ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಕೃ.ಪಾ. ಮಂಜುನಾಥ್


ಕೃ.ಪಾ. ಮಂಜುನಾಥ್ 

ಡಾ. ಕೃಷ್ಣರಾಜನಗರ ಪಾಂಡುರಂಗದಾಸ್ ಮಂಜುನಾಥ್ ಅವರು ಬರಹಗಾರರಾಗಿ, ನಿರೂಪಕರಾಗಿ, ರಂಗಭೂಮಿ ಕಲಾವಿದರಾಗಿ ಹಾಗೂ ಗಮಕಿಗಳಾಗಿ ಸಾಧನೆ ಪಡೆದಿದ್ದಾರೆ. 


‎ಮಂಜುನಾಥ್ 1983ರ ಆಗಸ್ಟ್ 29ರಂದು ಜನಿಸಿದರು.  ಇವರು ಮೈಸೂರು ಜಿಲ್ಲೆಯ ಕೃಷ್ಣರಾಜನಗರದವರು.  ತಂದೆ

ಖ್ಯಾತ ಗಮಕಿ ಮತ್ತು ಹರಿಕಥಾ ವಿದ್ವಾಂಸರಾದ ಬಿ.ಎಸ್. ಪಾಂಡುರಂಗದಾಸ್.  ತಾಯಿ ಜಯಲಕ್ಷ್ಮಿ.  ಮಂಜುನಾಥ್ ಅವರು ತಮ್ಮ ತಂದೆಯವರಿಂದಲೇ ಗಮಕ ಮತ್ತು ಜ್ಯೋತಿಷದ ಬಗ್ಗೆ ಪ್ರಾರಂಭಿಕ ಶಿಕ್ಷಣ ಪಡೆದರು. ಮಂಜುನಾಥ್ ಅವರು ಬಾಲ್ಯದಿಂದಲೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು 'ರಾಜ್ಯಮಟ್ಟದ ಚರ್ಚಾಪಟು'ವಾಗಿ ಹತ್ತಾರು ಬಾರಿ ಪುರಸ್ಕಾರ ಪಡೆದ ಪ್ರತಿಭಾನ್ವಿತರು. "ಚರ್ಚಾಸ್ಪರ್ಧೆ ಮತ್ತು ಚರ್ಚಾಪಟು" ಎಂಬ ಮಾರ್ಗದರ್ಶಿ ಕೃತಿಯೊಂದನ್ನು ವಿದ್ಯಾರ್ಥಿ ದೆಸೆಯಲ್ಲೇ ಹೊರತಂದಿದ್ದರು. 


ಮಂಜುನಾಥ್ ಅವರು ಪ್ರಸ್ತುತ ಮೈಸೂರಿನ ಸದ್ವಿದ್ಯಾ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಹಿರಿಯ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ಕನ್ನಡ ವಿಭಾಗದ ಮುಖ್ಯಸ್ಥರಾಗಿದ್ದಾರೆ. 2025ರಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಗಮಕಕಲೆಯ ಕುರಿತಾಗಿ  ಇವರು ಸಲ್ಲಿಸಿರುವ  ಸಂಶೋಧನಾ ಗ್ರಂಥಕ್ಕೆ ಡಾಕ್ಟರೇಟ್ ಗೌರವ ಲಭಿಸಿದೆ. 


ಮಂಜುನಾಥ್ ಅವರು ಮೈಸೂರು ಆಕಾಶವಾಣಿಯಲ್ಲಿ ಹವ್ಯಾಸಿ ನಿರೂಪಕರಾಗಿ ಮತ್ತು ಕಲಾವಿದರಾಗಿ ಸುಮಾರು 20 ವರ್ಷಗಳ ಕಾಲ ವಿವಿಧ ಕಾರ್ಯಕ್ರಮಗಳನ್ನು ನೀಡಿದ್ದಾರೆ.

‎ಮಂಜುನಾಥ್ ಅವರು ವಿಶ್ವವಿಖ್ಯಾತ ಮೈಸೂರು ದಸರಾ ಮೆರವಣಿಗೆ ಒಳಗೊಂಡಂತೆ ಪ್ರತಿಷ್ಠಿತ ವೇದಿಕೆಗಳಲ್ಲಿ ಸುಮಾರು ಸಾವಿರಾರು ಕಾರ್ಯಕ್ರಮಗಳ ನಿರೂಪಣೆ ಮಾಡಿದ್ದಾರೆ. 2020ರ ವಿಶ್ವ ವಿಖ್ಯಾತ ಮೈಸೂರು ದಸರಾ ಮೆರವಣಿಗೆಯ ಚಂದನ ವಾಹಿನಿಯ ನೇರ ಪ್ರಸಾರದ ಕಾರ್ಯಕ್ರಮದಲ್ಲಿ ವೀಕ್ಷಕ ವಿವರಣೆ ನೀಡಿದ್ದಾರೆ. 

ಮಂಜುನಾಥ್ ಅವರು ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಬಂಧಿ ಚಟುವಟಿಕೆಗಳಲ್ಲಿ ನಿತ್ಯ ಕ್ರಿಯಾಶೀಲರಾಗಿದ್ದಾರೆ. ಹಲವು ಪತ್ರಿಕೆಗಳಲ್ಲಿ ಸಾಂದರ್ಭಿಕ ಲೇಖನಗಳನ್ನು ಹಾಗೂ ಕವಿತೆಗಳನ್ನು ಪ್ರಕಟಿಸಿದ್ದಾರೆ. 

‎'ಆಂದೋಲನ' ದಿನಪತ್ರಿಕೆಯಲ್ಲಿ 'ಕಗ್ಗ ದೀವಟಿಗೆ' ಎಂಬ ಇವರ ಅಂಕಣ ಒಂದು ವರ್ಷ ನಿರಂತರವಾಗಿ ಪ್ರಕಟವಾಗಿದೆ.


ಮಂಜುನಾಥ್ ಅವರು ಕರ್ನಾಟಕ ಕಲಾಶ್ರೀ ಕೃ. ರಾಮಚಂದ್ರ ಹಾಗೂ ಕ್ಯಾಪ್ಟನ್ ಗಮಕಿ ಗಂಗಮ್ಮ ಕೇಶವಮೂರ್ತಿಯವರ ಮಾರ್ಗದರ್ಶನದೊಂದಿಗೆ ಗಮಕಕಲೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರು.   ಕರ್ನಾಟಕ ಗಮಕ ಕಲಾ ಪರಿಷತ್ತಿನ ಮೈಸೂರು ಜಿಲ್ಲಾ ಘಟಕಕ್ಕೆ ಪ್ರಸ್ತುತ ಅಧ್ಯಕ್ಷರಾಗಿ, ಕೇಂದ್ರ ಪರಿಷತ್ತಿನ ಕಾರ್ಯಕಾರಿ ಸಮಿತಿಯ ಸಹ ಕಾರ್ಯದರ್ಶಿಯಾಗಿ, 'ಗಮಕ ದುಂದುಭಿ' ತ್ರೈಮಾಸಿಕ ಪತ್ರಿಕೆಯ ಸಂಪಾದಕರಾಗಿ ನಿರಂತರವಾಗಿ ಗಮಕ ಸಂಬಂಧಿ ಕೆಲಸದಲ್ಲಿ ತೊಡಗಿದ್ದಾರೆ. ಸರಿಸುಮಾರು ಮುನ್ನೂರಕ್ಕೂ ಹೆಚ್ಚು ಗಮಕ ಕೇಂದ್ರೀಕೃತ ಕಾರ್ಯಕ್ರಮಗಳನ್ನು ನೀಡಿದ್ದು ಹಲವಾರು ಪುರಸ್ಕಾರಗಳಿಗೆ ಪಾತ್ರರಾಗಿದ್ದಾರೆ. 'ಗಮಕ ದುಂದುಭಿ' ಎಂಬ ಪತ್ರಿಕೆಯ ಸಂಪಾದಕರಾಗಿದ್ದಾರೆ. 

‎ಮಂಜುನಾಥ್ ಅವರು 2006 ರಲ್ಲಿ ನಡೆದ ವಿಶ್ವವಿದ್ಯಾನಿಲಯಗಳ ಮಟ್ಟದ 'ರಾಷ್ಟ್ರೀಯ ಯುವಜನೋತ್ಸವ' ಕಾರ್ಯಕ್ರಮಕ್ಕೆ ಮೈಸೂರು ವಿಶ್ವವಿದ್ಯಾನಿಲಯದ ಪ್ರತಿನಿಧಿಯಾಗಿ ತಮ್ಮ ತಂಡದೊಂದಿಗೆ ಹರಿಯಾಣದ ಕುರುಕ್ಷೇತ್ರದಲ್ಲಿ ನಡೆದ ‘ಪ್ರಹಸನ ಸ್ಪರ್ಧೆ’ಯಲ್ಲಿ ಪಾಲ್ಗೊಂಡು ‘ಚಿನ್ನದ ಪದಕ’ ವನ್ನು ಗಳಿಸಿದವರು. ಇವರಿಗೆ  'ಸಮರ್ಥ ಕನ್ನಡಿಗ ಪ್ರಶಸ್ತಿ', 'ಗಮಕ ವ್ಯಾಖ್ಯಾನ ಚತುರ ಪ್ರಶಸ್ತಿ', 'ನಮ್ಮೂರಿನ ಸಾಧಕ ಪ್ರಶಸ್ತಿ', 'ಉತ್ತಮ ಶಿಕ್ಷಕ ಪ್ರಶಸ್ತಿ', 'ಹೊಯ್ಸಳ ಸಾಂಸ್ಕೃತಿಕ ಪ್ರಶಸ್ತಿ' , 'ಗಮಕ ವ್ಯಾಖ್ಯಾನಪಟು ಪ್ರಶಸ್ತಿ' ಹಾಗೂ 2023ರ 'ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿ' ಮತ್ತು 'ಕುವೆಂಪು ಶಿಕ್ಷಣ ಚೇತನ ಪ್ರಶಸ್ತಿ' 2024ರ 'ಆದರ್ಶ ಪ್ರತಿಭಾರತ್ನ ಪ್ರಶಸ್ತಿ' ಮುಂತಾದ ಗೌರವಗಳು ಸಂದಿವೆ.


ಮಂಜುನಾಥ್ ಅವರ ಪತ್ನಿ ಹೆಚ್. ವಿ. ಉಷಾ ಮಂಜುನಾಥ್.  ಈ ದಂಪತಿಗೆ  ಕೆ.ಎಂ. ಮುಕುಂದ ಉಪಮನ್ಯು ಮತ್ತು ಕೆ.ಎಂ. ಪೂರ್ವಿಕ್ ಉಪಮನ್ಯು ಎಂಬ ಸುಪುತ್ರರಿದ್ದಾರೆ. 


ಸಾಧಕರಾದ ಮಂಜುನಾಥ್ ಅವರಿಗೆ ಹುಟ್ಟುಹಬ್ಬದ ಶುಭಹಾರೈಕೆಗಳು.  ನಮಸ್ಕಾರ.  



ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ