ದೇರಾಜೆ ಸೀತಾರಾಮಯ್ಯ
ದೇರಾಜೆ ಸೀತಾರಾಮಯ್ಯ
ದೇರಾಜೆ ಸೀತಾರಾಮಯ್ಯನವರು - ಯಕ್ಷಗಾನ ತಾಳಮದ್ದಳೆ ಕಲಾಲೋಕದಲ್ಲಿ ತಮ್ಮ ನಿತ್ಯನೂತನ ವಾಕ್-ವೈಖರಿಯಿಂದ, ಧ್ವನಿ-ಅರ್ಥ-ರಸ ವಿಲಾಸದಿಂದ, ವಿಶಿಷ್ಟ ರಂಗ ಪ್ರತಿಭೆಯಿಂದ, ಕಾಮನಬಿಲ್ಲಿನಂತೆ ಕಂಗೊಳಿಸಿ ಇತಿಹಾಸ ಸೃಷ್ಟಿಸಿದವರು. ವೈವಿಧ್ಯಮಯ ಸಾಹಿತ್ಯ ರಚಿಸಿದರು. ಅವರು ಬೆಳ್ಳಾರೆ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿದ್ದರು. ಪುತ್ತೂರು ತಾಲೂಕು ಮಾರುಕಟ್ಟೆ ಸೊಸೈಟಿ ಅಧ್ಯಕ್ಷರಾಗಿ, ದಕ್ಷಿಣ ಕನ್ನಡ ಕೃಷಿಕರ ಮಾರಾಟ ಸಹಕಾರ ಸಂಘದ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದರು.
ದೇರಾಜೆ ಸೀತಾರಾಮಯ್ಯನವರು 1914ರ ನವೆಂಬರ್ 17ರಂದು ಜನಿಸಿದರು. ಇವರು ದ.ಕ. ಜಿಲ್ಲೆಯ ಸುಳ್ಯ ತಾಲೂಕಿನ ಐವರ್ನಾಡು ಗ್ರಾಮದವರು. ತಂದೆ ಮಂಗಲ್ಪಾಡಿ ಕೃಷ್ಣಯ್ಯ, ತಾಯಿ ಸುಬ್ಬಮ್ಮ. ಜಮೀನ್ದಾರರಾಗಿದ್ದ ಇವರದು ಯಕ್ಷಗಾನ ಕಲಾವಿದರ ಮನೆತನ. ದೇರಾಜೆ ಅವರಲ್ಲಿ ಪ್ರಾಥಮಿಕ ಶಾಲೆಯ ಗುರು ಕೊಟ್ಟೆಕಾಯಿ ನಾರಾಯಣ ರಾಯರ ಕುಮಾರವ್ಯಾಸ ಕುರಿತ ಪಾಠದಿಂದ ಅಭಿನಯ, ಸಾಹಿತ್ಯಾಸಕ್ತಿ ಮೂಡಿತು.
ದಶರಥ, ಭರತ, ಮಯೂರಧ್ವಜ, ಹಂಸಧ್ವಜ, ಭೀಷ್ಮ, ಕರ್ಣ- ಮುಂತಾದ ಪಾತ್ರಗಳನ್ನು "ಇನ್ನಿಲ್ಲ' ಎಂಬಂತೆ ಸೃಷ್ಟಿಸಿದ ದೇರಾಜೆ, ಉತ್ತರಕುಮಾರ, ಸುಗ್ರೀವ, ಮಂಥರೆ, ಶೂರ್ಪನಖಿ-ಮುಂತಾದ ಪಾತ್ರಗಳಿಗೆ ಹೊಸ ಆಯಾಮವನ್ನು ನೀಡಿ ಹಾಸ್ಯರಸದ ಉತ್ತುಂಗವನ್ನು ತಲುಪಿದವರು. “ಹಾಸ್ಯರಸ ಸಿದ್ದಿಯೇ ಕಲಾ ಸಿದ್ಧಿಯ ಸೋಪಾನ' ಎಂದು ನಂಬಿದವರು.
ದೇರಾಜೆ ಅವರು ತಾವು ನಿರ್ವಹಿಸಿದ ಯಾವುದೇ ಪಾತ್ರಕ್ಕೂ ಜೀವ ತುಂಬುತ್ತಿದ್ದವರು. ಅನಾವಶ್ಯಕ ವಾದ-ವಿವಾದಗಳಿಂದ ಸದಾ ದೂರವಿದ್ದರು. ಪಾತ್ರ ಚಿತ್ರಣ ಅವರಿಗೆ ಮುಖ್ಯವಾಗಿತ್ತೇ ಹೊರತು, ವೈಯುಕ್ತಿಕ ಸೋಲು-ಗೆಲುವುಗಳನ್ನು ಅವರು ಲೆಕ್ಕಿಸುತ್ತಿರಲಿಲ್ಲ. ಚುಟುಕಾದ ಅರ್ಥ, ಕಾವ್ಯಮಯತೆಯ ಮೆರುಗು, ಅದ್ಭುತವಾದ ಪ್ರತ್ಯುತ್ತನ್ನಮತಿತ್ವ - ಇದು ದೇರಾಜೆಯವರದೇ ವಿಶಿಷ್ಟತೆ. ಸಹಪಾತ್ರಧಾರಿಗಳು ಎಷ್ಟೇ ದೊಡ್ಡ ವಿದ್ವಾಂಸರಾದರೂ, ತರ್ಕನಿಪುಣರಾದರೂ, ದೇರಾಜೆಯವರೊಂದಿಗೆ ಸದಾ ಎಚ್ಚರದಿಂದಿರುತ್ತಿದ್ದರು. "ದೇರಾಜೆಯವರು ಯಾವಹೊತ್ತಿನಲ್ಲಿ ಯಾವಪ್ಪಶ್ನೆಗಳನ್ನು ಎಸೆಯುತ್ತಾರೆ ಎಂದೂ ಊಹಿಸಲೂ ಸಾಧ್ಯವಿಲ್ಲ!”ಎಂಬುದು ಪ್ರಸಿದ್ಧಿಪಡೆದಿತ್ತು.
ದೇರಾಜೆಯವರಿಗೆ ಅತ್ಯಪೂರ್ವವಾದ ನಾಟಕೀಯ ಕಲ್ಪನೆ ಇದ್ದುದರಿಂದ, ಸಹಪಾತ್ರಧಾರಿಗಳ ಪಾತ್ರ,ಅರ್ಥ- ಕಳಪೆಯಾಗದಂತೆ ನೋಡಿಕೊಳ್ಳುತ್ತಿದ್ದರು. ನಟನಾಗಿ ಪಾತ್ರದ ಒಳಹೊಕ್ಕು ನೋಡಿದಂತೆ, ಸೂತ್ರಧಾರನಾಗಿ ಪಾತ್ರದ ಹೊರನಿಂತೂ ನೋಡುತ್ತಿದ್ದರು. ಅವರು ಮಾತಿನ ಶಕ್ತಿಯನ್ನೂ ಮಾತಿಗಿರುವ ಮಿತಿಯನ್ನೂ ಸರಿಯಾಗಿ ಅರ್ಥಮಾಡಿಕೊಂಡವರು. ಆದುದರಿಂದಲೇ ಪ್ರಖ್ಯಾತಿಯ ಶಿಖರದಲ್ಲಿ, ಅತ್ಯಂತ ಬೇಡಿಕೆಯಲ್ಲಿದ್ದಾಗಲೇ, ಸಂತೃಪ್ತಿಯಿಂದಲೇ ವೃತ್ತಿಯಿಂದ ನಿವೃತ್ತರಾದರು.
ಒಂದು "ಪಾತ್ರ" ಹೇಳಲು ಸಾಧ್ಯವಾಗದ. ನಿರೂಪಕ ಮಾತ್ರ ಹೇಳಬಹುದಾದ ಸಂಗತಿಗಳನ್ನು ತಮ್ಮ ಒಳನೋಟದಿಂದ ನೋಡಿ, ತಮ್ಮ ಅಸಾಧಾರಣ ಕಲ್ಪನೆಯ ಕಾವ್ಯಮಯ ಸನ್ನಿವೇಶಗಳೊಂದಿಗೆ, ಮನಮೋಹಕ ಪ್ರಕೃತಿ ವರ್ಣನೆಯೊಂದಿಗೆ ಅವರು ಪುನರ್‌ರಚಿಸಿದ ಕೃತಿಗಳು, ಶ್ರೀರಾಮ ಚರಿತಾಮೃತಂ (ರಾಮಾಯಣ), ಶ್ರೀಮನ್ಮಹಾಭಾರತ ಕಥಾಮೃತಂ (ಮಹಾಭಾರತ). ಮಹಾಭಾರತದ ಪಾತ್ರಗಳು, ತಮ್ಮ “ಸ್ವಗತದ ಮಾತು"ಗಳನ್ನು ಹೇಳುವ, ಒಂದು ಅಪೂರ್ವ, ಅನನ್ಯ ಕೃತಿ "ಕುರುಕ್ಷೇತ್ರಕ್ಕೊಂದು ಆಯೋಗ". ನಮ್ಮೆಲ್ಲರ ಕನಸು-ಆದರ್ಶವಾದ "ರಾಮರಾಜ್ಯ" ಸ್ಥಾಪನೆಗೆ ರಾಮನನ್ನು ಸಿದ್ದಗೊಳಿಸಿದವರು ಮಹರ್ಷಿ ವಿಶ್ವಾಮಿತ್ರ ಎನ್ನುವ ಚಿಂತನೆಯಲ್ಲಿ ರಚಿತವಾದ ಕೃತಿ "ರಾಮರಾಜ್ಯದ ರೂವಾರಿ". 'ರಾಮರಾಜ್ಯ'ಕ್ಕೆ ಬುನಾದಿ ನಿರ್ಮಿಸಿದಾತ ಭರತ", ಎನ್ನುವ ಕಲ್ಪನೆಯ ಕೃತಿ 'ರಾಮರಾಜ್ಯಪೂರ್ವರಂಗ'. ಯಕ್ಷಗಾನದ ಮೂಲಕ ಸಮಗ್ರ ರಂಗಭೂಮಿಯನ್ನು ವಿವೇಚಿಸುವ ಯಕ್ಷಗಾನ ವಿವೇಚನೆ. ಹಳೆಗನ್ನಡ ಪದ್ಯಗಂಧೀ ಗದ್ಯದಲ್ಲಿ ನಳ-ದಮಯಂತಿಯರ ಕತೆಯನ್ನು ಹೇಳುವ ಕೃತಿ 'ಪ್ರಿಯದರ್ಶನಂ'. ಶರ್ಮಿಷ್ಟೆ-ಕಚ-ದೇವಯಾನಿಯರ ಬಗೆಗಿನ ನಾಟಕ 'ಧರ್ಮದಾಸಿ'. ವೈಚಾರಿಕ ಚಿಂತನೆಯ ಕೃತಿಗಳು ವಿಚಾರವಲ್ಲರಿ ಮತ್ತು ಧರ್ಮದರ್ಶನ. ಅಭ್ಯಾಸಿಗಳಿಗೆ ಉಪಯುಕ್ತವಾದ ಅರ್ಥಸಹಿತ ಯಕ್ಷಗಾನ ಪ್ರಸಂಗಗಳು, ಭೀಷ್ಮಾರ್ಜುನ, ಸುಭದ್ರಾರ್ಜುನ, ಕೃಷ್ಣಸಂದಾನ, ಮಕ್ಕಳಿಗಾಗಿ ಅರ್ಥಸಹಿತ ಯಕ್ಷಗಾನ ಪ್ರಸಂಗಗಳು, ಸುಗ್ರೀವ ಸಖ್ಯ, ಮಹಾಭಾರತ ಅಕ್ಷಯಪಾತ್ರೆ, ಕುಮಾರವಿಜಯ, ಮಕ್ಕಳಿಗಾಗಿ ನಾಟಕಗಳು. ಶೂರ್ಪನಖಿಯ ಸ್ವರಾಜ್ಯ, ಕೃಷ್ಣ ಸುಧಾಮ, ಬಹಿಷ್ಕಾರ ಮುಂತಾದವು ಇವರ ವೈವಿಧ್ಯಮಯ ಕೃತಿಗಳಲ್ಲಿ ಸೇರಿವೆ.
40-50 ರ ದಶಕದಲ್ಲಿ ಸುಳ್ಯ ತಾಲೂಕಿನ ಜೊಕ್ಕಾಡಿಯಲ್ಲಿ- ಯಕ್ಷಗಾನ ನಾಟಕ ತಂಡ ಕಟ್ಟಿ ಪ್ರದರ್ಶಿಸಿದ್ದರು. ಆ ಕಾಲದಲ್ಲೇ ಗ್ಯಾಸ್ ಲೈಟ್ ನಲ್ಲಿ ಬೆಳಕಿನ ಪರಿಣಾಮದ ಬಗ್ಗೆ ಪ್ರಯೋಗ ನಡೆಸಿದ್ದರು. ರಾವಣನ ಆಸ್ಥಾನದಲ್ಲಿ ಹನುಮಂತನ ಬಾಲ ಬೆಳೆದು, ಹನುಮಂತ, ರಾವಣನ ಸಿಂಹಾಸನಕ್ಕಿಂತ ಎತ್ತರದಲ್ಲಿ ಕುಳಿತುಕೊಳ್ಳುವ ತಂತ್ರದಂತಹ ರಂಗತಂತ್ರಗಳನ್ನು ಪ್ರಯೋಗಿಸಿದ್ದರು.
ದೇರಾಜೆಯವರ ಮಕರಂದ, ಸುಧಾಮ, ಚಂದ್ರಾವಳಿ ವಿಲಾಸದ ಅತ್ತೆ ಪಾತ್ರಗಳು ತುಂಬಾ ಪ್ರಸಿದ್ಧಿ ಪಡೆದಿತ್ತು. ಆ ಕಾಲದಲ್ಲೇ ಬಂಟ್ವಾಳ ತಾಲೂಕಿನ ಮಾಣಿಯಲ್ಲಿ ಕುವೆಂಪು ಅವರ ರಕ್ತಾಕ್ಷಿ ನಾಟಕವನ್ನು ದೇರಾಜೆಯವರು ನಿರ್ದೇಶಿಸಿದ್ದು ತುಂಬಾ ಪ್ರಸಿದ್ಧಿ ಪಡೆದಿತ್ತು. 1948ರಲ್ಲಿ, ಸುಳ್ಯ ತಾಲೂಕಿನ ಚೊಕ್ಕಾಡಿಯಲ್ಲಿ ದೇವಸ್ಥಾನ ಕಟ್ಟಿಸಿದ್ದರು. ಅದನ್ನೊಂದು ಸಾಂಸ್ಕೃತಿಕ ಕೇಂದ್ರವನ್ನಾಗಿ ರೂಪಿಸಿದ್ದರು. ನಾಡಿನ ಹೆಸರಾಂತ ಸಾಹಿತಿಗಳೂ, ಕಲಾವಿದರೂ ಚೊಕ್ಕಾಡಿಗೆ ಆಗಮಿಸುತ್ತಿದ್ದರು.
ದೇರಾಜೆ ಅವರು ಗ್ರಾಮದ ಪಟೇಲರಾಗಿದ್ದವರು. ಉತ್ತಮ ಸಂಘಟಕರಾಗಿದ್ದರು. ಮೊಳಹಳ್ಳಿ ಶಿವರಾಯರ ಪ್ರೇರಣೆಯಿಂದ ಸಹಕಾರಿ ಸಂಘಗಳಲ್ಲೂ ದುಡಿದವರು. ಅವರು ಬೆಳ್ಳಾರೆ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿದ್ದರು. ಪುತ್ತೂರು ತಾಲೂಕು ಮಾರುಕಟ್ಟೆ ಸೊಸೈಟಿ ಅಧ್ಯಕ್ಷರಾಗಿ, ದಕ್ಷಿಣ ಕನ್ನಡ ಕೃಷಿಕರ ಮಾರಾಟ ಸಹಕಾರ ಸಂಘದ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದರು. "ಉತ್ತಮ ಬತ್ತದ ಕೃಷಿ"ಗೆ ಪುರಸ್ಕಾರವನ್ನು ಪಡೆದವರು. ಇವರ "ಶ್ರೀರಾಮಚರಿತಂ" ಗ್ರಂಥಕ್ಕೆ ಮೈಸೂರು ಸರ್ಕಾರದಿಂದ ಪಾರಿತೋಷಕ ಲಭಿಸಿತ್ತು. ದೇರಾಜೆಯವರ ಅಭಿನಂದನ ಗ್ರಂಥ "ರಸಋಷಿ".
ದೇರಾಜೆ ಅವರು ವಿಟ್ಲದ ಸ್ವಗೃಹದಲ್ಲಿ ಅವರು 1984ರ ಅಕ್ಟೋಬರ್ 5ರಂದು ಈ ಲೋಕವನ್ನಗಲಿದರು. ದೇರಾಜೆ ಅವರು ಸರಳ, ನೇರ ವ್ಯಕ್ತಿತ್ವ, ಸಾತ್ವಿಕ ಸ್ವಭಾವ, ಪ್ರಾಮಾಣಿಕ ಹೃದಯವಂತರು. ನಿತ್ಯಜೀವನದಲ್ಲೂ ಸರಸ ಮಾತುಗಾರರು. ನಡೆ-ನುಡಿ ಒಂದಾಗಿಸಿ, ಜೀವನ ದರ್ಶನವನ್ನು ಪಡೆದ ಮಹಾನುಭಾವರು.
ಆಧಾರ ಬರಹ: ಕೆ. ಶ್ರೀಕರಭಟ್ ಮರಾಠೆ ಅವರದ್ದು.
ಕೃಪೆ: ದೇರಾಜೆ ಸೀತಾರಾಮಯ್ಯ ಸಂಸ್ಮರಣ ಸಮಿತಿ ಮತ್ತು Moorthy Deraje
ಆಧಾರ ಬರಹ: ಕೆ. ಶ್ರೀಕರಭಟ್ ಮರಾಠೆ ಅವರದ್ದು. ಕೃಪೆ: ದೇರಾಜೆ ಸೀತಾರಾಮಯ್ಯ ಸಂಸ್ಮರಣ ಸಮಿತಿ ಮತ್ತು Moorthy Deraje
ಕಾಮೆಂಟ್‌ಗಳು