ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಶ್ರೀರಾಮ್ ಲಾಗೂ


ಶ್ರೀರಾಮ್ ಲಾಗೂ 


ವೈದ್ಯ ವೃತ್ತಿಯವರಾಗಿದ್ದು ಭಾರತೀಯ ಸಿನಿಮಾ ಮತ್ತು ರಂಗಭೂಮಿಯ ನಟರಾಗಿ ಮಹಾನ್ ಹೆಸರಾಗಿ ಬೆಳಗಿದವರು ಡಾಕ್ಟರ್ ಶ್ರೀರಾಮ್ ಲಾಗೂ.  ಚಿತ್ರರಂಗದ ಅನೇಕ ಪೋಷಕ ಪಾತ್ರಗಳಲ್ಲಿ ಅವರ ಅಭಿನಯ ಚಿರಸ್ಮರಣೀಯ.

ಶ್ರೀರಾಮ್ ಲಾಗೂ 1927ರ ನವೆಂಬರ್ 16ರಂದು ಸತಾರಾದಲ್ಲಿ ಜನಿಸಿದರು. ಪುಣೆ ವಿಶ್ವವಿದ್ಯಾಲಯ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಮತ್ತು ಎಂಎಸ್ ಪದವಿ ಪಡೆದು ಇಎನ್‍ಟಿ ಸರ್ಜನ್ ಆಗಿದ್ದರು. ಕೀನ್ಯಾದ ಆಸ್ಪತ್ರೆಯಲ್ಲಿ ಕೆಲವು ವರ್ಷಗಳ ಕಾಲ ಕೆಲಸ ಮಾಡಿದ್ದ ಅವರು ಮುಂದೆ ವೈದ್ಯ ವೃತ್ತಿ ತ್ಯಜಿಸಿ ಪೂರ್ಣಾವಧಿ ನಟರಾಗಿದ್ದರು. 

ಶ್ರೀರಾಮ್ ಲಾಗೂ 1972ರಲ್ಲಿ ವಿ ಶಾಂತಾರಾಮ್ ಅವರ ಮರಾಠಿಯ 'ಪಿಂಜ್ರಾ' ಚಿತ್ರದೊಂದಿಗೆ ಚಿತ್ರಜೀವನ ಆರಂಭಿಸಿದರು.  ಶ್ರೀರಾಮ್ ಲಾಗೂ ಅವರು ಅಭಿನಯಿಸಿದ ಮರಾಠಿ ಚಿತ್ರಗಳಲ್ಲಿ ಸಿಂಹಾಸನ್, ಸಾಮನ ಪಿಂಜರ ಗಮನಾರ್ಹವಾದವು. ಬಾಲಿವುಡ್ ಚಿತ್ರಗಳಾದ ಜಮಾನೇ ಕೋ ದಿಖಾನಾ ಹೈ, ಖುದ್ದಾರ್, ಲಾವಾರಿಸ್, ಇನ್‌ಸಾಫ್‌ ಕಾ ತಾರಾಜು, ಏಕ್ ದಿನ ಅಚಾನಕ್, ಘರೋಂಡಾ, ಮುಕದ್ದಾರ್ ಕಾ ಸಿಕಂದರ್, ತೋಡಿಸಿ ಬೇವಫಾಯಿ, ಮಕ್ಸದ್, ಸೌತೆನ್, ನಸೀಹತ್, ಅವಾಮ್, ದೆವತಾ, ದೇಸ್ ಪರದೇಸ್, ಇನ್ಕಾರ್, ಸಾಜನ್ ಬಿನ್ ಸುಹಾಗನ್, ಕಿನಾರಾ, ಲೂಟ್ಮಾರ್, ಸೌ ಕ್ರೋರ್, ಜ್ಯೋತಿ ಬನೆ ಜ್ವಾಲಾ, ನೀಯತ್, ನಿಶಾನಾ, ಶ್ರೀಮಾನ್ ಶ್ರೀಮತಿ, ಸದ್ಮಾ ಮುಂತಾದ 250ಕ್ಕೂ ಹೆಚ್ಚು ಚಿತ್ರಗಳಲ್ಲಿ ಅವರು ಉತ್ತಮ ಅಭಿನಯ ನೀಡಿದ್ದರು. 

ಶ್ರೀರಾಮ್ ಲಾಗೂ ರಿಚರ್ಡ್ ಅಟೆನ್ಬರೋ ಅವರ "ಗಾಂಧಿ" ಚಿತ್ರದಲ್ಲಿ ಗೋಪಾಲ್ ಕೃಷ್ಣ ಗೋಖಲೆ ಪಾತ್ರ ನಿರ್ವಹಿಸಿದ್ದರು. ಲಾಗೂ ಮಹಾರಾಷ್ಟ್ರದಲ್ಲಿ ನಾಟಕ ಚಳುವಳಿಯ ಬೆಳವಣಿಗೆಯಲ್ಲಿ ವಿಜಯ್ ತೆಂಡೂಲ್ಕರ್, ವಿಜಯ ಮೆಹ್ತಾ ಮತ್ತು ಅರವಿಂದ್ ದೇಶಪಾಂಡೆ ಅವರೊಂದಿಗೆ ಪ್ರಮುಖ ಪಾತ್ರ ವಹಿಸಿದ್ದರು. ಹಿಂದಿ, ಮರಾಠಿ ಮತ್ತು ಗುಜರಾಥಿ ನಾಟಕಗಳಲ್ಲಿ ಸಕ್ರಿಯರಾಗಿದ್ದ ಅವರು ನೂರಾರು ನಾಟಕಗಳಲ್ಲಿ ನಟಿಸಿ ಇಪ್ಪತ್ತಕ್ಕೂ ಹೆಚ್ಚು ನಾಟಕಗಳನ್ನು ನಿರ್ದೇಶಿಸಿದ್ದರು.

ಶ್ರೀರಾಮ್ ಲಾಗೂ ಘರೋಂಡಾ ಚಿತ್ರದಲ್ಲಿ ಉತ್ತಮ ನಟನಾಗಿ 1978ರಲ್ಲಿ ಫಿಲಂಫೇರ್ ಪ್ರಶಸ್ತಿಗೆ ಭಾಜನರಾಗಿದ್ದರು.  ಅವರಿಗೆ ಕಾಳಿದಾಸ್ ಸಮ್ಮಾನ್, ಸಂಗೀತ ನಾಟಕ ಅಕಾಡಮಿ ಫೆಲೋಷಿಪ್ ಗೌರವಗಳೂ ಸಂದಿದ್ದವು.  ಮರಾಠಿ ಚಿತ್ರರಂಗದಲ್ಲಿ ಅವರನ್ನು ನಟಸಾಮ್ರಾಟ್  ಎಂದೇ ಕಲಾಭಿಮಾನಿಗಳು ಕರೆಯುತ್ತಿದ್ದರು.

ಶ್ರೀರಾಮ್ ಲಾಗೂ ಭ್ರಷ್ಟಾಚಾರ ವಿರುದ್ಧದ ಆಂದೋಲನದಲ್ಲಿ ಸಕ್ರಿಯರಾಗಿ ಭಾಗವಹಿಸಿದ್ದರು. 'ಲಮಾಣ್'(ಸಾಮಾನ ಸಾಗುಸುವವ) ಎಂಬುದು ಅವರ ಆತ್ಮಚರಿತ್ರೆ.

ಶ್ರಿರಾಮ್ ಲಾಗೂ 2019ರ ಡಿಸೆಂಬರ್ 17ರಂದು ಈ ಲೋಕವನ್ನಗಲಿದರು.

On the birth anniversary of great actor Shriram Lagoo


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ