ಅಂಬುಜಮ್ಮ
ಇದೇ 26ರ ಜನವರಿಗೆ ನೂರ ಐದು ವರ್ಷಗಳನ್ನು ಪೂರೈಸಿ , ಪ್ರೀತಿಯ ಬಂಧು ಬಾಂಧವರೊಂದಿಗೆ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಅಂಬುಜಮ್ಮನವರು 1920ರಲ್ಲಿ ಕೊಳ್ಳೇಗಾಲದ ಶ್ರೀ ಲಕ್ಷ್ಮೀನರಸಿಂಹ ಐಯ್ಯಂಗಾರ್ ಹಾಗೂ ಶ್ರೀಮತಿ ರಂಗನಾಯಕಮ್ಮನವರ ಎಂಟು ಮಕ್ಕಳ ತುಂಬಿದ ಕುಟುಂಬದಲ್ಲಿ ಜನಿಸಿದರು. ಮಧ್ಯಮ ವರ್ಗದ ಸಂಪ್ರದಾಯಸ್ಥ ಕುಟುಂಬದ ಧಾರ್ಮಿಕ ವಾತಾವರಣದಲ್ಲಿ ಬೆಳೆದರು. ಬಾಲ್ಯದಲ್ಲಿಯೇ ತಂದೆಯ ವಾತ್ಸಲ್ಯದಿಂದ ವಂಚಿತರಾದರೂ ಸೋದರರ ಆಸ್ಥೆಯಿಂದ ಪ್ರಾಥಮಿಕ ವಿದ್ಯಾಭ್ಯಾಸವನ್ನು ಪಡೆದರು. ಮನೆಯಲ್ಲಿ ಪ್ರತಿದಿನ ಭಜನೆ. ಶನಿವಾರಗಳಂದು ರಾಮ ಕಥಾ ಪಾರಾಯಣ. ಏಕಾದಶಿ ಉಪವಾಸ, ತಾವೇ ರಚಿಸಿರುವ ಶ್ರೀನಿವಾಸ ಕಲ್ಯಾಣದ ಪಠಣೆ. ಅಂಬುಜಮ್ಮನವರಿಗೆ ಇವರ ದೈವ ಶ್ರದ್ಧೆ, ಭಗವದ್ಭಕ್ತಿಗಳನ್ನು ಆದರಿಸುವ, ಹೈದರಾಬಾದಿನ ಹೈಕೋರ್ಟಿನಲ್ಲಿ ಕೆಲಸ ಮಾಡುತ್ತಿದ್ದ ಶ್ರೀ ಗೋಪಾಲ್ ಅವರೊಂದಿಗೆ ವಿವಾಹ. 1956ರ ಸ್ಟೇಟ್ ರೀಆರ್ಗನೈಸೇಷನ್ ಸಂದರ್ಭದಲ್ಲಿ ಬೆಂಗಳೂರಿಗೆ ಆಗಮನ. ವಿಜಯನಗರದಲ್ಲಿ ಮನೆ ಕಟ್ಟಿ ಅಲ್ಲೇ ವಾಸ, ಸಾಲಾಗಿ ಐದು ಮಕ್ಕಳು.
ಅಂಬುಜಮ್ಮನವರ ಆಸಕ್ತಿಗೆ ಇಂಬುಗೊಡುವಂತೆ ಅವರ ಮನೆಯ ಮುಂದೆ ಪಾಳು ಬಿದ್ದ ಆಂಜನೇಯನ ದೇವಾಲಯ. ದೈವೀ ಭಕ್ತೆ ಅಂಬುಜಮ್ಮನವರಿಗೆ ಇದು ವರ. ದಿನಾ ಗುಡಿಯನ್ನು ಸ್ವಚ್ಛಗೊಳಿಸಿ, ಚಂದದ ಹಸೆಗಳನ್ನಿಟ್ಟು, ಪೂಜಿಸಿ, ಮನೆಯಿಂದ ಸ್ವತಃ ತಾವೇ ಕೈಯ್ಯಾರೆ ನೈವೇದ್ಯ ತಯಾರಿಸಿ ಎಲ್ಲರಿಗೂ ಹಂಚುತ್ತಿದ್ದರು. ಬರುವ ಭಕ್ತರಿಗೆ ಪ್ರಸಾದ ನೀಡುವುದಲ್ಲದೆ ಹಸಿದ ಅನಾಥ ಮಕ್ಕಳಿಗೆ ಪ್ರಸಾದ ವಿತರಣೆ. ಸಂಜೆಗಳಲ್ಲಿ ಗುಡಿಯ ಜಗಲಿಯ ಮೇಲೆ ಭಜನೆ . ತಮ್ಮ ಐದು ಮಕ್ಕಳೊಡನೆ ಈ ಮಕ್ಕಳಿಗೂ ಅಕ್ಷರ ದಾನ. ಬರೀ ಭಗವದ್ಭಕ್ತಿಗೇ ನಿಲ್ಲದ ಇವರ ಆಸಕ್ತಿ, ಬಡಮಕ್ಕಳ ವಿದ್ಯಾದಾನದ ಕಡೆಗೂ ವಿಸ್ತರಿಸಿತು. ನುರಿತ ಸಂಗೀತಗಾರ್ತಿ, ವೀಣಾ ವಾದಕಿಯೂ ಆಗಿದ್ದರಿಂದ ನೆರೆಯ ಹೆಣ್ಣು ಮಕ್ಕಳಿಗೆ, ಆಸಕ್ತರಿಗೆ ಸಂಗೀತ ಹೇಳಿಕೊಡುವುದು, ರಂಗೋಲಿಗಳನ್ನು ಕಲಿಸಿಕೊಡುವುದು ಅವರ ಹವ್ಯಾಸವಾಗಿತ್ತು. ಮಕ್ಕಳಿಗೆ ರಾಮಾಯಣ, ಮಹಾ ಭಾರತ, ರಾಮಾಯಣ, ನೀತಿ ಕಧೆಗಳನ್ನು ಹೇಳುವುದು, ಮುಖ್ಯವಾಗಿ ಬೀದಿ ಮಕ್ಕಳಿಗೆ, ವಿದ್ಯಾರ್ಥಿಗಳಿಗೆ ಸಾಮಾಜಿಕ, ಸಾಂಸ್ಕೃತಿಕ ಮೌಲ್ಯಗಳನ್ನು ಪರಿಚಯಿಸುವುದರಲ್ಲಿ ಅಪಾರ ಆಸಕ್ತಿ.
ತಮ್ಮ ಪತಿ ನಿವೃತ್ತರಾದಾಗ ಬಂದ ಹಣವನ್ನು ಸಂಪೂರ್ಣವಾಗಿ ವಿನಿಯೋಗಿಸಿ ಪಾಳು ಬಿದ್ದ ಮುತ್ತಾಂಜನೆೇಯನ ಗುಡಿಯ ಜೀರ್ಣೋದ್ಧಾರವನ್ನು ಮಾಡಿ ದೇವಾಲಯಕ್ಕೆ ಮತ್ತೆ ವೈಭವವನ್ನು ತಂದಿತ್ತರು. ಅಂಬುಜಮ್ಮನವರಿಗೆ ಅಪಾರವಾದ ದೇಶ ಪ್ರೇಮ. ಸ್ವಾತಂತ್ರ್ಯ ಸಂಗ್ರಾಮ, ಗಾಂಧೀಜಿಯವರ ಮಾತು ಬಂದರೆ ಸಾಕು, ಈಗಲೂ ನೂರೈದರ ಅಜ್ಜಮ್ಮನ ಮಂಜುಗಣ್ಣಲ್ಲೂ ನಕ್ಷತ್ರ ಹೊಳಪು. ಗಾಂಧೀಜಿಯವರ ಪ್ರೇರಣೆಯಿಂದಲೇ ತಾವು ಹಿಂದಿ ಭಾಷೆ ಕಲಿತದ್ದು ಎನ್ನುವ ಅಂಬುಜಮ್ಮನವರು ಸೊಗಸಾಗಿ ಕನ್ನಡವಲ್ಲದೆ ತಮಿಳು, ತೆಲುಗು, ಇಂಗ್ಲೀಷ್ ಭಾಷೆಗಳನ್ನು ಸರಾಗವಾಗಿ ಆಡಬಲ್ಲರು. ಒಬ್ಬ ಸಾಮಾನ್ಯ ಗೃಹಿಣಿಯಾದ ಅಂಬುಜಮ್ಮನವರ ದೈವ ಶ್ರದ್ಧೆ, ಮೌಲ್ಯ ಪ್ರಜ್ಞೆ, ಸುಸಂಸ್ಕೃತ ನಡವಳಿಕೆ, ಬದುಕಿನ ಬದ್ಧತೆ, ಸಮಾಜ ಪರ ಕಳಕಳಿ, ಶಿಸ್ತು ಅನುಕರಣೀಯವಾದುದು.
‘ಸಮಾಜದಿಂದ ಪಡೆದುದಕ್ಕಿಂತ, ಸಮಾಜಕ್ಕೆ ಕೊಟ್ಟಿದ್ದೇ ಹೆಚ್ಚು‘ ಎನ್ನುವಂತೆ ಅಂಬುಜಮ್ಮನವರು ತಮ್ಮ ಸಮೃದ್ಧ ಬದುಕಿನ ಸಾರ್ಥಕ ನೂರ ಐದು ವಸಂತಗಳನ್ನು ಪೂರೈಸಿದ್ದಾರೆ . ಇದು ಎಲ್ಲರ ಬದುಕಿನಲ್ಲೂ ನಡೆಯುವ ಸಾಮಾನ್ಯ ಸಂಗತಿಯೇನಲ್ಲ. ಬಹಳ ಅಪರೂಪದಲ್ಲಿ ಸಂಭವಿಸುವಂತಹದು. ಅವರ ಅನುಪಮ , ಅನನ್ಯ ಹಿರಿಯ ಚೇತನಕ್ಕೆ ಗೌರವ ಪೂರ್ವ ನಮನಗಳು .
ಲೇಖಕಿ: ಡಾ ಡಿ ಮಂಗಳಾ ಪ್ರಿಯದರ್ಶಿನಿ DrMangala Priyadarshini
ಕಾಮೆಂಟ್‌ಗಳು