ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಬುಕ್ಕಾಂಬುಧಿ ಕೃಷ್ಣಮೂರ್ತಿ


ಬುಕ್ಕಾಂಬುಧಿ ಕೃಷ್ಣಮೂರ್ತಿ
ಲೇಖಕಿ: ಸುಬ್ಬುಲಕ್ಷ್ಮಿ Lrphks Kolar

ನನ್ನ ಸ್ನೇಹ ವಲಯದಲ್ಲಿ ಅತ್ಯಂತ ಹಿರಿಯರಿವರು. ಇವರಿಗೆ 2025 ಜನವರಿ 8ಕ್ಕೆ 99 ವರ್ಷ ತುಂಬಿದೆ.  ಮೂಲಸ್ಥಳ ತರೀಕೆರೆ ತಾಲ್ಲೂಕಿನ ಬುಕ್ಕಾಂಬುಧಿ. ಈಗ ನ್ಯೂಜೆರ್ಸಿಯಲ್ಲಿ ನೆಲೆಸಿದ್ದಾರೆ. 

ಬುಕ್ಕಾಂಬುಧಿ ಕೃಷ್ಣಮೂರ್ತಿ ಅವರು ಚಿಕ್ಕಮಗಳೂರಿನ ಕಾಫಿ ಕಂಪನಿಯಲ್ಲಿ, ಬೆಂಗಳೂರಿನ ಮಹಾಬೋಧಿ ಸೊಸೈಟಿಯಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಈ ವಯಸ್ಸಿನಲ್ಲಿಯೂ ಇನ್ನೂ ಕೆಲಸ ಮಾಡುತ್ತಲೇ ಇದ್ದಾರೆ.  ಯುವಕರನ್ನು ನಾಚಿಸುವಷ್ಟು ಜೀವನೋತ್ಸಾಹ ಇವರದು. ಶಿಸ್ತಿನ ಜೀವನ. ಸರಳ ವ್ಯಕ್ತಿತ್ವದ ಇವರು ಮಾತನಾಡುತ್ತಿದ್ದರೆ ಅದರಲ್ಲಿ ‌ಆತ್ಮವಿಶ್ವಾಸ ತುಂಬಿ ತುಳುಕುತ್ತದೆ. ದೂರದ ನ್ಯೂಜೆರ್ಸಿಯಲ್ಲಿ ಒಬ್ಬರೇ ಇದ್ದರೂ ಇವರು ಒಬ್ಬರಿಗಾಗಿ ಬದುಕುತ್ತಿಲ್ಲ. ಎಲ್ಲರಿಗಾಗಿ ಸದಾ ತುಡಿಯುವ ಜೀವ. ಅಚ್ಚುಕಟ್ಟಾಗಿ ಅಡುಗೆ ಮಾಡಿ, ಬಡಿಸಿ, ಎಲ್ಲ ಶುಚಿಗೊಳಿಸಿ, ತರಕಾರಿ ಬೆಳೆದು, ಕಾರ್ ಓಡಿಸಿ...ಈಗಲೂ ತಮ್ಮ ನೆಚ್ಚಿನ ಅಕೌಂಟ್ಸ್ ಕೆಲಸ ಬಿಡದೆ ಮಾಡುತ್ತಾ, ಬಿಡುವು ದೊರೆತಾಗ ಪ್ರವಾಸ ಮಾಡುತ್ತಾ ಇರುವರು. ನೋಡಿದ್ದನ್ನು ಬರೆದು ಪುಸ್ತಕ ರೂಪದಲ್ಲಿ ತರುವರು. ಇವರೊಬ್ಬ ವಿಶಿಷ್ಟ ವ್ಯಕ್ತಿ. ಚೈತನ್ಯದ ಚಿಲುಮೆ. ನಗುಮುಖದ ಜೀವಿ. ಇವರೊಂದಿಗೆ ಮಾತಿಗೆ ಕುಳಿತರೆ ಇವರು ಹೇಳುವ ನಗೆಹನಿಗಳನ್ನು ಅರಗಿಸಿಕೊಳ್ಳಲು ಶಕ್ತಿಬೇಕು.

ಸಹೋದ್ಯೋಗಿ ಪದ್ಮಾವತಿಯವರ ಮೂಲಕ ಕೃಷ್ಣಮೂರ್ತಿ ಅವರ ಪರಿಚಯವಾಯಿತು. ಮುಂದೆ ಮಾತುಕತೆ ಬೆಳೆಯಿತು. ಇವರು ಸಿದ್ಧಪಡಿಸಿದ ಬುಕ್ಕಾಂಬುಧಿ ಸ್ಥಳದ ಸುತ್ತಮುತ್ತಲಿನ ಬಳಕೆಯ ಪದಕೋಶದಲ್ಲಿ ಭಾಗಿಯಾದೆ. ಇದು ಬಹಳ ಉಪಯುಕ್ತವಾಗಿದೆ.  ಕಳೆದ ಬಾರಿ ಇಂಡಿಯಾಗೆ ಬಂದಾಗ ನಮ್ಮ ಮನೆಗೂ ಬಂದಿದ್ದರು. ಸಾಮಾನ್ಯವಾಗಿ ವಾರಕ್ಕೊಮ್ಮೆ ಮಾತನಾಡಿದಾಗ ಕೊನೆಯಲ್ಲಿ ಇನ್ನೊಂದು ಸಾರಿ ಫೋನ್ ಮಾಡುತ್ತೇನೆ ಎಂದು ಹೇಳಿಯೇ ಇಡುವರು. ಪ್ರವಾಸಗಳ ಕಂತೆ, ನಾ ನಡೆದು ಬಂದ ದಾರಿ, ಚಿಕ್ಕಮಗಳೂರಿನ ಭಾಗವತರ ಕಿರುಪರಿಚಯ, ನನ್ನವಿದೇಶ ಪ್ರವಾಸ, ನಮ್ಮೂರಿನ ಕಿರು ಪ್ರಸಂಗಗಳು  ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ಪ್ರವಾಸಪ್ರಿಯರಾದ ಇವರು ಪ್ರತಿ ವರ್ಷ ಎಲ್ಲಿಗಾದರೂ ಹೋಗುತ್ತಲೇ ಇರುತ್ತಾರೆ. ಕಳೆದ ವರ್ಷ ಇವರೊಂದಿಗೆ ಕಾಶಿ ಪ್ರವಾಸದ ಸೌಭಾಗ್ಯ ನನ್ನದಾಗಿತ್ತು. ಇಡೀ ಕುಟುಂಬದ ಸದಸ್ಯರ ಜೊತೆಗೆ ಈ ಹಿರಿಯರೊಂದಿಗೆ ಬೆರೆಯುವ ಅವಕಾಶ ದೊರೆತಿತ್ತು. 
ಈ ಹಿರಿಯರಿಗೆ ಜನ್ಮದಿನದ ಶುಭಾಶಯಗಳನ್ನು ಬಯಸುತ್ತೇನೆ.  ಒಬ್ಬ ಆದರ್ಶ ವ್ಯಕ್ತಿತ್ವದ ಕೃಷ್ಣಮೂರ್ತಿಯವರಿಗೆ ಮತ್ತೊಮ್ಮೆ ನಮನಗಳು.
ಬುಕ್ಕಾಂಬುಧಿ ಕೃಷ್ಣಮೂರ್ತಿ

On 99th birthday of Bukkambudhi Krishnamurthy Sir


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ