ಎಸ್. ವಿ. ರಂಗಣ್ಣ
ಎಸ್. ವಿ. ರಂಗಣ್ಣ
ಆಧುನಿಕ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಪ್ರಮುಖ ಸಾಹಿತಿಗಳ ಸಾಲಿನಲ್ಲಿ ಸಾಲಗಾಮೆ ವೆಂಕಟಸುಬ್ಬಯ್ಯ ರಂಗಣ್ಣನವರು ಅಗ್ರಗಣ್ಯರು.
ರಂಗಣ್ಣನವರು 1898ರ ಡಿಸೆಂಬರ್ 24ರಂದು ಹಾಸನ ಜಿಲ್ಲೆಯ ಸಾಲಗಾಮೆಯಲ್ಲಿ ವೆಂಕಟಸುಬ್ಬಯ್ಯ – ವೆಂಕಟಲಕ್ಷಮ್ಮನವರ ಮಗನಾಗಿ ಜನಸಿದರು. ಚಿಕ್ಕಂದಿನಿಂದಲೂ ಓದಿನಲ್ಲಿ, ಅದರಲ್ಲೂ ಇಂಗ್ಲೀಷಿನಲ್ಲಿ ರಂಗಣ್ಣನವರದು ಅಪಾರ ಸಾಧನೆ. 1915ರ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅವರದ್ದಯ ದ್ವಿತೀಯ ರ್‍ಯಾಂಕ್ ಸಾಧನೆ.
ಪದವಿ ಶಿಕ್ಷಣಕ್ಕಾಗಿ ಬೆಂಗಳೂರಿನ ಸೆಂಟ್ರಲ್ ಕಾಲೇಜು ಸೇರಿದ ರಂಗಣ್ಣನವರಿಗೆ ಇಂಗ್ಲಿಷ್ ವ್ಯಾಮೋಹ ಅಪಾರವಾಗಿ ಮುಂದುವರೆದಿತ್ತು. ರಂಗಣ್ಣನವರಲ್ಲಿ ಆ ಭಾವನೆ ಸರಿದು ಕನ್ನಡದಲ್ಲಿ ವಾಂಛಲ್ಯ ಅಂಕುರವಾಗಲು ಪ್ರೊ. ಎ. ಆರ್. ಕೃಷ್ಣಶಾಸ್ತ್ರಿಗಳು ಕಾರಣರಾದರು. ಕನ್ನಡ ಸಾಹಿತ್ಯದ ಸೊಬಗು ಶ್ರೀಮಂತಿಕೆಗಳನ್ನು ಕೃಷ್ಣಶಾಸ್ತ್ರಿಗಳ ಬಾಯಲ್ಲಿ ಕೇಳಿದ ರಂಗಣ್ಣನವರು ಉತ್ತೇಜಿತರಾದರು. ಇಂಗ್ಲೀಷ್, ಕನ್ನಡ, ಗಣಿತ ಮತ್ತು ಭೌತವಿಜ್ಞಾನ ವಿಷಯಗಳಲ್ಲಿ ರಂಗಣ್ಣನವರು ಮೊದಲಿಗರಾಗಿ ಎಲ್ಲಾ ಪದಕ ಬಹುಮಾನಗಳೊಂದಿಗೆ 1919ರಲ್ಲಿ ಬಿ.ಎ ಪದವೀಧರರಾದರು.
ಇಂಗ್ಲೀಷ್ ಎಂ.ಎ. ವ್ಯಾಸಂಗಕ್ಕೆ ಮಹಾರಾಜ ಕಾಲೇಜಿಗೆ ಸೇರಿದ ವರ್ಷದಲ್ಲೇ ರಂಗಣ್ಣನವರ ಪಾಂಡಿತ್ಯವನ್ನು ಗಮನಿಸಿ, ಅವರನ್ನು ಇಂಗ್ಲೀಷ್ ಟ್ಯೂಟರ್ ಆಗಿ ನೇಮಕ ಮಾಡಲಾಯಿತು. 1921ರಲ್ಲಿ ಸ್ನಾತಕೋತ್ತರ ಪದವಿಯನ್ನು ಚಿನ್ನದ ಪದಕಗಳೊಂದಿಗೆ ಪ್ರಥಮ ರ್‍ಯಾಂಕ್ ಸಾಧನೆಯೊಂದಿಗೆ ಪಡೆದರು. ಅನಂತರ ಮೈಸೂರು ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದುಕೊಂಡು ತಮ್ಮ ಅನನ್ಯ ಬೋಧನೆ, ಅಧ್ಯಯನಗಳಿಂದ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಗುರುಗಳೆನಿಸಿದರು. ಕೆಲವು ವರ್ಷ ಮಹಾರಾಜ ಕಾಲೇಜಿನ ಪ್ರಿನ್ಸಿಪಾಲರಾಗಿ ಕಾರ್ಯನಿರ್ವಹಿಸಿದರು. ಸೇವಾ ನಿವೃತ್ತಿಯ ನಂತರವೂ (1954) ಮೈಸೂರು ವಿಶ್ವವಿದ್ಯಾನಿಲಯದ ಇಂಗ್ಲಿಷ್-ಕನ್ನಡ ಪರಿಷ್ಕೃತ ನಿಘಂಟು ಯೋಜನೆಯ ಪ್ರಧಾನ ಸಂಪಾದಕರಾಗಿ, ಪಿಎಚ್.ಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿ ಕೆಲಸ ಮಾಡುತ್ತಾ ವಿಶ್ವವಿದ್ಯಾನಿಲಯದ ಸಂಪರ್ಕ ಹೊಂದಿದ್ದರು.
ಎಸ್. ವಿ. ರಂಗಣ್ಣನವರು ತಮ್ಮ ಪ್ರಾಮಾಣಿಕ ದುಡಿಮೆ ಮತ್ತು ರಚನಾತ್ಮಕ ಸಾಹಿತ್ಯ ಸಾಧನೆಗಾಗಿ ಹಲವಾರು ಗೌರವ ಪ್ರಶಸ್ತಿಗಳಿಗೆ ಪಾತ್ರರಾದರು. 49ನೆಯ ಅಖಿಲ ಕರ್ನಾಟಕ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷತೆ, ‘ರಂಗಭಿನ್ನಪ’ ವಚನ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಬಹುಮಾನ (1965), ಮೈಸೂರು ವಿಶ್ವವಿದ್ಯಾನಿಲಯದ ಗೌರವ ಡಿ.ಲಿಟ್ ಪದವಿ ಇವುಗಳಲ್ಲಿ ಮುಖ್ಯವಾದವು. ‘ಬಾಗಿನ’ ಅವರ ಸಾಹಿತ್ಯ ಪ್ರೇಮಿಗಳು, ಶಿಷ್ಯರು, ಅಭಿಮಾನಿಗಳು ಅರ್ಪಿಸಿದ ಅಭಿನಂದನ ಗ್ರಂಥ. ರಂಗಣ್ಣನವರ ಆಸಕ್ತಿಯ ಕ್ಷೇತ್ರಗಳು ಹಲವು. ಸಹಕಾರ, ಕ್ರೀಡೆ, ಸ್ಕೌಟ್ ಚಳುವಳಿಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಸ್ಕೌಟ್ ದಳದ ಅತ್ಯುನ್ನತ ಗೌರವವಾದ ‘ರಜತಗಜ’ ಪ್ರಶಸ್ತಿಗೂ ಅವರು ಪಾತ್ರರಾದರು.
ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕೆಲಸ ಮಾಡಿರುವ ರಂಗಣ್ಣನವರು 25ಕ್ಕೂ ಹೆಚ್ಚಿನ ಕೃತಿಗಳನ್ನು ಪ್ರಕಟಿಸಿದರು. ವಿಮರ್ಶೆ, ಕಾವ್ಯ, ನಾಟಕ, ವಚನ ಇತ್ಯಾದಿ ಕ್ಷೇತ್ರಗಳಲ್ಲಿ ಅವರು ಕೆಲಸ ಮಾಡಿದ್ದರು. ಕೆಲವು ಪ್ರೌಢ ಚಿಂತನೆಯ ಗಂಭೀರ ಗ್ರಂಥಗಳಾದರೆ, ಇನ್ನು ಕೆಲವು ಪರಿಚಯಾತ್ಮಕ ಕಿರು ಹೊತ್ತಗೆಗಳು. ಕನ್ನಡದ ಮನೆಯಲ್ಲಿ ಕನ್ನಡವೇ ಯಜಮಾನಿ ಎಂದು ನಂಬಿದ್ದ ಅವರು ತಮ್ಮ ಶಕ್ತಿಯನ್ನೆಲ್ಲ ಕನ್ನಡಕ್ಕೆ ಧಾರೆ ಎರೆದರು.
ಕನ್ನಡ ಸಾಹಿತ್ಯ ವಿಮರ್ಶೆಯ ಬೆಳವಣಿಗೆಗೆ ರಂಗಣ್ಣನವರ ಕಾಣಿಕೆ ಮಹತ್ವದ್ದು. ಅವರು ಕನ್ನಡದಲ್ಲಿ ಬರವಣಿಗೆ ಆರಂಭಿಸುವ ದಿನಗಳಲ್ಲಿ ಸಾಹಿತ್ಯ ವಿಮರ್ಶೆ ಅಂತಹ ಪಕ್ವ ಹಂತದಲ್ಲಿ ಬೆಳೆದಿರಲಿಲ್ಲ. ಅಂಥ ಕಾಲದಲ್ಲಿ ಸಾಹಿತ್ಯಾಧ್ಯಯನವನ್ನು ಕೈಗೊಂಡು ಅದನ್ನು ಆಧುನಿಕ ದೃಷ್ಟಿಕೋನದಿಂದ ನೋಡುವ ಪ್ರಯತ್ನ ಮಾಡಿದರು. ಹಾಗಾಗಿ ಕನ್ನಡದಲ್ಲಿ ವಿಮರ್ಶೆಯ ಹೊಸ ಫಸಲು ಬಂತು. ‘ಕನ್ನಡ ಸಾಹಿತ್ಯದ ಗುಣ ದೋಷಗಳು’ ಎಂಬ ಲೇಖನ ಇಂಥ ಪ್ರಯತ್ನಕ್ಕೆ ಚೊಚ್ಚಲ ಕೊಡುಗೆ. ‘ಪ್ರಬುದ್ಧ ಕರ್ನಾಟಕ’ದ ಮೊದಲ ಸಂಚಿಕೆ (1919)ಯಲ್ಲಿ ಇದು ಬೆಳಕು ಕಂಡಿತು. ‘ರಾಘವಾಂಕನ ಶೈಲಿ’, ‘ಸಾಮಾನ್ಯ ಚಿತ್ರಕ್ಕೆ ಸುವರ್ಣದ ಚೌಕಟ್ಟು’, ‘ಸಾಹಿತ್ಯದ ಅವಶ್ಯಕತೆ’ ಮುಂತಾದವು ಅನಂತರ ಬರೆದ ಲೇಖನಗಳು.
‘ಸಾಮಾನ್ಯ ಚಿತ್ರಕ್ಕೆ ಸುವರ್ಣದ ಚೌಕಟ್ಟು’ ಎಂಬ ಲೇಖನವಂತೂ ಅಂದಿನ ದಿನದವರೆಗಿನ ಸಾಹಿತ್ಯದ ಕುರಿತಾದ ಉತ್ಪ್ರೇಕ್ಷೆಗಳನ್ನೆಲ್ಲ ತಲೆಕೆಳಗು ಮಾಡುವಂತಹ ಬಿರುಗಾಳಿಯನ್ನೇ ಎಬ್ಬಿಸಿತು. ಕಥಾ ಸಂವಿಧಾನದಲ್ಲಿ ಯಾವ ನೂತನತೆಯಾಗಲಿ, ಪಾತ್ರ ನಿರೂಪಣೆಯಲ್ಲಿ ಹೊಸತನವಾಗಲಿ, ವರ್ಣನೆಯಲ್ಲಿ ಸ್ವೋಪಜ್ಞತೆಯಾಗಲಿ ಇಲ್ಲದ ಕವಿ ಮುದ್ದಣ್ಣನು ಸಾಹಿತ್ಯದ ಯಾವ ಮಾನದಂಡದಿಂದಲೂ ಮೊದಲಸ್ಥಾನಕ್ಕೆ ಅರ್ಹನಾಗಲಾರನು ಎಂದು ಘೋಷಿಸಿದರು. “ಮುದ್ದಣ್ಣನ ಯಶಸ್ಸು ಹಬ್ಬಿ ಹರಡಿ ನಿಲ್ಲುವುದಕ್ಕೆ ಅವನ ಪಾತ್ರ, ಕಥೆ, ವರ್ಣನೆ ಯಾವುದೂ ಊರುಗೋಲಲ್ಲ. ಅವನ ಗದ್ಯದ ಧಾಟಿ ಮತ್ತು ಮುದ್ದಣ್ಣ ಮನೋರಮಾ ಪ್ರಕರಣ ಇವೆರಡೇ ಆ ಪರಾಕ್ರಮ ಪೌರುಷವನ್ನು ಹೊಂದಿದವು" ಎಂದು ತೀರ್ಮಾನಿಸಿದರು. ವಿಮರ್ಶೆಯೆಂಬ ಸ್ತುತಿಗೆ ಒಗ್ಗಿ ಹೋಗಿದ್ದ ಮನಸ್ಸುಗಳನ್ನು ಈ ನಿರ್ಣಯ ತಲ್ಲಣಗೊಳಿಸಿತೇನೋ ನಿಜ. ಆದರೆ ಸ್ಥಗಿತಗೊಂಡಿದ್ದ ಸಾಹಿತ್ಯ ವಿಮರ್ಶೆಗೆ ಹೊಸ ಚಾಲನೆ ಇದರಿಂದ ಹುಟ್ಟಿತು. ‘ಅರೆವಜ್ರ’, ‘ಕರ್ಣ ಪಾತ್ರದ ತೊಡಕು’, ‘ಕವಿ ಕುಲಗುರು’, ‘ಪ್ರಶಂಸೆ ಸಾಕೊ ಪರೀಕ್ಷೆ ಬೇಕೊ’ ಇಂಥ ಪ್ರಯತ್ನಗಳೂ ಸಹಾ ಈ ಬರಹದ ಗುಂಪಿಗೆ ಸೇರುತ್ತವೆ.
1959ರ ಹೊತ್ತಿಗೆ ಕಾಳಿದಾಸನ ‘ಶಾಕುಂತಲ ವಿಮರ್ಶೆ’ಯನ್ನು, 1960ರಲ್ಲಿ ‘ಮಾಲವಿಕಾಗ್ನಿ ಮಿತ್ರ ವಿಮರ್ಶೆ’, ‘ವಿಕ್ರಮೋರ್ವಶೀಯ ನಾಟಕ ವಿಮರ್ಶೆ’ಯನ್ನು ರಂಗಣ್ಣನವರು ಪ್ರಕಟಿಸಿದ್ದಾರೆ. ಈ ಮೂರೂ ಲೇಖನಗಳ ಸಂಯುಕ್ತ ಸಂಪುಟವೇ ‘ಕಾಳಿದಾಸನ ನಾಟಕ ವಿಮರ್ಶೆ’ (1969). ಕಾಳಿದಾಸನನ್ನು ಕುರಿತು ಅವರು ಮಾಡಿರುವ ಮೌಲ್ಯನಿರ್ಣಯ ರೂಢಿಗತ ತಿಳುವಳಿಕೆಗೆ ವಿರುದ್ಧವಾದದ್ದು. ಕಾಳಿದಾಸನನ್ನು ‘ಕವಿಕುಲಗುರು’ ಎಂದು ಕರೆಯುವುದರ ಬಗ್ಗೆ ಅವರಿಗೆ ಸಮ್ಮತಿ ಇಲ್ಲ. ಆದರೆ ಪ್ರಪಂಚದ ಕವಿಗಳ ಮಧ್ಯೆ ಅವನಿಗೊಂದು ಸ್ಥಾನವಿರುವುದನ್ನು ಸಮರ್ಥಿಸುತ್ತಾರೆ. ಕಾಳಿದಾಸನು ಷೇಕ್ಸ್ ಪಿಯರನಿಗೆ ಸರಿಸಮಾನನೆಂದೋ ಅವನಿಗಿಂತ ಅಧಿಕನೆಂದೋ ಹೇಳಿ ಸನ್ಮಾನಿಸುವುದನ್ನು ಅವರು ಸಲ್ಲದ ಹೇಳಿಕೆ ಎಂದಿದ್ದಾರೆ. ಆ ಇಬ್ಬರೂ ಕವಿಗಳಿಗಿರುವ ಅಂತರವನ್ನು ನಿದರ್ಶನಪೂರ್ವಕವಾಗಿ ತೋರಿಸಿಕೊಟ್ಟಿದ್ದಾರೆ. ಭಾಸ, ಭವಭೂತಿ, ಬಾಣ, ಭಾರತಿ, ಜಿನಸೇನ, ಮಾಘ, ಶ್ರೀಹರ್ಷ ಮುಂತಾದ ಸಂಸ್ಕೃತ ಕವಿಗಳಿಗೆ ಅವರದ್ದೇ ಆದ ವ್ಯಕ್ತಿ ವರ್ಚಸ್ಸು, ತನ್ನತನಗಳಿರುವಾಗ ಕಾಳಿದಾಸ ಹೇಗೆ ದೊಡ್ಡಕವಿಯಾಗುತ್ತಾನೆ. ಮಹಾಕಾವ್ಯವೆಂಬ ಕೀರ್ತಿಗೆ ಭಾಜನವಾಗುವ ಅವನ ‘ರಘುವಂಶ’ ವಾಲ್ಮೀಕಿ ರಾಮಾಯಣಕ್ಕೆ ಹೇಗೆ ಹೊಯ್ ಕಯ್ ಆಗಬಲ್ಲದು? ಇತ್ಯಾದಿ ಪ್ರಶ್ನೆಗಳನ್ನು ಎತ್ತಿ ‘ಶಾಕುಂತಲ’ವೊಂದನ್ನು ಬಿಟ್ಟರೆ ಕಾಳಿದಾಸನ ಉಳಿದೆಲ್ಲ ಕೃತಿಗಳೂ ಪರಿಪೂರ್ಣತೆಯಿಂದ ಕೆಳಗೆ, ಮಹೋನ್ನತ್ಯದಿಂದ ಎಷ್ಟೋ ಕೆಳಗೆ-ಎಂಬ ತೀರ್ಮಾನಕ್ಕೆ ಬರುತ್ತಾರೆ. ‘ಮಾಲವಿಕಾಗ್ನಿಮಿತ್ರ’ವನ್ನು ಒಬ್ಬ ಪರಿಣತ ಕವಿ ಬರೆದ ಒಳ್ಳೆಯ ನಾಟಕವೆಂದು ಕರೆದು ಹಿಂದಿನ ವಿಮರ್ಶಕರು ಅದನ್ನು ಸರಿಯಾಗಿ ಬೆಲೆಕಟ್ಟಿಲ್ಲವೆಂದು ಭಾವಿಸಿದ್ದಾರೆ.
ಅವರ ‘ಹೊನ್ನಶೂಲ’ ವಿಮರ್ಶಾ ಸಂಕಲನದಲ್ಲಿ ವಿಮರ್ಶೆಯಲ್ಲಿನ ಅತಿಭಾವುಕತೆ ಮತ್ತು ಅತಿ ಹೊಗಳಿಕೆ ಹೊನ್ನಶೂಲವಾಗುತ್ತದೆಂಬ ವಿವೇಕವನ್ನು ವ್ಯಕ್ತಪಡಿಸಿದ್ದಾರೆ. ಪ್ರಪಂಚದ ಶ್ರೇಷ್ಠ ಸಾಹಿತ್ಯದ ದೀರ್ಘಕಾಲದ ಅಧ್ಯಯನ, ಅಗಾಧ ಪಾಂಡಿತ್ಯ, ನಿಷ್ಪಕ್ಷಪಾತ ವಿಮರ್ಶಕ ದೃಷ್ಟಿ ಅವರ ಬರಹಗಳಿಗೆ ಆತ್ಮವಿಶ್ವಾಸವನ್ನು, ಹೊಳಪನ್ನು ನೀಡಿವೆ.
ಕನ್ನಡದ ಶ್ರೇಷ್ಠ ಕವಿಗಳಾದ ಪಂಪ, ರನ್ನ, ಹರಿಹರ, ರಾಘವಾಂಕ, ಜನ್ನ, ರತ್ನಾಕರ, ಲಕ್ಷ್ಮೀಶ ಮುಂತಾದವರ ಕೃತಿ ವಿಮರ್ಶೆ ಕನ್ನಡಕ್ಕೆ ಅತ್ಯುತ್ತಮ ಕೊಡುಗೆ. ಮೂರು ಭಾಗಗಳಲ್ಲಿ ಪ್ರಕಟವಾಗಿರುವ ‘ಶೈಲಿ’ ರಂಗಣ್ಣನವರ ಅಗಾಧ ಪಾಂಡಿತ್ಯ, ವಿಷಯ ಕುರಿತ ಪೂರ್ಣ ಅರಿವು, ಎಚ್ಚರದ ವಿಮರ್ಶಕ ದೃಷ್ಟಿಯ ದ್ಯೋತಕ. ಕನ್ನಡ ಸಾಹಿತ್ಯಾಭ್ಯಾಸಿಗಳಿಗೆ ಇದೊಂದು ಅಪರೂಪದ ಆಕರ. ಇವುಗಳಲ್ಲಿ ಭಾರತೀಯ ಮತ್ತು ಪಾಶ್ಚಾತ್ಯ ಚಿಂತನೆಯ ಸಮನ್ವಯವಿದೆ. ಹೂತೋಟದ ನಿರ್ವಹಣೆಗೆ ಹೆಚ್ಚು ಖರ್ಚು ತಗಲುತ್ತದೆಂದು ಅದನ್ನು ಆಲೂಗಡ್ಡೆ ತೋಟವನ್ನಾಗಿ ಪರಿವರ್ತಿಸಲು ಹೇಳಿದ ತೋಟದ ಶ್ರೀಮಂತ ಮಾಲಿಕನೋಬ್ಬನ ಕಥೆಯನ್ನು ಅವರು ಉಲ್ಲೇಖಿಸಿದ್ದಾರೆ. ಸಾಹಿತ್ಯಸ್ವಾದನೆಗೆ ಅಭಿರುಚಿ, ಸಂವೇದನಾಶೀಲತೆ ಬೇಕೆಂಬುದಕ್ಕೆ ಅವರು ನಿದರ್ಶಿಸುವ ಕಥೆ ಇದು.
ಸಾಹಿತ್ಯ ಪರಂಪರೆಯ ನೈಜ ಅರಿವು ಹಾಗೂ ಸಮರ್ಪಕ ಸಿದ್ಧತೆಯೊಂದಿಗೆ ಯಾವುದನ್ನು ಕನ್ನಡಕ್ಕೆ ತಂದರೆ ಉಪಯುಕ್ತ ಎಂದು ಯೋಚಿಸಿ ರಂಗಣ್ಣನವರು ಕಾರ್ಯಮಗ್ನರಾದರು. ಮೈಸೂರು ವಿಶ್ವವಿದ್ಯಾನಿಲಯದ ಮತ್ತು ಯೂನಿಯನ್ ಪತ್ರಿಕೆಗಳಲ್ಲಿ ಪ್ರಕಟವಾದ ‘ಷೇಕ್ಸಪಿಯರ್’, ‘ಸ್ಪೆನ್ಸರ್’, ‘ಕ್ಲಫ್’, ‘ವರ್ಡ್ಸ್ ವರ್ಥ್’, ‘ಲಾಲೆಗ್ರೋ’, ‘ಇಲ್ ಪೆನ್ಸೋರೋಸೋ’ ಮುಂತಾದವರನ್ನು ಕುರಿತ ಬರಹಗಳು ಇಂಥಹ ಕೃತಿಗಳಾಗಿವೆ. ‘ಪಾಶ್ಚಾತ್ಯ ಗಂಭೀರ ನಾಟಕಗಳು’ 1217 ಪುಟಗಳ ಪಾಂಡಿತ್ಯಪೂರ್ಣ ಬೃಹದ್ಗ್ರಂಥ. ಪ್ರಾಚೀನ ಗ್ರೀಕ್ ನಾಟಕಗಳಿಂದ ಪ್ರಾರಂಭಗೊಂಡು ಇಪ್ಪತ್ತನೆಯ ಶತಮಾನಾದವರೆಗಿನ ವಿಸ್ತಾರವಾದ ಜ್ಞಾನಭಂಡಾರ ಇಲ್ಲಿದೆ. ನಾಟಕ ಸಾಹಿತ್ಯವನ್ನು ಕುರಿತು ಇಷ್ಟು ವ್ಯಾಪಕವಾದ ವಿಮರ್ಶಾಗ್ರಂಥ ಕನ್ನಡದಲ್ಲಿ ಮಾತ್ರವಲ್ಲ, ಬೇರೆ ಭಾರತೀಯ ಭಾಷೆಗಳಲ್ಲೂ ಅಪೂರ್ವ ಎಂದು ಕುವೆಂಪು ಗುರುತಿಸಿದ್ದಾರೆ.
‘ರಂಗಭಿನ್ನಪ’ ರಂಗಣ್ಣನವರ ಸೃಜನಾತ್ಮಕ ಪ್ರತಿಭೆಯ ಗಮನಾರ್ಹ ಕೃತಿ. ಇದೊಂದು ಮುಕ್ತಕಗಳ ಸಂಕಲನ. ಚಿಂತನೆ, ಅನುಭವ, ವರ್ಣನೆ, ಕಲ್ಪನೆ, ಭಾವಗೀತ ಗುಣ ಏಕತ್ರ ಮೇಳೈಸಿರುವ ಪಧಾನ ಕೃತಿ. ಇಲ್ಲಿನ ರಚನೆಗಳ ಮೇಲೆ ವಚನಗಳ ಪ್ರಭಾವ ಇದೆ. ರಂಗಣ್ಣನವರು ‘ವಚನದಾಸ’ ತಾನೆಂದು ಕೃತಿಯ ಮುನ್ನುಡಿಯಲ್ಲಿ ಹೇಳಿಕೊಂಡಿರುವುದು ಈ ಮಾತನ್ನು ದೃಢಪಡಿಸುತ್ತವೆ. ಸಂಪುಟದಲ್ಲಿ 1212 ವಚನಗಳಿವೆ. ಇವುಗಳಲ್ಲಿ ಬಹುತೇಕವು ಕಾವ್ಯಾತ್ಮಕ ಅಭಿವ್ಯಕ್ತಿ, ಅಂತರ್ಗತಗೊಳಿಸಿಕೊಂಡಿರುವ ಪ್ರಾಪಂಚಿಕ ಜ್ಞಾನದಿಂದಾಗಿ ಗಮನ ಸೆಳೆಯುತ್ತವೆ.
ಸೃಜನಶೀಲ ಬರಹ, ಗಂಭೀರ ವಿಮರ್ಶೆಗಳೊಂದಿಗೆ ಸಾಮಾನ್ಯ ಓದುಗರಿಗೂ ಉಪಯೋಗವಾಗುವಂತ ವಿವಿಧ ವಿಷಯಗಳನ್ನು ಕುರಿತ ಕಿರು ಹೊತ್ತಿಗೆಗಳನ್ನು ರಂಗಣ್ಣನವರು ಪ್ರಕಟಿಸಿದ್ದಾರೆ. ಕುಮಾರವ್ಯಾಸ, ಕುಮಾರವ್ಯಾಸ ವಾಣಿ, ರುಚಿ, ಹಾಸ್ಯ, ವಿಡಂಬನ – ಇಂಥ ಕೃತಿಗಳು ಮೈಸೂರು ವಿಶ್ವವಿದ್ಯಾನಿಲಯದ ಪ್ರಚಾರೋಪನ್ಯಾಸ ಪುಸ್ತಕಮಾಲೆಯಲ್ಲಿ ಅಚ್ಚಾಗಿವೆ. ರಾಮಾಯಣದ ವಸ್ತುವನ್ನಾಧರಿಸಿ ‘ಕಿರು ನಾಟಕಗಳು’, ಮಹಾಭಾರತದಲ್ಲಿನ ಪ್ರಸಂಗವಾದ ‘ಉತ್ತರ ಕುಮಾರ’ ನಾಟಕಗಳು ಬೆಳಕು ಕಂಡಿವೆ. ‘ಹರಿಶ್ಚಂದ್ರ’ ರಾಘವಾಂಕನ ‘ಹರಿಶ್ಚಂದ್ರ ಕಾವ್ಯ’ದ ರೂಪಾಂತರ. ‘ಆಂಟನ್ ಚಿಕಾವ್’ ಚಿಕಾವನ ಹಲವು ಕಥೆ ಕಾದಂಬರಿಗಳ ಕನ್ನಡ ಭಾಷಾಂತರ. ‘ಕೋಲ್ ಕೋಲ್ ಕೂಡಿ ಬರಲಿ’ ಗೀತ ಸಂಗ್ರಹ. ಓದುಗರ ತಿಳುವಳಿಕೆ ವಿಸ್ತಾರಕ್ಕಾಗಿ ‘ನಾಟುನುಡಿ’, ‘ಕವಿ ಕಥಾಮೃತ’ ಕೃತಿಗಳನ್ನು ರಚಿಸಿದ್ದಾರೆ.
ಬಹುಮುಖ ಆಸಕ್ತಿಯ ರಂಗಣ್ಣನವರು ಕನ್ನಡದಲ್ಲಿ ರಚಿಸಿರುವಂತೆ ಇಂಗ್ಲೀಷಿನಲ್ಲೂ ಕೃತಿ ರಚಿಸಿದ್ದಾರೆ. ‘Knots and Knotting’, ‘The Lady and the Ring’, ‘Old Tale Re-told’, ‘B. M Srikantaiah – a profile’ ಅವರು ಬರೆದ ಇಂಗ್ಲೀಷ್ ಪುಸ್ತಕಗಳು.
ಹೀಗೆ ರಂಗಣ್ಣನವರು ತಮ್ಮ ವೈವಿಧ್ಯಮಯ ಕೃತಿಗಳಿಂದ ಬಹುಕಾಲ ಕನ್ನಡ ಸಾಹಿತ್ಯದಲ್ಲಿ ಉಳಿಯುತ್ತಾರೆ. ರಂಗಣ್ಣನವರು 1987ರ ಫೆಬ್ರುವರಿ 18ರಂದು ಈ ಲೋಕವನ್ನಗಲಿದರು.
ಈ ಮಹಾನ್ ಚೇತನಕ್ಕೆ ನಮ್ಮ ನಮನ.
[ಆಧಾರ: ಎಸ್. ವಿ. ರಂಗಣ್ಣ ಅವರ ಕುರಿತ ಶ್ರೀಕಂಠ ಕೊಡಗೆ ಅವರ ಬರಹ]
ಫೋಟೋ ಕೃಪೆ: www.kamat.com
On the birth anniversary of Prof S V Ranganna
ಕಾಮೆಂಟ್‌ಗಳು