ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಇಂದಿರಾ ಶಿವಣ್ಣ


ಇಂದಿರಾ ಶಿವಣ್ಣ


ಆತ್ಮೀಯರಾದ ಇಂದಿರಾ ಶಿವಣ್ಣ ಅವರು ಬರಹಗಾರ್ತಿಯಾಗಿ, ಮಹತ್ವದ ಸಂಪಾದಕರಾಗಿ ಮತ್ತು ಅನೇಕ ಸಮಾಜಮುಖಿ ಚಟುವಟಿಕೆಗಳಿಂದ ಸಕ್ರಿಯರಾಗಿದ್ದಾರೆ.

ಇಂದಿರಾ ಶಿವಣ್ಣ 1949ರ ಜೂನ್‌ 25ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲ್ಲೂಕಿನ ವಿಜಯಪುರದಲ್ಲಿ ಜನಿಸಿದರು.  ಇವರು ಕನ್ನಡ  ಹಾಗೂ ಮಾರ್ಕೆಟಿಂಗ್‌ ಮ್ಯಾನೇಜ್‌ಮೆಂಟ್‌ನಲ್ಲಿ  ಸ್ನಾತಕೋತ್ತರ ಪದವಿ ಪಡೆದಿದ್ದು ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದಲ್ಲಿ ಸೇವೆಸಲ್ಲಿಸಿ ನಿವೃತ್ತರಾಗಿದ್ದಾರೆ. 

ಇಂದಿರಾ ಅವರು ಸಾಹಿತ್ಯ ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯರಾಗಿದ್ದಾರೆ. ಇವರ ಕೃತಿಗಳು ಅನೇಕ ನಿಯತಕಾಲಿಕಗಳಲ್ಲಿ ಮೂಡಿರುವುದರ ಜೊತೆಗೆ ಕೃತಿಗಳಾಗಿ ಜನಪ್ರಿಯಗೊಂಡಿವೆ. 
ಮಧುರ, ಸಿಂಧೂರ, ಭ್ರಮರ, ಗಗನದಿಂದ ಗೂಡಿಗೆ, ಹಾರಬಲ್ಲೆವು ನಾವು, ಚುಕ್ಕಿಚಂದ್ರಮ ಮುಂತಾದವು ಇವರ ಕಾದಂಬರಿಗಳಲ್ಲಿ ಸೇರಿವೆ. ಚಂದಿರಾ, ಸರಪಳಿಗಳು ಇವರ ಕಥಾ ಸಂಕಲನಗಳು. 
ಭಾವಗಳು ಸಾಲುಗಳಾದಾಗ, ಪರಿವೇಷ, ಮನೋರೇಖೆಗಳು, ಬುದ್ಧನಾಗುವ ಆಸೆ ಬಿಟ್ಟೆ  ಮುಂತಾದವು ಕವನ ಸಂಕಲನಗಳು. ತಿರುಮಲಾಂಬ, ಶ್ಯಾಮಲಾದೇವಿ, ನುಗ್ಗೆಹಳ್ಳಿ ಪಂಕಜ ಮುಂತಾದವು ಜೀವನ ಚರಿತ್ರೆಗಳು. ನಗರ್ತ ಜನಾಂಗ, ಶಿವಾಚಾರ ನಗರ್ತ, ಶಿವಾಚಾರ ನಗರ್ತರು ಮುಂತಾದವಯ ಸಂಶೋಧನಾ ಬರಹಗಳು.  ಹಾಲೆಂಡ್‌ನಿಂದ ಲಂಡನ್‌ವರೆಗೆ, ನಿಗೂಢಗಳ ನಿಚ್ಚಣಿಕೆ ಏರಿ ಪ್ರವಾಸ ಸಾಹಿತ್ಯ. ಟಿ. ಸಿದ್ಧಲಿಂಗಯ್ಯ ಮಕ್ಕಳ ಸಾಹಿತ್ಯ.  'ಎತ್ತಣಿಂದೆತ್ತಣ ಸಂಬಂಧವಯ್ಯ' ಎಂಬುದು ಸಂಬಂಧಗಳ ಸ್ಥಿತ್ಯಂತರದ ಸಂಕಥನ. 'ಮೃತ್ಯೋರ್ಮಾ ಅಮೃತಂ ಗಮಯ'ಎಂಬುದು ದೈಹಿಕ ಆರೋಗ್ಯದ ನಿಟ್ಟಿನಲ್ಲಿ ಮೃತ್ಯುವಿನಿಂದ ಅಮೃತತ್ವದೆಡೆಗಿನ ಅನುಭಾವದ ಪಯಣ. ನಾಡಿನ ಅನೇಕ ಅನನ್ಯ ಸಾಧಕಿಯರ ಕುರಿತಾಗಿ ಇವರು ಸಂಪಾದಿಸಿರುವ 'ಕರ್ನಾಟಕದ ಅನನ್ಯ ಸಾಧಕಿಯರು' ಎಂಬ ಸಂಕಲನ ಸಪ್ನಾ ಸಂಸ್ಥೆಯಿಂದ ಪ್ರಕಟಗೊಂಡಿದೆ. 'ಸರಳ ಭಾರತ' ಇವರು ಎ.‍ಆರ್. ಕೃಷ್ಣಶಾಸ್ತ್ರಿಗಳ ವಚನ ಭಾರತವನ್ನು ಅಧರಿಸಿದ ಕೃತಿ.

ಇಂದಿರಾ ಶಿವಣ್ಣ ಅವರು ಕರ್ನಾಟಕ ಸಾಹಿತ್ಯ ಅಕಾಡೆಮಿ, ಕನ್ನಡ ಪುಸ್ತಕ ಪ್ರಾಧಿಕಾರ, ಗ್ರಂಥಾಲಯ ಇಲಾಖೆ, ಕರ್ನಾಟಕ ಲೇಖಕಿಯರ ಸಂಘ ಈ ಸಂಸ್ಥೆಗಳಲ್ಲಿ ಹಲವು ರೀತಿಯಲ್ಲಿ ಸೇವೆ ಸಲ್ಲಿಸಿದ್ದಾರೆ. ನಗರ್ತ ಮಹಿಳಾ ಸಂಘ, ಮಾರ್ಗದರ್ಶಿ, ಬಿ.ಡಾ.ಮ. ಮಹಿಳಾ ಸಂಘಟನೆಗಳ ಸ್ಥಾಪಕರಾಗಿಯೂ ಅವರ ಸೇವೆ ಸಂದಿದೆ.  ಅನೇಕ ಸ್ಮರಣ ಸಂಚಿಕೆ ಹಾಗೂ ಅಭಿನಂದನಾ ಗ್ರಂಥಗಳ ಸಂಪಾದಕರಾಗಿಯೂ  ಕಾರ್ಯನಿರ್ವಹಿಸಿದ್ಧಾರೆ. ದೇವನಹಳ್ಳಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷಿಣಿಯಾಗಿ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವ ಪಡೆದಿದ್ದಾರೆ. ಮಹಿಳೆ ಕನ್ನಡ ಮಾಸಿಕ "ಮಂತಣಿ" ಪತ್ರಿಕೆಯನ್ನು ಹೊರತರುತ್ತಿದ್ದಾರೆ. ಬಿ.ಟಿ.ಎಂ. ಬಡಾವಣೆ ವಿಧಾನಸಭಾ ಕ್ಷೇತ್ರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷಿಣಿಯಾಗಿ, ಇಂಟರ್ ನ್ಯಾಷನಲ್ ಲಯನ್ಸ್ ಕ್ಲಬ್ಸ್ ಆಫ್ ಬಿ.ಟಿ.ಎಂ. ನೈಟೆಂಗೇಲ್ ಸಂಸ್ಥೆಯ ಸಕ್ರಿಯ ಸದಸ್ಯರಾಗಿ ಹೀಗೆ ವಿವಿಧಮುಖೇನ ಇವರು ನಿರಂತರ ಸಕ್ರಿಯರು.

ಇಂದಿರಾ ಶಿವಣ್ಣ ಅವರಿಗೆ  ಕೆಂಪೇಗೌಡ ಪ್ರಶಸ್ತಿ, ಗೊರೂರು ಪ್ರತಿಷ್ಠಾನ ಪ್ರಶಸ್ತಿ, ಜಗಜ್ಯೋತಿ ಬಸವೇಶ್ವರ ಸದ್ಭಾವನಾ ಪ್ರಶಸ್ತಿ, ಯಶೋಧರಾ ದಾಸಪ್ಪ ಪ್ರಶಸ್ತಿ, ಚುಟುಕು ರತ್ನ ಪ್ರಶಸ್ತಿ ಮುಂತಾದ ಅನೇಕ ಗೌರವಗಳು ಸಂದಿವೆ.  

ಆತ್ಮೀಯರೂ, ಹಿರಿಯ ಸಾಧಕರೂ ಆದ ಇಂದಿರಾ ಶಿವಣ್ಣ ಅವರಿಗೆ ಜನ್ಮದಿನದ ಶುಭಹಾರೈಕೆಗಳು.

On the birthday of our senior writer and social worker Indira Shivanna

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ