತಾಧಿಕಾರಿಯಾಗಿ ನೇಮಕಗೊಂಡರು.  ಆ ಸಂದರ್ಭದಲ್ಲಿ
ಜಿಲ್ಲೆಯ ಸಂಪೂರ್ಣ ಸಾಕ್ಷರತಾ ಆಂದೋಲನ ‘ಅಕ್ಷರ - ಅರೋಗ್ಯ' ದಲ್ಲಿ ಸಕ್ರಿಯ ಕಾರ್ಯನಿರ್ವಹಣೆ ಮಾಡಿದರು. 
 
ವಿಶುಕುಮಾರ್ ಅವರು 1995ರಲ್ಲಿ  ಅಂದಿನ ಮುಖ್ಯಮಂತ್ರಿ ಎಚ್ ಡಿ ದೇವೇಗೌಡರ ಸರ್ಕಾರದಲ್ಲಿ ಉಪಮುಖ್ಯಮಂತ್ರಿ ಹಾಗೂ ಹಣಕಾಸು ಸಚಿವರಾಗಿದ್ದ ಸಿದ್ದರಾಮಯ್ಯನವರಿಗೆ  ವಿಶೇಷ ಅಧಿಕಾರಿಯಾಗಿ ನಿಯೋಜನೆಗೊಂಡರು. ಆ ಸಂದರ್ಭದಲ್ಲಿ ಸ್ವಂತ ಇಚ್ಛೆಯಿಂದ ರಾಜ್ಯ ಬಜೆಟ್ ಮಂಡನೆ ಕಾರ್ಯದಲ್ಲಿ ಭಾಗಿಯಾದರು.  ವಿಧಾನ ಸಭೆಯಲ್ಲಿ ಬಜೆಟ್ ಭಾಷಣವನ್ನು ಸುಲಲಿತವಾಗಿ ಓದಲು ಅನುವಾಗುವಂತೆ ಇಂಗ್ಲಿಷ್ ಭಾಷೆಯಿಂದ ಸರಳ ಕನ್ನಡ ಭಾಷೆಗೆ  ಅನುವಾದಿಸುವ ಸವಾಲಿನ ಅವಕಾಶ ಇವರ ಮುಂದೆ ಬಂದಿತ್ತು.  ಈ ದೆಸೆಯಿಂದ  ಕರ್ನಾಟಕ ಸರ್ಕಾರದ ಇಪ್ಪತ್ತೆರಡು ಬಜೆಟ್ ಭಾಷಣಗಳನ್ನು ಕನ್ನಡಕ್ಕೆ ಅನುವಾದಿಸಿದ ಮತ್ತು ನಿರೂಪಿಸಿದ ಗರಿಮೆ ಇವರದಾಯಿತು.
 
ವಿಶುಕುಮಾರ್ ಅವರು ಮುಂದೆ ವಾರ್ತಾ ಇಲಾಖೆಯಲ್ಲಿ ಜಂಟಿ ನಿರ್ದೇಶಕರ ಹುದ್ದೆಗೆ ಮುಂಬಡ್ತಿ ಗಳಿಸಿದರು.  ಈ ಸಂದರ್ಭದಲ್ಲಿ ಕರ್ನಾಟಕ ಚಲನಚಿತ್ರ ಕೈಗಾರಿಕಾ ಅಭಿವೃದ್ಧಿ ನಿಗಮ ಮತ್ತು ಕಂಠೀರವ ಸ್ಟುಡಿಯೋ ನಿಗಮ ಎರಡು ಸಂಸ್ಥೆಗಳಿಗೂ ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕಗೊಂಡರು. ನಿಗಮದ ಆರಂಭದಿಂದಲೂ ನಿರಂತರವಾಗಿ ನಷ್ಟದಲ್ಲೇ ನಡೆಯುತ್ತಿದ್ದ ಎರಡೂ ನಿಗಮಗಳನ್ನು ಎರಡು ವರ್ಷಗಳಲ್ಲಿಯೇ ಲಾಭದ ಹಾದಿಗೆ ತಂದು ನಿಲ್ಲಿಸಿದ ಸಾಧನೆ  ಮಾಡಿದರು. 
 
ವಿಶುಕುಮಾರ್ 2006 ರಲ್ಲಿ ವಾರ್ತಾ ಇಲಾಖೆಯ ನಿರ್ದೇಶಕ ಹುದ್ದೆಗೆ ಮುಂಬಡ್ತಿ ಪಡೆದು, 2018 ರಲ್ಲಿ ನಿವೃತ್ತಿಯಾಗುವವರೆಗೆ  ಹನ್ನೆರಡು ವರ್ಷಗಳಷ್ಟು ಕಾಲ ಆ ಹುದ್ದೆಯಲ್ಲಿ ಸೇವೆ ಸಲ್ಲಿಸಿದರು. ತಮ್ಮ ಈ ಸೇವಾವಧಿಯಲ್ಲಿ ವಿನೂತನ ಕಾರ್ಯಕ್ರಮಗಳ ಪರಿಕಲ್ಪನೆ ಮತ್ತು ಯಶಸ್ವೀ ಅನುಷ್ಠಾನಕ್ಕಾಗಿ ಕ್ರಮಕೈಗೊಂಡು ವಾರ್ತಾ ಇಲಾಖೆಗೆ ಹೊಸ ಚೈತನ್ಯ ಮತ್ತು ಜನಮನ್ನಣೆ ತರುವಲ್ಲಿ ಶ್ರಮಿಸಿದರು. ಇವರ ವಿಶೇಷ ಕಾಳಜಿಯಿಂದ ನವದೆಹಲಿಯ ಪ್ರತಿಷ್ಠಿತ ಗಣರಾಜ್ಯೋತ್ಸವ ಪೆರೇಡ್‍ನಲ್ಲಿ ಕರ್ನಾಟಕ ರಾಜ್ಯದ ಸ್ತಬ್ಧಚಿತ್ರ ಸತತವಾಗಿ ಹತ್ತು ವರ್ಷ ಪ್ರದರ್ಶನಗೊಂಡು ಮೆಚ್ಚುಗೆ ಗಳಿಸಿತು.   ಈ ಮೂಲಕ ಪ್ರತೀ ವರ್ಷವೂ  ದೆಹಲಿಯ ರಾಜಪಥದಲ್ಲಿ ಕರ್ನಾಟಕದ ಕಲೆ, ಸಂಸ್ಕೃತಿ,ಇತಿಹಾಸ ಮತ್ತು ಜನಜೀವನ ಬಿಂಬಿಸುವ ಸ್ತಬ್ದಚಿತ್ರಗಳನ್ನು ಸಾದರಪಡಿಸಿದ ಸಂತೃಪ್ತಿ ಇವರದಾಗಿದೆ.  

ವಿಶುಕುಮಾರ್ ಸರ್ಕಾರದ  ಪ್ರತಿಷ್ಠಿತ ಯೋಜನೆಗಳ ಪ್ರಚಾರಕ್ಕೆ ಲೇಸರ್ ಶೋ; ಡಿಜಿಟಲ್ ಸ್ಕ್ರೀನ್, ಇತ್ಯಾದಿ ನವ ನವೀನ ಮಾಧ್ಯಮಗಳ ಬಳಕೆಗೆ ಇಂಬುಕೊಟ್ಟರು. ಈ ನಿಟ್ಟಿನಲ್ಲಿ ಆಧುನಿಕ ತಂತ್ರಜ್ಞಾನವನ್ನು ಪ್ರಚಾರಕ್ಕೆ ಬಳಸಿಕೊಳ್ಳುವಲ್ಲಿ  ಕರ್ನಾಟಕವೇ  ಮುಂಚೂಣಿ ರಾಜ್ಯವೆನ್ನುವ ಹೆಗ್ಗಳಿಕೆ ಗಳಿಸಿ ಇತರೆ ರಾಜ್ಯಗಳಿಗೆ ಕರ್ನಾಟಕದ ಪ್ರಚಾರ ಕಾರ್ಯತಂತ್ರವೇ ಮಾದರಿಯಾಯಿತು. 
 ಮುಖ್ಯಮಂತ್ರಿಗಳ ಸಮ್ಮುಖದ ಸಾರ್ವಜನಿಕ ವೇದಿಕೆಯಲ್ಲಿ ಸರ್ಕಾರಿ ಯೋಜನೆಗಳ ಫಲಾನುಭವಿಗಳಿಂದಲೇ  ಯೋಜನೆಯ ಸಾಫಲ್ಯ ಮತ್ತು ವೈಫಲ್ಯಗಳ ವಿಮರ್ಶೆಗೆ ಅವಕಾಶ ಒದಗಿತು. ವಾರ್ತಾ ಇಲಾಖೆಯ ಹೊಸ ಚಿಂತನೆಯ ‘ಜನಮನ' ಕಾರ್ಯಕ್ರಮ ಜನಮೆಚ್ಚುಗೆಗೂ ಪಾತ್ರವಾಯಿತು.  "ಸರ್ಕಾರದ ಜಾಹಿರಾತುಗಳನ್ನು  ಪತ್ರಿಕೆಗಳಿಗೆ ಮತ್ತು ಡಿಜಿಟಲ್ ಮಾಧ್ಯಮಗಳಿಗೆ ನಿಯಮಬದ್ಧವಾಗಿ ನೀಡಲು ‘ಜಾಹಿರಾತು ನೀತಿ‘ ಜಾರಿ; 
 ಕನ್ನಡ ಚಲನಚಿತ್ರಗಳಿಗೆ ಪ್ರಶಸ್ತಿ ಮತ್ತು ಸಹಾಯಧನಗಳನ್ನು  ನೀಡಲು 
ನಿಯಮಾವಳಿಗಳ ರಚನೆಯಾದ
‘ರಾಜ್ಯ ಚಲನಚಿತ್ರ ನೀತಿ‘ ಯ ಅನುಷ್ಠಾನ; 'ಮನುಷ್ಯ ಜಾತಿ ತಾನೊಂದೇ ವಲಂ ಶೀರ್ಷಿಕೆಯ ವಿನೂತನ ಧ್ವನಿ ಬೆಳಕು' ಕಾರ್ಯಕ್ರಮದ ಪರಿಕಲ್ಪನೆ;  ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜೀವನ ಚಿತ್ರಣದ 'ಭಾರತ ಭಾಗ್ಯ ವಿದಾತ‘ ಧ್ವನಿ - ಬೆಳಕು ಸಂಯೋಜನೆಯ ಕಾರ್ಯಕ್ರಮ; ಜನರೇ ಆರಂಭಿಸುವ ಸಮುದಾಯ ರೇಡಿಯೋ ಕೇಂದ್ರಗಳಿಗೆ ‘ನಮ್ಮ ಬಾನುಲಿ' ಯೋಜನೆಯಡಿ  ಕರ್ನಾಟಕ ಸರ್ಕಾರದಿಂದ ಪ್ರೋತ್ಸಾಹ ಧನ ಯೋಜನೆ; ಜನ ಸಾಮಾನ್ಯರಿಗೆ ಗಾಂಧಿ ವಿಚಾರ ಧಾರೆಯನ್ನು ಪರಿಚಯಿಸಲು ಮತ್ತು ಗಾಂಧಿ ಪ್ರಣೀತ ಕಾರ್ಯಕ್ರಮಗಳ  ಸಮನ್ವಯಕ್ಕಾಗಿ  ವಾರ್ತಾ ಇಲಾಖೆಗೆ ಸರ್ಕಾರದಿಂದ  ‘ಸಮನ್ವಯ ಇಲಾಖೆ‘  ಎಂಬ ಘೋಷಣೆ; ಕರ್ನಾಟಕ ರಾಜ್ಯದ ಎಲ್ಲ 30 ಜಿಲ್ಲಾ ಕೇಂದ್ರಗಳಲ್ಲಿ  “ಜಿಲ್ಲೆಗೊಂದು ಗಾಂಧಿ ಭವನ“ ನಿರ್ಮಾಣ; ಗಾಂಧಿ ವಿಚಾರಧಾರೆಯಡಿ ಸಾಮಾಜಿಕ ಸೇವೆಯಲ್ಲಿ ನಿರತರಾಗಿರುವ ವ್ಯಕ್ತಿ ಮತ್ತು ಸಂಘ ಸಂಸ್ಥೆಗಳನ್ನು ಗೌರವಿಸಲು  "ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ"  ಸ್ಥಾಪನೆ; ಶಾಲೆಗಳಲ್ಲಿ ಮತ್ತು ಸಮುದಾಯದಲ್ಲಿ ಗಾಂಧೀ ತತ್ವ ಕುರಿತಾದ ಪ್ರಚಾರಕ್ಕೆ ವ್ಯಾಪಕ ಕಾರ್ಯಕ್ರಮಗಳ ಏರ್ಪಾಡು ಮುಂತಾದವುಗಳನ್ನು ನನ್ನ ಆಡಳಿತಾವಧಿಯಲ್ಲಿ ನನ್ನ  ಸಹೋದ್ಯೋಗಿಗಳ ಜೊತೆಯಲ್ಲಿ ಸಾಧಿಸಲು ಸಾಧ್ಯವಾಗಿದ್ದು ನನಗೆ ಸಂತೃಪ್ತಿಯ ವಿಚಾರ" ಎನ್ನುತ್ತಾರೆ ವಿಶುಕುಮಾರ್.
 
ವಿಶುಕುಮಾರ್ ಅವರು ನಿವೃತ್ತಿಯ ಅಂಚಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ನಿರ್ದೇಶಕರಾಗಿ ಹದಿನಾರು ತಿಂಗಳ ಅಲ್ಪಾವದಿ ಸೇವೆ ಸಲ್ಲಿಸಿದರು.  'ಶ್ರೀ ರಾಮಾಯಣ ದರ್ಶನಂ‘ ಮೇರು ಕೃತಿಯ ಯಶಸ್ವಿ ರಂಗ ರೂಪಾಂತರಕ್ಕೆ ಇಂಬುಕೊಟ್ಟರು. ಐದು ಗಂಟೆ ಅವಧಿಯ ಈ ನಾಟಕವು ಮೈಸೂರು ರಂಗಾಯಣದ ಹಿರಿಯ ಕಲಾವಿದರಿಂದ  ಕುವೆಂಪು ಹಳೆಗನ್ನಡ ಭಾಷೆಯಲ್ಲಿಯೇ ಮೂಡಿಬಂತು.
 
ವಿಶುಕುಮಾರ್ ಅವರು ಸರ್ಕಾರೀ ಸೇವೆಯಿಂದ ನಿವೃತ್ತಿಯಾದ ನಂತರ ಯುವ ಸಮುದಾಯಕ್ಕೆ ಗಾಂಧಿ ವಿಚಾರಗಳನ್ನು ತಲುಪಿಸಲು ಗಾಂಧಿ ಪ್ರಣೀತ ಸಂಘಟನೆಗಳ ಜೊತೆ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಮಧ್ಯಪ್ರದೇಶದ ಇಂದೋರ್ ನಗರದಲ್ಲಿರುವ ಕಸ್ತೂರ್ ಬಾ ಗಾಂಧಿ ರಾಷ್ಟ್ರೀಯ ಸ್ಮಾರಕದ ಟ್ರಸ್ಟಿ  ಆಗಿದ್ದಾರೆ.

ಸಾಹಿತ್ಯ, ಸಾಂಸ್ಕೃತಿಕ ಪ್ರೇಮಿ ಎನ್. ಆರ್. ವಿಶುಕುಮಾರ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.  ನಮಸ್ಕಾರ ‍‍‍🌷🙏🌷

Happy birthday Vishu Kumar Sir 🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ