ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸುಕನ್ಯಾ ಸೂನಗಹಳ್ಳಿ


 ಸುಕನ್ಯಾ ಸೂನಗಹಳ್ಳಿ

ಡಾ. ಸುಕನ್ಯಾ ಸೂನಗಹಳ್ಳಿ ಅವರು ಕೃಷಿ ವಿಜ್ಞಾನ, ಸಸ್ಯವಿಜ್ಞಾನ, ಮತ್ತು ಜೈವಿಕ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಪರಿಣಿತರಾಗಿದ್ದು ಕನ್ನಡದಲ್ಲಿ ಬಹುಮುಖಿ ಬರಹಗಳಿಂದ ಹೆಸರಾಗಿದ್ದಾರೆ.


ಏಪ್ರಿಲ್ 30, ಸುಕನ್ಯಾ ಅವರ ಜನ್ಮದಿನ. ಮಂಡ್ಯ ಜಿಲ್ಲೆಯ ಮಂಡ್ಯ ತಾಲೂಕಿನ ಸೂನಗಹಳ್ಳಿ ಇವರ ಊರು. ಎಸ್. ಎಸ್. ಎಲ್.ಸಿ.ಯವರೆಗೆ ಸೂನಗಹಳ್ಳಿಯಲ್ಲಿ ಓದು, ಕೆ. ಎಂ. ದೊಡ್ಡಿಯ ಭಾರತಿನಗರದ ಭಾರತೀ ಕಾಲೇಜಿನಲ್ಲಿ ಪಿಯು ಓದಿನ ನಂತರದಲ್ಲಿ, ಮೈಸೂರು ವಿಶ್ವವಿದ್ಯಾಲಯದಲ್ಲಿ ಬಿ.ಎಸ್‍ಸಿ (ಜೀವರಸಾಯವಿಜ್ಞಾನ, ಸಸ್ಯವಿಜ್ಞಾನ ಮತ್ತು ಸೂಕ್ಷ್ಮಾಣು ಜೀವವಿಜ್ಞಾನ), ಎಂ.ಎಸ್‍ಸಿ  (ಜೈವಿಕ ತಂತ್ರಜ್ಞಾನ), ನಂತರ ತಮಿಳುನಾಡು ಸೇಲಂನ ವಿನಾಯಕ‌ ಮಿಷನ್‌ ವಿಶ್ವವಿದ್ಯಾಲಯದಿಂದ ಎಂ.ಫಿಲ್. (ಕೃಷಿ ಜೈವಿಕತಂತ್ರಜ್ಞಾನ)    ಹಾಗೂ  ಜರ್ಮನಿಯ ಸ್ಟುಟ್ ಗಾರ್ಟ್ ನ ಹೊಹೆನ್ ಹೈಮ್ ವಿಶ್ವವಿದ್ಯಾಲಯದಿಂದ ಸಸ್ಯರೋಗವಿಜ್ಞಾನ (ಪ್ಲಾಂಟ್ ಪೆಥಾಲಜಿ) ಕ್ಷೇತ್ರದಲ್ಲಿ  ಪಿಎಚ್.ಡಿ ಮಾಡಿ ಸಾಧನೆ ಮಾಡಿದ್ದಾರೆ.


ಕೀನ್ಯಾದ ನೈರೋಬಿಯಲ್ಲಿ ಕುಟುಂಬದೊಂದಿಗೆ ನೆಲೆಸಿರುವ ಡಾ. ಸುಕನ್ಯಾ ಸೂನಗಹಳ್ಳಿ ಅವರು ಸ್ವತಂತ್ರ ಕೃಷಿ ವಿಜ್ಞಾನಿಯಾಗಿದ್ದಾರೆ. ಸಸ್ಯರೋಗಗಳನ್ನು‌ ಪತ್ತೆ ಹಚ್ಚುವುದು ಹೇಗೆ, ಅವುಗಳ ನಿರ್ವಹಣೆ ಹೇಗೆ ಎಂಬುದನ್ನು ಬರೆದು ಹಲವಾರು ಲೇಖನಗಳನ್ನು ರಾಷ್ಟ, ರಾಜ್ಯ ಮತ್ತು ವಿಶ್ವವಿದ್ಯಾಲಯದ ನಿಯತಕಾಲಿಕೆಗಳು ಮತ್ತು ಪತ್ರಿಕೆಗಳಲ್ಲಿ  ಪ್ರಕಟಿಸಿದ್ದಾರೆ.


 ಸುಮಾರು 17 ವರ್ಷಗಳಿಂದ ವಿದೇಶದಲ್ಲಿ ನೆಲೆಸಿರುವ ಸುಕನ್ಯಾ ಅವರು ಕೃಷಿ ವಿಜ್ಞಾನ, ಪ್ರವಾಸ ಸಾಹಿತ್ಯ, ಹಬ್ಬಗಳು, ಉದ್ಯಮ, ವ್ಯಕ್ತಿ ಪರಿಚಯ ಇತ್ಯಾದಿ ಕುರಿತಂತೆ ಸುಮಾರು 170ಕ್ಕೂ ಹೆಚ್ಚು ಲೇಖನಗಳನ್ನು ಪ್ರಕಟಿಸಿದ್ದಾರೆ. ಸುಮಾರು 14 ಕೃತಿಗಳನ್ನು ಈಗಾಗಲೇ ಪ್ರಕಟಿಸಿದ್ದಾರೆ. ಕೆಲವು ಪ್ರಕಟಣಾ ಹಂತದಲ್ಲಿವೆ. ಪ್ರಕಟಿತ ಕೃತಿಗಳಲ್ಲಿ  'ಮರಳು ಗೂಡಿಗೆ', 'ನಾ ಕಂಡ ಕೀನ್ಯಾ',   'ಮೊಗೆದಷ್ಟೂ ಉಕ್ಕುವ ಚಿಲುಮೆಗಳು', 'ಬೆಳೆ ರೋಗಗಳು, ಕೀಟಗಳು ಮತ್ತು ಅವುಗಳ ನಿರ್ವಹಣೆ',  'ಹೆಣ್ಮಕ್ಳೇ ಸ್ಟ್ರಾಂಗು ಗುರು', 'ವಿಜ್ಞಾನ ಗಂಗೆಯ ಹರಿಸಿದ ಭಗೀರಥರು', 'ಹಸಿರು  ಹಾದಿಯ ಕೃಷಿಕರು', 'ನಿನಗೆ ನೀನೇ ಗುರು', 'ಜಲಜೀವಿ ವಿಜ್ಞಾನದ ಜೀವನಾಡಿ-ಪ್ರೊ.‌ಎಸ್.‌ಅಯ್ಯಪ್ಪನ್', 'ಕಬ್ಬಿನ ಸಿಹಿ ವರ್ಧಿಸಿದ ಅಮ್ಮ - ಡಾ. ಜಾನಕಿ ಅಮ್ಮಾಳ್' ಸೇರಿವೆ. ಇವಲ್ಲದೆ ಡಾ. ಟಿ. ಆರ್. ಅನಂತರಾಮು ಅಭಿನಂದನ ಗ್ರಂಥವಾದ 'ಅನಂತಮುಖಿ' ಮತ್ತು  ಅವರ ಆಯ್ದ ಪ್ರಬಂಧಗಳ ಸಂಕಲನವಾದ 'ಲಾಲ್ ಬಾಗ್  ಕಲ್ಲಿನೊಂದಿಗೆ ಸಲ್ಲಾಪ' ಹಾಗೂ ಡಾ. ಸಿ. ಎನ್. ಮಂಜುನಾಥ್ ಅವರ ಅಭಿನಂದನ ಗ್ರಂಥವಾದ 'ಆಧುನಿಕ ಧನ್ವಂತರಿ' ಕೃತಿಗಳಿಗೆ ಸುಕನ್ಯಾ ಅವರು ಸಂಪಾದಕರಾಗಿದ್ದಾರೆ. ಹಾಗೆಯೇ, ಪ್ರೊ. ಅಯ್ಯಪ್ಪನ್ ಅವರ ಕುರಿತು 'A Biography of Prof. S. Ayyappan: A Champion of Blue Revolution' ಪುಸ್ತಕವನ್ನು‌ ಇಂಗ್ಲಿಷಿನಲ್ಲಿ ಬರೆದಿದ್ದಾರೆ.


ಸುಕನ್ಯಾ ಅವರ ಬರಹಗಳು ನಾಡಿನ ಎಲ್ಲ ಪ್ರಸಿದ್ಧ ನಿಯತಕಾಲಿಕಗಳಲ್ಲಿ ಕಂಗೊಳಿಸುತ್ತ ಬಂದಿವೆ. ಕೃಷಿ ವಿಜ್ಞಾನ ಸಂಬಂಧಿತವಾಗಿ ಅವರು ಅನೇಕ ಪ್ರಸಿದ್ಧ ಜರ್ನಲ್ ಗಳಲ್ಲಿ ವಿಷಯಾಧಾರಿತ ಪ್ರಬಂಧ ಮೂಡಿಸಿದ್ದಾರೆ.  ವೇದಿಕೆಗಳಲ್ಲಿ ಮತ್ತು ಸಮೂಹ ಮಾಧ್ಯಮಗಳಲ್ಲಿ ಉಪನ್ಯಾಸ ನೀಡಿದ್ದಾರೆ. 2019ರಲ್ಲಿ ಮಂಡ್ಯದಲ್ಲಿ ನಡೆದ ಪಂಚಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರೂ‌ ಕೂಡ ಆಗಿದ್ದರು.


ಡಾ. ಸುಕನ್ಯಾ ಸೂನಗಹಳ್ಳಿ ಅವರಿಗೆ 'ಬೆಳೆ ರೋಗಗಳು, ಕೀಟಗಳು ಮತ್ತು ಅವುಗಳ ನಿರ್ವಹಣೆ' ಕೃತಿಗೆ 'ವಿಜ್ಞಾನ ಪ್ರಕಾರ'ದ ಶ್ರೇಷ್ಠ ಕೃತಿಯಾಗಿ 2022 ವರ್ಷದ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ಸಂದಿದೆ.  ಇದೇ ಕೃತಿಗೆ ಕರ್ನಾಟಕ ಲೇಖಕಿಯರ ಸಂಘದಿಂದ ಶ್ರೀಮತಿ.  ಭಾಗ್ಯ ನಂಜಪ್ಪ ದತ್ತಿ ಪ್ರಶಸ್ತಿ ಸಂದಿದೆ. ಇವರ 'ಕಬ್ಬಿನ ಸಿಹಿ ವರ್ಧಿಸಿದ ಅಮ್ಮ - ಡಾ. ಜಾನಕಿ ಅಮ್ಮಾಳ್' ಕೃತಿಗೂ 

ಕರ್ನಾಟಕ ಲೇಖಕಿಯರ ಸಂಘದಿಂದ 2025 ಸಾಲಿನ ಶ್ರೀಮತಿ.  ಭಾಗ್ಯ ನಂಜಪ್ಪ ದತ್ತಿ ಪ್ರಶಸ್ತಿ ಸಂದಿದೆ.  ಇದಲ್ಲದೆ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ 'ಶ್ರೇಷ್ಠ ಪುಸ್ತಕ ಪ್ರಶಸ್ತಿ', ಶಿವಮೊಗ್ಗ ಕರ್ನಾಟಕ ಸಂಘದ 'ಹಸೂಡಿ‌ ವೆಂಕಟಶಾಸ್ತ್ರೀ ಪ್ರಶಸ್ತಿ', ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಬಹುಮಾನ, ಕರ್ನಾಟಕ ಕವಿರತ್ನ ಪ್ರಶಸ್ತಿ, ಮೈಸೂರು ದಸರೆಯ ಕವಿ ಪ್ರಶಸ್ತಿ ಹಾಗೂ ಅನೇಕ ವೇದಿಕೆಗಳಿಂದ ಕೃಷಿ ಮತ್ತು ಸಾಹಿತ್ಯ ಕೃಷಿ ಸಂಬಂಧಿತ ಪ್ರಶಸ್ತಿ, ಗೌರವಗಳೂ ಇವರಿಗೆ ಸಂದಿವೆ. 


ಡಾ. ಸುಕನ್ಯಾ ಸೂನಗಹಳ್ಳಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.  ನಮಸ್ಕಾರ.



Happy birthday Dr. Sukanya Soonagahalli 🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ