ಚಂಪಾ ಶೆಟ್ಟಿ
ಚಂಪಾ ಶೆಟ್ಟಿ
ಚಂಪಾ ಶೆಟ್ಟಿ ಚಲನಚಿತ್ರ, ಕಿರುತೆರೆ ಮತ್ತು ರಂಗಭೂಮಿಯಲ್ಲಿನ ನಿರ್ದೇಶಕಿ, ಕಥೆಗಾರ್ತಿ, ಅಭಿನಯ ಕಲಾವಿದೆ ಹಾಗೂ ಧ್ವನಿ ಕಲಾವಿದೆ, ವಾರ್ತಾ ವಾಚಕಿ, ಕಾರ್ಯಕ್ರಮ ನಿರ್ವಾಹಕಿ ಹೀಗೆ ಬಹುಮುಖಿ ಪ್ರಶಸ್ತಿ ವಿಜೇತ ಸಾಧಕಿ.
ಜುಲೈ12, ಚಂಪಾ ಅವರ ಜನ್ಮದಿನ. ಇವರು ಚಲನಚಿತ್ರೋದ್ಯಮದಲ್ಲಿ ಯಶಸ್ವಿ ಧ್ವನಿಕಲಾವಿದೆಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. 'ಕುರುನಾಡು' ಚಿತ್ರದಲ್ಲಿನ ಧ್ವನಿ ಕಲಾವಿದೆಯಾಗಿ ಅವರಿಗೆ 2007-08ನೇ ಸಾಲಿನ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಸಂದಿತ್ತು.
ಚಿತ್ರರಂಗಕ್ಕೆ ಪ್ರವೇಶಿಸುವ ಮೊದಲು ಚಂಪಾ ಅವರು 2000 ದ ದಶಕದ ಆರಂಭದಲ್ಲಿ ಉದಯ ನ್ಯೂಸ್‌ಗೆ ಪ್ರೈಮ್ ಟೈಮ್ ಸುದ್ದಿ ವಾಚಕಿಯಾಗಿ ಕಾರ್ಯನಿರ್ವಹಿಸಿದ್ದರು. ಅವರು ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಕಾವೇರಿ, ಬಿ. ಸುರೇಶ ನಿರ್ದೇಶನದ ನಾಕುತಂತಿ, ಯೋಗರಾಜ್ ಭಟ್ ನಿರ್ದೇಶನದ ಪರಮ ಪದ ಮತ್ತು ಟಿ. ಎನ್. ಸೀತಾರಾಮ್ ನಿರ್ದೇಶನದ ಮುಕ್ತ ಮುಕ್ತ ಧಾರಾವಾಹಿಗಳಲ್ಲಿ ಕೆಲಸ ಮಾಡಿದ್ದರು.
ಚಂಪಾ ಅವರು 'ಬೆಳಕಿನೆಡೆಗೆ' ಚಿತ್ರದಲ್ಲಿ ನಾಯಕನ ತಾಯಿಯ ಪಾತ್ರದಲ್ಲಿ ನಟಿಯಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ನಂತರ ಅನನ್ಯ ಕಾಸರವಳ್ಳಿ ನಿರ್ದೇಶನದ ಹರಿಕಥಾ ಪ್ರಸಂಗ ಚಿತ್ರದಲ್ಲಿ ನಟಿಸಿದ್ದರು.
2018 ರಲ್ಲಿ ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಮಹಿಳಾ ಕೇಂದ್ರಿತ ಕಥಾನಕದ 'ಅಮ್ಮಚ್ಚಿಯೆಂಬ ನೆನಪು' ಮೂಲಕ ಚಂಪಾ ಅವರು ಚಲನಚಿತ್ರ ನಿರ್ದೇಶಕಿಯಾಗಿ ಪಾದಾರ್ಪಣೆ ಮಾಡಿದರು. ಅವರ ಎರಡನೇ ನಿರ್ದೇಶನದ ಚಿತ್ರ "ಕೋಳಿ ಎಸ್ರು" ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ-2023 ರಲ್ಲಿ ಭಾರತೀಯ ಸಿನಿಮಾ ಸ್ಪರ್ಧಾ ವಿಭಾಗದಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ಗೆದ್ದುಕೊಂಡಿತು.
ಚಲನಚಿತ್ರಗಳು ಮತ್ತು ಕಿರುತೆರೆಯಲ್ಲಿ ಅಲ್ಲದೆ ಚಂಪಾ ಶೆಟ್ಟಿ ಅವರು ಕನ್ನಡ ರಂಗಭೂಮಿಯಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಹಯವದನ, ಮಂಟೇಸ್ವಾಮಿ ಕಥಾ ಪ್ರಸಂಗ, ಸಿರಿ ಪುರಂದರ, ಆಶಾಡದ ಒಂದು ದಿನ ಮುಂತಾದ ಪ್ರಖ್ಯಾತ ರಂಗಭೂಮಿ ಪ್ರಯೋಗಗಳಲ್ಲಿ ನಟಿಸಿದ್ದ ಇವರು ಗಾಂಧಿ ಬಂದ ಮತ್ತು ಅಕ್ಕು ಮುಂತಾದ ನಾಟಕ ನಿರ್ಮಾಣಗಳನ್ನು ನಿರ್ದೇಶಿಸಿದ್ದಾರೆ.
ಚಂಪಾ ಶೆಟ್ಟಿ ಅವರು ಹಲವು ವರ್ಷಗಳ ನಂತರದಲ್ಲಿ ಅಣ್ಣಯ್ಯ ಎಂಬ ಕಿರುತೆರೆಯ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದಾರೆ.
ಬಹುಮುಖಿ ಸಾಧಕಿ ಚಂಪಾ ಶೆಟ್ಟಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.
Happy birthday to award winning multitalented Champa Shetty 🌷🌷🌷
ಕಾಮೆಂಟ್‌ಗಳು