ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸಕಲಗ್ರಹಬಲ ನೀನೇ ಸರಸಿಜಾಕ್ಷ


ಸಕಲಗ್ರಹಬಲ ನೀನೇ ಸರಸಿಜಾಕ್ಷ
ನಿಖಿಳ ರಕ್ಷಕ ನೀನೆ ವಿಶ್ವವ್ಯಾಪಕನೇ                 ||ಪ||

ರವಿ ಚಂದ್ರ ಬುಧ ನೀನೆ ರಾಹು ಕೇತುವು ನೀನೆ
ಕವಿ ಗುರುವು ಶನಿಯು ಮಂಗಳನು ನೀನೆ
ದಿವ ರಾತ್ರಿಯು ನೀನೆ ನವವಿಧಾನವು ನೀನೆ
ಭವರೋಗಹರ ನೀನೆ ಭೇಷಜನು ನೀನೆ             ||೧||

ಪಕ್ಷಮಾಸವು ನೀನೆ ಪರ್ವಕಾಲವು ನೀನೆ
ನಕ್ಷತ್ರ ಯೋಗ ತಿಥಿ ಕರಣಗಳು ನೀನೆ
ಅಕ್ಷಯವೆಂದು ದ್ರೌಪದಿಯ ಮಾನವ ಕಾಯ್ದ
ಪಕ್ಷಿವಾಹನ ದೀನರಕ್ಷಕನು ನೀನೆ                      ||೨||

ಋತು ವತ್ಸರವು ನೀನೆ ಪ್ರುಥಿವ್ಯುಗಾದಿಯು ನೀನೆ
ಕ್ರತು ಹೋಮ ಯಜ್ಞ ಸದ್ಗತಿಯು ನೀನೆ
ಜಿತವಾಗಿ ಎನ್ನೊಡೆಯ ಪುರಂದರವಿಠ್ಠಲನೆ
ಶ್ರುತಿಗೆ ಸಿಲುಕದ ಮಹಾಮಹಿಮನು ನೀನೆ         ||೩||

ಸಾಹಿತ್ಯ: ಪುರಂದರದಾಸರು


 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ