ಪಿಯರೆ ಸಿಲ್ವನ್ ಫಿಲಿಯೋಜಾ
ಮಹಾ ಮಹೋಪಾಧ್ಯಾಯ
ಪಿಯರೆ ಸಿಲ್ವನ್ ಫಿಲಿಯೋಜಾ ನಿಧನ
ಫ್ರೆಂಚ್ ಮತ್ತು ಸಂಸ್ಕೃತ ವಿದ್ವಾಂಸರಾದ ಪದ್ಮಶ್ರೀ ಪುರಸ್ಕೃತ ಮಹಾ ಮಹೋಪಾಧ್ಯಾಯ ಡಾ|| ಪಿಯರೆ ಸಿಲ್ವನ್ ಫಿಲಿಯೋಜಾ ನಿಧನರಾಗಿದ್ದಾರೆ ಎಂಬ ಸುದ್ದಿ ಬಂದಿದೆ. ನಮ್ಮ ಕನ್ನಡತಿ ಇತಿಹಾಸ ತಜ್ಞೆ ಮತ್ತು ಸಂಶೋಧಕಿ ವಸುಂಧರಾ ಕವಲಿ Vasundhara Filliozat Filliozat ಅವರು ಪಿಯರೆ ಸಿಲ್ವನ್ ಫಿಲಿಯೋಜಾ ಅವರ ಪತ್ನಿ. ಫ್ರಾನ್ಸ್ ದೇಶದ ನಿವಾಸಿಗಳಾದ ವಸುಂಧರ - ಪಿಯರೆ ಸಿಲ್ವನ್ ಫಿಲಿಯೋಜಾ ದಂಪತಿ ಭಾರತೀಯ ಸಂಸ್ಕೃತಿಗಳ ಆರಾಧಕರು. ಅಪಾರ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಶೋಧನೆಗಳಿಗೆ ತಮ್ಮನ್ನು ಅರ್ಪಿಸಿಕೊಂಡವರು.
ಪಿಯರೆ ಸಿಲ್ವನ್ ಫಿಲಿಯೋಜಾ ಅವರು 1936ರ ಫೆಬ್ರವರಿ 15ರಂದು ಜನಿಸಿದರು. ಪಿಯರೆ ಸಿಲ್ವನ್ ಅವರ ತಂದೆ ಫ್ರಾನ್ಸ್ ದೇಶದ ಮಹಾನ್ ಇಂಡಾಲಜಿ (Indology) ಪ್ರಾಧ್ಯಾಪಕರಾದ ಡಾ. ಜೀನ್ ಫಿಲಿಯೋಜಾ ಅವರು ಸಹ ಭಾರತೀಯ ಚಾರಿತ್ರಿಕ ಸಂಸ್ಕೃತಿಗಳ ಕುರಿತು ಅಪಾರ ಗೌರವ ಹೊಂದಿದ್ದವರು. ಅವರು ಪಾಂಡಿಚೆರಿಯಲ್ಲಿ ಫ್ರೆಂಚ್ ಇನ್ಸ್ಟಿಟ್ಯೂಟ್ ಆಫ್ ಇಂಡಾಲಜಿಯನ್ನು ಸ್ಥಾಪಿಸಿ, ಅದರ ಮೊದಲ ನಿರ್ದೇಶಕರೂ ಆಗಿದ್ದರು. ಪಿಯರೆ ಸಿಲ್ವನ್ ಫಿಲಿಯೋಜಾ ಅವರು 1959ರಲ್ಲಿ ಪ್ಯಾರಿಸ್‍ನಲ್ಲಿ ಸಂಸ್ಕೃತ ಮತ್ತು ಹಿಂದಿಯಲ್ಲಿ ಪದವಿ ಪಡೆದರು. 1962ರಲ್ಲಿ ಸಂಸ್ಕೃತದಲ್ಲಿ 'ಅಲಂಕಾರ ಶಾಸ್ತ್ರ'ದ ಕುರಿತಾದ ಸಂಶೋಧನಾ ಮಹಾಪ್ರಬಂಧಕ್ಕೆ ಪಿಎಚ್.ಡಿ ಗಳಿಸಿದರು.
ಪ್ರೊ ಪಿಯರೆ ಸಿಲ್ವನ್ ಫಿಲಿಯೋಜಾ ಅವರು 1963-67 ಅವಧಿಯಲ್ಲಿ ಪಾಂಡಿಚೇರಿಯಲ್ಲಿನ ಫ್ರೆಂಚ್ ಸ್ಕೂಲ್ ಆಫ್ ಏಷಿಯನ್ ಸ್ಟಡೀಸ್ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಿದರು. ವಿದ್ವಾಂಸರಾದ ಎನ್. ರಾಮಚಂದ್ರ ಭಟ್ ಮತ್ತು ಎಂ. ಎಸ್. ನರಸಿಂಹಾಚಾರ್ಯ ಮುಂತಾದವರಲ್ಲಿನ ಅಧ್ಯಯನದಿಂದ ಸಂಸ್ಕೃತದಲ್ಲಿ ಉನ್ನತ ಪಾಂಡಿತ್ಯ ಗಳಿಸಿದರು. 1967- 2004 ಅವಧಿಯಲ್ಲಿ ಪ್ಯಾರಿಸ್‍ನಲ್ಲಿ ಸಂಸ್ಕೃತ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು. ಮುಂದೆ ಅವರು ಫ್ರಾನ್ಸ್ ದೇಶದಲ್ಲಿನ ಅನೇಕ ಶೈಕ್ಷಣಿಕ ಸಂಸ್ಥೆಗಳಲ್ಲಿನ ಮಾರ್ಗದರ್ಶಕರಾಗಿ ಮಹತ್ವದ ಜವಾಬ್ದಾರಿಗಳನ್ನು ನಿರ್ವಹಿಸಿದರು.
ಪಾಂಡಿಚೇರಿ ಮತ್ತು ಮೈಸೂರಿಗೆ ಆಗ್ಗಿಂದಾಗ್ಗೆ ಭೇಟಿ ನೀಡುತ್ತಿದ್ದ ವಸುಂಧರ - ಪಿಯರೆ ಸಿಲ್ವನ್ ಫಿಲಿಯೋಜಾ ದಂಪತಿ ಭಾರತೀಯ ಸಂಸ್ಕೃತಿ ಸಾಹಿತ್ಯದ ಕುರಿತು ಮಾಡಿದ ಕೆಲಸ ಅಪಾರ. ಈ ದಂಪತಿ ಜೊತೆಯಾಗಿ ಹಂಪಿಯಲ್ಲಿ ಸಂಶೋಧನೆ ಕಾರ್ಯ ನಡೆಸಿದರು.
ಪಿಯರೆ ಸಿಲ್ವನ್ ಫಿಲಿಯೋಜಾ ಅವರು ಸಂಸ್ಕೃತ ಭಾಷೆ ಮತ್ತು ಭಾರತೀಯ ವ್ಯಾಕರಣ ಪರಂಪರೆ ಕುರಿತು ಅಪಾರ ಸಂಶೋಧನೆ ಕೆಲಸ ಮಾಡಿದರು. ಇವರ ಇತರ ಸಂಶೋಧನೆಗಳಲ್ಲಿ. Sanskrit philology, paleography of Sanskrit manuscripts, Sanskrit epigraphy, Sanskrit poetical, religious, especially Shaivagamas, scientific literatures; Indian religious architecture and iconography, with special reference to Karnataka monuments and the extraordinary site of Hampi and History of Indology ಸೇರಿವೆ.
ಪ್ರೊ. ಪಿಯರೆ ಸಿಲ್ವನ್ ಫಿಲಿಯೋಜಾ ಅವರು 23 ಅಮೂಲ್ಯ ಗ್ರಂಥಗಳು ಹಾಗೂ 250ಕ್ಕೂ ಹೆಚ್ಚು ವಿದ್ವತ್ಪೂರ್ಣ ಲೇಖನಗಳನ್ನು ಪ್ರಕಟಿಸಿದ್ದರು. ಪ್ರತಿ ವರ್ಷ ಫ್ರಾನ್ಸ್ ಮತ್ತು ಜರ್ಮನಿ ದೇಶಗಳಲ್ಲಿ ಅಂತರರಾಷ್ಟ್ರೀಯ ಮಟ್ಟದ ಸಂಸ್ಕೃತ ಉತ್ಸವಗಳನ್ನು ಆಯೋಜಿಸುತ್ತಿದ್ದರು.
ಪ್ರೊ. ಪಿಯರೆ ಸಿಲ್ವನ್ ಫಿಲಿಯೋಜಾ ಅವರಿಗೆ ಭಾರತ ಸರ್ಕಾರದ ಪದ್ಮಶ್ರೀ, ಲಾಲ್ ಬಹದ್ದೂರ್ ಶಾಸ್ತ್ರಿ ಸಂಸ್ಕೃತ ವಿದ್ಯಾಪೀಠದಿಮದ ಮಹಾ ಮಹೋಪಾಧ್ಯಾಯ, ಭಾರತದ ರಾಷ್ಟ್ರಪತಿಗಳಿಂದ ಸಂಸ್ಕೃತ ವಿದ್ವಾನ್ ಗೌರವ, ಪುಣೆಯ ಸಂವಿದ್ಯಾ ಇನ್ಸ್ಟಿಟ್ಯೂಟ್ ಆಫ್ ಕಲ್ವರಲ್ ಸ್ಟಡೀಸ್ ಫೆಲೊ ಗೌರವ, ಮೈಸೂರಿನ ವನಮಾಲಿ ಸನ್ಮಾನ; ಫ್ರಾನ್ಸ್ ದೇಶದ Chevalier de la Legion d'Honneur; Chevalier de l'Ordre national du Merite; Commandeur de l'Ordre des Palmes academiques ಮುಂತಾದ ಅನೇಕ ಗೌರವಗಳು ಸಂದಿದ್ದವು.
ಅಗಲಿದ ಮಹಾ ಮಹೋಪಾಧ್ಯಾಯ ಪಿಯರೆ ಸಿಲ್ವನ್ ಫಿಲಿಯೋಜಾ ಅವರ ಚೇತನಕ್ಕೆ ನಮನಗಳು. ಆತ್ಮೀಯರಾದ ವಸುಂಧರಾ ಫಿಲಿಯೋಜಾ ಮತ್ತು ಅವರ ಕುಟುಂಬದವರಿಗೆ ಈ ಅಗಲಿಕೆಯನ್ನು ಸಹಿಸುವ ಶಕ್ತಿ ಒದಗಲಿ ಎಂದು ಪ್ರಾರ್ಥಿಸೋಣ. ನಮಸ್ಕಾರ 🌷🙏🌷
Respects to departed soul Great Sanskrit and French Scholar Pierre-Sylvain Filliozat 🌷🙏🌷
ಕಾಮೆಂಟ್‌ಗಳು