ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ವಸಂತ್ ಗಿಳಿಯಾರ್


ವಸಂತ್ ಗಿಳಿಯಾರ್ 


ವಸಂತ್ ಗಿಳಿಯಾರ್ ಪತ್ರಕರ್ತ, ಪತ್ರಿಕೋದ್ಯಮಿ, ಸಂಘಟನಕಾರ, ಸಮಾಜಮುಖಿ ಹೀಗೆ ಹಲವು ವಿಧದಲ್ಲಿ ಕಾಣಬರುತ್ತಾರಾದರೂ, ಅವರನ್ನು
ಹೀಗೇ ಎಂದು ಒಂದೇ ಆವರಣದೊಳಗೆ ಹಿಡಿದಿಡುವುದು ದುಸ್ಸಾಹಸವಾದೀತು. ಅವರದು ಬಹುವಿಧ ಆಸಕ್ತಿಯ ವ್ಯಕ್ತಿತ್ವ. 

ಪತ್ರಕರ್ತರಾಗಿ ಅಭಿಮತ ಎಂಬ ಪತ್ರಿಕೆಯನ್ನು ದಶಕಗಳ ಕಾಲ ನಡೆಸಿ ಜೊತೆ ಜೊತೆಗೆ ಹಾಯ್ ಬೆಂಗಳೂರು ವರದಿಗಾರರಾಗಿ ರವಿ ಬೆಳಗೆರೆಯವರನ್ನು ಬಾಸ್ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಇವರದು,  ಅವರ ಹಾಗೆಯೇ ಯಾವುದಕ್ಕೂ ಎದೆ ಗುಂದದೆ ಮುನ್ನಡೆಯುವ ವ್ಯಕ್ತಿತ್ವ.  ಹೋರಾಟದ ಹಾದಿ ಯಾವತ್ತಿಗೂ ಹೂವು ಹಾಸಿನದ್ದಲ್ಲ ಹಾಗಾಗಿ ಹೊಗಳಿಕೆ ಉಬ್ಬುವವರು ಅಲ್ಲ ತೆಗಳಿಕೆ ಇವರನ್ನು ಕುಗ್ಗಿಸುವುದೂ ಇಲ್ಲ.

ವಸಂತ್ ಅವರದು ಅಪಾರ ಓದಿನ ಹುಚ್ಚು.  ಹಾಗೆಯೇ  ಬರವಣಿಗೆಯ ತುಡಿತವು ಇವರನ್ನು ಆವರಿಸಿಕೊಂಡಿದೆ. ಇವರ ಬರವಣಿಗೆ ಶೈಲಿಗೆ ಅಭಿಮಾನಿ ಗಳಿದ್ದಾರೆ. 'ಲೈಫ್ ಈಸ್ ಜಿಂಗಲಾಲ್' ಇವರು ಬರೆದಿರುವ ಪುಸ್ತಕದ ಹೆಸರು. ಇವರ ಸಕಾರಾತ್ಮಕ  ಚಿಂತನಗಳು, ಪ್ರೇರಣಾತ್ಮಕ   ಬರಹಗಳು ಅಪಾರ ಮೆಚ್ಚುಗೆ ಗಳಿಸಿವೆ.  ಸಕಾರಾತ್ಮಕ ದೃಷ್ಟಿಕೋನ  ಇವರ ಬಹು ದೊಡ್ಡ ಶಕ್ತಿ , 'ಇವುಳೇ' ಎಂಬ ಇವರ ಕಾವ್ಯಶೀರ್ಷಿಕೆ ಇವರ ಒಳ ಮನಸ್ಸಿನ ಭಿತ್ತಿಯ ಚಿತ್ರ . 

ಮೇಲಿನೆಲ್ಲವುಗಳ  ಜೊತೆಗೆ ವಸಂತರಿಗೆ ಅಧ್ಯಾತ್ಮದ ಸೆಳೆತವಿದೆ.  ಇವರು ಕೊಲ್ಲೂರು ಭಗವತಿಯ ಭಕ್ತ. ಕಾಲಿಗೆ ಚಕ್ರ ಕಟ್ಟಿಕೊಂಡ ಹಾಗೆ ತಿರುಗುವ ಇವರು ಉದ್ಯಮಿಯೂ  ಆಗಿದ್ದು ಸ್ವರ್ಣರೇಖಾ ಎಂಬ  ಇಂಟೀರಿಯರ್ ಸಂಸ್ಥೆಯ ಮಾಲೀಕರೂ ಆಗಿದ್ದಾರೆ.

ವಸಂತ್ ಅವರು,  ತಮ್ಮದೇ ಆದ ಗಿಳಿಯಾರಿನ ಅಂಗಳದಲ್ಲಿ ನಡೆಯುವ 'ಅಭಿಮತ ಸಂಭ್ರಮ' ಎಂಬ ದೊಡ್ಡ ಕಾರ್ಯಕ್ರಮದ ಸಾರಥಿ. ಅಭಿಮತ ಹಾಗೂ ಜನಸೇವಾ ಟ್ರಸ್ಟ್ ಇವರೇ ಕಟ್ಟಿದ ಜಾತಿ ಮತ ಧರ್ಮ ರಾಜಕೀಯದ ಹಂಗಿಲ್ಲದ  ಒಂದು ವಿಶಿಷ್ಟ ಯುವ ಶಕ್ತಿಯ ಪಡೆ.  ಈ ಗುಂಪು ಕೈಗೊಂಡ ಸಾಮಾಜಿಕ ಕಾರ್ಯಗಳು ಹತ್ತಾರು. ಈಚೆಗೆ ಕೈಗೊಂಡಿದ್ದ"ಪಾವನಾ ಸೀತಾ" ನದಿ ಸ್ವಚ್ಛತಾ ಅಭಿಯಾನ, ಈ ಗುಂಪಿನ ಯಶಸ್ವಿ ಕಾರ್ಯಕ್ರಮಕ್ಕೆ ಒಂದು ಉದಾಹರಣೆ. 

ಇವರು ತಮ್ಮ ಕಾವ್ಯನಾಯಕಿ 'ಇವುಳೇ'ಗೆ ಒಲಿದಿರುವ ಒಂದು ಎಳೆ ಹೀಗಿದೆ:

ಇವುಳೇ

ಗುಳಿಗೆನ್ನೆ
ಸುಳಿಗೆ
ಪತನಗೊಂಡಿದೆ
ಹೃದಯ!
ಕಂದುಗಣ್ಣಿನ
ಬಲೆಗೆ
ಬಿದ್ದ ಮೀನು ನಾನು!
ಹೊನ್ನ ಬಣ್ಣದ ಹೆಣ್ಣೇ
ನೀನು
ಆತ್ಮಕಂಟಿದ ಒಲವು
ಜತನವಾಗಿರಿಸು
ನನ್ನ ಪ್ರೇಮವನು

-ವಸು

ಬಹುಜನರ ಮೆಚ್ಚಿನ ವಸಂತಣ್ಣನಾಗಿ ಇವುಳೆಯ ವಸುವಾಗಿ, ಸಂಪರ್ಕವೇ ನನ್ನ ದೊಡ್ಡ ಸಂಪತ್ತು ಅದಕಿಂತ ಇನ್ನೇನು ಬೇಕು,  ಲೈಫ್ ಈಸ್ ಜಿಂಗಲಾಲ್ ಎಂದು ಬದುಕನ್ನು ಸಂಭ್ರಮಿಸುವ ವಸಂತ್ ಗಿಳಿಯಾರ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು

Happy birthday Vasanth Giliyar 🌷🌷🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ