ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಆನಂದ ಋಗ್ವೇದಿ


ಆನಂದ ಋಗ್ವೇದಿ

ಡಾ. ಆನಂದ ಋಗ್ವೇದಿ ಅವರು ಕವಿಯಾಗಿ, ಕತೆಗಾರರಾಗಿ, ನಾಟಕಕಾರರಾಗಿ, ವಿಮರ್ಶಕರಾಗಿ ಹೆಸರಾಗಿದ್ದಾರೆ.

ಫೆಬ್ರುವರಿ 24,  ಆನಂದ ಋಗ್ವೇದಿ ಅವರ ಜನ್ಮದಿನ. ತಂದೆ ರಾಘವೇಂದ್ರ ರಾವ್ ತಿರುಮಲಾರಾಯ ಕುಕ್ಕವಾಡ.  ತಾಯಿ ಪ್ರಸಿದ್ಧ ಬರೆಹಗಾರ್ತಿ ನಮ್ಮೆಲ್ಲರ ಆತ್ಮೀಯರಾದ ಸುಶೀಲಾದೇವಿ ಆರ್. ರಾವ್ Susheela Devi.  ಆನಂದ ಅವರು ದಾವಣಗೆರೆಯ ಡಿ.ಆರ್.ಎಮ್. ಕಾಲೇಜಿನಲ್ಲಿ ವಿಜ್ಞಾನ ಪದವೀಧರರಾಗಿ ನಂತರ ಸಾಹಿತ್ಯಾಸಕ್ತಿಯಿಂದಾಗಿ ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದು, ಕನ್ನಡ ವಿಶ್ವವಿದ್ಯಾಲಯದಲ್ಲಿ ಅಮರೇಶ ನುಗಡೋಣಿಯವರ ಮಾರ್ಗದರ್ಶನದಲ್ಲಿ "ಸಮಕಾಲೀನ ಕನ್ನಡ ಕತೆಗಳ ಸಾಂಸ್ಕೃತಿಕ ಸ್ವರೂಪಗಳ ಅಧ್ಯಯನ"ಕ್ಕೆ ಪಿಎಚ್.ಡಿ ಗಳಿಸಿದ್ದಾರೆ. 

ಆನಂದ ಋಗ್ವೇದಿ ಅವರು ಆರೋಗ್ಯ ಇಲಾಖೆಯಲ್ಲಿ ಸಹಾಯಕ ಆಡಳಿತಾಧಿಕಾರಿಯಾಗಿದ್ದಾರೆ.

ಆನಂದ ಋಗ್ವೇದಿ ಅವರ ಕೃತಿಗಳಲ್ಲಿ 'ಜನ್ನ ಮತ್ತು ಅನೂಹ್ಯ ಸಾಧ್ಯತೆ', 'ಮಗದೊಮ್ಮೆ ನಕ್ಕ ಬುದ್ಧ', 

'ಕರಕೀಯ ಕುಡಿ' ಕಥಾಸಂಕಲನಗಳು. 'ನಿನ್ನ ನೆನಪಿಗೊಂದು ನವಿಲುಗರಿ', 'ತಥಾಗತನಿಗೊಂದು ಪದ್ಮಪತ್ರ',  'ಸೌಗಂಧಿಕಾ ಪುಷ್ಪ ಮತ್ತು ಇತರ ಕವಿತೆಗಳು' ಕವನ ಸಂಕಲನಗಳು.  'ಉರ್ವಿ' ನಾಟಕ.  'ತಳಮಳದ ಹಾದಿ' ಮತ್ತು 'ಪೂರ್ವೋತ್ತರ' ಇವರ ವಿಮರ್ಶೆ ಕೃತಿಗಳು. 'ಕಥಾಸ್ವರೂಪ' ಪಿಹೆಚ್.‌ಡಿ ಸಂಶೋಧನಾ ಪ್ರಬಂಧ. 'ಕುಣಿದು ಕಾಡುವ ಗಾಳಿ' ಇವರು ಪ್ರಕಟಿಸಿರುವ ಸಾಂಸ್ಕೃತಿಕ ಓದಿನ ಟಿಪ್ಪಣಿಗಳು. 'ಅನುಭವದ ಅಮೃತತ್ವ' ಎಂಬುದು ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಕಟಿಸಿರುವ ಇವರ ಸಂಶೋಧನಾ ಗ್ರಂಥ. 

ಆನಂದ ಋಗ್ವೇದಿ ಅವರ 'ಉರ್ವಿ' ನಾಟಕಕ್ಕೆ ಕನ್ನಡ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನ ಸಂದಿದೆ.  ಇದಲ್ಲದೆ ಕಡೆಂಗೋಡ್ಲು ಶಂಕರಭಟ್ಟ ಕಾವ್ಯ ಪ್ರಶಸ್ತಿ,  ಜೋಳದರಾಶಿ ದೊಡ್ಡನಗೌಡರ ಪ್ರಶಸ್ತಿ, ಮುದ್ದಣ ರತ್ನಾಕರ ವರ್ಣಿ ದತ್ತಿ ಪ್ರಶಸ್ತಿ, ಪಾಪು ಕಥಾ ಪುರಸ್ಕಾರ, ಅಮ್ಮ ಪ್ರಶಸ್ತಿ, ಸಾಮಾಜಿಕ ಸೇವೆಗಾಗಿ 'ಪ್ರೌಡ್ ಇಂಡಿಯನ್' ಅವಾರ್ಡ್ ಮುಂತಾದ ಅನೇಕ ಪ್ರಶಸ್ತಿ ಗೌರವಗಳು ಇವರಿಗೆ ಸಂದಿವೆ. 

ತಮ್ಮ ಹೆಸರಾದ 'ಆನಂದ'ವನ್ನು ತಮ್ಮ ಮುಖದಲ್ಲಿ ಸದಾ ಬಿಂಬಿಸುವಂತಿರುವ ಆನಂದ ಋಗ್ವೇದಿ ಅವರ ಬದುಕು ಸದಾ ಆನಂದಮಯವಾಗಿರಲಿ. 


Happy birthday ಡಾ. ಆನಂದ್ ಋಗ್ವೇದಿ Anand Rigwedi🌷🌷🌷


 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ