ಗರುಡಾಚಾರ್
ಮಹಾನ್ ರಕ್ಷಕ ಬಿ.ಎನ್. ಗರುಡಾಚಾರ್ ಇನ್ನಿಲ್ಲ 🌷🙏🌷
ಕನ್ನಡ ನಾಡು ಕಂಡ ದಕ್ಷ ಪೊಲೀಸ್ ಅಧಿಕಾರಿ ಬಿ.ಎನ್. ಗರುಡಾಚಾರ್ ಇಂದು ನಿಧನರಾಗಿದ್ದಾರೆ. ಅವರಿಗೆ 96 ವರ್ಷ ವಯಸ್ಸಾಗಿತ್ತು.
ಗರುಡಾಚಾರ್ ಅವರು ಬಯಲುಸೀಮೆಯ ನಾಗಮಂಗಲ ತಾಲೂಕಿನ ಬಿಂಡಿಗನವಿಲೆ ಹಳ್ಳಿಯ ಕೃಷಿ ಕುಟುಂಬದಲ್ಲಿ 1929ರಲ್ಲಿ ಜನಿಸಿದರು. ಹುಟ್ಟುತ್ತಲೇ ಕಷ್ಟಗಳು ಎದುರಾದವು. ಎಮ್ಮೆ, ದನ ಕಾಯುವ ಕೆಲಸ ಮಾಡಿ, ಸಗಣಿ ಬಾಚಿ ಬೇಸಾಯದ ಬಾಳುವೆ ಕಲಿತರು. ತಂದೆಯ ಅಕಾಲಿಕ ಮರಣದ ನಂತರ ಕಷ್ಟಕ್ಕೆ ಸಿಲುಕಿದ ಕುಟುಂಬಕ್ಕೆ ಅಮ್ಮ ಆಸರೆಯಾದರು. ಬಂಧುಗಳ, ಹಿತೈಷಿಗಳ ನೆರವಿನಲ್ಲಿ ಬೆಳೆದು, ಹಳ್ಳಿಯ ಕೂಲಿ ಮಠದಲ್ಲಿ ವಿದ್ಯಾಭ್ಯಾಸ ಆರಂಭಿಸಿದ ಬಾಲಕ ಗರುಡಾಚಾರ್, ಗೊರೂರು, ಹಾಸನ, ಮೈಸೂರುಗಳಲ್ಲಿ ಅಲೆದಾಡಿ, ಅವರಿವರ ಮನೆಯಲ್ಲಿ ಆಶ್ರಯ ಪಡೆದು, ವಾರಾನ್ನ ಉಂಡು ಎಂ.ಎ. ಸ್ನಾತಕೋತ್ತರ ಪದವಿ ಪಡೆದರು. ಮುಂದುವರಿದು, 1953ರಲ್ಲಿ ಐಪಿಎಸ್ ಉತ್ತೀರ್ಣತೆ ಸಾಧಿಸಿದರು.
ಗರುಡಾಚಾರ್ ಅವರು ಸರ್ವೇಯರ್, ಅಬಕಾರಿ ಇನ್ಸ್ಪೆಕ್ಟರ್ ಕೆಲಸಕ್ಕೆ ಸೇರಿದರು. ಅಲ್ಲಿಂದ ನೇರವಾಗಿ ಐಪಿಎಸ್ ಮಾಡಿ, ತಿರುವನ್ವೇಲಿಯಲ್ಲಿ ಅಸಿಸ್ಟೆಂಟ್ ಪೊಲೀಸ್ ಕಮಿಷನರ್ ಹುದ್ದೆ ಅಲಂಕರಿಸಿದರು. ಪೊಲೀಸ್ ವೃತ್ತಿಯಲ್ಲಿ ಶಿಸ್ತು ಮತ್ತು ದಕ್ಷತೆಯಿಂದ ಕಾರ್ಯ ನಿರ್ವಹಿಸಿದ ಗರುಡಾಚಾರ್ ಬಹಳ ಬೇಗ ಉನ್ನತ ಸ್ಥಾನಗಳನ್ನು ಅಲಂಕರಿಸಿ, ಅಧಿಕಾರಸ್ಥ ರಾಜಕಾರಣಿಗಳ ಗಮನ ಸೆಳೆದರು. ಕೊಪ್ಪಳ, ಹುಮ್ನಾಬಾದ್, ತುಮಕೂರು, ಬಳ್ಳಾರಿ, ಬೆಂಗಳೂರು ಜಿಲ್ಲಾ ಎಸ್ಪಿಯಾಗಿ ಉತ್ತಮ ಸೇವೆ ಸಲ್ಲಿಸಿ ಹೆಸರಾದರು.
ಬಿ.ಎನ್ ಗರುಡಾಚಾರ್ ಅವರು 1963ರಲ್ಲಿ ಬೆಂಗಳೂರು ನಗರದ ಸಂಚಾರ ಪೊಲೀಸ್ ಉಪ ಆಯುಕ್ತರಾಗಿದ್ದರು. ಆ ಸಮಯದಲ್ಲಿ ಬೆಂಗಳೂರಿನ ಕಾರ್ಪೊರೇಷನ್ ವೃತ್ತದಲ್ಲಿ ಬೆಂಗಳೂರು ನಗರದ ಮೊದಲ ಟ್ರಾಫಿಕ್ ಸಿಗ್ನಲ್ ಸ್ಥಾಪಿಸಿದರು. 1972ರಲ್ಲಿ ಡಿಐಜಿಯಾಗಿದ್ದಾಗ, 1975ರಲ್ಲಿ ಇಂಟಲಿಜೆನ್ಸ್ ಡಿಐಜಿ ಆದಾಗ, 1976ರಲ್ಲಿ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಆಗಿ ನೇಮಕಗೊಂಡಾಗ ಮುಖ್ಯಮಂತ್ರಿ ದೇವರಾಜ ಅರಸರ ಆಡಳಿತವಿತ್ತು. ಅನಂತರ ಅಡಿಷನಲ್ ಐಜಿ, ಡಿಜಿ ಮತ್ತು ಐಜಿಪಿಯಾಗಿ ನಿವೃತ್ತರಾದರು. ಖಡಕ್ ಅಧಿಕಾರಿ ಎಂದೇ ಹೆಸರು ಪಡೆದ ಗರುಡಾಚಾರ್ ಅವರು ವೀರೇಂದ್ರ ಪಾಟೀಲ್, ದೇವರಾಜ ಅರಸು, ಗುಂಡೂರಾವ್, ರಾಮಕೃಷ್ಣ ಹೆಗಡೆಯ ಅವರುಗಳೊಂದಿಗೆ ನಿಕಟ ಸಂಪರ್ಕವನ್ನಿಟ್ಟುಕೊಂಡಿದ್ದರು.
1975ರ ತುರ್ತು ಪರಿಸ್ಥಿತಿ ವೇಳೆಯಲ್ಲಿ ಇಂಟಲಿಜೆನ್ಸ್ ಐಜಿಯಾಗಿ, ರಾಷ್ಟ್ರಮಟ್ಟದ ರಾಜಕೀಯ ನಾಯಕರನ್ನು ಬಂಧನದಲ್ಲಿ ಇರಿಸುವ ಮೂಲಕ ರಾಷ್ಟ್ರವ್ಯಾಪಿ ಸುದ್ದಿಯಾಗಿದ್ದರು. ದೇವರಾಜ ಅರಸರನ್ನು 1962ರಿಂದ ಬಲ್ಲವರಾಗಿದ್ದು, ಅವರು ಮುಖ್ಯಮಂತ್ರಿಯಾಗಿದ್ದಾಗ, ಬೆಂಗಳೂರು ನಗರ ಪೊಲೀಸ್ ಕಮಿಷನರ್ ಆಗಿ ನೇಮಕಗೊಂಡು, ನಾಲ್ಕು ವರ್ಷಗಳ ಕಾಲ ಕಮಿಷನರ್ ಹುದ್ದೆಯಲ್ಲಿದ್ದು, ಪ್ರತಿದಿನ ಅರಸು ಅವರೊಂದಿಗೆ ಮುಖಾಮುಖಿಯಾಗುತ್ತಿದ್ದರು. ಕನ್ನಡಾಭಿಮಾನಿಯಾಗಿದ್ದದ್ದು ಮಾತ್ರವಲ್ಲದೆ, 60ರ ದಶಕದಲ್ಲಿ ಹೈದರಾಬಾದ್‌ನಲ್ಲಿ ಕಲಿತ ಉರ್ದುವನ್ನು ಕೊನೆಯವರೆಗೂ ಬಿಡದೆ, ಪ್ರತಿದಿನ ಡೈಲಿ ಸಾಲಾರ್ ಉರ್ದು ಪತ್ರಿಕೆಯನ್ನು ತಪ್ಪದೆ ಓದುವ ಹವ್ಯಾಸ ಇಟ್ಟುಕೊಂಡಿದ್ದರು. ಹಿರಿಯ ವಯಸ್ಸಿನಲ್ಲೂ ತಮ್ಮ ಪುತ್ರರ ಒಡೆತನದ ಪ್ರತಿಷ್ಠಿತ ಗರುಡಾ ಮಾಲ್‌ನಲ್ಲಿ, ಏಳನೆ ಮಹಡಿಯಲ್ಲಿ ಯುವಕರನ್ನೂ ನಾಚಿಸುವ ಹಾಗೆ ಲವಲವಿಕೆಯಿಂದ ಕಾರ್ಯ ನಿರ್ವಹಿಸುತ್ತಿದ್ದರು.
ಹಿರಿಯ ಪತ್ರಕರ್ತರಾದ. ಶೇಷಚಂದ್ರಿಕ ಹೀಗೆ ಹೇಳುತ್ತಾರೆ: "ಬಿ. ಎನ್. ಗರುಡಾಚಾರ್ಯರು ಕರ್ನಾಟಕ ಆಡಳಿತ ಇತಿಹಾಸದಲ್ಲಿ ಪ್ರಾಮಾಣಿಕತೆ, ಶಿಸ್ತು ಮತ್ತು ದಕ್ಷತೆಗೆ ಹೆಸರಾಗಿದ್ದ ಹಿರಿಯ ಚೇತನ. ತಮ್ಮ ತಪ್ಪು ಅಥವಾ ಪಾತ್ರ ಇಲ್ಲದೆ ಆಪಾದನೆ ಇಲ್ಲವೇ ಶಿಕ್ಷೆಗೆ ಒಳಗಾದ ಅಮಾಯಕರನ್ನು ಮುದ್ದಾಂ ಹುಡುಕಿಕೊಂಡುಹೋಗಿ ನೆರವು-ಸಹಾಯ ನೀಡುತ್ತಿದ್ದ ದಂತಕತೆ ಗರುಡಾಚಾರ್ಯರು.
ಧೈರ್ಯಶಾಲಿ. ಮುಲಾಜು, ವಶೀಲಿ
ಮತ್ತು ಅಂತಸ್ತು ಲೆಕ್ಕಿಸದ ಪೊಲೀಸ್ ರೂಪದ ಸಾಮಾಜಿಕ ಬಂಧು. ತುಂಬು ಬದುಕು ಇವರದು."
ಗರುಡಾಚಾರ್ ಅವರ ದಕ್ಷತೆ ಮತ್ತು ಪ್ರಾಮಾಣಿಕತೆಗಳಿಗೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಹಲವಾರು ಗೌರವಗಳು ಸಂದಿದ್ದವು.
ಗರುಡಾಚಾರ್ 2025ರ ಮಾರ್ಚ್ 28ರಂದು ಈ ಲೋಕವನ್ನಗಲಿದರು. ಈ ಮಹಾನ್ ಚೇತನಕ್ಕೆ ನಮನ.
Respects to departed soul Great and Honest Police Commissioner B. N. Garudachar 🌷🙏🌷
ಕಾಮೆಂಟ್‌ಗಳು