ನೆಮ್ಮದಿಯಿಂದಿರಬೇಕೆ?
ನೆಮ್ಮದಿಯಿಂದಿರಬೇಕೆ?
(ಕೆಲವು ವರ್ಷಗಳ ಹಿಂದೆ ಅನಿಸಿದ್ದು)
ನೆಮ್ಮದಿಯಿಂದಿರಬೇಕಾದರೆ ಏನು ಮಾಡಬೇಕು. ನೆಮ್ಮದಿಯಾಗಿರಬೇಕು ಅಷ್ಟೇ!
ನೆಮ್ಮದಿಯಾಗಿರುವುದೆಂದರೆ ಅನಗತ್ಯವಾಗಿ ತಲೆ ಕೆಡಿಸುವ ವಿಚಾರಗಳಿಂದ ಆದಷ್ಟು ದೂರವಿರಬೇಕು. ಯಾವುದರ ಬಗ್ಗೆ ಎಷ್ಟು ಕಾಳಜಿ ವಹಿಸಬೇಕೋ ಅದಕ್ಕಿಂತ ಹೆಚ್ಚು ಮನಸ್ಸನ್ನು ಅದರಲ್ಲಿ ಭಾಗಿಯಾಗಲಿಕ್ಕೆ ಬಿಡಕೂಡದು.
“ಹೇಳೋದು ಸುಲಭ. ಅದೆಲ್ಲಾ ಅಗೋ, ಹೋಗೋ ವಿಚಾರ ಅಲ್ಲ.” ಇದು ಮೇಲ್ಕಂಡ ಮಾತುಗಳಿಗೆ ಬರುವ ಬುಲೆಟ್ ಪ್ರತಿಕ್ರಿಯೆ. ಹಾಗೆ ಪ್ರತಿಕ್ರಯಿಸೋಕೆ ಮುಂಚೆ ಒಂದು ಕ್ಷಣ ನಮ್ಮನ್ನು ಈ ಪ್ರಶ್ನೆಗಳನ್ನು ಕೇಳಿಕೊಳ್ಳೋಣ?
೧. ಬರೀ ಕೆಟ್ಟದ್ದನ್ನೇ ದೊಡ್ಡದಾಗಿ ಚ್ಯೂಯಿಂಗ್ ಗಮ್ ತರಹ ಎಳೆ ಎಳೆಯಾಗಿ ಬಿಡಿಸಿ ತೋರುವ ಕಿರುತೆರೆಯ ಧಾರಾವಾಹಿಗಳನ್ನು ನೋಡೋ ಕರ್ಮ ಯಾಕೆ?
೨. ದಿನ ಬೆಳಗಾದ್ರೆ ಒಂದಲ್ಲ ಒಂದು ರೀತಿ ವಿಚಿತ್ರ ವೇಷ ಹಾಕಿಕೊಂಡು ನಮ್ಮ ಗ್ರಹಗತಿ ತಿಳಿಸೋ ನೆಪದಲ್ಲಿ ಹಲವು ನೇಮ ನಿಷ್ಠೆಗಳ ರೂಪದಲ್ಲಿ ಹೆದರಿಸಿ ಇರುವ ಮನಃಶಾಂತಿಯನ್ನೂ ಕಿತ್ತುಕೊಳ್ಳುವ ಉಪದೇಶ ಕೇಳುವ ಗ್ರಹಚಾರಾನಾದ್ರೂ ಯಾಕೆ?
೩. ಯಾರು ಏನಂದ್ರು, ಯಾರು ಯಾರಿಗೆ ಡೈವೋರ್ಸ್ ಕೊಟ್ರು, ಯಾರು ಯಾರಿಗೆ ಹೊಡೆದ್ರು ಅನ್ನೋದನ್ನು ವೈಭವೀಕರಿಸ್ತಾ ಲೈವ್ ಕಿತ್ತಾಟ ತೋರಿಸೋ ಕಾರ್ಯಕ್ರಮ ನೋಡ್ಲೇ ಬೇಕಾ?
೪. ಯಾರು ಯಾರಿಗಿಂತಾ ಕೆಟ್ಟದಾಗಿ ಕುಣಿದಾಡಿದ್ರು, ಯಾರು ಮತ್ತೊಬ್ಬರಿಗಿಂತ ಚೆನ್ನಾಗಿ ಕಣ್ಣೀರು ಹಾಕಿದ್ರು, ಯಾರು ಮತ್ತೊಬ್ಬರನ್ನು ಮೀರಿಸೋ ಹಾಗೆ ಮತ್ತೊಬ್ಬ ಸ್ಪರ್ಧಿಯ ಮೇಲೆ ಅಪವಾದ ಮಾಡಿದ್ರು, ಯಾವ ತೀರ್ಪುಗಾರ ಮತ್ತೊಬ್ಬ ತೀರ್ಪುಗಾರನ್ನ ಎಷ್ಟು ಚೆನ್ನಾಗಿ ಬೆಂಡ್ ಎತ್ತಿದ್ರೂ ಅಂತ ತೋರಿಸೋ ಪ್ರತಿಭಾ ಪ್ರದರ್ಶನ ಎಂಬ ಯುದ್ಧಗಳನ್ನು ನೋಡ್ಲೇಬೇಕಾ?
೫. ಯಾರು ಎಷ್ಟು ಲಂಚ ತಿಂದ್ರು, ಯಾರು ಬಂಡಾಯ ಎದ್ರು, ಯಾರು ಯಾವ ಗುಂಪಲ್ಲಿ ಇದ್ದಾರೆ ಈ ಕರ್ಮಾನ ನಮ್ಮ ಕೈಲಿ ಬಗೆಹರಿಸೋಕೆ ಸಾಧ್ಯಾನೆ? ಇದೆಲ್ಲಾ ಇರೋ ಪತ್ರಿಕೆ ಮೊದಲನೇ ಪುಟಾನಾ ಡೀಟೈಲ್ ಆಗಿ ಓದ್ಲೇಬೇಕಾ?
೬. ಮೇಲಿನದೆಲ್ಲಾ ಬಿಡೋಕೆ ತುಂಬಾ ಜನಕ್ಕೆ ಕಷ್ಟ ಆಗುತ್ತೆ ನಿಜ. ಆದ್ರೆ ಸಂತೋಷವಾಗಿ ನಾಲ್ಕು ಒಳ್ಳೆಯ ವಿಚಾರ ಪ್ರಸಾರ ಮಾಡೋ ಸಾಧ್ಯತೆ ಇರುವ ನೆಟ್ವರ್ಕಿಂಗ್ ಮಾಧ್ಯಮದಲ್ಲಿಯೂ ಇದೇ ಗೋಳನ್ನ ರಗಳೆ ಮಾಡಿಕೊಳ್ಳಲೇ ಬೇಕಾ?
೭. ಅವನು ಹೀಗೆ, ಇವಳು ಹೀಗೆ, ಅವನಿಗೇನಪ್ಪಾ ಮಾಡ್ಕೊಂಡಿದಾನೆ, ಅವನು ಓತ್ಲಾ, ಮತ್ತೊಬ್ಬ ಚಮಚ, ಅವರವರಲ್ಲಿ ಅಡ್ಜಸ್ಟ್ ಮೆಂಟು, ಇತ್ಯಾದಿ ನೂರೆಂಟು ಬೇಡದ ಗಾಸಿಪ್ ಮಾತು, ಕಹಿ ವಿಷದ ಕಾರಿಕೊಳ್ಳುವಿಕೆ ಮತ್ತೊಬ್ಬರಲ್ಲಿ ನಿಷ್ಕಲ್ಮಷವಾಗಿ ಕಳೆಯಬಹುದಾದ ಹೊತ್ತಲ್ಲಿ ನಿಜಕ್ಕೂ ಬರಲೇ ಬೇಕಾ?
ಹೀಗೆ ಹಲವು ನಮಗೆ ಚೆನ್ನಾಗಿ ಗೊತ್ತಿರುವುದನ್ನೆಲ್ಲಾ ಪ್ರಶ್ನೆಯನ್ನಾಗಿ ಮಾಡಿಕೊಳ್ಳಬಹುದು. ಅಂತಿಮವಾಗಿ ಪ್ರಶ್ನೆ ಒಂದೇ.....
೮. ನೆಮ್ಮದಿ ಬೇಕಾ ಬೇಡ್ವಾ?
ಇದಕ್ಕೆ ಇರುವ ಉತ್ತರ ಕೂಡಾ ತುಂಬಾ ಸಣ್ಣದು. ಸಾಧಾರಣವಾದದ್ದು. ಪ್ರಶ್ನೆಯಲ್ಲೇ ಅಡಕವಾಗಿರುವಂತದ್ದು. ಆದರೆ ಗಂಭೀರವಾದುದು, ಸೂಕ್ಷ್ಮವಾದದ್ದು, ಗಾತ್ರದಲ್ಲಿ ಅಷ್ಟೇ ಚಿಕ್ಕದು. 'ಬೇಕು' ಅಥವಾ 'ಬೇಡ'.
“ಮತ್ತೊಂದು ಪ್ರತಿಕ್ರಿಯೆ ಅಪ್ಪಳಿಸೋಕೆ ರೆಡಿಯಾಗಿರುತ್ತೆ”, ಅಂದ್ರೆ ನಾವು ಏನೇನು ನಡೆಯುತ್ತೋ, ಎಲ್ಲವನ್ನೂ ಗೂಬೆಗಳ ತರಹಾ ಕೂತು ನೋಡ್ತಾ ಇರಬೇಕಾ. ಕಂಡಿದ್ರೂ, ಕಂಡಿಲ್ಲ ಅಂತ ಸೋಗು ಹಾಕಿಕೊಂಡು, ನಾನೊಬ್ಬ ನೆಮ್ಮದಿಯಾಗಿದ್ರೆ ಸಾಕು, ಇಡೀ ದೇಶ, ಪ್ರಪಂಚ ಕೊಚ್ಚಿಕೊಂಡು ಹೋಗ್ಲಿ ಅಂತ ಸುಮ್ನೇನೇ ಇರಬೇಕಾ?.
ಎಲ್ಲವನ್ನೂ ಒಣ ಮಾತುಗಳ, ನಿಷ್ಕರ್ಶೆಯ ಲೇಪವಿಲ್ಲದೆ ಗಮನಿಸೋಣ. ನಾವು ಇದಕ್ಕೆ ಸಕ್ರಿಯವಾಗಿ ಏನಾದರೂ ಮಾಡಬಹುದೇ? ಕಡೇ ಪಕ್ಷ ಸಕ್ರಿಯವಾಗಿರುವವರ ಬೆಂಬಲಕ್ಕೆ ನಿಲ್ಲಲು ಸಾಧ್ಯತೆ ಇದೆಯೇ? ಅವರು ಯೋಗ್ಯರೇ? ಎಂದು ಪರಿಶೀಲಿಸಿಕೊಂಡು ಹೆಜ್ಜೆ ಇಡಲಿಕ್ಕೆ ಪ್ರಯತ್ನಿಸೋಣ. ಇದೆಲ್ಲಾ ಇಲ್ಲದೆ ಸುಮ್ನೆ ಚಪಲಕ್ಕೆ ವಿಷಯಗಳ ಆಸಕ್ತಿ ಹುಟ್ಟಿಸಿಕೊಂಡ್ರೆ ನಮ್ಮಲ್ಲಿ ದೇವರು ಕೊಟ್ಟಿರೋ ಶಕ್ತಿ ನಮ್ಮನ್ನು ವಿನಾಶಕ್ಕೆ ತಳ್ಳುತ್ತೆಯೇ ವಿನಃ ನಮಗೆ ಸಹಾಯವಂತೂ ಮಾಡೋಲ್ಲ. ಏನು ಬೇಕಾದರೂ ಮಾಡೋಣ. ಆದರೆ ಅದಕ್ಕೆ ಮುಂಚೆ “ನಾನು ಇದನ್ನು ನೆಮ್ಮದಿ ಪಡೆದುಕೊಂಡು ಮಾಡುತ್ತಿದ್ದೇನೆಯೇ?” ಎಂಬುದಕ್ಕೆ ಉತ್ತರ ಪಡೆದುಕೊಂಡು ನಂತರದಲ್ಲಿ ಮುನ್ನಡೆಯೋಣ.
ಇವೆಲ್ಲದರ ಜೊತೆಗೆ ಮತ್ತೊಂದು ಪ್ರಶ್ನೆಯನ್ನೂ ಕೇಳಿಕೊಳ್ಳೋಣ. “ನಾವು ಮತ್ತೊಬ್ಬರು ಮೆಚ್ಚಬೇಕು ಅಂತ ಮಾಡ್ತಾ ಇದ್ದೇವಲ್ಲ, ಅದು ಮೊದಲು ನಮಗೆ ಮೆಚ್ಚುಗೆ ಉಂಟುಮಾಡಿದೆಯೇ, ಇಲ್ಲ ಮತ್ತೊಬ್ಬರು ಮೆಚ್ಚಿದ ನಂತರವೇ ಅದನ್ನು ನಾನು ಮೆಚ್ಚಿಕೊಳ್ಳುವುದಕ್ಕೆ ಕಾದುಕೂತಿದ್ದೇನೆಯೇ?” ಮತ್ತೊಬ್ಬರನ್ನು ಮೆಚ್ಚಿಸಹೋಗಿ, ಮತ್ತೊಬ್ಬರು ಮೆಚ್ಚಿದರು ಅಥವಾ ಮೆಚ್ಚಲಿಲ್ಲ ಎಂಬುವ ನಮ್ಮ ಪೊಳ್ಳುತನಕ್ಕೆ ನಾವೇ ಬಲಿಯಾಗಿ ನಮ್ಮ ನೆಮ್ಮದಿ ಕಳೆದುಕೊಳ್ಳೋದು ಬೇಡ.
“ನೆಮ್ಮದಿಯಿಂದ ಇರೋದು ಅನ್ನೋದು ಮೇಲ್ಕಂಡ ಪ್ರಶ್ನೆಗಳಲ್ಲಿ ಮಾತ್ರ ಇವೆಯೇ? ಎಷ್ಟೊಂದು ಜನರಿಗೆ ಎಷ್ಟೊಂದು ಕಷ್ಟಗಳಿಲ್ಲ?” ಇದು ಮತ್ತೊಂದು ಪ್ರತಿಕ್ರಿಯೆಯಾಗಿ ಬರುತ್ತೆ ಅಲ್ವ. ಖಂಡಿತವಾಗಿ. ನಿಜವಾಗಿ ಬರಬೇಕಾದದ್ದೇ ಇದು. “ನಮ್ಮ ಜೀವನದಲ್ಲಿ ನಮಗೆ ಬರಬೇಕಾದ ಪ್ರಶ್ನೆ ಇದೊಂದು ಮಾತ್ರವೇ. ಈ ಪ್ರಶ್ನೆ ಬಂದಾಗ ನಮ್ಮಲ್ಲಿ ಉಳಿದ ಮೇಲ್ಕಂಡ ಯಾವುದೇ ಪ್ರಶ್ನೆಗಳೂ ಖಂಡಿತ ಸುಳಿಯುವುದಿಲ್ಲ. ನಾವು ನೆಮ್ಮದಿಯಾಗಿ ಇರಲಿಕ್ಕೆ ಬೇಕಾದದ್ದು ಈ ಪ್ರಶ್ನೆ ಮಾತ್ರ. ಈ ಪ್ರಶ್ನೆ ಮಾತ್ರವೇ ನಮ್ಮಲ್ಲಿ ಮೂಡಿದಾಗ, ಖಂಡಿತವಾಗಿ ಆ ಪ್ರಶ್ನೆಯೇ ನಮಗೆ ಭವ್ಯ ಉತ್ತರವನ್ನೂ, ಬದುಕನ್ನೂ, ಸಾರ್ಥಕತೆಯನ್ನೂ ಕೊಟ್ಟೀತು.”
ಕಾಮೆಂಟ್‌ಗಳು