ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಹಾಸನ ರಘು


ಸಾಂಪ್ರದಾಯಿಕ ಸಮರ ಕಲೆಗಳ ತಜ್ಞ 
ಡಾ. ಹಾಸನ ರಘುಗೆ ಒಲಿದ ಪದ್ಮಶ್ರೀ

ಮೂಲತಃ ಹಾಸನ ಜಿಲ್ಲೆಯವರಾದ ಡಾ.ಹಾಸನ ರಘು ಸಾಂಪ್ರದಾಯಿಕ ಸಮರ ಕಲೆಗಳ ತಜ್ಞರಾಗಿ, ಗುರುಗಳಾಗಿ ಸೇವೆ ಸಲ್ಲಿಸುತ್ತಾ ಬಂದಿರುವ ಡಾ. ಹಾಸನ ರಘು ಅವರಿಗೆ ಈ ವರ್ಷದ ಪದ್ಮಶ್ರೀ ಗೌರವ ಸಂದಿದೆ.

70ರ ದಶಕದಲ್ಲಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದ ರಘು ಅವರು, 1971ರ ಬಾಂಗ್ಲಾದೇಶ ವಿಮೋಚನಾ ಯುದ್ಧದಲ್ಲಿ ಭಾಗಿಯಾಗಿ ಸೇವಾ ಪದಕವನ್ನು ಪಡೆದವರು.  ಸೇನೆಯಲ್ಲಿ ಜಿಮ್ನಾಸ್ಟಿಕ್ ಪಟುವಾಗಿದ್ದ ಹಾಸನ ರಘು, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ಸೇನೆಯಿಂದ ನಿವೃತ್ತಿಯಾದ ನಂತರ ಅವರು ಜಿಮ್ನಾಸ್ಟಿಕ್ ಶಿಕ್ಷಕರಾಗಿ ಕಾರ್ಯ ಆರಂಭಿಸಿದರು. 1980 ರಲ್ಲಿ ಪುಟ್ಟಣ್ಣ ಕಣಗಾಲರ 'ರಂಗನಾಯಕಿ' ಚಿತ್ರದ ಮೂಲಕ ಕನ್ನಡ ಚಲನಚಿತ್ರಗಳಲ್ಲಿ ಸಾಹಸ ನಿರ್ದೇಶಕರಾಗಿ ಕಲಾ ಸೇವೆಗೆ ಬಂದರು.  ಮುಂದೆ ಕನ್ನಡ ಮಾತ್ರವಲ್ಲದೆ ಅನೇಕ ಭಾಷೆಗಳ ಚಿತ್ರಗಳಿಗೆ ಇವರ ಸಾಹಸ ಸಂಯೋಜನೆ ಸಂದಿದೆ. 

ರಘು ಅವರು ಕನ್ನಡ ಚಲನಚಿತ್ರ ಕಾರ್ಮಿಕರ ಸಂಘಟನೆ, ಸಾಹಸ ಕಲಾವಿದರ ಸಂಘಟನೆ ಸ್ಥಾಪಿಸಿ ಕನ್ನಡ ಚಿತ್ರರಂಗದಲ್ಲಿ ಕನ್ನಡಿಗರನ್ನು ಬೆಳೆಸಲು ಕಾರಣಕರ್ತರಾದರು. ಸುಮಾರು 150ಕ್ಕೂ ಹೆಚ್ಚು ಚಿತ್ರಗಳಲ್ಲಿ ಸಾಹಸ ನಿರ್ದೇಶಕ ನೀಡಿರುವ ಹಾಸನ ರಘು ಅವರಿಗೆ ದಿವಂಗತ ಶಂಕರ್‌ನಾಗ್ ನಿರ್ದೇಶನದ ಆಕ್ಸಿಡೆಂಟ್ ಚಿತ್ರದ ಸಾಹಸ ನಿರ್ದೇಶನಕ್ಕೆ 1986 ರಲ್ಲಿ ರಾಜ್ಯಪ್ರಶಸ್ತಿ ಲಭಿಸಿತು. 2017ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸಂದಿತು.  ಜೊತೆಗೆ ಜಾನಪದ ಶ್ರೀ ಪ್ರಶಸ್ತಿ ಚಲನಚಿತ್ರ ಅಮೃತ ಮಹೋತ್ಸವ ಪ್ರಶಸ್ತಿ ಮತ್ತು ಇತರೆ ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿಗಳು ಸಹ ಅವರಿಗೆ ಸಂದಿವೆ.

71 ವರ್ಷ ವಯಸ್ಸಿನ ಹಾಸನ ರಘುರವರು ಕಳೆದ 40 ವರ್ಷಗಳಿಂದ ಕರ್ನಾಟಕದ ಜಾನಪದ ಸಾಹಸ ಮತ್ತು ಸಮರ ಕಲೆಗಳ ಕಲಾವಿದರಾಗಿ, ಶಿಕ್ಷಕರಾಗಿ, ಗುರುಗಳಾಗಿ ಕಾರ್ಯನಿರ್ವಹಿಸುತ್ತಿದ್ದು, ನೂರಾರು ನಿರುದ್ಯೋಗಿ ಯುವಕರಿಗೆ ತರಬೇತಿ ನೀಡಿ ಕನ್ನಡ ಸಾಹಸ ಕಲಾವಿದರನ್ನಾಗಿ ಬೆಳೆಸಲು ಮುಖ್ಯ ಕಾರಣಕರ್ತರಾಗಿದ್ದಾರೆ.

1994ರಿಂದ ಭಾರತ ಸರ್ಕಾರದ ರಾಷ್ಟ್ರೀಯ ನಾಟಕ ಕಲೆ ನವದೆಹಲಿಯಲ್ಲಿ ಸಂದರ್ಶಕ ಶಿಕ್ಷಕರಾಗಿದ್ದು, ರಾಷ್ಟ್ರೀಯ ಮಟ್ಟದ ಕಲಾವಿದರಿಗೆ ಸಮರ ಕಲೆಗಳಲ್ಲಿ ತರಬೇತಿ ನೀಡಿದ್ದಾರೆ. ಜೊತೆಗೆ ರಾಷ್ಟ್ರೀಯ ಮಟ್ಟದ ನಾಟಕಗಳಲ್ಲಿ ಸಾಹಸ ಸಂಯೋಜನೆ ನೀಡಿದ್ದಾರೆ. ಭಾರತ ಸರ್ಕಾರದ ಸಂಸ್ಕೃತಿ ಮಂತ್ರಾಲಯದ ಜಾನಪದ ಮತ್ತು ಸಾಂಪ್ರದಾಯಿಕ ಕಲೆಗಳ ತಜ್ಞರ ಕೇಂದ್ರ ಸಮಿತಿಯ ಸದಸ್ಯರಾಗಿ ಒಂದು ದಶಕದ ಸೇವೆ ಸಲ್ಲಿಸಿದ್ದಾರೆ.

ರಘು ಅವರು 1986ರಲ್ಲಿ ಕರ್ನಾಟಕ ಸಾಹಸ ಕಲಾ ಅಕಾಡೆಮಿಯನ್ನು ಸ್ಥಾಪಿಸಿದ್ದು, 2006ರಲ್ಲಿ ಪೂರ್ಣ ಪ್ರಮಾಣದ ಗುರುಕುಲ ( ಕರ್ನಾಟಕ ಸಾಹಸ ಕಲಾ ಶಿಕ್ಷಣ ಕೇಂದ್ರ)ವನ್ನು ರಾಮನಗರದಲ್ಲಿ ಸ್ಥಾಪಿಸಿದ್ದಾರೆ. ಇದರಡಿಯಲ್ಲಿ ಯುವಕರಿಗೆ ವೃತ್ತಿಪರ ತರಬೇತಿ ಹಾಗೂ ಮಕ್ಕಳಿಗಾಗಿ ಜನಪದ ಗುರುಕುಲ ಹಾಗೂ ಸಾಹಸ ಕ್ರೀಡೆಗಳ ವಸತಿ ಶಾಲೆಯನ್ನು ಸ್ಥಾಪಿಸಿದ್ದಾರೆ. ಇಲ್ಲಿ 60ಕ್ಕೂ ಹೆಚ್ಚು ಯುವಕರಿಗೆ ಉಚಿತ ವಿದ್ಯಾಭ್ಯಾಸ, ತರಬೇತಿ, ಊಟ ಉಪಚಾರದ ವ್ಯವಸ್ಥೆ ಕಲ್ಪಿಸಿದ್ದಾರೆ.  2009ರಿಂದ  ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ಎರಡು ಬಾರಿ ಸಿಂಡಿಕೇಟ್ ಸದಸ್ಯರಾಗಿ ಕಾರ್ಯನಿರ್ವಹಿಸಿರುವ ರಘು ಅವರು, ರಾಷ್ಟ್ರೀಯ ಮಟ್ಟದಲ್ಲಿ ಅಖಿಲ ಭಾರತ ಜಾನಪದ ಮತ್ತು ಬುಡಕಟ್ಟು ಪರಿಷತ್ತಿನ ಸಂಸ್ಥಾಪಕ ಕಾರ್ಯದರ್ಶಿಯಾಗಿ ಸಹ ಕಾರ್ಯನಿರ್ವಹಿಸಿ ಜನಪದ ಮತ್ತು ಬುಡಕಟ್ಟು ಕಲಾವಿದರ ಏಳಿಗೆಗಾಗಿ ದುಡಿಯುತ್ತಿದ್ದಾರೆ.

ರಾಷ್ಟ್ರೀಯ ಮಟ್ಟದಲ್ಲಿ ಅಖಿಲ ಭಾರತ ಶೌರ್ಯಪರ್ವ ಮಹೋತ್ಸವ ಹಾಗೂ ಲೋಕ ಕಲಾ ಮತ್ತು ಆದಿವಾಸಿ ಕಲಾ ಮಹೋತ್ಸವದ ಅಂಗವಾಗಿ ನೂರಕ್ಕೂ ಹೆಚ್ಚು ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ಪ್ರಸ್ತುತ ವಿಶ್ವವಿದ್ಯಾಲಯದ ಮಾನ್ಯತೆಯಲ್ಲಿ ಜನಪದ ಅಧ್ಯಯನ, ಸಮರ ಕಲೆಗಳು, ಪ್ರದರ್ಶನ ಕಲೆಗಳ ಸರ್ಟಿಫಿಕೇಟ್ ಮತ್ತು ಡಿಪ್ಲೊಮೋ ಕೋರ್ಸ್‌ಗಳನ್ನು ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರದ ಭಾರತೀಯ ಕ್ರೀಡಾ ಪ್ರಾಧಿಕಾರದ ಮಾನ್ಯತೆಯಲ್ಲಿ ಖೇಲೋ ಇಂಡಿಯಾ ಮಲ್ಲಕಂಬ ತರಬೇತಿ ಕೇಂದ್ರವನ್ನು ಸ್ಥಾಪಿಸಿದ್ದು ಮಕ್ಕಳಿಗೆ ಉಚಿತ ತರಬೇತಿ ಮತ್ತು ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ.  ಇವರ ಸೇವೆಯನ್ನು ಪರಿಗಣಿಸಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ 2024ರ ಡಿಸೆಂಬರ್ 2ರಂದು ಗೌರವ ಡಾಕ್ಟರೇಟ್ ನೀಡಿ ಸನ್ಮಾನಿಸಿತ್ತು. ಇದೀಗ ಅವರಿಗೆ ಪದ್ಮಶ್ರೀ ಪುರಸ್ಕಾರ ಸಂದಿದೆ.

"ಕಲಾ ರಂಗದಲ್ಲಿ ಕೈಲಾದಷ್ಟರ ಮಟ್ಟಿಗೆ ಸೇವೆ ಸಲ್ಲಿಸಿದ ನಾನು ಸಾಂಪ್ರದಾಯಿಕ ಸಮರ ಕಲೆಗಳ ಉಳಿವಿಗಾಗಿ ಜೀವನವನ್ನು ಮುಡಿಗಟ್ಟಿದ್ದೇನೆ. ಭಾರತದಲ್ಲೇ ಪ್ರಥಮ ಎನ್ನಬಹುದಾದ ನ್ಯಾಷನಲ್ ಸ್ಟಂಟ್ ಸ್ಕೂಲ್ ಪ್ರಾರಂಭ ಮಾಡಬೇಕೆಂಬುದು ನನ್ನ ಆಲೋಚನೆ. ನನ್ನ ಸೇವೆಯನ್ನು ಗುರುತಿಸಿ ಪದ್ಮಶ್ರೀ ಪ್ರಶಸ್ತಿ ನೀಡಿರುವುದು ಸಂತಸ ತಂದಿದೆ" ಎನ್ನುತ್ತಾರೆ ನಮ್ಮ ಹೆಮ್ಮೆಯ ರಘು.  ಪ್ರಶಸ್ತಿಗಳಿಗೆ ಬೆಲೆ ಬರುವುದು ಇಂತಹ ಮಹನೀಯರಿಂದ.

ಮಾಹಿತಿ ಆಧಾರ: ಕನ್ನಡ ಪ್ರಭಾ ವರದಿ


 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ