ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಬೇಂದ್ರೆ ಕೃಷ್ಣಪ್ಪ


ಬೇಂದ್ರೆ ಕೃಷ್ಣಪ್ಪ ನಮನ

ಬೇಂದ್ರೆ ಕೃಷ್ಣಪ್ಪ ಎಂದೇ ಪ್ರಖ್ಯಾತರಾಗಿ ಅಸಾಮಾನ್ಯ ಸಾಹಿತ್ಯ ಪರಿಚಾರಿಕೆಗೆ ಹೆಸರಾದ  ನಾಡೋಜ ಜಿ. ಕೃಷ್ಣಪ್ಪ ಅವರು ಇಂದು ನಿಧನರಾಗಿದ್ದಾರೆ.

ಜಿ. ಕೃಷ್ಣಪ್ಪ ಅವರು 1948ರ ಅಕ್ಟೋಬರ್ 20ರಂದು ಬೆಂಗಳೂರಿನಲ್ಲಿ ಜನಿಸಿದರು. ತಂದೆ ಹೆಚ್.ಗಂಗಯ್ಯ.  ತಾಯಿ ಸಾವಿತ್ರಮ್ಮ. 

ಕೃಷ್ಣಪ್ಪ  ಅವರು ಬೆಂಗಳೂರಿನ ಎಸ್.ಟಿ. ಪಾಲಿಟೆಕ್ನಿಕ್‌ನಲ್ಲಿ ಡಿಪ್ಲೋಮಾ ಗಳಿಸಿ, ರಾಜ್ಯ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ವಾಹನ ನಿರೀಕ್ಷಕರಾಗಿ ವೃತ್ತಿಯಾರಂಭಿಸಿ, ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಾಗಿ ನಿವೃತ್ತರಾದರು. ಉದ್ಯೋಗದ ನಡುವೆ ಬಿ.ಎ, ಎಲ್‌ಎಲ್‌ಬಿ ಮತ್ತು ಕನ್ನಡದಲ್ಲಿ ಸ್ನಾತಕೋತ್ತರ ಪದವಿಗಳನ್ನು ಗಳಿಸಿದರು. "ಬೇಂದ್ರೆ ಸಾಹಿತ್ಯದಲ್ಲಿ ಸ್ತ್ರೀ- ಒಂದು ಅಧ್ಯಯನ" ಇವರ ಸಂಶೋಧನಾ ಕೃತಿಯಾಯಿತು. 

ಕೃಷ್ಣಪ್ಪನವರ ಸಾಹಿತ್ಯ ಸೇವೆ ಬಹುಮುಖಿಯಾದುದು.   ಹಳಗನ್ನಡ  ಸಾಹಿತ್ಯವನ್ನು ಆಳವಾಗಿ ಅಧ್ಯಯನ ಮಾಡಿ 

ವಚನ ಜೈಮಿನಿ ಭಾರತ, ವಚನ ಗಿರಿಜಾ ಕಲ್ಯಾಣ ಅಂತಹ ಕೃತಿಗಳನ್ನು ಅರ್ಥವ್ಯಾಖ್ಯಾನ ರೂಪದಲ್ಲಿ ಸಾಮಾನ್ಯ ಜನತೆಯ ಗ್ರಹಿಕೆಗೆ ಲಭ್ಯವಾಗುವಂತೆ ಮಾಡಿದರು. ಕೃಷ್ಣಪ್ಪನವರು ದ.‍ರಾ. ಬೇಂದ್ರೆ ಮತ್ತು ಕುವೆಂಪು ಅವರ  ಸಾಹಿತ್ಯದ ಮೇಲೆ ಬೆಳಕು ಚೆಲ್ಲುವಂತಹ ಹಾಡುಹಕ್ಕಿ ಅಂಬಿಕಾತನಯ ದತ್ತ,  ಡಿ.ಆರ್ ಬೇಂದ್ರೆ, ನಾಕುತಂತಿ-ಒಂದು ಟಿಪ್ಪಣಿ,  ಹೂತದ ಹುಣಸಿ, ಬರೆಹದಲ್ಲಿ ಬೇಂದ್ರೆಯವರ ಬದುಕು,  ಅಂತರಂಗದತ್ತ ನಯನ,  ತಿರುತಿರುಗಿ ಹೊಸತಾಗಿರೆ, ಬೇಂದ್ರೆಯವರ ಸಾಹಿತ್ಯದಲ್ಲಿ ಶರಣ ಚಿಂತನೆ, ಬೇಂದ್ರೆ ಕಾವ್ಯ ಪದನಿರುಕ್ತ- ಪದ ವಿವರಣ ವಿಶ್ವಕೋಶ,  ಹಸಿರು ಹಚ್ಚಿ ಚುಚ್ಚಿ, ಕುವೆಂಪು ಹನುಮದ್ದರ್ಶನ, ಶ್ರೀರಾಮಾಯಣ ದರ್ಶನಂ ಪಾತ್ರಗಳ ಕಥಾವಳಿ ಮುಂತಾದ ವಿಮರ್ಶಾ ಕೃತಿಗಳನ್ನು ರಚಿಸಿದರು. ಬೇಂದ್ರೆ ಪದ ನಿರುಕ್ತ,  ಕುವೆಂಪು ಶ್ರೀ ರಾಮಾಯಣ ದರ್ಶನಂ ವಚನ ದೀಪಿಕೆ,  ಕನ್ನಡ ಮೇಘದೂತ ಒಂದು ಸಹಪಯಣ(ಟಿ.ಎನ್. ವಾಸುದೇವಮೂರ್ತಿ ಅವರೊಂದಿಗೆ) ಮುಂತಾದ ಅಧ್ಯಹನಶೀಲ ಕೃತಿಗಳನ್ನು ಪ್ರಕಟಿಸಿದರು. ರಸ್ತೆ ನಿಯಮಗಳು ಕೃತಿಯನ್ನು ಕೂಡ ಮೂಡಿಸಿದರು. 

ಕೃಷ್ಣಪ್ಪ ಅವರು 1988 ರಿಂದ ನಾಡಿನಾದ್ಯಂತ ಶಾಲಾ ಕಾಲೇಜುಗಳಲ್ಲಿ 'ದ.ರಾ ಬೇಂದ್ರೆ ಕವನ ಗಾಯನ ಸ್ಪರ್ಧೆ’ ಏರ್ಪಡಿಸಿ ದ.ರಾ ಬೇಂದ್ರೆ ಅವರ ಕೃತಿಗಳನ್ನು ಬಹುಮಾನ ರೂಪದಲ್ಲಿ ನೀಡಲಾರಂಭಿಸಿದರು. 2007ರಲ್ಲಿ ಬೆಂಗಳೂರಿನಲ್ಲಿ 'ದ.ರಾ ಬೇಂದ್ರೆ ಕಾವ್ಯ ಕೂಟ' ಸ್ಥಾಪನೆ ಮಾಡಿ ಅದರ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದರು. ಪ್ರತಿವರ್ಷ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಬೇಂದ್ರೆ ಕಾವ್ಯ ಕುರಿತು ರಾಜ್ಯ ಮಟ್ಟದ ವಿಮರ್ಶಾ ಸ್ಪರ್ಧೆ ನಡೆಸಿ ಬಹುಮಾನ ನೀಡತೊಡಗಿದರು. 

ಜಿ.  ಕೃಷ್ಣಪ್ಪ ಅವರಿಗೆ ಕನ್ನಡ ಪುಸ್ತಕ ಪ್ರಾಧಿಕಾರವು 2011 ರ ಡಾ.ಜಿ.ಪಿ ರಾಜರತ್ನಂ ಸಾಹಿತ್ಯ ಪರಿಚಾರಕ ಪ್ರಶಸ್ತಿ ನೀಡಿತು.  ದ.ರಾ ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಧಾರವಾಡವು 2014 ರ ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಿತು.  2014ರಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕೆಂಪೇಗೌಡ ಪ್ರಶಸ್ತಿ ನೀಡಿತು.  2018 ನೆಯ ವರ್ಷದ ಸಾಹಿತ್ಯಶ್ರೀ ಪ್ರಶಸ್ತಿ ಸಂದಿತು. ಕನ್ನಡ ವಿಶ್ವವಿದ್ಯಾಲಯವು 2022  ವರ್ಷ ನಾಡೋಜ ಗೌರವ ಪದವಿಯನ್ನು ನೀಡಿತು.

ಅಗಲಿದ ಮಹಾನ್ ಸಾಹಿತ್ಯ ಪರಿಚಾರಕರಾದ ಬೇಂದ್ರೆ ಕೃಷ್ಣಪ್ಪ ಅವರ ಚೇತನಕ್ಕೆ ಭಕ್ತಿಯ ನಮನ.

Respects to departed soul Dr. Bendre Krishnappa 🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ