ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಎನ್. ಶಿವರಾಮಯ್ಯ


 ಎನ್. ಶಿವರಾಮಯ್ಯ 

On the birth anniversary of multi linguist, scholar and Teacher N. Shivaramaiah 🌷🙏🌷

ಬಹುಭಾಷಾ ವಿದ್ವಾಂಸರಾಗಿದ್ದ ಎನ್. ಶಿವರಾಮಯ್ಯ ಅವರು 'ನೇನಂಶಿ' ಎಂಬ ಕಾವ್ಯನಾಮದಿಂದ ಹೆಸರಾಗಿ ಅಪಾರ ಸಾಧನೆ ಮಾಡಿದ ಮಹನೀಯರು.

ಶಿವರಾಮಯ್ಯ ಅವರು 1933ರ ಫೆಬ್ರವರಿ 17ರಂದು ಜನಿಸಿದರು.  ಅವರು ಹುಟ್ಟಿದ್ದು
ತುಮಕೂರು ಜಿಲ್ಲೆಯ, ಕೊರಟಗೆರೆ ತಾಲ್ಲೂಕಿನ  ನೇಗಲಾಲ ಗ್ರಾಮದಲ್ಲಿ.  ತಂದೆ ಎನ್.ಆರ್. ನಂಜಪ್ಪ. ತಾಯಿ ವೆಂಕಟಲಕ್ಷಮ್ಮ. ಕನ್ನಡ ಎಂ.ಎ., ಬಿ.ಎಡ್., ಕನ್ನಡ ಪಂಡಿತ್, ಹಿಂದೀ ವಿದ್ವಾನ್, ರಾ.ಭಾ. ಪ್ರವೀಣ್, ಸಂಸ್ಕೃತ ಕೋವಿದ ಮುಂತಾದವು ಅವರ ಶೈಕ್ಷಣಿಕ ಸಾಧನೆಗಳಾಗಿದ್ದವು.

ಶಿವರಾಮಯ್ಯ ಅವರು ವೃತ್ತಿಯಲ್ಲಿ ಕನ್ನಡ ಉಪನ್ಯಾಸಕರಾಗಿ ನಿವೃತ್ತರಾದರು. ಸಾಹಿತ್ಯ ರಚನೆ ಹಾಗೂ ಹಲವು ಭಾಷೆಗಳಲ್ಲಿ ಅಧ್ಯಯನ ಇವರ ಹವ್ಯಾಸಗಳಾಗಿದ್ದವು. ಇವರಿಗೆ ಕನ್ನಡ, ಇಂಗ್ಲಿಷ್, ಹಿಂದೀ, ಸಂಸ್ಕೃತ ಭಾಷೆಗಳಲ್ಲದೆ ತೆಲುಗು, ತಮಿಳು ಹಾಗೂ ಬಂಗಾಳಿ ಭಾಷೆಗಳಲ್ಲಿಯೂ ಪರಿಣತಿಯಿತ್ತು. 1952ರಿಂದ ಸಾಹಿತ್ಯ ರಚನೆ ಪ್ರಾರಂಭಿಸಿದ ಇವರ ಕಥೆ, ಕವನ ಹಾಗೂ ಲೇಖನಗಳು ನಾಡಿನ ಪ್ರಸಿದ್ಧ ಪತ್ರಿಕೆಗಳಲ್ಲಿ ‘ನೇನಂಶಿ’ ಕಾವ್ಯನಾಮದಿಂದ ಪ್ರಕಟವಾಗಿ ಜನಪ್ರಿಯವಾಗಿದ್ದವು. 

ಶಿವರಾಮಯ್ಯ ಅವರ ಪ್ರಕಟಗೊಂಡ ಕೃತಿಗಳಲ್ಲಿ 'ನುಡಿ ಮಲ್ಲಿಗೆ' - ಕಬೀರರ ದೋಹಾಗಳ ಭಾವಾನುವಾದ, 'ಶಿವಾನಂದ ಲಹರಿ' - ಶ್ರೀ ಶಂಕರಾಚಾರ್ಯರ ಸಂಸ್ಕೃತ ಶತಕದ ಪದ್ಯಾನುವಾದ, 'ದಿ ಸೀಕ್ರೆಟ್' - ತೆಲುಗಿನಿಂದ ಕನ್ನಡಕ್ಕೆ ಅನುವಾದ,  ಶುಭದಿನದ ಪ್ರೀತಿಯ ಕಾಣಿಕೆ - ತಮಿಳಿನಿಂದ ಕನ್ನಡಕ್ಕೆ ಅನುವಾದ, ಏಕನಾದ ಮತ್ತು ಇತರ ಲಲಿತ ಪ್ರಬಂಧಗಳು, ಅದೃಷ್ಟದ ಆಟ (ಬಂಗಾಳಿ ಕಾದಂಬರಿಯ ಕನ್ನಡ ಅನುವಾದ), ಮಾಘ ಕವಿ (ತೆಲುಗು ಮಾಘ ಕವಿಯ ಜೀವನವನ್ನು ಆಧರಿಸಿದ ಕಾದಂಬರಿಯ ಕನ್ನಡ ಅನುವಾದ) , ಪ್ರತ್ಯಗಾತ್ಮ ಚಿಂತನ (ಕಗ್ಗದ ದಾಟಿಯಲ್ಲಿ ಬರೆದ 350 ಚೌಪದಿಗಳ ಸಂಕಲನ),  ವೇಮನ ಸುಭಾಷಿತ (ತೆಲುಗಿನಿಂದ ಕನ್ನಡಕ್ಕೆ ಪದ್ಯಾನುವಾದ),  ಹಿಂದೀ ಸೂಕ್ತಿ ಸುಧಾ (ಕಬೀರ್, ತುಳಸೀ, ರಸಖಾನ್, ರಹೀಮ್ ಮೊದಲಾದವರ 350 ದೋಹಾಗಳ ಭಾವಾನುವಾದ) ಮುಂತಾದವು ಸೇರಿವೆ.  ಇದಲ್ಲದೆ  ಇವರ ಹಸ್ತಪ್ರತಿಗಳಲ್ಲಿ ಹರಿಚಿತ್ತ ಮತ್ತು ಇತರ ಕಥೆಗಳು,  ಪಂಚಮಹಾ ಕಾವ್ಯಗಳು (ತಮಿಳಿನಿಂದ ಕನ್ನಡಕ್ಕೆ ಅನುವಾದ),  ಜೇನುಹೊಳೆ (ಕವನ ಸಂಕಲನ), ಮೂರು ನಕ್ಷತ್ರ ಮಾಲಿಕೆಗಳು, ಈಸೋಪನ ಕಥನ ಕವನಗಳು ಮುಂತಾದ ಮಹತ್ವದ ಕೃತಿಗಳಿವೆ.

ರಾಷ್ರ್ಟೋತ್ತಾನ ಪರಿಷತ್ತಿನ ಮುಖ್ಯಸ್ಥರಾಗಿದ್ದ ಎಸ್. ಆರ್. ರಾಮಸ್ವಾಮಿ ಅವರು ಶಿವರಾಮಯ್ಯನವರ ಎರಡು ಪುಸ್ತಕಗಳಿಗೆ ಮುನ್ನುಡಿ ಬರೆದಿದ್ದಾರೆ. ಕಗ್ಗದ ಖ್ಯಾತಿಯ ಎಚ್. ಎಸ್. ಲಕ್ಷ್ಮೀನಾರಾಯಣ ಭಟ್ಟರು ಈ ಎರಡು ಪುಸ್ತಕಗಳನ್ನು ಲೋಕಶಿಕ್ಷಣ ಟ್ರಸ್ಟ್ ಇಂದ ಪ್ರಕಟಗೊಳ್ಳಲು ಕಾರಣರಾಗಿದ್ದಾರೆ. ತುಮಕೂರಿನ ವಿವೇಕಾನಂದ ಹಾಗೂ ರಾಮಕೃಷ್ಣ ಮಠದ ಸ್ವಾಮೀಜಿಯವರಾದ ವೀರೇಶಾನಂದರು ಈ ಎರಡೂ ಪುಸ್ತಕಗಳಿಗೂ ಆಶಯ ನುಡಿ ಬರೆದು ಆಶೀರ್ವದಿಸಿದ್ದಾರೆ.

ಶಿವರಾಮಯ್ಯ ಅವರ ಮಕ್ಕಳಲ್ಲಿ ಹಿರಿಯ ಮಗ ರಾಮಾನಂದ ಎನ್. ಎಸ್. ಅವರು ರಂಗ ಕಲಾವಿದರು. ಇವರು ಟಿ. ಎನ್. ಸೀತಾರಾಮ್ ಅವರ ಧಾರಾವಾಹಿಗಳೂ ಸೇರಿದಂತೆ ಹಲವಾರು ಧಾರಾವಾಹಿ ಹಾಗೂ ಸಿನಿಮಾಗಳಲ್ಲಿ ನಟಿಸಿದ್ದಾರೆ. ಎರಡನೆಯ ಮಗ ಮಾರುತಿ ಪ್ರಸಾದ್ ಎನ್. ಎಸ್. ಅವರು ಕನ್ನಡಪ್ರಭ, ತುಮಕೂರಿನ ಪ್ರಜಾಪ್ರಗತಿ ಹಾಗೂ ತುಮಕೂರು ವಾರ್ತೆ ದಿನಪತ್ರಿಕೆಗಳಲ್ಲಿ ಹಿರಿಯ ವರದಿಗಾರರಾಗಿದ್ದರು. ಸಧ್ಯದಲ್ಲಿ ಇವರು ತುಮಕೂರಿನ ಅಮೋಘ ಸುದ್ದಿ ವಾಹಿನಿಯಲ್ಲಿ ಹಿರಿಯ ವರದಿಗಾರರಾಗಿದ್ದಾರೆ. ಮೂರನೆಯವರು ನಮ್ಮೆಲ್ಲರ ಆತ್ಮೀಯರಾದ  ಪ್ರಸಿದ್ಧ ವ್ಯಂಗ್ಯಚಿತ್ರ ಕಲಾವಿದರಾದ ಗುರುದತ್ತ ಎನ್. ಎಸ್. (ಸಂಕೇತ್) Gurudatta N S Sanketh.  ನಾಲ್ಕನೆಯವರಾದ ಸುಬ್ಬಲಕ್ಷ್ಮಿ ಎನ್ ಎಸ್ ಪಿ (ಸುಮ) ಅವರು ಇಂಗ್ಲಿಷ್ ಎಂ. ಎ ಮಾಡಿ ಗುಬ್ಬಿಯ ಚಿದಂಬರ ಆಶ್ರಮದ ಶಾಲೆಯಲ್ಲಿ ಹಿಂದಿ ಶಿಕ್ಷಕಿ ಆಗಿದ್ದಾರೆ.

ಶಿವರಾಮಯ್ಯ  ಅವರಿಗೆ ಅನೇಕ ಸಂಘ ಸಂಸ್ಥೆಗಳಿಂದ ಸನ್ಮಾನ ಸಂದಿದ್ದು, 2005ರಲ್ಲಿ ತುಮಕೂರು ಜಿಲ್ಲಾಡಳಿತದಿಂದ ರಾಜ್ಯೋತ್ಸವ ಪ್ರಶಸ್ತಿ ಸಂದಿತ್ತು. ಸಾಹಿತ್ಯ ತಪಸ್ವಿ, ಸಾಹಿತ್ಯ ಮಣಿರತ್ನ ಮುಂತಾದ ಬಿರುದುಗಳಿಗೂ ಅವರು ಭಾಜನರಾಗಿದ್ದರು. 

ಎನ್. ಶಿವರಾಮಯ್ಯ ಅವರು 2016ರ ಏಪ್ರಿಲ್ 26ರಂದು ನಿಧನರಾದರು.


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ