ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಎಚ್.ಎಸ್. ಶ್ರೀಮತಿ


 ಎಚ್. ಎಸ್. ಶ್ರೀಮತಿ


ಎಚ್. ಎಸ್. ಶ್ರೀಮತಿ ವಿಶ್ವದ ಶ್ರೇಷ್ಠ ಸ್ತ್ರೀಸಂವೇದನಾ ಚಿಂತನೆಗಳನ್ನು ಕನ್ನಡದ ಓದುಗರಿಗೆ ತಂದು ಕೊಟ್ಟಿರುವ ಮಹತ್ವದ ಬರಹಗಾರ್ತಿ.

ಶ್ರೀಮತಿ 1950ರ ಫೆಬ್ರುವರಿ 25ರಂದು ಬೆಂಗಳೂರಿನ ಹೊಸಕೋಟೆಯಲ್ಲಿ ಜನಿಸಿದರು. ತಂದೆ ಎಚ್.ಕೆ. ಸೂರ್ಯನಾರಾಯಣ ಶಾಸ್ತ್ರಿ. ತಾಯಿ ಲಲಿತ. 

ಬೆಂಗಳೂರಿನಲ್ಲಿ ಅಧ್ಯಾಪನ ವೃತ್ತಿ ನಡೆಸಿದ ಶ್ರೀಮತಿ ಅವರು ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.

ಶ್ರೀಮತಿ ಅವರ ಸಾಹಿತ್ಯ ಕೃಷಿಯಲ್ಲಿ ಸ್ತ್ರೀ ಸಂವೇದನೆಗಳು ಮತ್ತು ಸ್ರೀವಾದವೇ ಪ್ರಮುಖ ವಸ್ತು.  ಗೌರಿದುಃಖ, ಹೆಣ್ಣು ಹೆಂಗಸು, ಉದ್ಗಮ, ಚಹರೆ, ಸ್ತ್ರೀವಾದಿ ಸಂಶೋಧನೆ - ವಿಧಿ ವಿಧಾನಗಳು, ಸ್ತ್ರೀವಾದ ಮತ್ತು ಲೈಂಗಿಕತಾವಾದ, ಹೆಣ್ಣು ಬರಹದ ಒಳ ಬಂಡಾಯ, ಮಹಿಳೆ ದುಡಿಮೆ ಮತ್ತು ಬಿಡುವು, ಸ್ತ್ರೀವಾದ ತಾತ್ವಿಕತೆ, ಸ್ತ್ರೀವಾದ ಅನ್ವಯಿಕತೆ, ಸ್ತ್ರೀವಾದ: ಚಿಂತನೆ ಮತ್ತು ಹೋರಾಟ, ಸ್ತ್ರೀವಾದ: ಪದ ವಿವರಣ ಕೋಶ, ಸ್ತ್ರೀ ವಾದಿ ಭಾಷಾಶಾಸ್ತ್ರ ಪ್ರವೇಶಿಕೆ, ಮಹಿಳಾ ಆರ್ಥಿಕತೆ, ಹೆಣ್ಣುತನ ಎಂಬ ಕಣ್ಕಟ್ಟು, ಆಧುನಿಕ ಭಾರತದಲ್ಲಿ ಮಹಿಳೆ ಮುಂತಾದ ಬರಹಗಳು ಇವರ ಕೃತಿಗಳಲ್ಲಿವೆ.

ಶ್ರೀಮತಿ ಅವರು ವಿಶ್ವದ ಶ್ರೇಷ್ಠ ಸ್ತ್ರೀವಾದ ಚಿಂತನೆಗಳನ್ನು ಒಬ್ಬ ತಪಸ್ವಿನಿಯಂತೆ ಅಧ್ಯಯನ ನಡೆಸಿ ಕನ್ನಡ ಸಾಹಿತ್ಯ ಲೋಕಕ್ಕೆ ಕೊಡುಗೆ ನೀಡಿದ್ದಾರೆ.  ಹಜಾರ್ ಚೌರಾಶಿರ್ ಮಾ - ೧೦೮೪ರ ತಾಯಿ (ಮೂಲ ಬಂಗಾಳಿ-ಮಹಾಶ್ವೇತಾದೇವಿ), ರುಡಾಲಿ (ಮೂಲ ಬಂಗಾಳಿ- ಮಹಾಶ್ವೇತಾದೇವಿ), ದ ಸೆಕೆಂಡ್ ಸೆಕ್ಸ್ - ನಾಲ್ಕು ಸಂಪುಟಗಳಲ್ಲಿ (ಮೂಲ: ಸಿಮೊನ್ ದ ಬೊವ್), ಎಲ್ಲರಿಗಾಗಿ ಸ್ತ್ರೀ ವಾದ (ಮೂಲ ಬೆಲ್ ಹುಕ್ಸ್), ಮಹಾಶ್ವೇತಾದೇವಿ ಅವರ ಕಥಾ ಸಾಹಿತ್ಯ-೧ ಮತ್ತು ೨, ಸ್ತ್ರೀವಾದ ಅಂಚಿನಿಂದ ಕೇಂದ್ರದೆಡೆಗೆ (ಬೆಲ್ ಹುಕ್ಸ್) ಮುಂತಾದವು ಇವುಗಳಲ್ಲಿವೆ.  ಕನ್ನಡ ಮಹಿಳಾ ಸಾಹಿತ್ಯ ಚರಿತ್ರೆಯನ್ನು ಸಂಪಾದಿಸಿದ್ದಾರೆ.  ಅವರ ಚಿಂತನೆಗಳ ಮಾತುಕತೆಗಳು ವಿಡಿಯೊ ರೂಪದಲ್ಲಿ ಕೂಡಾ ಲಭ್ಯವಿದೆ. 

ಎಚ್. ಎಸ್. ಶ್ರೀಮತಿ ಅವರಿಗೆ ಎರಡು ಬಾರಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಮಹಾಶ್ವೇತಾದೇವಿ ಅವರ ಕಥಾ ಸಾಹಿತ್ಯ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ, ಕಿರಂ ನಾಗರಾಜ ಪ್ರಶಸ್ತಿ,  ಲೇಖಕಿಯರ ಸಂಘದಿಂದ ಎಚ್. ಎಸ್. ಪಾರ್ವತಿ ದತ್ತಿ ನಿಧಿ ಪ್ರಶಸ್ತಿ  ಸೇರಿದಂತೆ ಅನೇಕ ಪ್ರಶಸ್ತಿ ಗೌರವಗಳು ಸಂದಿವೆ. 

ಎಚ್. ಎಸ್. ಶ್ರೀಮತಿ ಅವರ ಸ್ತ್ರೀವಾದ ಚಿಂತನೆಗಳನ್ನು ಕುರಿತ ಈ ಲೇಖನ ನನಗಿಷ್ಟವಾಯಿತು.  ಹಾಗಾಗಿ ಇಲ್ಲಿ ತಮ್ಮೊಡನೆ ಹಂಚಿಕೊಳ್ಳುತ್ತಿರುವೆ. 

—-

ಸ್ತ್ರೀವಾದ ಹೋರಾಟ ಪ್ರತಿ ಪುರುಷ ಮತ್ತು ಮಹಿಳೆ ವೈಯಕ್ತಿಕವಾಗಿಯೇ ನಿಭಾಯಿಸಬೇಕಾದ ಹೊಣೆ

ಮಾನವರು ಸಮುದಾಯಗಳಾಗಿ ಬದುಕಲು ತೊಡಗಿದ ಆರಂಭದಲ್ಲಿ ಗಂಡು ಮತ್ತು ಹೆಣ್ಣುಗಳೆಂಬ ತಾರತಮ್ಯಗಳೇನೂ ಇರಲಿಲ್ಲ. ಮುಂದುವರೆದ ಒಂದು ಹಂತದಲ್ಲಿ ಗಂಡಸರ ಪ್ರಾಬಲ್ಯಕ್ಕೆ ಹೆಚ್ಚಿನ ಅವಕಾಶಗಳು ತೆರೆದುಕೊಂಡವು. ಇದನ್ನೇ ನಿರಂತರವಾಗಿಸುವ ಪ್ರಯತ್ನಗಳಲ್ಲಿ ಗಂಡಸರು ತಮ್ಮ ಜೊತೆಗೇ ಇದ್ದ ಹೆಂಗಸರ ಮೇಲೆ ಅಧಿಕಾರವನ್ನು ಸ್ಥಾಪಿಸುವ ಪ್ರಯತ್ನಗಳಲ್ಲಿ ತೊಡಗಿದರು. ಗಂಡು ಮತ್ತು ಹೆಣ್ಣುಗಳ ಸಂಬಂಧಗಳಲ್ಲಿ ಯಜಮಾನಿಕೆ ಮತ್ತು ಅಧೀನತೆ ಎಂಬ ಶ್ರೇಣೀಕರಣ ಮೊದಲಾಯಿತು.

ಇದೇ ಮಾನವ ಚರಿತ್ರೆಯಲ್ಲಿ ಕಾಣಿಸಿಕೊಂಡ ಮೊತ್ತಮೊದಲ ಶ್ರೇಣೀಕರಣ ಎಂದು ಏಂಗೆಲ್ಸ್ ಗುರುತಿಸುತ್ತಾನೆ. ಮುಂದೆ ಈ ತಂತ್ರಗಾರಿಕೆಯೇ ಪ್ರಯೋಗಗೊಳ್ಳುತ್ತಾ ಜಾತಿ, ಜನಾಂಗ, ಕೋಮು, ವರ್ಗ ಎಂಬ ಲೆಕ್ಕವಿಲ್ಲದಷ್ಟು ಶ್ರೇಣೀಕರಣಗಳು ಜಾರಿಗೊಂಡವು. ಎಲ್ಲ ಬಗೆಯ ಶ್ರೇಣೀಕರಣಗಳೂ ಪ್ರಬಲರಾದವರು ದುರ್ಬಲರಾದವರ ಮೇಲೆ ಅಧಿಕಾರವನ್ನು ಸ್ಥಾಪಿಸುವ ತಂತ್ರಗಾರಿಕೆಗಳೇ ಆಗಿವೆ. ಇಂದಿಗೂ ಸಮಾಜ ವ್ಯವಸ್ಥೆ ಎಂದರೆ ಅಧಿಕಾರ ಮತ್ತು ಅಧೀನತೆಗಳ ಸಂಘರ್ಷ ಮಾತ್ರವೇ ಆಗಿದೆ. ಕಲ್ಪಿತ ಶತ್ರುವಿನೊಂದಿಗೆ ನಡೆಸುತ್ತಿರುವ ಈ ಸಂಘರ್ಷವು ಎಂದಿಗೂ ಮುಗಿಯಲಾರದು. ಈ ಎಲ್ಲ ಸಂಗತಿಗಳನ್ನೂ ಸಾಮಾಜಿಕ ಕಳಕಳಿಯ ಚಿಂತನಶೀಲರೂ, ಸಂವೇದನಾಶೀಲರೂ ಚರ್ಚಿಸುತ್ತಲೇ ಬಂದಿದ್ದಾರೆ.

ಸ್ತ್ರೀವಾದೀ ಚಿಂತನೆಯು ಕೂಡಾ ಪುರುಷರನ್ನು ಶತ್ರುವಾಗಿ ಕಲ್ಪಿಸಿಕೊಂಡೇ ಹುಟ್ಟಿದ್ದು. ಆದರೆ ಇಂದು ಈ ಚಿಂತನೆಯು ಅತ್ಯಂತ ಸೂಕ್ಷ್ಮವಾದ ದಾರ್ಶನಿಕ ಒಳನೋಟಗಳನ್ನು ಕಾಣಿಸಬಲ್ಲ ಪ್ರಬುದ್ಧತೆಯದಾಗಿ ಬೆಳೆದಿದೆ. ಎಲ್ಲ ದುರ್ಬಲ ಸಮುದಾಯಗಳೂ ನಿರಂತರವಾಗಿ ತೊಡಗಿಕೊಂಡೇ ಬರುತ್ತಿರುವ ಹೋರಾಟಗಳಿಗೆ ದಾರಿಗಳನ್ನು ಕಾಣಿಸಬಲ್ಲ ಸಾಮರ್ಥ್ಯ ಈ ಸ್ತ್ರೀವಾದೀ ದಾರ್ಶನಿಕ ನೋಟಕ್ಕೆ ಇದೆ. ಯಾವುದೇ ಹೋರಾಟಗಳು ಹೊಂದಿರಬಹುದಾದ ವೈಚಾರಿಕ ಆಶಯಗಳು, ಸಾಮರ್ಥ್ಯಗಳು ಕೇವಲ ಆರಂಭಿಕ ಬಿಂದುಗಳು ಮಾತ್ರವೇ ಆಗಿರುತ್ತವೆ; ಇವುಗಳ ನಿರ್ಣಾಯಕ ಅಂತ್ಯವಾಗಿ ಅವು ನಮ್ಮ ಜೀವನಕ್ರಮಗಳಲ್ಲಿ ಕ್ರಿಯಾಶೀಲವಾಗಬೇಕು ಎಂಬ ಒಳನೋಟವನ್ನು ಸ್ತ್ರೀವಾದೀ ದಾರ್ಶನಿಕತೆಯು ನೀಡುತ್ತದೆ. ಸಮಾಜವ್ಯವಸ್ಥೆಯಲ್ಲಿ ನಿರ್ಮಾಣಗೊಂಡಿರುವ ಶ್ರೇಣೀಕರಣಗಳೂ, ಆ ಕುರಿತು ನಡೆಯುತ್ತಿರುವ ಸಾಮಾಜಿಕ ಹೋರಾಟಗಳೂ ಈ ಮಾತನ್ನು ಗಮನಿಸುವ ಅಗತ್ಯವಿದೆ.

ಇಂದಿನ ಸ್ತ್ರೀವಾದಿಗಳು ಎಲ್ಲರೂ ಸ್ತ್ರೀವಾದಿಗಳಾಗೋಣ, ಸ್ತ್ರೀವಾದವು ನಮ್ಮೆಲ್ಲರ ಅಗತ್ಯವೇ ಆಗಿದೆ ಎಂದು ಹೇಳುತ್ತಿದ್ದಾರೆ. ಈವರೆಗೂ ಸ್ತ್ರೀವಾದ ಎಂದರೆ ಪುರುಷರೊಂದಿಗೆ ಸಾಮಾಜಿಕ ಸಮಾನತೆ, ಮಹಿಳಾ ಸ್ವಾತಂತ್ರ್ಯ ಎಂಬ ಮಾತುಗಳೇ ಕೇಳಿಬರುತ್ತಿದ್ದವು. ಈಗ ಇದ್ದಕ್ಕಿದ್ದಂತೆ ಸ್ತ್ರೀವಾದವನ್ನು ಎಲ್ಲರ ಅಗತ್ಯ ಎಂದು ಹೇಳಿದರೆ ಸುಲಭವಾಗಿ ನಂಬಲಾಗದು. ಆದರೆ ಇದು ತುಂಬಾ ಸೂಕ್ಷ್ಮವಾದ ಒಂದು ಚಿಂತನೆ. ಎಲ್ಲ ಬಗೆಯ ಸಾಮಾಜಿಕ ಶ್ರೇಣೀಕರಣಗಳಲ್ಲಿಯೂ ಪುರುಷರು ಮತ್ತು ಮಹಿಳೆಯರು ಹೆಚ್ಚೂಕಡಿಮೆ ಸಮಸಂಖ್ಯೆಯಲ್ಲಿ ಇದ್ದಾರೆ. ಇವರಿಬ್ಬರ ನಡುವೆ ಸಮಾಜ ವ್ಯವಸ್ಥೆ ಎಂಬ ಅಧಿಕಾರ ಕೇಂದ್ರವು ಶತ್ರುತ್ವವನ್ನು ಹುಟ್ಟುಹಾಕಿದೆ.

ನಮ್ಮಲ್ಲಿ ನಡೆಯುತ್ತಾ ಬಂದಿರುವ ವೈಚಾರಿಕ ಚರ್ಚೆಗಳು ಇವನ್ನೆಲ್ಲಾ ಬಿಡಿಬಿಡಿಯಾಗಿ ಸೂಕ್ಷ್ಮ್ಮಗಳಲ್ಲಿ ವಿವರಿಸುತ್ತಿವೆ. ಇಂಥ ಚರ್ಚೆಗಳ ಕೊನೆಯಲ್ಲಿ, ಸಾಧಾರಣವಾಗಿ, ಸಮಾಜವು ಬದಲಾಗಬೇಕು, ಮುಖ್ಯವಾಗಿ ಪುರುಷರ ಮನಸ್ಥಿತಿಯಲ್ಲಿ ಪರಿವರ್ತನೆಗಳು ಬರಬೇಕು ಎಂಬ ಅಮೂರ್ತವಾದ ಮಾತುಗಳಷ್ಟೇ ಕೇಳಿಸುತ್ತವೆ. ವೈಚಾರಿಕ ಚರ್ಚೆಗಳಲ್ಲಿ ಅಮೂರ್ತವಾಗಿಯೇ ಉಳಿದುಬಿಡುವ ಆಶಯಗಳು ನಮ್ಮೆಲ್ಲರ ಬದುಕುಗಳಲ್ಲಿ, ನಮ್ಮ ಜೀವನ ಕ್ರಮಗಳ ಎಲ್ಲ ಕ್ಷಣಗಳಲ್ಲಿಯೂ ಸಾಕಾರಗೊಳ್ಳುವ ಹಾದಿಗಳನ್ನು ಕುರಿತು ಸ್ತ್ರೀವಾದೀ ದಾರ್ಶನಿಕತೆಯು ಮಾತನಾಡುತ್ತದೆ.

ಆದರೆ ಈ ಯಾವ ಮಾತುಗಳನ್ನೂ ಒಂದು ವೈಚಾರಿಕ ಆಕೃತಿಯಾಗಿ ಕಟ್ಟಿ ನಿರೂಪಿಸಲು ಸಾಧ್ಯವಾಗುವುದಿಲ್ಲ. ಇದೊಂದು ಬಗೆಯ ವಿಶಿಷ್ಟವೂ, ಕ್ರಾಂತಿಕಾರಿಯೂ ಆದ ಹೋರಾಟದ ಬಗೆ. ಇಲ್ಲಿ ಪ್ರತಿಯೊಬ್ಬರೂ ಸಹಭಾಗಿಗಳು. ಇಲ್ಲಿ ನೇತಾರರೆನಿಸಿ, ಮಾರ್ಗದರ್ಶಕರೆನಿಸಿ ಯಾರೂ ನಿಂತಿರುವುದಿಲ್ಲ. ಇಲ್ಲಿ ಯಾರೂ ಹಿಂಬಾಲಕರಲ್ಲ. ಇಲ್ಲಿನ ಹೋರಾಟದ ಒಟ್ಟು ಚಿಂತನೆ ಸಾಮುದಾಯಿಕವಾದದ್ದೇ. ಆದರೆ ಹೋರಾಟವು ಮಾತ್ರ ಪ್ರತಿಯೊಬ್ಬರೂ ವೈಯಕ್ತಿಕವಾಗಿಯೇ ನಿಭಾಯಿಸಬೇಕಾದ ಹೊಣೆ ಎನಿಸಿ ನಿರಂತರವಾಗಿ ನಡೆಯಬೇಕು.

ಮಹಿಳೆಯರು ಮತ್ತು ಪುರುಷರು ತೀರಾ ವೈಯಕ್ತಿಕ ನೆಲೆಗಳಿಂದ ತೊಡಗಿ ಹಲವಾರು ಸಾರ್ವಜನಿಕ ವಲಯಗಳಲ್ಲಿ ಭೇಟಿಯಾಗುತ್ತಿರುತ್ತಾರೆ. ಅವರ ನಡುವೆ ಬರುವ ಹಲವು ಬಗೆಯ ಸಂಬಂಧಗಳಲ್ಲಿ ಅವೆಷ್ಟೋ ಮಾತುಕತೆಗಳು ನಡೆಯುತ್ತವೆ. ಕೊಡುಕೊಳ್ಳುವ ವ್ಯವಹಾರಗಳಲ್ಲಿ ಅವೆಷ್ಟೋ ರೂಢಿಗತ ವರ್ತನಾವಿಧಾನಗಳೂ ಇರುತ್ತವೆ. ಈ ಎಲ್ಲ ಕ್ಷಣಗಳಲ್ಲಿಯೂ ನಮ್ಮ ನಮ್ಮ ಮಾತುಕತೆಗಳನ್ನು, ವರ್ತನಾವಿಧಾನಗಳನ್ನು ಸೂಕ್ಷ್ಮ ಸಂವೇದನೆಗಳಲ್ಲಿ ಗಮನಿಸಿಕೊಳ್ಳಲು ನಮಗೆ ಸಾಧ್ಯವಾಗಲು ತೊಡಗಿದರೆ, ಹೋರಾಟವು ಸರಿದಾರಿಯಲ್ಲಿ ಸಾಗಿದೆ ಎಂದೇ ಅರ್ಥ. ಆದರೆ ಈ ಗಮನಿಸುವಿಕೆ ಮತ್ತು ತಿದ್ದಿಕೊಳ್ಳುವ ಕ್ರಿಯೆ ಎಂದರೆ ಒಮ್ಮೆಗೇ ಮುಗಿಯುತ್ತದೆ ಎಂದಿಲ್ಲ. ನಮಗೇ ತಿಳಿಯದೆಯೂ ನಾವು ಹಳೆಯ ಚಾಳಿಯ ಮಾತುಕತೆಗಳಿಗೆ, ವರ್ತನೆಗಳಿಗೆ ಹೊರಳಿಬಿಟ್ಟಿರುತ್ತೇವೆ. ಈ ಸೂಕ್ಷ್ಮದ ಎಚ್ಚರದಲ್ಲಿ ನಾವು ಸದಾಕಾಲವೂ ಇರಬೇಕಾಗುತ್ತದೆ.

ಅಧಿಕಾರ ಮತ್ತು ಅಧೀನತೆಯ ಸೂತ್ರವನ್ನು ನಿರಂತರವಾಗಿ ಉಳಿಸುವುದೇ ಪಿತೃಪ್ರಧಾನ ವ್ಯವಸ್ಥೆಯ ಮುಖ್ಯ ತಂತ್ರಗಾರಿಕೆ. ಈ ಸೂತ್ರಕ್ಕೆ ಬದ್ಧವಾಗಿ ಉಳಿಯುವಂತೆ ಜನರನ್ನು ಒತ್ತಾಯಿಸುವ ತರಬೇತಿಯನ್ನು ಅದು ಈ ವ್ಯವಸ್ಥೆಯ ಎಲ್ಲ ಸಾಂಸ್ಥಿಕ ವಲಯಗಳಲ್ಲಿಯೂ ಜಾರಿಯಲ್ಲಿ ಇಟ್ಟಿದೆ. ಹಾಗಾಗಿ ಯಾರಿಗೂ ಈ ತರಬೇತಿಯ ಪಾಠಗಳಿಂದ ಮುಕ್ತಿಯಿಲ್ಲ. ನಿರಂತರ ಪರಿಶ್ರಮದಿಂದ ಮಾತ್ರವೇ ಈ ಪಾಠಗಳನ್ನು ಮರೆಯುವ ಬಗೆಗಳನ್ನು ಶೋಧಿಸಬೇಕಾಗುತ್ತದೆ. ಏಕೆಂದರೆ ನಮ್ಮ ಅನುಭವ ಲೋಕದ ಪ್ರೀತಿ, ಗೌರವ, ಸಮಾನತೆ ಎಂಬ ಭಾವನೆಗಳನ್ನು ಮಾತ್ರವೇ ಅಲ್ಲ, ಅವುಗಳನ್ನು ವ್ಯಕ್ತಪಡಿಸುವ ಬಗೆಗಳನ್ನು ಕೂಡಾ ಆ ತರಬೇತಿಯೇ ವ್ಯಾಖ್ಯಾನಿಸಿಬಿಡುತ್ತದೆ.

ಉದಾಹರಣೆಗೆ, ಪುರುಷರು ಮಹಿಳೆಯರಿಗೆ ಪ್ರೀತಿ ಗೌರವಗಳನ್ನು, ವಸ್ತುಗಳನ್ನು ಕೊಡುವ ಮೂಲಕ ತೋರಿಸಬೇಕು, ಮತ್ತು ಮಹಿಳೆಯರು ಆ ಭಾವಗಳನ್ನು ಸೇವೆಯ ಮೂಲಕ ತೋರಿಸಬೇಕು ಎಂಬ ಪಾಠವನ್ನು ನಾವೆಲ್ಲರೂ ಕಲಿತಿದ್ದೇವೆ ಮತ್ತು ಹಾಗೆಯೇ ವರ್ತಿಸುತ್ತೇವೆ. ನಮ್ಮೆಲ್ಲರ ಬದುಕುಗಳ ಎಲ್ಲ ಕ್ಷಣಗಳೂ ಈ ಮಾದರಿಯವೇ ಆಗಿವೆ ಎಂಬುದಕ್ಕೆ ಉದಾಹರಣೆಗಳನ್ನು ಕೊನೆಯಿಲ್ಲದೆ ಜೋಡಿಸುತ್ತಲೇ ಹೋಗಬಹುದು. ಗಂಡಸರಾಗಲೀ, ಹೆಂಗಸರಾಗಲೀ ಇಷ್ಟೆಲ್ಲವನ್ನೂ ಚಿಂತಿಸಿ ಸಂಬಂಧಗಳನ್ನು ನಿಭಾಯಿಸುತ್ತಾರೆ ಎಂದೇನಲ್ಲ. ನಮಗೆ ದೊರೆಯುವ ತರಬೇತಿಗಳು ಅಷ್ಟು ಗಾಢವಾದವು ಎಂಬುದನ್ನು ನಾವು ತಿಳಿಯಬೇಕು.

ಅಧಿಕಾರ ಮತ್ತು ಅಧೀನತೆಯ ಸಮೀಕರಣವು ಮಾತ್ರ ಎಲ್ಲಿಯೂ ಸಡಿಲುಗೊಳ್ಳದಂತೆ ಕಾಯುವ ತರಬೇತಿಯ ರಾಜಕಾರಣವನ್ನು ಸುಲಭದಲ್ಲಿ ಅರ್ಥಮಾಡಿಕೊಳ್ಳುವುದು ಆಗದ ಮಾತು. ಆದರೂ ಈ ರಾಜಕಾರಣವನ್ನು ಭೇದಿಸದ ಹೊರತು ಯಾವ ಹೋರಾಟಗಳಿಗೂ ಅರ್ಥವೇ ಉಳಿಯುವುದಿಲ್ಲ. ಸ್ತ್ರೀವಾದೀ ದಾರ್ಶನಿಕತೆಯು ಈ ಹಾದಿಯಲ್ಲಿ ಬೆಳಕನ್ನು ತೋರುವ ಸಾಮರ್ಥ್ಯದ್ದಾಗಿದೆ. ಮಹಿಳೆಯರೂ, ಪುರುಷರೂ ಕೂಡಿಯೇ ಸ್ತ್ರೀವಾದಿಗಳಾಗಬೇಕು ಎಂದರೆ ಈ ಹಾದಿಯಲ್ಲಿ ನಡೆಯೋಣ ಎಂದಷ್ಟೇ ಅರ್ಥ. ವ್ಯವಸ್ಥೆಯ ತರಬೇತಿಯ ಪಾಠಗಳನ್ನು ನಾವೆಲ್ಲರೂ ಮರೆಯಬೇಕು. ಅಧಿಕಾರ ಮತ್ತು ಅಧೀನತೆಯ ಸಮೀಕರಣವನ್ನು ನಿರಾಕರಿಸಿ ನಿಲ್ಲಬೇಕು. ಇದು ಮಾತ್ರವೇ ಸಮಸಮಾಜದ ಕನಸುಗಳನ್ನು ಸಾಕಾರಗೊಳಿಸಬಲ್ಲುದು. ಈ ಹೋರಾಟದ ಕ್ರಮವು ಸ್ಪಷ್ಟವಾಗಿದೆ. ವ್ಯವಸ್ಥೆಯು ನೀಡಿದ ತರಬೇತಿಯ ಪಾಠಗಳನ್ನು ಮರೆಯುವುದು ಎಂದರೆ ನಮ್ಮನಮ್ಮ ಮಾತುಕತೆಗಳನ್ನು, ವರ್ತನೆಗಳನ್ನು ಅನುಕ್ಷಣವೂ ಗಮನಿಸಿಕೊಳ್ಳುವ ವಿವೇಚನೆಯನ್ನು ಬೆಳೆಸಿಕೊಳ್ಳುವುದು; ಮತ್ತು ಇದನ್ನೇ ಉಸಿರಾಡುವ, ಜೀವಿಸುವ ಅಭ್ಯಾಸಗಳನ್ನು ರೂಢಿಸಿಕೊಳ್ಳುವುದು. ಈ ಪ್ರಯತ್ನವು ನಮ್ಮ ಜೀವನ ಕ್ರಮಗಳಲ್ಲಿ ಹಾಸುಹೊಕ್ಕಾಗಿ ನೆಲೆಗೊಳ್ಳಬೇಕು.

---

ನಮ್ಮ ಕಾಲದ ಮಹತ್ವದ ಚಿಂತಕಿ ಮತ್ತು ಬರಹಗಾರ್ತಿ ಎಚ್. ಎಸ್. ಶ್ರೀಮತಿ ಅವರಿಗೆ ಅವರ ಹುಟ್ಟುಹಬ್ಬದ ದಿನದಂದು ಗೌರವಪೂರ್ವಕ ಶುಭಹಾರೈಕೆಗಳು.  ನಮಸ್ಕಾರ.

On the birthday of our great writer H. S. Shrimathi 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ