ಪ್ರೀತಿ ಪ್ರೇಮ
ಪ್ರೀತಿ ಪ್ರೇಮ
ಪ್ರೀತಿ ಪ್ರೇಮ ಎಂದರೆ ಬರೀ ಅಪಕ್ವ ಕಲ್ಪನೆಗಳೇ ಇದ್ದ ನನಗೆ ಸ್ವಾಮಿ ಪರಮಹಂಸ ಯೋಗಾನಂದರ "ಯೋಗಿಯೊಬ್ಬರ ಆತ್ಮ ಚರಿತ್ರೆ" ಪುಸ್ತಕದಲ್ಲಿ ಅವರು ಹೇಳುವ "ದೇವರೆ ನನಗೆ ಎಲ್ಲರಿಗೂ ಪ್ರೀತಿಯನ್ನು ಕೊಡುವ ಶಕ್ತಿಯನ್ನು ದಯಪಾಲಿಸು” ಎಂದು ಹೇಳುವ ಮಾತು ಹಲವು ಹೊಳಹುಗಳನ್ನು ನೀಡಿ ಬಹಳ ಪರಿಣಾಮ ಬೀರಿದಂತದ್ದು.
ನಿನ್ನೆಯ ದಿನ ಆನಂದಯಿ ಮಾ ಅವರ ಜನ್ಮದಿನದಂದು ಅವರನ್ನು ಒಂದಷ್ಟು ಓದಿ ಅರ್ಥೈಸಿಕೊಂಡು ಬರಹ ಹಾಕಿದ್ದೆ. ಹಾಗೇ ಅವರ ಚಿತ್ರ ಹುಡುಕುವಾಗ ಅವರು ಸ್ವಾಮಿ ಪರಮಹಂಸ ಯೋಗಾನಂದರ ಜೊತೆ ಇರುವ ಈ ಚಿತ್ರ ನೋಡಿ ಸ್ತಂಭೀಭೂತನಾದೆ.
ಹೀಗೊಂದು ನೈಜ ಪ್ರೇಮಾಭಿವ್ಯಕ್ತಿಯ ಭಾವಚಿತ್ರ ಕಲೆಯಲ್ಲಿ ಹೊರತಾಗಿ ನಾನು ನೋಡಿದ್ದೆ ಎಂದು ನನಗನಿಸಿಲ್ಲ.
ಆನಂದಮಯಿ ಮಾ ಮತ್ತು ಸ್ವಾಮಿ ಪರಮಹಂಸ ಯೋಗಾನಂದರಿಬ್ಬರೂ ಶ್ರೇಷ್ಠಮಟ್ಟದ ಯೋಗ ಮತ್ತು ಬ್ರಹ್ಮಚರ್ಯ ಜೀವನವನ್ನು ಪಾಲಿಸಿದವರು ಎಂದು ಅವರನ್ನು ಓದಿ ನಂಬಿದವರಿಗೆಲ್ಲ ತಿಳಿದಿರುವಂತದ್ದು. ಆದರೂ ಎಂಥ ಪ್ರೇಮ ತೇಜಸ್ಸು ಈ ಜೋಡಿಯ ಚಿತ್ರದಲ್ಲಿದೆ.
ಸಕ್ಕರೆ ಎಂಬ ಪದವೇ ಸಕ್ಕರೆಯಲ್ಲ. ಸಕ್ಕರೆ ಎಂಬುದು ಅನುಭವವೆಂಬ ಸಿಹಿ. ಅಂತೆಯೇ ಪ್ರೀತಿ ಪ್ರೇಮ ಎಂಬುದು ಪದವಲ್ಲ. ಅದು ಕಥೆಗಳಲ್ಲಿ ಸಿನಿಮಾಗಳಲ್ಲಿ ತೋರಿದಂತೆ ಅಲ್ಲ. ಅದು ಅನುಭಾವ. ಅದನ್ನು ಅರಿತು ಅನುಭಾವಿಸಿದವರಿಗಷ್ಟೇ ದೊರತಿರಬಹುದಾದದ್ದು. ಆ ದಿವ್ಯ ಪ್ರೇಮಕ್ಕೆ ನಮನ.
ಕಾಮೆಂಟ್‌ಗಳು