ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಜೀವನಧರ್ಮಯೋಗ




ಭಗವದ್ಗೀತೆಯ ವ್ಯಾಸಂಗ: ಡಿವಿಜಿಯವರ ದೃಷ್ಟಿ

- ಡಾ. ರುಕ್ಮಿಣಿ ರಘುರಾಮ್


ನಮ್ಮ ಭಾರತ ದೇಶದ ಅತಿ ಪ್ರಾಚೀನವಾದ ಹಾಗೂ ಜನಪ್ರಿಯವಾದ ಎರಡು ಮಹಾ ಕಾವ್ಯಗಳು ರಾಮಾಯಣ ಮತ್ತು ಮಹಾಭಾರತಗಳು. ಮಹಾಭಾರತದಲ್ಲಿ ಕೌರವರು ಹಾಗೂ ಪಾಂಡವರು ಕುರುಕ್ಷೇತ್ರದಲ್ಲಿ ಯುದ್ಧ ಮಾಡಲು ಒಬ್ಬರ ಎದುರು ಒಬ್ಬರು ನಿಂತಿರುತ್ತಾರೆ. ಯುದ್ಧದಲ್ಲಿ ಅರ್ಜುನನ ರಥದ ಸಾರಥಿ ಶ್ರೀಕೃಷ್ಣ.  ಯುದ್ಧ ಪ್ರಾರಂಭವಾಗುವುದಕ್ಕೆ ಮೊದಲು ಎರಡು ಸೇನೆಗಳ ಪರಿಚಯ ಮಾಡಿಕೊಳ್ಳುವುದಕ್ಕಾಗಿ ರಥವನ್ನು ಎರಡು ಸೇನೆಯ ಮಧ್ಯದಲ್ಲಿ  ಶ್ರೀಕೃಷ್ಣ ನಿಲ್ಲಿಸುತ್ತಾನೆ. ಆಗ ಎದುರುಗಡೆಯ ಸೈನ್ಯದಲ್ಲಿ ನಿಂತಿರುವ ತನ್ನ ಪ್ರೀತಿಯ ತಾತ ಭೀಷ್ಮ, ತನ್ನನ್ನು ಲೋಕೋತ್ತರ ಬಿಲ್ಗಾರನೆಂದು ತಯಾರು ಮಾಡಿದ ನೆಚ್ಚಿನ ಗುರು ದ್ರೋಣರು, ಮಾವಂದಿರು, ಸಹೋದರರು, ಅವರ ಮಕ್ಕಳು ಎಲ್ಲರನ್ನು ಕಂಡು ಅರ್ಜುನ ವಿಷಾದದಿಂದ ಗಾಂಡೀವವನ್ನು ಕೆಳಗೆ ಹಾಕಿಬಿಡುತ್ತಾನೆ. ದುಃಖ ತಪ್ತನಾಗುತ್ತಾನೆ. ಇಂಥ ಭ್ರಾಂತಿಗಳು ಸಂಕಟಗಳು ಅನಿಶ್ಚಿತತೆಗಳು ನಮ್ಮನ್ನೆಲ್ಲ ದಿನೇ ದಿನೇ ಕಾಡುತ್ತಿರುತ್ತವೆ. ಇಂಥ ಪ್ರಶ್ನೆಗಳು ಯಾವಾಗಲೂ ಒಂದು ರೂಪದಲ್ಲಿ ಅಲ್ಲದಿದ್ದರೆ ಮತ್ತೊಂದು ರೂಪದಲ್ಲಿ ಇದ್ದೇ ಇರುತ್ತದೆ. ಅಂತ ಪ್ರಶ್ನೆಗಳ ಉತ್ತರಗಳಿಗೆ ಆಧಾರವನ್ನು ಒದಗಿಸುವ ದ್ರವ್ಯದ ಗಣಿ ಭಗವದ್ಗೀತೆ.  ಆದ್ದರಿಂದ ಇದು ಸಾರ್ವಕಾಲಿಕವೂ ಸಾರ್ವದೇಶಿಕವೂ ಆದ ಜೀವನ ಧರ್ಮಶಾಸ್ತ್ರ ಎಂದು ಭಗವದ್ಗೀತೆಯ ಹಿರಿಮೆಯನ್ನು ಮೊದಲಿಗೆ ಡಿವಿಜಿಯವರು ವಿವರಿಸಿದ್ದಾರೆ. ಯುದ್ಧಭೂಮಿಯಲ್ಲಿ ಶ್ರೀಕೃಷ್ಣನು ಅವನನ್ನು ಯುದ್ಧ ಮಾಡಲೇಬೇಕೆಂದು ಪ್ರೋತ್ಸಾಹಿಸಿ ಹೇಳಿರುವ ಮಾತುಗಳೇ ಉಪದೇಶ ರೂಪವಾದ ಭಗವದ್ಗೀತೆ.

 

ಡಾ. ಡಿವಿಜಿಯವರು  ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯಲ್ಲಿ ಭಾನುವಾರಗಳಂದು ನಡೆಸುತ್ತಿದ್ದ ವ್ಯಾಸಂಗ ಗೋಷ್ಠಿಯಲ್ಲಿ ಭಗವದ್ಗೀತೆಯನ್ನು ತಮ್ಮ ಕೆಲವು ಮಿತ್ರರಿಗಾಗಿ ವ್ಯಾಸಂಗ ಮಾಡಿ ವಿವರಿಸಿದ್ದರು. ಆನಂತರ ಅದು ಅವರ ವಿದ್ವತ್ಪೂರ್ಣವಾದ ಮುನ್ನುಡಿ ಮತ್ತು ವಿವರಣೆಯೊಂದಿಗೆ 'ಭಗವತ್ಗೀತಾತಾತ್ಪರ್ಯ ಅಥವಾ ಜೀವನಧರ್ಮಯೋಗ' ಎಂದು ಪುಸ್ತಕ ರೂಪದಲ್ಲಿ ಪ್ರಕಟವಾಗಿ ಜನಪ್ರಿಯವಾಯಿತು. 1967ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಈ ಪುಸ್ತಕಕ್ಕಾಗಿ ಡಿವಿಜಿಯವರು ಪಡೆದರು.

 

ನಮ್ಮ ಭಾರತೀಯ ಭಾಷೆಗಳಲ್ಲಿಯೇ ಅಲ್ಲದೆ ಪಾಶ್ಚತ್ಯರು ಕೂಡ  ಭಗವದ್ಗೀತೆಗೆ ವಿವರಣೆಯನ್ನು ನೀಡಿದ್ದಾರೆ. ಡಿವಿಜಿಯವರು ಬರೆದಿರುವ ಭಗವದ್ಗೀತಾತಾತ್ಪರ್ಯ ಇಂದಿಗೂ ಕನ್ನಡದ ಒಂದು ಅತ್ಯುತ್ತಮ ಜನಪ್ರಿಯ ಗ್ರಂಥ ಎಂದು ಮನ್ನಣೆ ಪಡೆದಿದೆ.

 

ಭಗವದ್ಗೀತೆಯು ಮೋಕ್ಷ ಶಾಸ್ತ್ರ ಎಂದು ಪ್ರಸಿದ್ಧಿ ಪಡೆದಿದೆ. ಹಾಗಾಗಿ ಜನರು ತಮ್ಮ ತಂದೆ ತಾತಂದಿರು ಓದುತ್ತಿದ್ದರು ಎಂದು ಓದಲು ಪ್ರಾರಂಭಿಸಬಹುದು. ಕೆಲವರು ಮೋಕ್ಷ ಪಡೆದುಕೊಳ್ಳಬಹುದು ಎಂದು ಓದಲು ಪ್ರಾರಂಭಿಸುತ್ತಾರೆ. ಆದರೆ ಯಾವುದೇ ಒಂದು ಗಹನವಾದ ವಿಷಯವನ್ನು ಅಭ್ಯಾಸ ಮಾಡಲು ಪೂರ್ವ ಸಿದ್ಧತೆ ಬೇಕಾಗುತ್ತದೆ. ಉದಾಹರಣೆಗೆ ಮೆಡಿಕಲ್ ಕಾಲೇಜು ಪರೀಕ್ಷೆಗೆ ಹೋಗಲು ಅದಕ್ಕೆ ಅನುಗುಣವಾದ ಸಿಇಟಿ ಪರೀಕ್ಷೆಯಲ್ಲಿ ತೇರ್ಗಡೆ ಯಾಗಬೇಕು. ಆಗಲೇ ಮೆಡಿಕಲ್ ಕಾಲೇಜಿಗೆ ಹೋಗಲು ವಿದ್ಯಾರ್ಥಿಗೆ ಸಾಮರ್ಥ್ಯವಿರುತ್ತದೆ. ಭಗವದ್ಗೀತೆಯು ಒಂದು ಗಹನವಾದ ಅಧ್ಯಾತ್ಮ ಕೃತಿ. ಇದನ್ನು ಓದಿ ಅರ್ಥ ಮಾಡಿಕೊಳ್ಳಲು ಗೀತಾ ವ್ಯಾಸಂಗಕ್ಕೆ ಪೂರ್ವ ಸಿದ್ಧತೆ ಬೇಕು. ಉಪದೇಶವು ಅದನ್ನು ಬೇಡುವವನ ಯೋಗ್ಯತೆಗೆ ತಕ್ಕದಾಗಿ ಇರಬೇಕಲ್ಲವೇ. ನಮ್ಮ ನಮ್ಮ ಶ್ರದ್ಧೆಯು ನೀತಿ ಸಿದ್ಧತೆಯು ಬುದ್ಧಿಶಕ್ತಿಯು ಯಾವ ಯಾವ ಮಟ್ಟದ್ದು ಇರುತ್ತದೆಯೋ ಆಯಾಮಟ್ಟಕ್ಕೆ ತಕ್ಕಂತೆ ನಮಗೆ ಗೀತಾರ್ಥ ದೊರೆಯುತ್ತದೆ ಎಂದು ಡಿವಿಜಿ ಅಭಿಪ್ರಾಯಪಟ್ಟಿದ್ದಾರೆ. ಅದರಲ್ಲೂ ಭಗವದ್ಗೀತೆ ಮೋಕ್ಷಶಾಸ್ತ್ರ ಮಾತ್ರವೇ ಅಲ್ಲದೆ ಜೀವಶಾಸ್ತ್ರವಾಗಿದೆ. ಈ ಪ್ರಪಂಚದಲ್ಲಿ ಕಾಡುವಂತ  ಹಲವು ಪ್ರಶ್ನೆಗಳಿಗೆ ಭಗವದ್ಗೀತೆಯಲ್ಲಿ ಉತ್ತರವಿದೆ. ಎಲ್ಲರಿಗೂ ಭಗವದ್ಗೀತೆಯನ್ನು ಓದಿ ಅರ್ಥ ಮಾಡಿಕೊಳ್ಳುವ ಅಧಿಕಾರವಿದೆ, ಆದರೆ  ಈ ರೀತಿಯಾಗಿ ಒಂದು ಸಿದ್ಧತೆಯನ್ನು ಮಾಡಿಕೊಂಡು ಗೀತಾ ವ್ಯಾಸಂಗಕ್ಕೆ ತೊಡಗಿದರೆ ಮಾತ್ರ ಅದರ ಉದ್ದೇಶ ಸಫಲವಾಗುತ್ತದೆ. ಭಗವದ್ಗೀತೆಯಲ್ಲಿ ಪ್ರತಿಪಾದಿತವಾಗಿರುವ ವಿಷಯ ಭಗವಂತ ಶ್ರೀಕೃಷ್ಣನೇ ಹೇಳಿರುವುದು. ಇಲ್ಲಿ ಬರುವ ವಿಷಯಗಳು ಬಹಳ ಜಟಿಲವಾದದ್ದು. ಹಾಗಾಗಿ ಸಾಧಾರಣ ಜನ ಗೀತೆಯನ್ನು ಓದಬೇಕೆಂದು ಬಹಳ ಉತ್ಸಾಹದಿಂದ ಅದನ್ನು ಓದಲು ಹೋದಾಗ ಅವರಿಗೆ ನಿರಾಶೆಯಾಗಬಹುದು. ಒಂದೇ ಬಾರಿಗೆ ಒಂದು ಪ್ರಕರಣ ಅಥವಾ ಸಾಲು ಅರ್ಥವಾಗಲಿಲ್ಲವೆಂಬ ಕಾರಣಕ್ಕೆ ಗೀತೆಯ ಅಭ್ಯಾಸವನ್ನು ಬಿಡಬಾರದು. ಅದಕ್ಕೆ ಡಿವಿಜಿಯವರು ಕೊಡುವ ವಿವರಣೆ ಈ ರೀತಿ ಇದೆ - “ಜೀವನ ತತ್ವವು ಒಂದು ದೊಡ್ಡ ಬೆಟ್ಟ. ಅದನ್ನು ಹತ್ತಲು ಹೊರಟವರು ಮೆಟ್ಟಿಲು ಮೆಟ್ಟಿಲಾಗಿ ನಿಧಾನವಾಗಿ ಹತ್ತಿ, ಅಲ್ಲಲ್ಲಿ ವಿಶ್ರಾಂತಿ ಪಡೆದು, ಸುತ್ತಲಿನ ವಾತಾವರಣವನ್ನು ಉಸಿರಿ ಅನುಭವಿಸಿ ಅಂತಸ್ತಂತಸ್ತಾಗಿ ಮೇಲಕ್ಕೆ ಸಾಗಲು ಸಿದ್ದನಾಗಬೇಕು. ಇಲ್ಲಿ ಆತುರ ಸಲ್ಲದು. ಹಾಗಾಗಿ ಮನಸ್ಸಮಾಧಾನ ಮತ್ತು ಸಾವಧಾನ ಇವೆರಡೂ ಗೀತೆಯನ್ನು ಅಭ್ಯಾಸ ಮಾಡುವವರಿಗೆ ಮೊದಲು ಇರಬೇಕಾದ ಗುಣಗಳು”.

 

ಶ್ರೀಕೃಷ್ಣ ಹಾಗೂ ಅರ್ಜುನನ ನಡುವೆ ನಡೆದ ಸಂವಾದವೇ ಭಗವದ್ಗೀತೆ ಎಂಬುದು ನಮಗೆಲ್ಲ ತಿಳಿದಿರುವ ಸಂಗತಿ. ಗೀತೆ ಎಂದರೆ ಹಾಡು, ಅದರ ಮುಖ್ಯ ಲಕ್ಷಣ ಮನೋರಂಜನೆ. ಆದರೆ ಭಗವದ್ಗೀತೆಯಲ್ಲಿ ಬರುವುದು ಅರ್ಜುನನ ವಿಷಾದ ಯೋಗ, ಧ್ಯಾನ ಯೋಗ, ವಿಶ್ವರೂಪ ದರ್ಶನದಂಥ ಅದ್ಭುತ ಪ್ರಕರಣಗಳು ಮತ್ತು ಇವು ಉಪದೇಶ ರೂಪದಲ್ಲಿಯೂ ಇವೆ. ಭಗವದ್ಗೀತೆಯಲ್ಲಿ ಬುದ್ಧಿ ಮತ್ತು ಮನಸ್ಸು ಎರಡೂ ಸಮಾಗಮಗೊಳ್ಳುತ್ತದೆ. ಬುದ್ಧಿ ಮತ್ತು ಮನಸ್ಸನ್ನು ಪ್ರತ್ಯೇಕಿಸುವುದು ಅಸಾಧ್ಯ ಮತ್ತು ಅನುಚಿತವಾಗುವುದರಿಂದ ಭಗವದ್ಗೀತೆಯು ಶಾಸ್ತ್ರಕಾವ್ಯ ಎಂದು ಡಿವಿಜಿಯವರು ವಿವರಿಸಿದ್ದಾರೆ.  ನಮಗೆಲ್ಲ ತಿಳಿದಿರುವ ಹಾಗೆ ನಮ್ಮ ದೇಶದ ಮತಾಚಾರ್ಯರುಗಳಾದ  ಶಂಕರಾಚಾರ್ಯರು, ರಾಮಾನುಜಾಚಾರ್ಯರು ಹಾಗೂ ಮಧ್ವಾಚಾರ್ಯರು ಗೀತೆಯ ಮೇಲೆ ಭಾಷ್ಯಗಳನ್ನು ಬರೆದಿದ್ದಾರೆ. ಅಲ್ಲದೆ ನಮ್ಮ ಕಾಲದವರೇ ಆದ ಮಹಾತ್ಮ ಗಾಂಧಿಯವರು, ಬಾಲ ಗಂಗಾಧರ ತಿಲಕರು, ಅರವಿಂದರು, ಮುಂತಾದವರು ಭಗವದ್ಗೀತೆಯ ಬಗ್ಗೆ ಅಪಾರವಾದ ಗೌರವ ಆದರಗಳನ್ನು ಇರಿಸಿಕೊಂಡಿದ್ದರು. ಅದನ್ನು ಆಳವಾಗಿ ಅಭ್ಯಾಸ ಮಾಡಿದ್ದರು. ಎಷ್ಟೋ ಸಾವಿರ ವರ್ಷಗಳಿಂದ ಹಲವಾರು  ಪೀಳಿಗೆಯ ಜನರು ಭಗವದ್ಗೀತೆಯನ್ನು ಅಭ್ಯಾಸ ಮಾಡುತ್ತಿರುವುದರಿಂದ ಅದರಲ್ಲಿ ಜೀವನಕ್ಕೆ ಬೇಕಾಗುವ ಸಾಮಗ್ರಿ ಖಂಡಿತವಾಗಿ ಇದೆ ಎಂದು ಸಾಮಾನ್ಯ ಜನರು ಭಾವಿಸಿರುವುದು ಸ್ವಾಭಾವಿಕವಾಗಿದೆ.

 

ಇದರ ಗುಣ ವಿಶೇಷಗಳನ್ನು ವಿವರಿಸುತ್ತಾ ಭಗವದ್ಗೀತೆ ಸುಲಭ ಕಷ್ಟವಾದ ಅಥವಾ ಕಷ್ಟ ಸುಲಭವಾದ ಗ್ರಂಥ ಎಂದು ಡಿವಿಜಿಯವರು ಹೇಳಿದ್ದಾರೆ. ಇಲ್ಲಿ ನೀತಿ ಬೋಧನೆಯ ಭಾಗ ಸುಲಭವಾಗಿ ಕಂಡರೂ ತತ್ವ ನಿರೂಪಣೆಯ ಮಾರ್ಗ ಕಷ್ಟ. ವ್ಯಾಸಂಗ ಮಾಡುವವರು ಅದನ್ನು ಒಂದೇ ಬಾರಿಗೆ ತಿಳಿದುಕೊಂಡು ಬಿಡುತ್ತೇನೆ ಎಂಬ ನಂಬಿಕೆಯನ್ನು ಇರಿಸಿಕೊಂಡಿದ್ದರೆ ಅವರಿಗೆ ಭ್ರಮ ನಿರಸನವಾಗಬಹುದು. ಏಕೆಂದರೆ ಇಲ್ಲಿ ಪ್ರತಿಪಾದಿತವಾಗಿರುವ ವಿಷಯಗಳು ವಿಜ್ಞಾನ ತಂತ್ರಜ್ಞಾನಗಳಂತೆ ಕೈಗೆ ಸುಲಭವಾಗಿ ಸಿಗುವಂತದ್ದು ಅಲ್ಲ. ಗೀತಾಭ್ಯಾಸಕ್ಕೆ ಇರಲೇಬೇಕಾದ ಪೂರ್ವ ಸಿದ್ಧತೆಯೆಂದರೆ ಮನಶ್ಯೋಧನೆಯ ಕ್ರಮ. ಇವನ್ನು ಸಾಧನ ಚತುಷ್ಟಯ ಎಂದು ಕರೆಯುತ್ತಾರೆ. ನಿತ್ಯ ನಿತ್ಯ ವಿವೇಕ, ಇಹಾಮುತ್ರಾರ್ಥ ಫಲ ಭೋಗ ವಿರಾಗ, ಶಮಾದಿ ಷಟ್ಕ ಸಂಪತ್ತಿ, ಮುಮುಕ್ಷುತ್ವ ಇವುಗಳ ಮೂಲಕ  ಕಾಮ ಕ್ರೋಧ ಮಾತ್ಸರ್ಯಾದಿಗಳನ್ನು ಹದ್ದಿನಲ್ಲಿರಿಸಿಕೊಂಡು, ದೇಹ ಜೀವಕ್ಕಿಂತ ಮೇಲೆ ಆತ್ಮ ತತ್ವ ಒಂದು ಉಂಟೆಂದು ಗ್ರಹಿಸಿ, ತನ್ನ ಎಲ್ಲಾ ವ್ಯವಹಾರಗಳಲ್ಲಿಯೂ ಆ ಪರಮಾರ್ಥವನ್ನೇ ಸರ್ವೋತ್ತಮವಾದದ್ದೆಂದು ಪರಿಗಣಿಸಬೇಕು. ಇದು ಗೀತೆಯನ್ನು ಅಭ್ಯಾಸ  ಮಾಡುವವರಿಗೆ ಡಿವಿಜಿ ಯವರು ನೀಡಿರುವ ಮೊದಲ ಕಿವಿಮಾತು. ಈ ರೀತಿ ಸಿದ್ಧತೆಯನ್ನು ಮಾಡಿಕೊಳ್ಳದಿದ್ದರೆ ಭಗವದ್ಗೀತೆಯ ವ್ಯಾಸಂಗ ಕಷ್ಟವಾಗುತ್ತದೆ. ಸಂಭಾಷಣೆಯ ರೂಪದಲ್ಲಿ ಇರುವ ಗೀತೆಯ ಬಗ್ಗೆ ಅವರ  ವಿಶ್ಲೇಷಣೆ ಹೀಗಿದೆ: ಸಾಧಾರಣವಾಗಿ ಸ್ನೇಹಿತರು ಸಂಭಾಷಣೆಯಲ್ಲಿ ತೊಡಗಿದಾಗ ಆ ಗಳಿಗೆಯ ಸಂಗತಿಯಿಂದ ಪುರಾಣದ ಕಥೆಗೆ ಅಲ್ಲಿಂದ ಲೋಕದ ಪರಿಸ್ಥಿತಿಯ ಕಡೆ  ಅಲ್ಲಿಂದ ಸದ್ಯದ ಕಷ್ಟದ ಪರಿಸ್ಥಿತಿಯ ಕಡೆಗೆ, ಹೀಗೆ ಆ ಕಡೆಯಿಂದ ಈ ಕಡೆಗೆ ಯಾವುದೋ ಒಂದು ಕರಾರುವಾಕ್ಕಾದ ನಿಯಮವಿಲ್ಲದೆ ಸಂಭಾಷಣೆ ಸಾಗುತ್ತದೆ. ಗೀತೆಯು ಕೃಷ್ಣಾರ್ಜುನರ ಸಂಭಾಷಣೆ ರೂಪದಲ್ಲಿದೆ. ಇಲ್ಲಿ ಕರ್ಮ ಯೋಗ ಸಾಂಖ್ಯ ಯೋಗ ಮುಂತಾದ ಹದಿನೆಂಟು ಅಧ್ಯಾಯಗಳೆಂದು ವಿಭಾಗ ಮಾಡಲಾಗಿದ್ದರೂ, ಒಂದು ಅಧ್ಯಾಯಕ್ಕೆ ಸಂಬಂಧ ಪಟ್ಟ ವಿಷಯ ಮತ್ತೊಂದರಲ್ಲಿ ಬಂದಿರುತ್ತದೆ. ಹಾಗಾಗಿ ಸಾಂಖ್ಯ ಯೋಗದಲ್ಲಿ ಬರುವ ವಿಷಯ ಕರ್ಮ ಯೋಗದಲ್ಲಿಯೂ ಬರಬಹುದು. ಅಧ್ಯಯನ ಮಾಡುವಾಗ ಈ ವಿಷಯಗಳ ಬಗ್ಗೆ ಗಮನ ಹರಿಸಬಹುದು. ಗೀತೆಯ ಭಾಷೆಯ ಮುಖ್ಯ ಭಾಗವೂ, ಭಾವನೆ ಸಮಸ್ತವೂ ಶ್ರೀಕೃಷ್ಣಾರ್ಜುನರದ್ದೇ ಎಂದೂ, ಛಂದಸ್ಸು ಮಾತ್ರ ವ್ಯಾಸರದ್ದೆಂದು, ಸಂಜಯನ ಮುಖಾಂತರ ವ್ಯಾಸರು ಇದನ್ನು ನಮಗಾಗಿ ವರದಿ ಮಾಡಿದ್ದಾರೆ ಎಂದು ಡಿವಿಜಿ ಅಭಿಪ್ರಾಯ ಪಟ್ಟಿದ್ದಾರೆ.

 

ಈ ಪ್ರಪಂಚದಲ್ಲಿ ಜನ್ಮವೆತ್ತಿರುವ ಎಲ್ಲರೂ ಸಮಾನರಲ್ಲ. ಬುದ್ಧಿಶಕ್ತಿಯಲ್ಲಿ ಇಚ್ಛಾಶಕ್ತಿಯಲ್ಲಿ ವಿದ್ಯೆಯಲ್ಲಿ ಗುಣ ಸಂಪತ್ತಿನಲ್ಲಿ  ವೈರಾಗ್ಯ ಯೋಗ್ಯತೆಯಲ್ಲಿ ಅವರವರ ಸ್ವಭಾವಕ್ಕೆ ಅನುಗುಣವಾಗಿ ಈ ಗುಣಗಳು ಬಂದಿರುತ್ತದೆ.  ಪ್ರಪಂಚದಲ್ಲಿ ಇದು ಸ್ವಾಭಾವಿಕ.  ಹಾಗಾಗಿ ಗೀತೋಪದೇಶವು ಒಬ್ಬೊಬ್ಬರಿಗೆ ಒಂದೊಂದು ವಿಧವಾಗಿರಬೇಕಾಗುತ್ತದೆ. ವಿದ್ಯೆ ಸಾಮರ್ಥ್ಯಕ್ಕೆ ತಕ್ಕಂತೆ ಇರಬೇಕಾದದ್ದು ಬೋಧನೆ.  ಭಗವದ್ಗೀತೆಯ ವಿಷಯವು ಸೂಕ್ಷ್ಮ ವಿವೇಚನೆಯಲ್ಲಿ ಏಕೈಕ ಪ್ರಕಾರದ್ದಲ್ಲ. ಅದು ಬಹು ಪ್ರಕಾರದ್ದು. ಪಾಮರರಿಂದ ಪರಮಹಂಸರವರೆಗೂ, ಸಂಸಾರಿಯಿಂದ ಸನ್ಯಾಸಿಯವರೆಗೂ ಎಷ್ಟೋ ಅಂತಸ್ತುಗಳ ಜನ ಗೀತೆಯ ಉದ್ದೇಶದಲ್ಲಿದ್ದಾರೆ. ಈ ಅಧಿಕಾರ ಭೇದದ ಕಾರಣದಿಂದ ಉಪದೇಶ ಭೇದವೋ ಸಂಗತವಾಗಿದೆ "ಪತ್ರಂ ಪುಷ್ಪಂ ಫಲಂ ತೋಯಂ" ಎಂಬಲ್ಲಿಂದ ಹಿಡಿದು "ನಿಸ್ಸ್ತ್ರೈ ಗುಣ್ಯೋ ಭವಾರ್ಜುನ" ಎಂಬವರೆಗೂ ಉಪದಿಷ್ಟ ಮಾರ್ಗಗಳು ಅನೇಕವಾಗಿವೆ.  ಗಮ್ಯಸ್ಥಾನ ಒಂದು. ಈ ಮಾರ್ಗಗಳಲ್ಲಿ ಒಂದೇ ಮಾರ್ಗವು ಸರಿಯಾದದ್ದು ಎಂಬ ಹಠ ಸಾಧುವಾಗದು ಎಂಬ ಮಾತನ್ನು ಇಲ್ಲಿ ಹೇಳಿದ್ದಾರೆ.

 

ಭಗವದ್ಗೀತೆಯು ಎಲ್ಲರೂ ಓದುವಂಥದ್ದು ಎಂದು ಭಗವಂತ ಶ್ರೀ ಕೃಷ್ಣನೇ ಹೇಳಿದ್ದರೂ ತನ್ನ ಯೋಗ್ಯತೆ ಎಷ್ಟು ಎಂದೂ, ತನಗೆ ತಕ್ಕದ್ದು ಯಾವುದು ಎಂದೂ ಗೀತೆಯನ್ನು ವ್ಯಾಸಂಗ ಮಾಡುವವರೇ ನಿರ್ಧರಿಸಿಕೊಳ್ಳಬೇಕಾಗುತ್ತದೆ.  

 

ಯಾವಾನರ್ಥ ಉದಪಾನೇ

ಸರ್ವತಃ ಸಂಪ್ಲುತೋದಕೇ।

ತಾವಾನ್ ಸರ್ವೇಷು ವೇದೇಷು

ಬ್ರಾಹ್ಮಣಸ್ಯ ವಿಜಾನತ॥

 

ಎಲ್ಲೆಲ್ಲಿ ನೋಡಿದರೂ ನೀರಿದ್ದರೂ ಮನುಷ್ಯನ ಉಪಯೋಗಕ್ಕೆ ಬರುವುದು ಅವನ ಅವಶ್ಯಕತೆ ಎಷ್ಟೋ ಅಷ್ಟೇ. ಮನುಷ್ಯ ಸ್ವಭಾವಗಳಲ್ಲಿಯೂ ವೈವಿಧ್ಯತೆ ಇದ್ದೇ ಇದೆ. ಗೀತೆಯ ವ್ಯಾಸಂಗದ ವಿಷಯದಲ್ಲಿಯೂ ವ್ಯತ್ಯಾಸ ಉಂಟಾಗುತ್ತದೆ. ಇದಕ್ಕೆ ಒಂದು ಒಳ್ಳೆಯ ಉದಾಹರಣೆಯನ್ನು  ಡಿವಿಜಿ ನೀಡಿದ್ದಾರೆ. ಕೊಬ್ಬರಿ ಮಿಠಾಯಿ ಎಲ್ಲರಿಗೂ ಇಷ್ಟವಾದ ತಿಂಡಿಯೇ. ವ್ಯತ್ಯಾಸ ಮಾಡಬಾರದೆಂದು ಎರಡು ವರ್ಷದ ಮಗುವಿಗೆ ಎರಡು ಸೇರು ಮಿಠಾಯಿ ಕೊಟ್ಟರೆ ಅದರ ಪಾಡೇನಾಗುತ್ತದೆ. ದೇಹದ ಆಹಾರಕ್ಕೆ ಹೇಗೆ ಮಿತಿ ಇರಬೇಕೋ ಹಾಗೆಯೇ ಮನಸ್ಸಿನ, ಬುದ್ಧಿಯ ಆಹಾರಕ್ಕೂ ಮಿತಿ ಇರಬೇಕು. ಇದೇ ನ್ಯಾಯದಿಂದ ಪ್ರತಿಯೊಬ್ಬ ಜೀವಿಗೂ ಅವನ ಜೀವ ಪರಿಶೋಧನೆಗೂ, ಅವನ ಅಧ್ಯಾತ್ಮಿಕ ಪ್ರಗತಿಗೂ ಸಾಧಕವಾಗುವ ಉಪದೇಶ ಯಾವುದುಂಟೋ ಅದೇ ಅವನಿಗೆ ಶ್ರೇಷ್ಠ. ಹಾಗಾಗಿ ಅಲ್ಲಿರುವ ಎಲ್ಲ ವಿಷಯಗಳು ಎಲ್ಲರಿಗೂ ಅನ್ವಯ ಮಾಡಲಾಗುವುದಿಲ್ಲ ಎಂಬುದು ಅವರ ನಿಲುವು.

ಹಾಗಾದರೆ ಯಾವ ಮಾರ್ಗ ನಮಗೆ ಸೂಕ್ತ ಎಂದು  ವ್ಯಾಸಂಗ ಮಾಡಿದಾಗ ಹೊಳೆಯುತ್ತದೆ. ಭಗವದ್ಗೀತೆ ಮೋಕ್ಷ ಸಾಧನ ಎಂದು ಜನ ನಂಬಿರುವುದಿಂದ ಅದನ್ನು ಓದಿದ ಮಾತ್ರಕ್ಕೆ ಮೋಕ್ಷಕ್ಕೆ ಹಾರಲಾಗುವುದಿಲ್ಲ. ಅದು ಧರ್ಮಶಾಸ್ತ್ರವೂ ಆಗಿರುವುದರಿಂದ ನಮ್ಮ ಜನ ಮೋಕ್ಷಕ್ಕಾಗಿ ತಲ್ಲಣಿಸಬೇಕಾಗಿಲ್ಲ. ಧರ್ಮವಿದ್ದ ಕಡೆ ಮೋಕ್ಷ ತಾನಾಗಿ ಒಂದು ಗೂಡಿ ಬರುತ್ತದೆ. ಧರ್ಮ ಸೇವೆ ಮಾಡಿದವನಿಗೆ ಮೋಕ್ಷ ಸ್ವತಃ ಸಿದ್ಧವಾಗಿರುತ್ತದೆ ಎಂಬ ಮಹತ್ವದ ಸಂಗತಿಯನ್ನು ವಿವರಿಸಿದ್ದಾರೆ.

 

ಇನ್ನು ಭಗವದ್ಗೀತೆಯನ್ನು ಬರೀ ವ್ಯಾಸಂಗ ಮಾಡಿದರೆ ಸಾಲದಲ್ಲವೇ? ಗೀತೆಯಲ್ಲಿ ತತ್ವ ಭಾಗಕ್ಕಿಂತ ಸಾಧನ ಭಾಗ ಕಷ್ಟ. ಸಾಧನ ಕ್ರಮವು ಬಹುಧಾರ್ಢ್ಯವನ್ನು, ಸತತ ಪ್ರಯತ್ನವನ್ನು ಅಪೇಕ್ಷಿಸುತ್ತದೆ. ತತ್ವ ಶ್ರವಣ ಮಾಡಿದ ಮಾತ್ರದಿಂದ ಉದ್ದೇಶ ಸಿದ್ಧಿ ಆಯಿತೆಂದು ಭಾವಿಸತಕ್ಕದ್ದಲ್ಲ ಎಂಬ ಎಚ್ಚರಿಕೆಯ ಮಾತನ್ನು ಗಮನದಲ್ಲಿರಿಸಿಕೊಳ್ಳಬೇಕು. ನಮ್ಮ ಬುದ್ಧಿಗೆ ಅರ್ಥವಾಗಿದ್ದರೂ ಫಲ ಪ್ರಾಪ್ತಿ ಇಲ್ಲ. ವಾದಕ್ಕಾಗಿ ಹುಟ್ಟಿದ್ದಲ್ಲ ಈ ಶಾಸ್ತ್ರ. ಅನುಷ್ಠಾನ ಮಾಡಿದರೆ ಮಾತ್ರ ಸಂಪೂರ್ಣ ಫಲ ಪ್ರಾಪ್ತಿ ಎಂದು ಓದುಗರಿಗೆ ಅರ್ಥವತ್ತಾಗಿ ವಿವರಿಸಿದ್ದಾರೆ.


ಭಗವದ್ಗೀತೆಯ ಪಾರಾಯಣ ಮಾಡಿದರೆ ಪುಣ್ಯ ಕಾರ್ಯವೆಂದು ಭಾವಿಸಿರುವವರು ಹಲವರು. ಅದು ಒಳ್ಳೆಯದೇ.  ಬರೀ ಪಾರಾಯಣದಿಂದ ಉದ್ದೇಶ  ಈಡೇರಲಾರದು. ಗೀತಾ ವಾಕ್ಯವು ಬಾಯಿಪಾಠವಾಗಿದ್ದರೆ ಅದನ್ನು ಪದೇ ಪದೇ ಸ್ಮರಿಸಿಕೊಳ್ಳುವುದು ಸುಲಭವಾಗುತ್ತದೆ. ಹೀಗೆ ಮಾಡುವುದರಿಂದ ಅರ್ಥವೂ ಮನಸ್ಸಿಗೆ ಪರಿಚಯವಾಗುತ್ತದೆ. ಆದರೆ ಗೀತೆಯ ಪೂರ್ಣ ಫಲ ದೊರಕಬೇಕಾದರೆ ಅರ್ಥದ ಮೇಲೆ ದೃಷ್ಟಿ ಇಡಬೇಕು. ಅರ್ಥದ ಮೇಲೆ ಗಮನವಿಲ್ಲದ ಶುಕ ಪಠಿತದ ಪದ್ಧತಿ ಪ್ರಯೋಜನವಿಲ್ಲದ್ದು ಎಂದು ಬರೀ ಪಾರಾಯಣ ಮಾಡುವುದರ ಅಪಾಯವನ್ನು ಇಲ್ಲಿ ಡಿವಿಜಿಯವರು ಎತ್ತಿ ಹೇಳಿದ್ದಾರೆ.

 

ಭಗವದ್ಗೀತೆ ಪಾರಾಯಣ ಮಾಡಲು ಪ್ರಾರಂಭಿಸಿದಾಗ ನಮಗೆ ಬರುವ ಹಲವಾರು ಸಂಶಯಗಳ ವಿಷಯವಾಗಿಯೂ ಡಿವಿಜಿಯವರು ವಿವರಣೆ ನೀಡಿದ್ದಾರೆ. ಎಲ್ಲಾ ಆರ್ಷಕಾವ್ಯಗಳಲ್ಲಿ ಬರುವಂತೆ ಇಲ್ಲಿಯೂ ಪುನರುಕ್ತಿ ಉಪಮಾನೋಪಮೇಯ ವಚನಗಳು ಅಪಾತ ವಿರೋಧಭಾಸಕಗಳು ಹೇರಳವಾಗಿದೆ. ಆದರೆ ನಮ್ಮ ಗಮನ ಮಾತ್ರ ತಾತ್ಪರ್ಯದ ಕಡೆಗೆ ಇರಬೇಕಾದದ್ದು.  ಕೆಲವೊಮ್ಮೆ ಒಂದು ಅಭಿಪ್ರಾಯವನ್ನು ತಿಳಿಸಲು ಎರಡು ಮೂರು ಮಾತುಗಳನ್ನು ಉಪಯೋಗಿಸುವುದು ಪುನರುಕ್ತಿ ದೋಷವೆನಿಸಲಾರದು. ಪಾಠಶಾಲೆಯಲ್ಲಿ ವಿದ್ಯಾರ್ಥಿ ಬಾಲಕರಿಗೆ ಸುಲಭವೇ ಆದ ಒಂದು ವಿಷಯವನ್ನು ಸಾಮಾನ್ಯವಾದದ್ದನ್ನು ಕೂಡ ಉಪಾಧ್ಯಾಯರು ಪುನರಾವರ್ತನೆ ಮಾಡಿ ವಿವರಿಸುವುದಿಲ್ಲವೆ ಹಾಗೆಯೇ ಇಲ್ಲಿಯೂ ಪುನರುಕ್ತಿ ಓದುಗರ ಪ್ರಯೋಜನಕ್ಕಾಗಿ ಎಂದು ತಿಳಿದುಕೊಳ್ಳಬಹುದು. ಸೂಕ್ಷ್ಮ ವಾದ ಬಹಳ ಗಹನವಾದ ಒಂದು ತತ್ವವನ್ನು ಹೇಳಬೇಕಾದಾಗ ಓದುಗನ ಮನಸ್ಸಿನ ಮೇಲೆ ಪರಿಣಾಮ ಬೀರುವುದಕ್ಕಾಗಿ ಈ ರೀತಿ ಪುನರುಕ್ತಿ ಮಾಡಲಾಗಿದೆ ಎಂದು ವಿವರಿಸಿದ್ದಾರೆ.

 

ಗೀತೆಯ ಮಹೋಪದೇಶವೆಂದರೆ ಜೀವನದಲ್ಲಿ ಗೌರವ. ಜೀವನವು ಬ್ರಹ್ಮ ಚೈತನ್ಯದ ಒಂದು ಲೀಲೆ. ಯಾವ ಪ್ರಾಣಿ ಆದರೂ ಎಂಥ ಪ್ರಾಣಿಯಾದರು, ಅದರ ಅಂತರಂಗದ ಅಂತರಾಳದಲ್ಲಿ ಪರಬ್ರಹ್ಮ ಶಕ್ತಿಯ ಚೇತನಾಂಶವಿರುತ್ತದೆ, ಇದನ್ನು ನಾವು ಗ್ರಹಿಸಬೇಕು ಎಂದು ವಿವರಿಸಿದ್ದಾರೆ. ಗೀತೆಯ ವೈಶಿಷ್ಟ್ಯವೆಂದರೆ ಅದು ಜೀವನ ಯೋಗಶಾಸ್ತ್ರ. ಅದು ಗಂಡಸರಿಗೂ ಹೆಂಗಸರಿಗೂ ಅವರವರ ಮನಸ್ಸಿದ್ಧತೆಗೆ ತಕ್ಕಂತೆ ಅವರ ಬುದ್ಧಿ ಶಕ್ತಿಗೆ ತಕ್ಕಂತೆ ಅವರವರ ಜೀವನವನ್ನು ಯೋಗ್ಯ ಮಾಡಿಕೊಳ್ಳುವ ದಾರಿಯನ್ನು ತೋರಿಸುತ್ತದೆ. ಇದಕ್ಕೆ ಒಂದು ಉದಾಹರಣೆಯನ್ನು ಡಿವಿಜಿ ನೀಡಿದ್ದಾರೆ. ಸಮುದ್ರ ತಟದಲ್ಲಿ ಎಳೆಯ ಮಕ್ಕಳು ಕುಣಿದು ನಲಿಯುತ್ತಾರೆ,  ಶಂಖ ಕಪ್ಪೆ ಚಿಪ್ಪು ಆರಿಸುತ್ತಾರೆ, ದೊಡ್ಡವರು ಅಲೆಗಳ ಎರಚಿನಲ್ಲಿ ಮಿಂದು ಸುಖಿಸುತ್ತಾರೆ, ಕೆಲವರು ದಿಗಂತವನ್ನು ನೋಡಿ ಧ್ಯಾನ ಮಗ್ನರಾಗುತ್ತಾರೆ, ಇನ್ನು ಕೆಲವರು ದೋಣಿಗಳಲ್ಲಿ ಪ್ರಯಾಣಿಸುತ್ತಾರೆ, ಸಾಹಸಿಗಳು ಸಮುದ್ರದ ತಳ ಮುಟ್ಟಿ ಅಲ್ಲಿಂದ ಮುತ್ತು ಹವಳ ರತ್ನಗಳನ್ನು ತರುತ್ತಾರೆ. ಹೀಗೆ ಭಗವದ್ಗೀತೆಯು ಒಂದು ಮಹಾ ಸಮುದ್ರದಂತೆ, ಮಹಾಮೇಧಾವಿಗಳಿಂದ ಹಿಡಿದು ಎಲ್ಲಾ ದರ್ಜೆಗಳ ಎಲ್ಲಾ ಅಂತಸ್ತುಗಳ ಎಲ್ಲಾ ಯೋಗ್ಯತೆಯ ಜನರಿಗೂ ಗೀತೆಯು ಅವರವರ ಮನೋ ಬುದ್ಧಿ ಸಂಸ್ಕಾರಗಳಿಗೆ ತಕ್ಕಂತೆ ಆತ್ಮೋದ್ಧಾರದ ಸಂತೃಪ್ತಿಯನ್ನು ಒದಗಿಸುತ್ತದೆ ಎಂದು ಭಗವದ್ಗೀತೆಯ ಮಹತ್ವವನ್ನು ವಿವರಿಸಿದ್ದಾರೆ. ಮನುಷ್ಯನು ಈ ಲೋಕದಲ್ಲಿ ಹುಟ್ಟಿದ ಮೇಲೆ ಜೀವನವನ್ನು ನಡೆಸಲೇಬೇಕು. ಜೀವನವೆಂದರೆ ಕಷ್ಟ ಸುಖಗಳು ಒಂದರ ನಂತರ ಒಂದು ಬರುತ್ತದೆ.  ಭಗವದ್ಗೀತೆಯ ವೈಶಿಷ್ಟ್ಯವೆಂದರೆ ಮನುಷ್ಯ ಜೀವನದ ಯಾವ ಭಾಗವನ್ನೂ ಅದು ಗಣನೆಗೆ ತೆಗೆದುಕೊಳ್ಳದೆ ಬಿಟ್ಟಿಲ್ಲ. ಮನುಷ್ಯ ಯೋಗ್ಯತೆಯ ಯಾವ ಪಾರ್ಶ್ವವನ್ನೂ ಅದು ಪರ್ಯಾಲೋಚಿಸದೆ ಬಿಟ್ಟಿಲ್ಲ. ಮನುಷ್ಯ ಯೋಗ್ಯತೆಯ ಯಾವ ಮಟ್ಟದವರ ಬಗೆಗೂ ಅದು ಹಿತ ಚಿಂತನೆ ಮಾಡದೆ ಬಿಟ್ಟಿಲ್ಲ. ಅದು ಸರ್ವತೋಮುಖವಾಗಿ ಸರ್ವಾಂಗ ಪಟುವಾಗಿರುವ ತತ್ವ ಕಲಾಪ. ಯಾರಾದರೂ ತನ್ನ ಯಾವುದಾದರೂ ಪ್ರಶ್ನೆಗೆ  ಅದರಲ್ಲಿ ಉತ್ತರ ದೊರೆಯಲಿಲ್ಲವೆಂದು ಭಾವಿಸುವಂತೆ ಆದಾಗ ಆತನು ನಿರಾಶನಾಗಬಾರದು. ಒಂದು ಪ್ರಕರಣದಲ್ಲಿ ಹುಟ್ಟುವ ಪ್ರಶ್ನೆಗೆ ಬೇರೊಂದು ಪ್ರಕರಣದಲ್ಲಿ ಉತ್ತರವಿರುತ್ತದೆ. ಮನಸ್ಸಿಗೆ ತೋರುವ ಲೋಪವು ಗ್ರಂಥದಲ್ಲ, ಗ್ರಂಥ ವ್ಯಾಸಂಗದಲ್ಲಿಯದು. ಆದ್ದರಿಂದ ಭಗವದ್ಗೀತೆಯನ್ನು ಓದುವವರು ಮತ್ತೆ ಮತ್ತೆ ಮನನ ಮಾಡಬೇಕು. ಸಹನೆಯಿಂದ ಮನನ-ಸಾವಧಾನದಿಂದ ಮನನ ಮಾಡಬೇಕು. ಆಗ ಓದುಗನಿಗೆ ಗ್ರಂಥದಲ್ಲಿ ಮೊದಲು ಕಾಣಬಾರದಿರುವ ಅಂಶಗಳು ಕ್ರಮೇಣ  ಸ್ಪುರಿಸಿ ಅವನ ಶಂಕೆಗಳನ್ನು ಪರಿಹರಿಸುತ್ತದೆ. ಈ ಸಂತತ ಮನನವು ಶ್ರದ್ಧಾವಂತನಿಗೆ ಮಾತ್ರ ಸಾಧ್ಯವಾಗುತ್ತದೆ. ನಮ್ಮ ಬದುಕಿನಲ್ಲಿ ಯಾವುದು ಚೆನ್ನ? ಯಾವುದು ಸೊಗಸು? ಯಾವುದು ಬೆಲೆ ಬಾಳ ತಕ್ಕದ್ದು? ಚೆನ್ನ ಎಂದರೆ ಏನು? ಬೆಲೆ ಗೊತ್ತು ಮಾಡುವುದು ಹೇಗೆ? ಬದುಕನ್ನು ಚೆನ್ನ ಮಾಡುವುದು ಹೇಗೆ ? ಇಂಥ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕೆಂದು ಯಾರಿಗೆ ಮನಸ್ಸುಂಟೋ ಅಂತವರು ಅಕ್ಕರೆಯಿಂದ ಓದಿ ತಿಳಿದುಕೊಳ್ಳಬೇಕಾದ ಗ್ರಂಥ ಭಗವದ್ಗೀತೆ ಎಂಬ ಉತ್ತೇಜನದ ಮಾತುಗಳನ್ನು ಡಿವಿಜಿಯವರು ಇಲ್ಲಿ ಹೇಳಿದ್ದಾರೆ. ಭಗವದ್ಗೀತೆಯಲ್ಲಿ ಇರುವುದು ಜಗಜ್ಜೀವೇಶ್ವರ ತತ್ವ ನಿರೂಪಣೆ, ಆದ್ದರಿಂದ ಭಕ್ತಿ ಶ್ರದ್ಧೆಗಳು ಇಲ್ಲಿ ಬಹಳ ಮುಖ್ಯ. ಆಗಲೇ ಭಗವದ್ಗೀತೆಯ ವ್ಯಾಸಂಗ ನಮಗೆ ಉಪಯೋಗವಾಗುವುದು ಎಂದು ತಿಳಿಸಿದ್ದಾರೆ. ಜೀವನ ಎಂದರೆ ಕೆಟ್ಟದ್ದಲ್ಲ. ಅದರಲ್ಲಿರುವ ಕಷ್ಟಗಳನ್ನು ಎದುರಿಸಿ ಹೋರಾಡತಕ್ಕದ್ದು. ಇದೇ ಗೀತೆಯ ಉಪದೇಶ. ಭಗವದ್ಗೀತೆಯನ್ನು ನಮ್ಮ ಜೀವನಕ್ಕೆ ಅನ್ವಯಿಸಿದಾಗ ಮಾತ್ರ ಅದರ ವ್ಯಾಸಂಗ ಸಾರ್ಥಕವಾಗುತ್ತದೆ. ಅದರಿಂದಲೇ ಅವರು ಭಗವದ್ಗೀತೆಗೆ ಜೀವನಧರ್ಮಯೋಗ ಎಂಬ ಹೆಸರನ್ನಿಟ್ಟಿದ್ದಾರೆ.‍


(


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ