ರವಿ ಮಡೋಡಿ
ರವಿ ಮಡೋಡಿ
ವೃತ್ತಿಯಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆದ ರವಿ ಮಡೋಡಿ ಅವರು ಪ್ರವೃತ್ತಿಯಿಂದ ಯಕ್ಷಗಾನ ಕಲಾವಿದರು, ಯಕ್ಷಗಾನ ಕುರಿತಾದ ಬತಹಗಾರರು ಹಾಗೂ ಯಕ್ಷಗಾನ ಕುರಿತಾದ ಸಂಪತ್ತನ್ನು ಡಿಜಲೀಕರಣಗೊಳಿಸುವಲ್ಲಿ ಅಪರಿಮಿತ ಪರಿಶ್ರಮ ನೀಡುತ್ತಿರುವವರು.
ರವಿ ಮಡೋಡಿ ಅವರು 1983ರ ನವೆಂಬರ್ 5ರಂದು ಜನಿಸಿದರು. ಇವರು ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ನಿಟ್ಟೂರು ಬಳಿಯ ಮಡೋಡಿ ಗ್ರಾಮದವರು. ಎಂಸಿಎ ಪದವಿ ಗಳಿಸಿರುವ ಇವರು ಬೆಂಗಳೂರಿನಲ್ಲಿ ಪ್ರತಿಷ್ಠಿತ ಅಂತರರಾಷ್ಟ್ರೀಯ ಸಂಸ್ಥೆಯಲ್ಲಿ ಸಾಫ್ಟವೇರ್ ಎಂಜಿನಿಯರ್ ವೃತ್ತಿ ನಿರ್ವಹಿಸುತ್ತಿದ್ದು, ಪ್ರವೃತ್ತಿಯಿಂದ ಯಕ್ಷಗಾನ ಪ್ರೇಮಿಯಾಗಿದ್ದಾರೆ. ಇವರು ಯಕ್ಷಗಾನ ನೃತ್ಯ, ಅರ್ಥಗಾರಿಕೆ ಬಲ್ಲವರು. ಮೊಬೈಲ್ ಆಪ್ ಮೂಲಕ ಯಕ್ಷಗಾನ ಪ್ರಸಂಗಗಳನ್ನ ಡಿಜಿಟಲೀಕರಣ ಮಾಡುವುದರಲ್ಲಿ ಹಾಗೂ ಯಕ್ಷಗಾನ ಕ್ಷೇತ್ರಕ್ಕೆ ತಂತ್ರಜ್ಞಾನದ ಲಾಭ ದೊರಕಿಸಿಕೊಡುವಲ್ಲಿ ನಿರಂತರ ಶ್ರಮಿಸುತ್ತಿದ್ದಾರೆ.
ರವಿ ಮಡೋಡಿ ಅವರು ಕಳೆದ 15 ವರ್ಷಗಳಿಂದ ಯಕ್ಷಗಾನ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು ರಾಜ್ಯ ಮತ್ತು ಹೊರ ರಾಜ್ಯಗಳಲ್ಲಿ ಹಲವು ನೂರು ಪ್ರದರ್ಶನಗಳನ್ನು ತಮ್ಮ ತಂಡದೊಂದಿಗೆ ನೀಡಿದ್ದಾರೆ. ಈ ಕಲೆಯನ್ನು ಮುಂದಿನ ಪೀಳಿಗೆಗೆ ಉಳಿಸಿಕೊಡಲು ಅಪಾರವಾಗಿ ಶ್ರಮವಹಿಸುತ್ತಿದ್ದಾರೆ. "ಯಕ್ಷಸಿಂಚನ" ಎನ್ನುವ ಹವ್ಯಾಸಿ ಯಕ್ಷಗಾನ ಸಂಸ್ಥೆಯ ಸ್ಥಾಪಕರಲ್ಲಿ ಒಬ್ಬರಾದ ರವಿ ಆ ಸಂಸ್ಥೆಯ ಅಧ್ಯಕ್ಷರ ಜವಾಬ್ದಾರಿಯನ್ನೂ ನಿರ್ವಹಿಸಿದ್ದಾರೆ. ಯಕ್ಷವಾಹಿನಿ ಸಂಸ್ಥೆಯಲ್ಲಿ ಕಾರ್ಯಕಾರಿಣಿ ಮಂಡಳಿಯ ಸದಸ್ಯರಾಗಿಯೂ ಕೆಲಸ ಮಾಡುತ್ತಿದ್ದಾರೆ. ಯಕ್ಷಗಾನ ಕ್ಷೇತ್ರಕ್ಕೆ ತಂತ್ರಜ್ಞಾನದ ಲಾಭ ದೊರಕಿಸಿಕೊಡುವಲ್ಲಿ ಶ್ರಮವಹಿಸಿರುವ ಇವರು ಸಹಸ್ರಾರು ಹಸ್ತ ಪ್ರತಿಗಳನ್ನು ಡಿಜಿಟಲೀಕರಣಗೊಳಿಸಿದ್ದಾರೆ. ಹಲವು ಸಹಸ್ರ ಹಸ್ತಪ್ರತಿಗಳನ್ನು ಸ್ಕ್ಯಾನ್ ಮಾಡಿ ಅಂತರ್ಜಾಲದಲ್ಲಿ ಸಿಗುವಂತೆ ಮಾಡಿದ್ದಾರೆ. ಯಕ್ಷಗಾನ ಕ್ಷೇತ್ರ ಉಳಿವಿಗೆ ಸಾಕಷ್ಟು ಕೊಡುಗೆ ನೀಡಿ ಅಪರಿಚಿತರಾಗಿಯೇ ಉಳಿಯುವ ಕಲಾವಿದರನ್ನು ಹುಡುಕಿ "ಮಲೆನಾಡಿನ ಯಕ್ಷಚೇತನಗಳು” ಎಂಬ ಪುಸ್ತಕ ಪ್ರಕಟಿಸಿದ್ದಾರೆ. ಯಕ್ಷಗಾನ ಕುರಿತ ಸಾಹಿತ್ಯವನ್ನು ಪರಿಚಯಿಸಲು "ಸಾಹಿತ್ಯ ಸಾಂಗತ್ಕ" ಎಂಬ ಕಾರ್ಯಕ್ರಮವನ್ನೂ ನಡೆಸುತ್ತಿದ್ದಾರೆ. ಯಕ್ಷಗಾನ ಪ್ರದರ್ಶನಗಳ ಸಮಗ್ರ ಮಾಹಿತಿ ಒಳಗೊಂಡ "ಯಕ್ಷಲೋಕ" ಅ್ಯಪ್ ಅಭಿವೃದ್ಧಿಪಡಿಸಿದ್ದಾರೆ. ಯಕ್ಷಗಾನದಲ್ಲಿ ರಾಮ, ಶುಕ್ರ, ಕಂಸ, ಶತ್ರುಘ್ನ, ಅರ್ಜುನ, ಜಮದಗ್ನಿ, ಬಲರಾಮ, ಜಾಂಬವ ಸೇರಿದಂತೆ ಅನೇಕ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ರವಿ ಮಡೋಡಿ ಅವರ ಸಾಧನೆಯನ್ನು ಅನೇಕ ಸಂಘ ಸಂಸ್ಥೆಗಳು ಗುರುತಿಸಿ ಗೌರವಿಸಿದ್ದು, ಪ್ರಜಾವಾಣಿ ಪತ್ರಿಕೆ ಇವರನ್ನು ‘2022 ವರ್ಷದ ಸಾಧಕ'ರೆಂದು ಹೆಸರಿಸಿತ್ತು.
ಸಾಧಕ ರವಿ ಮಡೋಡಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ನಮಸ್ಕಾರ.
Happy birthday to Yakshagana enthusiast Ravi Madodi 🌷🌷🌷

ಕಾಮೆಂಟ್‌ಗಳು