ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಜೇಡರ ದಾಸಿಮಯ್ಯ

ಜೇಡರ ದಾಸಿಮಯ್ಯ

ಸುಮಾರು 1040ರಲ್ಲಿದ್ದ ವೀರಶೈವ ವಚನಕಾರ. ಶಂಕರ ದಾಸಿಮಯ್ಯನ ಸಮಕಾಲೀನ. ಈತನಿಗೆ ದೇವರ ದಾಸಿಮಯ್ಯನೆಂಬ ಇನ್ನೊಂದು ಹೆಸರೂ ಇತ್ತೆಂದು ತಿಳಿದುಬರುತ್ತದೆ. ದಾಸಿಮಯ್ಯ ಬಟ್ಟೆ ನೇಯುವ ಕಸುಬನ್ನು ಅವಲಂಬಿಸಿದ್ದನೆಂದು ತಿಳಿದು ಬರುತ್ತದೆ. ಬಟ್ಟೆಯನ್ನು ನೇಯುತ್ತ ನೇಯುತ್ತಲೇ ಮನಸ್ಸಿನಲ್ಲಿ ಮೂಡಿದ ಭಾವಗಳನ್ನು ವಚನಗಳ ರೂಪದಲ್ಲಿ ಅಭಿವ್ಯಕ್ತಗೊಳಿಸುತ್ತಿದ್ದಂತೆ ಕಾಣುತ್ತದೆ. ಈತ ಚಾಳುಕ್ಯ ಒಂದನೆಯ ಜಯಸಿಂಹನ (1018-1042) ಪತ್ನಿಯಾದ ಸುಗ್ಗಲದೇವಿಗೆ ಗುರುವಾಗಿದ್ದ. ತನ್ನ ಶಿಷ್ಯೆಯ ಮುಖಾಂತರವೇ ಜಯಸಿಂಹನನ್ನು ಜೈನಧರ್ಮದಿಂದ ವೀರಶೈವಧರ್ಮಕ್ಕೆ ಮತಾಂತರಗೊಳಿಸಿದನೆಂದು ತಿಳಿದುಬರುತ್ತದೆ. 

ಬಸವಪುರಾಣ ಮತ್ತು ಚೆನ್ನಬಸವಪುರಾಣಗಳಲ್ಲಿ ದೇವರ ದಾಸಿಮಯ್ಯನೆಂದೂ, ವೃಷಭೇಂದ್ರವಿಜಯದಲ್ಲಿ ಜೇಡರ ದಾಸಿಮಯ್ಯನೆಂದೂ ಹೇಳಿದೆ. ದೇವರದಾಸಿಮಯ್ಯನ ಹೆಸರನ್ನು ಹೇಳುವ ಶಾಸನಗಳಲ್ಲಿ ಯಾದವರಾಜ ಜಯಗುತಿಯ (1119) ಕಾಲದ ಶಾಸನವೇ ಅತಿ ಪ್ರಾಚೀನವಾದುದು. ಬ್ರಹ್ಮ ಶಿವ (ಸು. 1180) ಈತನನ್ನು ಹೆಸರಿಸಿದ್ದಾನೆ. ಬಸವೇಶ್ವರ ಪ್ರಕಾರಾಂತವಾಗಿ ಜೇಡರ ದಾಸಿಮಯ್ಯನ ಹೆಸರು ಹೇಳಿದ್ದಾನೆ. ಈ ಎಲ್ಲ ಕಾರಣಗಳಿಂದ ಈತನ ಕಾಲ ಸುಮಾರು 1040 ಎಂದು ಹೇಳಬಹುದು. ಎಂ. ಆರ್. ಶ್ರೀನಿವಾಸಮೂರ್ತಿಯವರು ಈತ 12ನೆಯ ಶತಮಾನದ ಉತ್ತರಾರ್ಧದಲ್ಲಿದ್ದಿರಬಹುದೆಂದು ಅಭಿಪ್ರಾಯಪಡುತ್ತಾರೆ. ಇದಕ್ಕೆ ಕಾರಣ 1200ರ ಅರಸೀಕೆರೆಯ ಶಾಸನದಲ್ಲಿ ಜೇಡರ ದಾಸಿಮಯ್ಯನ ಮಗ ಕಾಟೇಗೌಡನ ಪ್ರಸ್ತಾಪವಿರುವುದು ಮತ್ತು ಶೂನ್ಯಸಂಪಾದನೆಯಲ್ಲಿ ಅಲ್ಲಮಪ್ರಭುವಿನ ಸ್ತೋತ್ರಮಾಡಿರುವವರಲ್ಲಿ ಶಂಕರ ದಾಸಿಮಯ್ಯನೂ ಒಬ್ಬನೆಂದು ಹೇಳಿರುವುದು. ಶೂನ್ಯಸಂಪಾದನೆಯಲ್ಲಿರುವ ಸ್ತೋತ್ರ ಪ್ರಕ್ಷಿಪ್ತವೂ ಇರಬಹುದು.

ಜೇಡರ ದಾಸಿಮಯ್ಯ ವಚನಗಳನ್ನು ಬರೆದವರಲ್ಲಿ ಆದ್ಯನೇನೂ ಅಲ್ಲವೆಂದು ಆತನ ಮಾತಿನಿಂದಲೇ ತಿಳಿದುಬರುತ್ತದೆ. ನಿಮ್ಮ ಶರಣರ ಸೂಳ್ನುಡಿ ಮೃಡಶರಣರ ನುಡಿ, ಗಡಣ-ಎಂಬ ನುಡಿಗಳನ್ನೂ ದಾಸಿಮಯ್ಯ ತನ್ನ ವಚನಗಳಲ್ಲಿ ಡೋಹರ ಕಕ್ಕಯ್ಯ ಮಾದಾರ ಚನ್ನಯ್ಯ ಮೊದಲಾದವರನ್ನು ನೆನೆಸಿಕೊಂಡಿರುವುದನ್ನೂ ನೋಡಬಹುದು. ಕೆಂಭಾವಿ ಭೋಗಣ್ಣನೂ ದಾಸಿಮಯ್ಯನಿಗಿಂತ ಪೂರ್ವದವನೆಂದು ತಿಳಿದುಬರುತ್ತದೆ. ದಾಸಿಮಯ್ಯ ಒಟ್ಟು 106 ವಚನಗಳನ್ನು ಬರೆದಿರುವನೆಂದು ಕವಿಚರಿತೆಕಾರರು ಹೇಳಿದ್ದಾರೆ. ರಾವ್ ಬಹದ್ದೂರ್ ಪಿ. ಜಿ. ಹಳಕಟ್ಟಿಯವರು 148 ವಚನಗಳನ್ನು ಸಂಪಾದಿಸಿದ್ದಾರೆ. ದಾಸಿಮಯ್ಯ ರಚಿಸಿರುವ ಒಂದು ರಗಳೆಯೂ ಇದೆಯೆಂದು ಗೊತ್ತಾಗುತ್ತದೆ. ಏನೇ ಆದರೂ ಈಗ ದೊರೆತಿರುವ ವಚನಗಳಲ್ಲಿ ದಾಸಿಮಯ್ಯನ ವಚನಗಳೇ ಪ್ರಾಚೀನವಾದವು.

ದಾಸಿಮಯ್ಯ ಹಲವಾರು ವಿಷಯಗಳನ್ನು ಕುರಿತು ವಚನಗಳನ್ನು ರಚಿಸಿದ್ದಾನೆ. ವಚನಗಳ ಶ್ರೇಷ್ಠತೆ, ಶಿವನ ಮಹಾತ್ಮೆ, ಶರಣರ ಮಹತ್ತುಗಳನ್ನು ಕುರಿತು ಬರೆದಿರುವಂತೆಯೇ ನೀತಿಬೋಧನೆಯನ್ನೂ ಮಾಡಿದ್ದಾನೆ. ಜನರಲ್ಲಿ ಕಂಡುಬರುವ ವಂಚನೆ, ಕುಟಿಲತೆ, ಡಾಂಭಿಕತೆ ಮೊದಲಾದುವನ್ನು ಉಗ್ರವಾಗಿ ವಿಡಂಬಿಸಿದ್ದಾನೆ. ಆತನ ವಚನಗಳು ಸರಳ ಶೈಲಿಯಲ್ಲಿ ರಚಿತವಾಗಿವೆ. ಅವುಗಳಲ್ಲಿ ಸಂಸ್ಕೃತ ಶಬ್ದಗಳ ಬಳಕೆ ಬಹಳ ಕಡಿಮೆ. ದೊಡ್ಡ ಪಂಡಿತನಲ್ಲದ ದಾಸಿಮಯ್ಯ ತನ್ನ ಅನುಭವಗಳನ್ನು ತನಗೆ ಸಹಜವಾದ, ಇತರರಿಗೂ ಸುಲಭವಾಗಿ ತಿಳಿಯುವ ಮಾತಿನಲ್ಲಿ ಅಭಿವ್ಯಕ್ತಿಸಿದ್ದಾನೆ. ಈತನ ವಚನಗಳು ತ್ರಿಪದಿ ಛಂದಸ್ಸಿಗೆ ಹತ್ತಿರವಾಗಿರುವುದರಿಂದ ವಿದ್ವಾಂಸರು ವಚನಗಳು ತ್ರಿಪದಿಗಳಿಂದ ರೂಪಗೊಂಡಿವೆ ಎಂದು ವಾದಿಸಿದ್ದಾರೆ. ಆದರೆ ದಾಸಿಮಯ್ಯನಿಗೆ ಈ ವಚನರೂಪದ ಅಭಿವ್ಯಕ್ತಿ ಮಾಧ್ಯಮ ಹೇಗೆ, ಎಲ್ಲಿಂದ, ಯಾರಿಂದ ದೊರೆಯಿತೆಂದು ತಿಳಿಯದಿದ್ದರೂ ಆತನಿಗಿಂತ ಹಿಂದೆಯೂ ಶರಣರ ಸೂಳ್ನುಡಿಗಳು ಇದ್ದುವು ಎಂಬುದನ್ನು ನೋಡಬಹುದು. ಇಲ್ಲಿ ದಾಸಿಮಯ್ಯನ ಒಂದೆರಡು ವಚನಗಳನ್ನು ಉದಾಹರಣೆಗಾಗಿ ನೋಡಬಹುದು :

ಕರಿಯನಿತ್ತಡೆ ಒಲ್ಲೆ, ಸಿರಿಯನಿತ್ತಡೆ ಒಲ್ಲೆ ಹಿರಿದಪ್ಪ ರಾಜ್ಯವನಿತ್ತಡೆ ಒಲ್ಲೆ ನಿಮ್ಮ ಶರಣರ ಸೂಳ್ನುಡಿಯನೊಂದರೆಗಳಿಗೆಯಿತ್ತಡೆ ನಿಮ್ಮನಿತ್ತೆ ಕಾಣಾ ರಾಮಾನಾಥ

ಇಳೆ ನಿಮ್ಮ ದಾನ, ಬೆಳೆ ನಿಮ್ಮ ದಾನ ಸುಳಿದು ಸೂಸುವ ವಾಯು ನಿಮ್ಮ ದಾನ ! ನಿಮ್ಮ ದಾನವನುಂಡು ಅನ್ಯರ ಹೊಗಳುವ ಕುನ್ನಿಗಳೇನೆಂಬ ರಾಮನಾಥ
ಕಾಯ ನಿಮ್ಮ ದಾನ ಜೀವ ನಿಮ್ಮ ದಾನ ಕಾಯ ಜೀವ ಉಳ್ಳಲ್ಲಿಯೇ ನಿಮ್ಮ ಪೂಜಿಸದ ನಾಯಿಗಳನೇನೆಂಬೆ ರಾಮನಾಥ

ಹೊಲೆಯರ ಬಾವಿಯಲ್ಲೊಂದು ಎಲು ನಟ್ಟಿದ್ದರೆ ಹೊಲೆ ಹೊಲೆಯೆಂಬುದೀ ಲೋಕವೆಲ್ಲಾ ಹಲವೆಲುವಿದ್ದ ಬಾಯಲ್ಲಿ ಒಲವರವ ನುಡಿದರೆ ಅದು ಹೊಲೆಯರ ಬಾವಿಯಿಂದ ಕರಕಷ್ಟ ಕಾಣಾ ರಾಮನಾಥ

ಮೇಲೆ ಹೇಳಿದ ವಚನಗಳ ಕಡೆಯಲ್ಲಿ ಬರುವ ರಾಮನಾಥ ಎನ್ನುವುದು ದಾಸಿಮಯ್ಯನ ವಚನಗಳ ಅಂಕಿತ. ಈತನ ವಚನಗಳು ತುಂಬಾ ಸಹಜತೆಯಿಂದ ಕೂಡಿರುವ ಕಾರಣ ಓದಿದವರ ಮೇಲೆ ಅವುಗಳ ಪ್ರಭಾವ ತೀವ್ರವಾಗಿರುತ್ತದೆ. ಉಪಲಬ್ಧ ವಚನಗಳ ದೃಷ್ಟಿಯಿಂದ ಜೇಡರ ದಾಸಿಮಯ್ಯನೇ ಆದ್ಯ ವಚನಕಾರ.

ಕೃಪೆ: ಮೈಸೂರು ವಿಶ್ವಕೋಶ

 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ