ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಕೃಷ್ಣಾ ಮನವಳ್ಳಿ


 ಕೃಷ್ಣಾ ಮನವಳ್ಳಿ 


ಪ್ರೊ. ಕೃಷ್ಣಾ ಮನವಳ್ಳಿ ಅವರು ಪ್ರಾಧ್ಯಾಪಕರಾಗಿ, ಕನ್ನಡ ಮತ್ತು ಇಂಗ್ಲಿಷಿನ ಬಹುಮುಖಿ ಸಾಹಿತ್ಯ ಸಾಧಕರಾಗಿ ಹೆಸರಾಗಿದ್ದಾರೆ.

ಆಗಸ್ಟ್ 30, ಕೃಷ್ಣಾ ಮನವಳ್ಳಿ ಅವರ ಜನ್ಮದಿನ. ಇವರು  ಮೈಸೂರು ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಇವರು ಹಲವು ವರ್ಷಗಳ ಕಾಲ ಅಮೆರಿಕದಲ್ಲಿ ಬೋಧಿಸಿದ್ದರು. 

ಕೃಷ್ಣಾ ಅವರು ಪ್ರಮುಖವಾಗಿ ಕನ್ನಡ ಮತ್ತು ಇಂಗ್ಲಿಷಿನಲ್ಲಿ ಒಬ್ಬ ಸಾಹಿತ್ಯ ವಿಮರ್ಶಕಿ ಮತ್ತು ಅನುವಾದಕಿ. ಕೃಷ್ಣಾ ಮನವಳ್ಳಿ ಅವರು ತಮ್ಮ ಅಮೆರಿಕ ಮತ್ತು ಭಾರತದಲ್ಲಿನ ಶೈಕ್ಷಣಿಕ ಮತ್ತು ವೃತ್ತಿಜೀವನದಲ್ಲಿ,  ಸಮಕಾಲೀನ ಬ್ರಿಟಿಷ್ ಸಾಹಿತ್ಯ, ದಕ್ಷಿಣ ಏಷ್ಯಾದ ಬರವಣಿಗೆ, ವಸಾಹತುಶಾಹಿ ನಂತರದ ಅಧ್ಯಯನಗಳು, ಸ್ತ್ರೀವಾದ, ಸಾಂಸ್ಕೃತಿಕ ಅಧ್ಯಯನಗಳು ಮತ್ತು ಅನುವಾದಗಳು ಮುಂತಾದ ಬಹು ಕ್ಷೇತ್ರಗಳಲ್ಲಿ ಕೆಲಸ ಮಾಡಿದ್ದಾರೆ.  ತುಲನಾತ್ಮಕ ವಿಮರ್ಶಾತ್ಮಕ ಅಧ್ಯಯನಗಳು (ಯುಕೆ), ಜರ್ನಲ್ ಆಫ್ ಕಂಟೆಂಪರರಿ ಥಾಟ್ (ಯುಎಸ್ ಮತ್ತು ಭಾರತ), ಸ್ಟಡೀಸ್ ಇನ್ ಸೌತ್ ಏಷ್ಯನ್ ಫಿಲ್ಮ್ ಅಂಡ್ ಮೀಡಿಯಾ (ಯುಎಸ್), ಪ್ರೌಡ್ ಫ್ಲೆಶ್, ಆಫ್ರಿಕನ್ ಜರ್ನಲ್ ಆಫ್ ಕಲ್ಚರ್ ಮತ್ತು ಇತರ ಪ್ರಮುಖ ಸಾಹಿತ್ಯ ಮತ್ತು ಸಾಂಸ್ಕೃತಿಕ ಅಧ್ಯಯನ ಮುಂತಾದ ಸಂವಹನ ಮಾಧ್ಯಮಗಳಲ್ಲಿ ಕೃಷ್ಣಾ ಅವರ ಚಿಂತನೆಗಳು ವ್ಯಾಪಕವಾಗಿ ಪ್ರಸ್ತುತಿಗೊಂಡಿವೆ. ಅವರು ಅಮೇರಿಕನ್ ಕಂಪ್ಯಾರಿಟಿವ್ ಲಿಟರೇಚರ್ ಅಸೋಸಿಯೇಷನ್ ಮತ್ತು ಹಾರ್ವರ್ಡ್ ವಿಶ್ವವಿದ್ಯಾಲಯ, ಕಾರ್ನೆಗೀ ಫೌಂಡೇಶನ್ ಫಾರ್ ಅಡ್ವಾನ್ಸ್‌ಮೆಂಟ್ ಆಫ್ ಟೀಚಿಂಗ್ (ಟೆಕ್ಸಾಸ್ ಎ & ಎಂ), ಮತ್ತು ರಾಕಿ ಮೌಂಟೇನ್ ಎಂಎಲ್ಎ (ಕ್ಯಾಲ್ಗರಿ, ಕೆನಡಾ) ಸೇರಿದಂತೆ ವಿಶ್ವದಾದ್ಯಂತದ ಪ್ರಮುಖ ಸೆಮಿನಾರ್‌ಗಳು ಮತ್ತು ಸಮ್ಮೇಳನಗಳಲ್ಲಿ ಪ್ರಬಂಧ ಮಂಡಿಸಿದ್ದಾರೆ. ಇವುಗಳ ಜೊತೆಗೆ, ಟೈಮ್ಸ್ ಆಫ್ ಇಂಡಿಯಾ, ಹಿಂದೂ ಮತ್ತು ಇಂಡಿಯನ್ ಎಕ್ಸ್‌ಪ್ರೆಸ್‌ಗಾಗಿ ಸ್ವತಂತ್ರ ಬರವಣಿಗೆ, ಸಾಹಿತ್ಯ ವಿಮರ್ಶೆಗಳು ಮತ್ತು ಸಂದರ್ಶನಗಳನ್ನು ಮಾಡುತ್ತ ಬಂದಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿಯ (ನವದೆಹಲಿ) ಇಂಗ್ಲಿಷ್ ಸಲಹಾ ಮಂಡಳಿಯ ಸದಸ್ಯರಾಗಿರುವುದರ ಜೊತೆಗೆ, ಇವರು ರಾಜ್ಯದ ಅನೇಕ ಶೈಕ್ಷಣಿಕ ಮತ್ತು ವಿಶ್ವವಿದ್ಯಾಲಯ ಆಡಳಿತ ಮಂಡಳಿಗಳಲ್ಲಿದ್ದಾರೆ.

ಕೃಷ್ಣಾ ಮನವಳ್ಳಿ ಅವರ ಪ್ರಕಟಣೆಗಳಲ್ಲಿ ಡಾ. ಚಂದ್ರಶೇಖರ ಕಂಬಾರ ಅವರ ಕಾದಂಬರಿಗಳಾದ ಕರಿಮಾಯಿ (Karimayi) ಮತ್ತು ಶಿವನ ಡಂಗುರ (Shivas Drum) ಸೇರಿವೆ. ಪೆಂಗ್ವಿನ್ ರಾಂಡಮ್ ಹೌಸ್ ಕೃಷ್ಣಾ ಅವರು ಅನುವಾದಿಸಿರುವ ಕಂಬಾರರ ಋಷ್ಯಶೃಂಗ ಮತ್ತು ಮಹಮೂದ್ ಗವಾನ್ ನಾಟಕಗಳ ಅನುವಾದವನ್ನು (Two plays) ಪ್ರಕಟಿಸಿದೆ. ಅವರು ರಾಷ್ಟ್ರೀಯ ನಾಟಕ ಶಾಲೆ (2021) ಗಾಗಿ ಚಂದ್ರಶೇಖರ ಕಂಬಾರರ ಬಗ್ಗೆ ‘Chandrasekhar Kambar A Monograph’  ಎಂಬ ಕೃತಿ ಬರೆದಿದ್ದಾರೆ. ಅವರು ಸಾಹಿತ್ಯ ಅಕಾಡೆಮಿಗಾಗಿ ತ್ರಿವೇಣಿ ಅವರ ಕಾದಂಬರಿಯನ್ನು ಅನುವಾದಿಸಿದ್ದಾರೆ.  ಕಂಬಾರರು ಕನ್ನಡದಲ್ಲಿ ಮೂಡಿಸಿರುವ ಜಾನಪದ ಕಥೆಗಳನ್ನು ‘When the wind God fell Sick and other Folk Tales’ ಎಂಬ ಅನುವಾದ ಕೃತಿ ಮಾಡಿದ್ದಾರೆ.

ಕರಿಮಾಯಿ ಅನುವಾದಕ್ಕಾಗಿ ಕೃಷ್ಣಾ ಮನವಳ್ಳಿ ಅವರಿಗೆ 2017 ರ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ.

ಪ್ರೊ.  ಕೃಷ್ಣಾ ಮನವಳ್ಳಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.

Happy birthday Prof. Krishna Manavalli 🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ