ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಮೊಟ್ಟ ಮೊದಲ ಸಾಹಿತ್ಯ ಸಮ್ಮೇಳನ



ಮೊಟ್ಟ ಮೊದಲ ಕನ್ನಡ ಸಾಹಿತ್ಯ ಸಮ್ಮೇಳನ ಹೀಗಿತ್ತು

 

ಕನ್ನಡ ಸಾಹಿತ್ಯ ಪರಿಷತ್ತು ನಾಡಿನ ಏಕೀಕರಣದ ಹೋರಾಟಗಾರರೂ ಸಾಹಿತಿಗಳೂ ವಿದ್ವಾಂಸರೂ ಮೈಸೂರಿನ ಆಡಳಿತಗಾರರೂ, ಅಧ್ಯಾಪಕರೂ, ಸಾರ್ವಜನಿಕ ಗಣ್ಯರು ಹೀಗೆ ಹಲವಾರು ಗಣ್ಯವ್ಯಕ್ತಿಗಳ ನಾಡು – ನುಡಿ ಸೇವಕರ ಒಂದು ಗುಂಪಿನ ಜನರ ಸಂಯುಕ್ತ ಶ್ರಮ ತ್ಯಾಗಗಳ ಫಲವಾಗಿ ರೂಪುಗೊಂಡಿತು.

ಬೆಂಗಳೂರಿನಲ್ಲಿ ಸರ್. ಎಂ. ವಿಶ್ವೇಶ್ವರಯ್ಯನವರು ಮಾಡಿದ ಪ್ರಯತ್ನಗಳೂ ಹೆಚ್.ವಿ. ನಂಜುಂಡಯ್ಯ, ಬೆಳ್ಳಾವೆ ವೆಂಕಟನಾರಣಪ್ಪ, ಕರ್ಪೂರ ಶ್ರೀನಿವಾಸರಾವ್, ಅಚ್ಯುತರಾವ್, ಬಹಾದ್ದೂರ್ ಶ್ಯಾಮರಾವ್, ರಾ.ಹ. ದೇಶಪಾಂಡೆ, ಆಲೂರು ವೆಂಕಟರಾಯರು ಇನ್ನೂ ಅನೇಕರು ಸೇರಿ ಅಹರ್ನಿಶಿ ನಡೆಸಿದ ಚಿಂತನೆ – ಪರಿಶ್ರಮಗಳಿಂದ ಕನ್ನಡ ಸಾಹಿತ್ಯ ಪರಿಷತ್ತು ರೂಪುಗೊಂಡು ಸ್ಥಾಪನೆಯಾಗಿದೆ. ಕನ್ನಡ ಸಾಹಿತ್ಯ ಪರಿಷತ್ತು ಮೊದಲನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ೫ನೇ ಮೇ ೧೯೧೫ರಲ್ಲಿ ಅಧಿಕೃತವಾಗಿ ಅಸ್ತಿತ್ವಕ್ಕೆ ಬಂದಿತು.

೨೨–೩–೧೯೧೫ರಲ್ಲಿ ಸೇರಿದ ಉಪಸಮಿತಿ ತೀರ್ಮಾನಿಸಿದಂತೆ ೩ ಮೇ ೧೯೧೫ರಂದು ಕರ್ಣಾಟಕ ಸಾಹಿತ್ಯ ಪರಿಷತ್ತಿನ ಸ್ಥಾಪನೆಯಾಗಿ ಏರ್ಪಟ್ಟ ಮೊದಲ ಕನ್ನಡ ಸಾಹಿತ್ಯ ಸಮ್ಮೇಳನವು ಮಧ್ಯಾಹ್ನ ೩ ಗಂಟೆಗೆ ಪ್ರಾರಂಭವಾಯಿತು. ನಿಯಮಿತ  ಕಾಲಕ್ಕೆ ಎಷ್ಟೋ ಮುಂಚಿತವಾಗಿಯೇ ವಿಶಾಲವಾದ ಹಜಾರವೆಲ್ಲಾ ಜನಸಂದಣಿಯಿಂದ ತುಂಬಿತ್ತು.

ಕರ್ಣಾಟಕದ ನಾನಾ ಪ್ರಾಂತಗಳ ಪ್ರಮುಖರೂ, ವಿದ್ವಾಂಸರೂ ದಯೆಮಾಡಿಸಿದ್ದರು. ಧಾರವಾಡ, ಬಿಜಾಪುರ, ಬೆಳಗಾಮು, ಗಾಲ್ವಿಯರ, ಬೊಂಬಾಯಿ ನಗರ, ಬೊಂಬಾಯಾಧಿಪತ್ಯದ ದೇಶೀಯ ಸಂಸ್ಥಾನಗಳು, ಮದರಾಸು ನಗರ, ಬಳ್ಳಾರಿ, ದಕ್ಷಿಣ ಕನ್ನಡೀಯ, ಮೈಸೂರು ಸಂಸ್ಥಾನದ ಡಿಸ್ಟ್ರಿಕ್ಟ್ಗಳು – ಈ ಪ್ರಾಂತಗಳ ಅನೇಕ ಪ್ರತಿನಿಧಿಗಳು ದಯೆಮಾಡಿಸಿ ಸಮ್ಮೇಳನವನ್ನು ಅಲಂಕರಿಸಿದ್ದರು. ಧಾರವಾಡದ ಕರ್ಣಾಟಕ ವಿದ್ಯಾವರ್ಧಕ ಸಂಘದ ಮತ್ತು ಕರ್ಣಾಟಕ ವಿದ್ಯಾವ್ಯಾಸಂಗ ಸಮಾಜದ, ಬೊಂಬಾಯಿ ನಗರದ ಕರ್ಣಾಟಕ ಸಭೆಯ, ಮತ್ತು ಮೈಸೂರು ಸಂಸ್ಥಾನದ ಕಾಲೇಜು ಮತ್ತು ಹೈಸ್ಕೂಲುಗಳ ಪ್ರತಿನಿಧಿಗಳೂ ದಯೆಮಾಡಿಸಿದ್ದರು. ಧಾರವಾಡದ ‘ಕರ್ಣಾಟಕ ವೃತ್ತ ಮತ್ತು ಧನಂಜಯ’, ಹುಬ್ಬಳ್ಳಿಯ ‘ಸಚಿತ್ರ ಭಾರತ’ ಪತ್ರಿಕೆ, ಮಂಗಳೂರಿನ ‘ಸ್ವದೇಶಾಭಿಮಾನಿ’ ಮತ್ತು ಮೈಸೂರು ಸಂಸ್ಥಾನದ ವೃತ್ತಾಂತ ಪತ್ರಿಕೆಗಳ ಸಂಪಾದಕರೂ ಹಾಜರಿದ್ದರು. ಹೀಗಿದ್ದುದರಿಂದ ಈ ಸಮ್ಮೇಳನಕ್ಕೆ ಕನ್ನಡ ನಾಡುಗಳ ಎಲ್ಲಾ ಕಡೆಗಳಿಂದಲೂ ಪ್ರತಿನಿಧಿಗಳು ಬಂದಿದ್ದಂತೆ ಭಾವಿಸಬಹುದು.

ಪರಿಷತ್ತಿನ ಸ್ಥಾಪನೆ ಎಲ್ಲಿ?

ಡಿವಿಜಿ ಅವರು ಸಭೆಗೆ ಬಂದವರನ್ನು ಕುರಿತು ಹೀಗೆ ಹೇಳಿದ್ದಾರೆ:

“ಸಾಹಿತ್ಯ ಪರಿಷತ್ತಿನ ಸ್ಥಾಪನೆಯಾದದ್ದು ಬೆಂಗಳೂರು ಸೆಂಟ್ರಲ್ ಕಾಲೇಜಿನ ಎದುರುಗಡೆಯಿರುವ ಈಗಿನ ಆರ್ಟ್ಸ್ ಅಂಡ್ ಸಯನ್ಸ್ ಕಾಲೇಜ್ ಕಟ್ಟಡದ ನಡುವಣ ಸಭಾಮಂದಿರದಲ್ಲಿ.

ಪರಿಷತ್ತಿನ ಸಮಾರಂಭಕ್ಕಾಗಿ ಕನ್ನಡದೇಶದ ನಾನಾಭಾಗಗಳಿಂದ ಗಣ್ಯಜನ ಬಂದಿದ್ದರು. ಧಾರವಾಡದಿಂದ ರಾಮಚಂದ್ರ ಹಣಮಂತ ದೇಶಪಾಂಡೆ, ಮುದವೀಡು ಕೃಷ್ಣರಾಯರು, ಆಲೂರು ವೆಂಕಟರಾಯರು, (ಕರ್ಣಾಟಕ ಪ್ರಿಂಟಿಂಗ್ ಪ್ರೆಸ್ಸಿನ) ಜಠಾರ್ ಅವರು ಬಂದಿದ್ದರು. ಬಳ್ಳಾರಿಯಿಂದ  ವಕೀಲ ತಿಮ್ಮಕೃಷ್ಣರಾಯರು, ಹೊಸಪೇಟೆಯ ರಾವ್ ಬಹದ್ದೂರ್ ಸಿ. ಹನುಮಂತಗೌಡರು, ಮದರಾಸಿನಿಂದ ಬೆನಗಲ್ ರಾಮರಾಯರು, ಮಂಗಳೂರಿನಿಂದ ಮುಳಿಯ ತಿಮ್ಮಪ್ಪಯ್ಯನವರು, ಮೈಸೂರಿನಿಂದ ಪುಂಗನೂರು ರಾಘವೇಂದ್ರಾಚಾರ್ಯರು – ಮೊದಲಾದ ವಿದ್ವಾಂಸರು ದಯಮಾಡಿಸಿದ್ದರು. ಬೆಂಗಳೂರು ಹೊರಗಿನಿಂದ ಬಂದಿದ್ದವರು ನೂರೈವತ್ತು- ಇನ್ನೂರು ಮಂದಿ ಇರಬಹುದು. ಬೆಂಗಳೂರಿನ ಸ್ಥಳೀಕರು ಮುನ್ನೂರು – ನಾಲ್ಕುನೂರು ಮಂದಿ. ಒಟ್ಟಿನಲ್ಲಿ ಅದು ದೊಡ್ಡ ಸಭೆ. ಬಿ. ಎಂ. ಶ್ರೀಕಂಠಯ್ಯನವರು ಅದರಲ್ಲಿದ್ದ ಹಾಗೆ ನನಗೆ ಜ್ಞಾಪಕವಿಲ್ಲ. ವೆಂಕಣ್ಣಯ್ಯ, ಕೃಷ್ಣಶಾಸ್ತ್ರಿ – ಇವರು ಸಭೆಯಲ್ಲಿ ಎಲ್ಲಿಯೋ ಇದ್ದರಂತೆ. ಅವರಿಗೂ ನನಗೂ ಆಗ ಪರಿಚಯವಾಗಿರಲಿಲ್ಲ. ಅವರಿಬ್ಬರೂ ಆಗ್ಗೆ ಇನ್ನೂ ಅಪ್ರಸಿದ್ಧರು.”

೩–೫–೧೯೧೫  ಮೊದಲನೇ ದಿನದ ಸಮ್ಮೇಳನ

ಅಗ್ರಾಸನಾಧಿಪತಿಗಳನ್ನು ಚುನಾಯಿಸುವುದು ಸಮ್ಮೇಳನದ ಕಾರ್ಯಗಳಲ್ಲಿ ಮೊದಲನೆಯದಾಗಿದ್ದುದರಿಂದ, ಅಲ್ಲಿ ಸೇರಿದ್ದ ಮಹಾಜನಗಳು ಮ||ರಾ|| ರಾಜಮಂತ್ರಪ್ರವೀಣ ಎಚ್. ವಿ. ನಂಜುಂಡಯ್ಯ, ಎಂ.ಎ., ಎಂ.ಎಲ್., ಸಿ. ಐ.ಇ., ಎಂಬುವರನ್ನು ಅಗ್ರಾಸನಾಧಿಪತಿಗಳನ್ನಾಗಿ ಏಕಕಂಠ್ಯದಿಂದ ಚುನಾಯಿಸಿದರು. ಅಗ್ರಾಸನಾಧಿಪತಿಗಳು ಪೀಠವನ್ನಲಂಕರಿಸಿದ ಕೂಡಲೆ ಬೊಂಬಾಯಿಯ ಕರ್ಣಾಟಕ ಸಭೆಯ ಪ್ರತಿನಿಧಿಗಳಾದ ಮ|| ವಿ. ಬಿ. ಧಾರ್ವಾಡಕರ್, ಬಿ. ಎ. ಅವರು ತಾವು ರಚಿಸಿದ್ದ ದೇವತಾಪ್ರಾರ್ಥನಾರೂಪದ ಕೃತಿಯೊಂದನ್ನು ಮಧುರಧ್ವನಿಯಿಂದ ಹಾಡಿದರು. ಶ್ರೀಮನ್ಮಹಾರಾಜರವರೂ ಶ್ರೀಮದ್ಯುವರಾಜರವರೂ ಮೈಸೂರು ಸಂಸ್ಥಾನದ ದಿವಾನ್ ಸಾಹೇಬರವರೂ, ಮ || ಎಂ. ಎ. ಬಾಳರಾಜ ಅರಸಿನವರೂ, ರಾವ್ಬಹದೂರ್ ಫ್ರೊಫೆಸರ್ ಎಸ್. ಮಂಗೇಶರಾಯರವರೂ, ಫ್ರೊಫೆಸರ್ ಎಸ್. ಕೃಷ್ಣಸ್ವಾಮಿ ಅಯ್ಯಂಗಾರ್ಯರವರೂ, ಮದರಾಸಿನ ಡಾಕ್ಟರ್ ಸಿ. ಬಿ. ರಾಮರಾಯರವರೂ ಬರೆದು ಕಳುಹಿಸಿದ್ದ ಪ್ರೋತ್ಸಾಹಕ ಪತ್ರಿಕೆಗಳನ್ನು ರಾವ್ಬಹದ್ದೂರ್ ಎಂ. ಶಾಮರಾಯರವರು ಸಭೆಗೆ ಶ್ರುತಪಡಿಸಿದರು. ಸಭೆಯವರ ಸಂತೋಷಾತಿಶಯದ ಕೋಲಾಹಲದ ಮಧ್ಯದಲ್ಲಿ ಅಗ್ರಾಸನಾಧಿಪತಿಗಳು ಅನೇಕ ನವೀನ ವಿಷಯಗರ್ಭಿತವಾದ ತಮ್ಮ ಪ್ರೌಢೋಪನ್ಯಾಸವನ್ನು ಪಠಿಸಿದರು.

ಉಪನ್ಯಾಸ ಪ್ರವಾಹ

ಅದೇ ಮಧ್ಯಾಹ್ನಾತ್ಪರ ಸುಮಾರು ಎರಡೂವರೆ ಗಂಟೆಯಿಂದ ಆರು ಗಂಟೆಯವರೆಗೂ ಉಪನ್ಯಾಸಗಳು. ಕನ್ನಡ ನಾಡುಗಳ ಹಿರಿಮೆ, ಕನ್ನಡ ಭಾಷೆಯ ಹಿರಿಮೆ, ನಮ್ಮ ಪೂರ್ವಕವಿಗಳು, ನಮ್ಮ ಜನಕ್ಕೆ ಬೇಕಾಗಿರುವಂಥ ಸಾಹಿತ್ಯ, ಪರಿಷತ್ತಿನಿಂದ ದೇಶಕ್ಕೆ ಆಗಬಹುದಾದ ಪ್ರಯೋಜನಗಳು – ಈ ನಾನಾ ವಿಷಯಗಳನ್ನು ಕುರಿತು ವಿದ್ವಾಂಸರುಗಳು ಭಾಷಣ ಮಾಡಿದರು.

ಅಗ್ರಾಸನಾಧಿಪತಿಗಳ ಉಪನ್ಯಾಸವು ಸಾಮಾಜಿಕರಿಗೆ ಆನಂದವನ್ನುಂಟುಮಾಡಿತು. ಅಹೂತರಾಗಿ ಬೊಂಬಾಯಿ ನಗರದಿಂದ ದಯೆಮಾಡಿಸಿದ್ದ ಮ|| ಆರ್. ಎ. ಜಹಗೀರ್ದಾರ್ ಅವರು ಸಮ್ಮೇಳನದ ಪ್ರಥಮೋದ್ದೇಶವನ್ನು ಕುರಿತು ಬರೆದ ತಮ್ಮ ಲೇಖನವನ್ನು ಓದಿದರು. ಬಳಿಕ ದಕ್ಷಿಣ ಕನ್ನಡದ ಪುತ್ತೂರಿನಿಂದ ಆಗಮಿಸಿದ್ದ ಮ|| ಬೈಂದೂರು ಆನಂದರಾಯರು ಕನ್ನಡ ನಾಡುಗಳ ಗ್ರಾಂಥಿಕಭಾಷೆಯ ಏಕರೂಪತೆಯ ಸಾಧನಮಾರ್ಗವನ್ನು ಕುರಿತು ತಾವು ಬರೆದುದನ್ನು ಪಠಿಸಿದರು. ಆ ಮೇಲೆ ಮ|| ಗೋವಿಂದರಾಜಯ್ಯಂಗಾರ್ಯರು ಸಮ್ಮೇಳನದ ಪ್ರಥಮೋದ್ದೇಶವನ್ನು ಕುರಿತು ತಾವು ಬರೆದುದನ್ನೂ, ತದನಂತರದಲ್ಲಿ ಮ|| ಎಂ. ಎಸ್. ಪುಟ್ಟಣ್ಣನವರು ಕರ್ಣಾಟಕ ಭಾಷೆಯ ಪ್ರಾಚೀನ ನವೀನಸ್ಥಿತಿಗಳನ್ನು ಕುರಿತು ತಾವು ಬರೆದ ಲೇಖನವನ್ನೂ ಓದಿದರು. ಆಗ ಮಾಜಿ ಕೌನ್ಸಿಲರ್ ದಿವಾನ್ ಬಹದೂರ್ ರಾಜಸಭಾಭೂಷಣ ಮ|| ಪುಟ್ಟಣ್ಣಶೆಟ್ಟಿಯವರು ಆರು ಗಂಟೆಯಾಗಿ ಸಾಯಂಕಾಲವಾಗುತ್ತಾ ಬಂತೆಂತಲೂ, ಉಳಿದ ಲೇಖನಗಳನ್ನು ಓದಿ ನೋಡುವುದಕ್ಕೂ ಸಮ್ಮೇಳನದ ಮುಂದಿನ ದಿವಸಗಳಲ್ಲಿ ವಿಚಾರ ಮಾಡಬೇಕಾದ ವಿಷಯಗಳನ್ನು ನಿರ್ಧರಿಸುವುದಕ್ಕೂ ವಿಷಯ ನಿರ್ಧಾರಕ ಮಂಡಲಿಯೊಂದನ್ನು ಏರ್ಪಡಿಸುವುದು ಆವಶ್ಯಕವೆಂದು ತಿಳಿಸಿದರು. ಈ ಮಂಡಲಿಯಲ್ಲಿ ಮೈಸೂರಿನವರು ಒಂಬತ್ತು ಮಂದಿ, ಬೊಂಬಾಯಿ ಅಧಿಪತ್ಯದವರು ಆರುಮಂದಿ, ದಕ್ಷಿಣ ಮಹಾರಾಷ್ಟ್ರ ಸಂಸ್ಥಾನಗಳಿಗೆ ಸಂಬಂಧಪಟ್ಟವರು ಇಬ್ಬರು, ಮದರಾಸಾಧಿಪತ್ಯದವರು ಮೂರು ಮಂದಿ, ಆವಶ್ಯಕವಿದ್ದಲ್ಲಿ ಮತ್ತಷ್ಟು ಮಂದಿ ಇರಬಹುದೆಂದು ತೀರ್ಮಾನವಾಯಿತು.

ಇಲ್ಲಿಗೆ ಪ್ರಥಮ ದಿವಸದ ಸಮ್ಮೇಳನವು ಮುಗಿಯಿತು. ಆ ಮೇಲೆ ವಿಷಯ ನಿರ್ಧಾರಕ ಮಂಡಲಿಯವರು ಅದೇ ಹಜಾರದಲ್ಲಿ ಕುಳಿತು ಸಮ್ಮೇಳನದ ಎರಡನೆಯ ದಿನದಲ್ಲಿ ಚರ್ಚಿಸಿ ತೀರ್ಮಾನಿಸಬೇಕಾದ ವಿಷಯಗಳ ಮಸೂದೆಯನ್ನು ಪರ್ಯಾಲೋಚಿಸಿ ನಿರ್ಧರಿಸಿದರು.

ಪ್ರಥಮ ಕನ್ನಡ ಸಮ್ಮೇಳನದಲ್ಲಿ ಇಂಗ್ಲಿಷ್ ಬಳಕೆ

ಮೊದಲ ದಿನ

೧೯೧೫ರಲ್ಲಿ ಇಂಗ್ಲಿಷಿಗೆ ಪ್ರಾಧಾನ್ಯ ಹೇಗಿತ್ತು ಸಾರ್ವಜನಿಕ ಜೀವನದಲ್ಲಿ ಎಂಬುದಕ್ಕೆ ಈ ಸಮ್ಮೇಳನದ ಕೆಲವು ಸಂಗತಿಗಳು ಸಾಕ್ಷಿಯಾಗಿವೆ.

ಮೊದಲ ಸಂಗತಿ ಎಂದರೆ ಸಮ್ಮೇಳನದ ಆಹ್ವಾನ ಪತ್ರಿಕೆ ಇಂಗ್ಲಿಷಿನಲ್ಲಿತ್ತು. ಈ ಬಗ್ಗೆ ಮೈಸೂರು ಸ್ಟಾರ್ ಪತ್ರಿಕೆ ೨-೫-೧೯೧೫ ಭಾನುವಾರ ಪುಟ ೫ರಲ್ಲಿ ಪ್ರಕಟವಾದ ವಾಚಕರ ಪತ್ರದಲ್ಲಿ ಈ ಸಂಗತಿಯನ್ನು ತಿಳಿಸಿ ಟೀಕಿಸಿದ್ದಾರೆ.

ಬೆಂಗಳೂರಿನಲ್ಲಿ ಸೇರುವ ಕನ್ನಡಿಗರ ಸಮ್ಮೇಳನಕ್ಕೆ ಸಂಬಂಧಪಟ್ಟ ಆಹ್ವಾನಪತ್ರಿಕೆ ಮೊದಲಾದವುಗಳು ಇಂಗ್ಲಿಷಿನಲ್ಲಿ ಅಚ್ಚುಮಾಡಿಸಿ ಕಳುಹಿಸಲ್ಪಟ್ಟಿವೆ. ಆಹ್ವಾನ ಮಾಡಲ್ಪಟ್ಟವರಲ್ಲಿ ಬರಿಯ ಕನ್ನಡವನ್ನು ಬಲ್ಲವರು ಅದನ್ನು ಓದಿಸಿಕೊಳ್ಳುವುದಕ್ಕಾಗಿ ಇಂಗ್ಲಿಷ್ ಪ್ಯಾಸ್ ಮಾಡಿದವರಲ್ಲಿಗೆ ಹೋಗಬೇಕಾಯಿತು. ಸಮ್ಮೇಳನವನ್ನು ಕೂಡಿಸುವವರು ಕನ್ನಡಿಗರು, ಅಲ್ಲಿ ಸೇರುವವರು ಕನ್ನಡಿಗರು, ಅಲ್ಲಿ ಪಡೆದ ಲಾಭವು ಕನ್ನಡದ ಏಳ್ಗೆಯಾಗಿರುವಾಗ ಇಂಗ್ಲಿಷಿನ ಮಧ್ಯಸ್ತಿಕೆ ಯಾತಕ್ಕೆ? ಇದು ಪ್ರಥಮ ಕಬಳದಲ್ಲೇ ಮಕ್ಷಿಕಾಪಾತವಾದಂತಲ್ಲವೆ? ಇದು ಸ್ವಭಾಷಾಭಿಮಾನದ ಲಕ್ಷಣವೆ? ಇಂಥ ಪರಭಾಷಾ ಪ್ರೇಮದಿಂದಲೇ ಅಲ್ಲವೆ ನಮ್ಮ ಸ್ವಭಾಷಾಮಾತೆಯು ಮೂಲೆಮುಟ್ಟಾಗಿರುವುದು? ಆ ಹೀನಸ್ಥಿತಿಯನ್ನು ನಿವಾರಣೆ ಮಾಡುವ ಪ್ರಯತ್ನದಲ್ಲೂ ಇಂಥ ನಡೆಯಾದರೆ ಮುಂದಣ ಸಭೆಯ ಕೆಲಸವೂ, ಅದರ ಚರಿತಾರ್ಥವೂ, ಎಷ್ಟುಮಟ್ಟಿಗೆ ನಮ್ಮ ಭಾಷೆಗೆ ಹಿತವನ್ನು ಮಾಡುವುದೋ ನೋಡಬೇಕು ಎಂದು ನಮ್ಮ ಪತ್ರವ್ಯವಹಾರಕರೊಬ್ಬರು ಬರೆದಿರುತ್ತಾರೆ.

ಇಂಗ್ಲಿಷಿನಲ್ಲಿ ಪ್ರಾರಂಭೋಪನ್ಯಾಸ

ಸಮ್ಮೇಳನದ ಅಧ್ಯಕ್ಷರಾದ ಹೆಚ್. ವಿ. ನಂಜುಂಡಯ್ಯನವರ ಭಾಷಣವೂ ಇಂಗ್ಲಿಷ್ನಲ್ಲಿದ್ದು ಆ ಬಗ್ಗೆ ಡಿವಿಜಿ ಅವರು ಈ ರೀತಿ ಬರೆದಿದ್ದಾರೆ.

ಹೆಚ್.ವಿ. ನಂಜುಂಡಯ್ಯನವರು ಅಧ್ಯಕ್ಷರಾಗಿ ಪ್ರಾರಂಭೋಪನ್ಯಾಸ ಮಾಡಿದರು. ಆದರೆ ಇಂಗ್ಲಿಷಿನಲ್ಲಿ! ವೇದಿಕೆಯ ಎದುರುಗಡೆ ಮೊದಲನೆಯ ಸಾಲಿನ ನಾಲ್ಕೈದು ಪೀಠಗಳ ಪೈಕಿ ಒಂದರಲ್ಲಿ ಬೆಳ್ಳಾವೆ ವೆಂಕಟನಾರಣಪ್ಪನವರು ಕುಳಿತಿದ್ದರು. ನಾನು ಅವರ ಪಕ್ಕದಲ್ಲಿದ್ದೆ. ನಂಜುಂಡಯ್ಯನವರು ಇಂಗ್ಲಿಷಿನಲ್ಲಿ ತಮ್ಮ ಮೊದಲ ಮಾತುಗಳನ್ನು ನುಡಿಯುತ್ತಿದ್ದಂತೆಯೇ ವೆಂಕಟನಾರಣಪ್ಪನವರು ಮೆಲ್ಲನೆಯ ಧ್ವನಿಯಲ್ಲಿ-

“Nonsense. ಇದು ಶುದ್ಧ Nonsense ಅಷ್ಟೆ” – ಎಂದರು. ನಂಜುಂಡಯ್ಯನವರಿಗೆ ಅದು ಕೇಳಿಸಿರಬೇಕು. ಅವರ ಎಡಮೀಸೆ ಹಾರಿತು. ಅವರನ್ನು ಬಲ್ಲವರಿಗೆ ಅದು ನಗುವಿನ ಲಾಂಛನವೆಂಬುದು ಗೊತ್ತಿತ್ತು. ನಂಜುಂಡಯ್ಯನವರು ವೆಂಕಟನಾರಣಪ್ಪನವರ ಟೀಕೆಯನ್ನು ಕೇಳಲಿಲ್ಲವೋ ಏನೋ ಎಂಬಂತೆ ಉಪನ್ಯಾಸ ಮುಗಿಸಿ ಸಭೆ ಪುನಃ ಅದೇ ಜಾಗದಲ್ಲಿ ಆ ಮಧ್ಯಾಹ್ನ ಎರಡೂವರೆ ಗಂಟೆಗೆ ಸೇರತಕ್ಕದ್ದೆಂದು ತೀರ್ಮಾನ ಹೇಳಿ, ವೇದಿಕೆಯಿಂದ ಇಳಿದು ಬಂದು ವೆಂಕಟನಾರಣಪ್ಪನವರ ಹತ್ತಿರ ನಿಂತು, “ಅದಕ್ಕೇನು ಕನ್ನಡದಲ್ಲಿ ಮಾತಿಲ್ಲವೋ?” – ಎಂದು ಕೇಳಿದರು.

ವೆಂಕಟನಾರಣಪ್ಪನವರು ನಕ್ಕರು. ನನ್ನ ಕಡೆ ತಿರುಗಿ “ಏನಪ್ಪಾ Nonsense ಅಂಬೋದಕ್ಕೆ ಕನ್ನಡದಲ್ಲಿ ಏನು?” ಎಂದು ಕೇಳಿದರು. ನಾನು “ನಾನ್ಸೆನ್ಸೇ” ಎಂದೆ. ಆ ಕ್ಷಣ ನನಗೆ ಬೇರೆ ಏನೂ ಹೊಳೆಯಲಿಲ್ಲ. ಆಮೇಲೆ ನಂಜುಂಡಯ್ಯನವರು ಒಂದು ಸಣ್ಣ ವಿವರಣೆ ಕೊಟ್ಟರು:

“ನಾವು ಈಗ ಮಾಡುತ್ತಿರುವ ಪ್ರಯತ್ನ ಕನ್ನಡ ತಿಳಿಯದ ಜನರಿಗೂ ತಿಳಿಯಬೇಕಾದದ್ದು. ನಮ್ಮ ಪರಿಷತ್ತಿಗೆ ಹಣ ಕೊಡಬೇಕಾದ ಸರಕಾರಕ್ಕೂ ತಿಳಿಯಬೇಕು; ಸರಕಾರದ ಮೇಲೆ ಉಸ್ತುವಾರಿ ನಡೆಸುವ ಬ್ರಿಟಿಷ್ ರೆಸಿಡೆಂಟರಿಗೂ ತಿಳಿಯಬೇಕು. ಅವರಿಗೆಲ್ಲ ತಿಳಿದರೆ ನಮಗೇನೂ ನಷ್ಟವಾಗದು; ಕೊಂಚ ಪ್ರಯೋಜನವೂ ಇರಬಹುದು ಅಲ್ಲವೇ?”

ಎರಡನೆಯ ದಿವಸದ ಸಮ್ಮೇಳನದಲ್ಲಿ ನಡೆದ ಕೆಲಸ (೪–೫–೧೯೧೫)

ಇದೇ ಹೈಸ್ಕೂಲಿನ ಹಜಾರದಲ್ಲಿ ಸಮ್ಮೇಳನವು ಅಪರಾಹ್ನ ೩ ಗಂಟೆಗೆ ಸರಿಯಾಗಿ ಸೇರಿತು. ಸಭೆಯ ಪ್ರಾರ್ಥನಾನುಸಾರವಾಗಿ ದಿವಾನ್ ಬಹದೂರ್ ರಾಜಸಭಾಭೂಷಣ ಮ|| ಕೆ. ಪಿ. ಪುಟ್ಟಣ್ಣ ಶೆಟ್ಟಿಯವರು ಅಗ್ರಾಸನವನ್ನು ಅಲಂಕರಿಸಿದರು. ಮುಂದೆ ವಿವರಿಸಲ್ಪಡುವ ಸಲಹೆಗಳು ಚರ್ಚಿತವಾಗಿ ತೀರ್ಮಾನಿಸಲ್ಪಟ್ಟುವು:

೧. ಕರ್ಣಾಟಕ ಭಾಷಾ ಸಂಸ್ಕರಣಕ್ಕಾಗಿಯೂ ಕರ್ಣಾಟಕ ಗ್ರಂಥಾವಳಿಯ ಅಭಿವೃದ್ಧಿಗಾಗಿಯೂ ಬೆಂಗಳೂರಲ್ಲಿ ಕರ್ಣಾಟಕ ಸಾಹಿತ್ಯ ಪರಿಷತ್ತು ಎಂಬ ಹೆಸರಿನೊಡನೆ ಪ್ರಧಾನಸಭೆಯೊಂದು ಸ್ಥಾಪಿತವಾಗಬೇಕು.

೨. ಬೊಂಬಾಯಿ, ಮದರಾಸು, ಹೈದರಾಬಾದು ಮತ್ತು ಕೊಡಗು ಪ್ರಾಂತ್ಯಗಳಲ್ಲಿ ಕರ್ಣಾಟಕ ಸಾಹಿತ್ಯ ಪರಿಷತ್ತಿಗೆ ಶಾಖೆಗಳಿರಬೇಕು; ಮತ್ತು ಈ ಪರಿಷತ್ತಿನ ಉದ್ದೇಶಗಳನ್ನೇ ಇಟ್ಟುಕೊಂಡು ಕೆಲಸಮಾಡುವ ಇತರ ಸಂಘಗಳನ್ನು ತನ್ನ ಜತೆಗೆ ಸೇರಿಸಿಕೊಳ್ಳುವುದಕ್ಕೆ ಕರ್ಣಾಟಕ ಸಾಹಿತ್ಯ ಪರಿಷತ್ತಿಗೆ ಅಧಿಕಾರವಿರಬೇಕು.

ನಿಬಂಧನೆಗಳ ರಚನೆ

ಅಂದಿನ ಬೆಳಗ್ಗೆ ಸಂಸ್ಥೆಯ ನಿಯಮಾವಳಿಯನ್ನು ತಯಾರು ಮಾಡುವುದಕ್ಕಾಗಿ ನೇಮಕವಾಗಿದ್ದ ಉಪಸಮಿತಿ ತನ್ನ ನಿಯಮಗಳ ಕರಡುಪ್ರತಿಯನ್ನು ಒಪ್ಪಿಸಿತು. ಆ ಉಪಸಮಿತಿಯಲ್ಲಿದ್ದವರು ಕರ್ಪೂರ ಶ್ರೀನಿವಾಸರಾಯರು. ಡಾ|| ಪಿ. ಎಸ್. ಅಚ್ಯುತರಾಯರು, ಪುಟ್ಟಣ್ಣನವರು, ಬಾಪು ಸುಬ್ಬರಾಯರು, ಆರ್. ರಘುನಾಥರಾಯರು, ಟಿ. ಲಕ್ಷ್ಮೀನರಸಿಂಹರಾಯರು ಮತ್ತು  ಡಿ. ವಿ. ಗುಂಡಪ್ಪನವರು.

ಇಲ್ಲಿಗೆ ಎರಡನೆಯ ದಿನದ ಸಭೆಯು ಭರಕಾಸ್ತಾಯಿತು. ಬಳಿಕ ವಿಷಯ ನಿರ್ಧಾರಕ ಮಂಡಲಿಯವರು ಮೂರನೆಯ ದಿನ ಸಲಹೆಗಳನ್ನು ಕ್ರಮಪಡಿಸುವುದಕ್ಕೆ ಸಭೆಸೇರಿದರು.

ಮೂರನೆಯ ದಿನದ ಕೆಲಸ (೫–೫–೧೯೧೫)

ಅದೇ ಹಜಾರದಲ್ಲಿ ಮೂರನೆಯ ದಿವಸವೂ ಸಮ್ಮೇಳನವು ಅಪರಾಹ್ನ ೩ ಗಂಟೆಗೆ ಸರಿಯಾಗಿ  ಸೇರಿತು. ಮ|| ಕರ್ಪೂರ ಶ್ರೀನಿವಾಸರಾಯರು ಅಗ್ರಾಸನವನ್ನು ಅಲಂಕರಿಸಬೇಕೆಂದು ಡಾಕ್ಟರು ಅಚ್ಯುತರಾಯರವರು ಸಭೆಗೆ ಬಿನ್ನವಿಸಲು ಸಭೆಯವರೆಲ್ಲರೂ ಹರ್ಷಾತಿಶಯದ ಕಲಕಲದೊಡನೆ ಒಪ್ಪಿದರು.

ಆ ದಿವಸದಲ್ಲಿ ಪರಿಷತ್ತಿನ ರಚನಾಕ್ರಮವೂ, ನಿಬಂಧನೆಗಳೂ ಜಿಜ್ಞಾಸಾಪೂರ್ವಕವಾಗಿ ತೀರ್ಮಾನಿಸಲ್ಪಟ್ಟವು.

ಮೂರನೆಯ ದಿನ ಕರಡು ನಿಯಮಾವಳಿಯು ಸಭೆಯ ಪರ್ಯಾಲೋಚನೆಗೆ ಬಂದಿತು. ಅದರ ಮೇಲೂ ಪಂಡಿತ ಭಾಷಣಗಳು. ದಾತೃಗಳು, ಪ್ರದಾತೃಗಳು, ಮಹಾಪ್ರದಾತೃಗಳ ಆಶ್ರಯದಾತರು, ಆಶ್ರಯಕರ್ತರು, ಪೋಷಕರು, ಪರಿಪೋಷಕರು – ಇಂಥ ಮಾತುಗಳೆಲ್ಲ ಚರ್ಚೆ. ಒಬ್ಬರು ಶಬ್ದಮಣಿದರ್ಪಣವನ್ನು ಹೇಳಿದರೆ ಇನ್ನೊಬ್ಬರು ಶಾಸನಪ್ರಯೋಗವನ್ನು ಹೇಳಿದರು….. ಹೀಗೆ ಬೆಳೆಯಿತು ವಿಚಾರಸರಣಿ.

ನಂಜಂಡಯ್ಯನವರು ಬಹುಮಟ್ಟಿಗೆ ನಗುತ್ತ, ಒಂದೊಂದು ಸಾರಿ ಕಟು ಟೀಕೆ ಮಾಡುತ್ತ, ಹಾಗೂ ಈ ಕೆಲಸವನ್ನು ಮೂರನೆಯ ದಿನ ಸಂಜೆ ನಾಲ್ಕು ಗಂಟೆಗೆ ಮುಗಿಸಿದರು.

ಪರಿಷತ್ತಿನ ಸ್ಥಾಪನಕಾರ್ಯದಲ್ಲಿ ಮೊದಲಿನಿಂದ ಕಡೆಯವರೆಗೂ ಶ್ರಮಿಸಿದವರು ಸೆಕ್ರೆಟರಿ ಬಿ. ಕೃಷ್ಣಪ್ಪ, ಎಂ. ಎ., ಅವರು. ಅವರ ಪಾಂಡಿತ್ಯ ಎಷ್ಟು ದೊಡ್ಡದೋ ಅವರ ತಾಳ್ಮೆಯೂ ಕಾರ್ಯದಕ್ಷತೆಯೂ ಅಷ್ಟು ಪ್ರಶಂಸನೀಯವಾದವು. ಆ ಮಹನೀಯರು ಮೈಸೂರು ವಿಶ್ವವಿದ್ಯಾನಿಲಯದ ಮೊದಲನೆಯ ಕನ್ನಡ ಪ್ರೊಫೆಸರಾಗಿದ್ದರು.

ಇದು ವಿಷಯ. ಮೊದಲು ಕರ್ನಾಟಕವೆ, ಕರ್ಣಾಕಟವೆ, ಕನ್ನಡವೆ? ಅಥವಾ ಕರಿನಾಡೆ? ಮೂರನೆಯದಾಗಿ ಕರ್ಣಾಟವೆ, ಕರ್ಣಾಟಕವೇ? ಅಥವಾ ಕಾರ್ಣಾಟಕೀ ಎಂದೆ? ನಾಲ್ಕನೆಯದಾಗಿ ಪರಿಷತ್ತೆ, ಸಂಸತ್ತೆ ಅಥವಾ ಪರಿಷದವೆ, ಅಥವಾ ಸಂಸದವೆ, ಅಥವಾ ಸಭಾ ಎನ್ನತಕ್ಕದ್ದೆ? ಸಭೆ ಸೇರಿದಾಗ ಅಧ್ಯಕ್ಷ ನಂಜುಂಡಯ್ಯನವರು ಹೀಗೆ ಹೇಳಿದರು:

“ಈಗ ಎರಡು ದಿನವೆಲ್ಲ ಹೆಸರನ್ನು ಚರ್ಚಿಸುವುದಕ್ಕಾಗಿ ಕಳೆದೆವಲ್ಲ. ಈಗಲಾದರೂ ಕೆಲಸಕ್ಕೆ  ಉಪಕ್ರಮ ಮಾಡೋಣ. ನಿಮ್ಮಲ್ಲಿ ರಘುನಾಥರಾಯರೋ ರಾಘವೇಂದ್ರಾಚಾರ್ಯರೋ ಇನ್ನು ಯಾರಾದರೂ ಒಂದು ಹೆಸರನ್ನು ಸೂಚಿಸೋಣವಾಗಲಿ, ಅದನ್ನು ಸಭೆಯ ವೋಟಿಗೆ ಹಾಕುತ್ತೇನೆ. ಭಾಷಣಗಳು ಸಾಕು. ಆ ಸೂಚನೆ ಅಂಗೀಕಾರವಾಗದೆ ಹೋದರೆ ಆಮೇಲೆ ಇನ್ನೊಂದು ಸೂಚನೆ. ಅನಂತರ ಮತ್ತೊಂದು – ಕ್ರಮವನ್ನನುಸರಿಸೋಣ.”

ಸಭೆಯಲ್ಲಿ ಯಾರೋ ಒಬ್ಬರು “ಇನ್ನೂ ಮಾತನಾಡುವವರಿದ್ದಾರೆ, ಸ್ವಾಮಿ” ಎಂದರು. ನಂಜುಂಡಯ್ಯನವರು “ಹೌದು ಹೌದು. ನಾವೆಲ್ಲ ಅದೇ. ಊರು ತುಂಬ ಮಾತನಾಡುವವರೇ. ಆದರೆ ಕೆಲಸವೂ ನಡೆಯಬೇಕಲ್ಲ?” ಎಂದರು. ಕೆಲಸಕ್ಕೆ ಉಪಕ್ರಮ ಮಾಡಿಸಿದರು.

ನಾಲ್ಕನೆಯ ದಿನ ೬–೫–೧೯೧೫

೪ನೇ ದಿನ ಮಧ್ಯಾಹ್ನ ಎರಡೂವರೆ ಗಂಟೆಗೆ ಪ್ರಾರಂಭವಾಯಿತು. ಕರ್ಪೂರ ಶ್ರೀನಿವಾಸರಾಯರು ಅಗ್ರಾಸನಾಧಿಪತಿಗಳಾಗಿದ್ದರು. ನಾಲ್ಕನೇ ದಿನದ ಸಭೆಯಲ್ಲಿ ನಿರ್ಣಯಗಳು ಮಂಡಿಸಲ್ಪಟ್ಟು ಅಂಗೀಕಾರವಾಯಿತು. ಪರಿಷತ್ತಿನ ಕಾರ್ಯಕಾರಿ ದಿನವಿಡೀ ರೂಪುಗೊಂಡಿತು.

ಕನ್ನಡಭಾಷೆಯನ್ನಾಡತಕ್ಕ ಪ್ರದೇಶಗಳಲ್ಲಿಯ ಬಾಲ್ಯವಿದ್ಯಾಭ್ಯಾಸವು ಕನ್ನಡದಲ್ಲೇ ಜರುಗುವಂತೆ ಮಾಡಲು  ಪ್ರಾರ್ಥಿಸಬೇಕು; ಇದೇ ವಿಚಾರದಲ್ಲಿ ಮದ್ರಾಸು ಮತ್ತೂ ಬೊಂಬಾಯಿ ಸರ್ವಕಲಾಶಾಲೆಯವರನ್ನು ಪ್ರಾರ್ಥಿಸಬೇಕಲ್ಲದೆ, ಮದ್ರಾಸು, ಬೊಂಬಾಯಿ, ಹೈದರಾಬಾದು, ದಕ್ಷಿಣ ಮಹಾರಾಷ್ಟ್ರ, ದೇಶೀಯ ಸಂಸ್ಥಾನಗಳು ಇವುಗಳ ಕೋರ್ಟುಭಾಷೆಯೂ ಕನ್ನಡವಾಗಿರುವಂತೆ ಆಯಾ ಸರ್ಕಾರದವರನ್ನೂ, ಕನ್ನಡವಿದ್ಯಾಭ್ಯಾಸವನ್ನು ಪ್ರೋತ್ಸಾಹಿಸುವಂತೆ ಇಂಡ್ಯಾ ಸರ್ಕಾರದವರನ್ನೂ ಪ್ರಾರ್ಥಿಸಿಕೊಳ್ಳಬೇಕೆಂದು ಅಧ್ಯಕ್ಷರು ಸೂಚಿಸಿದ ಮೇಲೆ ಕೆಲ ಮಂಗಳಪದ್ಯಗಳು ಹೇಳಲ್ಪಟ್ಟು ಸಮ್ಮೇಳನಕಾರ್ಯವು ಪರಿಸಮಾಪ್ತಿಗೊಳಿಸಲ್ಪಟ್ಟಿತು.

ಕೃಪೆ: ಕನ್ನಡ ಸಾಹಿತ್ಯ ಪರಿಷತ್ತು.

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ