ಪ್ರಕಾಶ್ ಕೌಶಿಕ್
ಪ್ರಕಾಶ್ ಕೌಶಿಕ್
ಇಂದು ಗಮಕಿಗಳೂ, ವಿದ್ವಾಂಸರೂ, ಸಾಂಸ್ಕೃತಿಕ ಸಂಘಟಕರೂ, ಕರ್ನಾಟಕ ಸಂಗೀತದಲ್ಲಿ ಹರಿದಾಸ ಸಾಹಿತ್ಯದ ಬಳಕೆಗೆ ಅಪಾರವಾಗಿ ಶ್ರಮಿಸಿದ ಪೂಜ್ಯ ಪ್ರಕಾಶ್ ಕೌಶಿಕ್ ಅವರ ಜನ್ಮದಿನ ಸ್ಮರಣೆ ದಿನ. ತಮ್ನ ಕಡೆಯ ದಿನಗಳವರೆಗೆ ಹಲವಾರು ಬೃಹತ್ ಯೋಜನೆಗಳ ಜೊತೆಗೆ ಅವರು ಸದಾ ಸಕ್ರಿಯರಾಗಿದ್ದವರು. ಅವರ ಮಧುರ ಧ್ವನಿಯ ಗಮಕ, ಮಧುರ ಮಾತು, ಮಧುರ ವಿಚಾರ, ಚಿಂತನೆ, ಮಂದಹಾಸ, ಸ್ನೇಹ ಹೀಗೆ ಸಕಲವೂ ಮಧುರ ನೆನಪುಗಳು.
ಅವರ ಜನ್ಮದಿನದ ಸಂದರ್ಭದಲ್ಲಿ ಅವರು ನನ್ನಲ್ಲಿ ನಿರೂಪಿಸಿದ ಕೆಲವು ಘಟನೆಗಳ ಮೂಲಕ ಅವರನ್ನು ಕಾಣುವ ಪ್ರಯತ್ನ ಮಾಡುತ್ತಿರುವೆ:
ಘಟನೆ 1:
ಮಾನ್ಯ ತಿರು ಶ್ರೀಧರ್ ರವರೆ,
ಸಂಗೀತ ಕಲಾನಿಧಿ ಆರ್.ಕೆ ಶ್ರೀಕಂಠನ್
ಅವರ ಬಗ್ಗೆ ಅದ್ಭುತವಾದ ಲೇಖನವನ್ನು ಬರೆದು ಸ್ಮರಿಸಿದ್ದೀರಿ. ಧನ್ಯವಾದಗಳು ಸರ್.
ನಾನು ಸಂಗೀತ ವಂಶಕ್ಕೆ ಸೇರಿ 53 ವರ್ಷಗಳು ಸಂದಿವೆ. 45 ವರ್ಷಗಳ ಕಾಲ ಅವರೊಡನೆ ಒಡನಾಟ ನನಗೆ ದಕ್ಕಿತ್ತು. ಸಂಗೀತ ಪ್ರಪಂಚದ ಅನೇಕ ಅದ್ಭುತ ಘಟನೆಗಳು ಸುಳಿದು ಹೋಗಿವೆ. ಅವುಗಳಲ್ಲಿ ಒಂದು ಮಾತ್ರ ಬಹಳ ಅವಿಸ್ಮರಣೀಯವಾದದ್ದು, ಇಬ್ಬರು ಸಂಗೀತ ಕ್ಷೇತ್ರದ ಐರಾವತಗಳು ಗುರುಶಿಷ್ಯ ಸಂಬಂಧದಲ್ಲಿ ಭೇಟಿಯಾದದ್ದು.
1987ರಲ್ಲಿ ಭಾರತ ರತ್ನ ಎಂ.ಎಸ್. ಸುಬ್ಬುಲಕ್ಷ್ಮಿಯವರಿಂದ ಶ್ರೀ ಪುರಂದರ ದಾಸರ ಕೀರ್ತನೆಗಳ ಕಛೇರಿಯನ್ನು ಆಯೋಜಿಸಿದ್ದೆ. ಎಂ.ಎಸ್. ಅವರು ಬಹಳ ಸಂತೋಷದಿಂದ ಒಪ್ಪಿ ಕೆಲವು ಸಾಂಪ್ರದಾಯಿಕ ದೇವರ ನಾಮಗಳನ್ನು ರೆಕಾರ್ಡ್ ಮಾಡಿ ಕಳಿಸಿಕೊಡಲು ತಿಳಿಸಿದರು. ನಾನು ಇದನ್ನು ಬಹಳ ಸಂಕೋಚದಿಂದ ಆರ್. ಕೆ. ಎಸ್ ರವರಲ್ಲಿ ಪ್ರಸ್ತಾಪಿಸಿದಾಗ ಅವರು ಕೂಡಲೇ ಸಂತೋಷದಿಂದ ಸಮ್ಮತಿಸಿ ರೆಕಾರ್ಡ್ ಯಾಕೆ ನಾನೆ ಬಂದು ಪಾಠ ಮಾಡುತ್ತೇನೆ ಎಂದು ಹೇಳಿ ಮದರಾಸಿನ ಎಂ.ಎಸ್ ಮನೆಗೆ ಆಗಮಿಸಿ ಸುಮಾರು 20 ದೇವರನಾಮಗಳ ಪಾಠ ಮಾಡಿದರು.
ಬೆಂಗಳೂರಿನ ಕಚೇರಿಗೆ ಮುಂಚೆ ಇದನ್ನು ಸಭೆಯಲ್ಲಿ ತಿಳಿಸಿ ಶ್ರೀ ಕಂಠನ್ ಅವರಿಗೆ ಕೃತಜ್ಞತೆ ಸಲ್ಲಿಸಿ ಸುಮಾರು 13 ದೇವರನಾಮಗಳನ್ನು ವಿಸ್ತಾರವಾಗಿ ಭಕ್ತಿಯಿಂದ ಹಾಡಿದರು.
ಘಟನೆ 2:
ಜನವರಿ 14ರಂದು ಕರ್ನಾಟಕ ಸಂಗೀತದ ಮೇರು ವಿದ್ವಾಂಸ ಡಾ. ಆರ್ ಕೆ ಶ್ರೀ ಕಂಠನ್ ರವರ 103ನೆಯ ವರ್ಧಂತಿಯನ್ನು ಸರಳ ಸುಂದರವಾಗಿ ಆಚರಿಸಲಾಯಿತು
ಸಂಗೀತ ಹಾಗೂ ಅಧ್ಯಾತ್ಮ ಪ್ರಪಂಚದ ಇಬ್ಬರು ಮಹನೀಯರಿಗೆ ಶ್ರೀ ಕಂಠನ್ ರವರ ಹೆಸರಿನಲ್ಲಿ ಅದ್ಭುತ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ಭಂಡಾರಕೇರಿ ಮಠಾಧೀಶರಾದ ಶ್ರೀ ಶ್ರೀ ವಿದ್ಯಾಧೀಶ ಶ್ರೀ ಪಾದಂಗಳವರು ಹಾಗೂ ವಿದ್ವಾನ್ ಪಾವಗಡ ಪ್ರಕಾಶರಾಯರು ಉಪಸ್ಥಿತರಿದ್ದರು. ನಂತರ ಪ್ರಶಸ್ತಿ ವಿಜೇತ ವಿದ್ವಾನ್ ತ್ರಿಚೂರು ರಾಮಚಂದ್ರನ್
ಅವರಿಂದ ಸಂಗೀತ ಕಛೇರಿ ನಡೆಯಿತು
ಘಟನೆ 3:
ಇದು ಮಾನ್ಯ ಎಸ್.ಎಮ್.ಕೃಷ್ಣ ಅವರು ಬದುಕಿದ್ದಾಗ ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ದೊರೆತ ಸಂದರ್ಭ:
ನನ್ನ ಮತ್ತು ಕೃಷ್ಣರ ಪರಿಚಯ ಸುಮಾರು 30 ವರ್ಷಗಳಷ್ಟು ಹಳೆಯದು. ಯಾವ ಪದವಿಯೂ ಇಲ್ಲದ ಕಾಲದಲ್ಲಿ ಅವರು ಮಂತ್ರಾಲಯಕ್ಕೆ ಆಗಮಿಸಿ ದರ್ಶನ ಮಾಡಿದರು. ಮಂಗಳಾರತಿಯ ಸಮಯದಲ್ಲಿ ಪಕ್ಕದಲ್ಲಿದ್ದ ನಾನು ತಟಕ್ಕನೆ ಸರ್ ತಾವು ಮುಖ್ಯಮಂತ್ರಿಗಳಾಗುತ್ತೀರಿ ಇಂದೇ ಪ್ರಮಾಣ ವಚನವನ್ನು ಗುರು ಸನ್ನಿಧಿಯಲ್ಲಿ ಸ್ವೀಕರಿಸಿ ಬಿಡಿ. ಇದು ನಾನು ಹೇಳುತ್ತಿಲ್ಲ ಗುರುರಾಜರ ಆದೇಶ ಎಂದು ಬಿಟ್ಟೆ. ಇದನ್ನು ನಾನು ಹೇಗೆ ಹೇಳಿದೆ ಎಂಬುದು ಇಂದಿಗೂ ನನಗೆ ಗೊತ್ತಿಲ್ಲ. ಇದನ್ನು ಕೃಷ್ಣರವರು ತಮ್ಮ ಚುನಾವಣಾ ಭಾಷಣದಲ್ಲಿ ಸ್ಮರಿಸಿದರು. ಅದರಂತೆಯೇ ಮುಖ್ಯಮಂತ್ರಿಗಳಾಗಿ ದೊಡ್ಡ ಪದವಿಗಳನ್ನು ಅಲಂಕರಿಸಿದರು. ವೀರಪ್ಪನ್ ಪ್ರಕರಣದಲ್ಲಂತೂ ಸ್ವಯಂ ಮಂತ್ರಾಲಯದ ಶ್ರೀ ಶ್ರೀ ಗಳವರೆ ಅವರ ಮನೆಗೆ ಆಗಮಿಸಿ ಅನುಗ್ರಹ ಮಾಡಿ ತೊಂದರೆಯನ್ನು ನಿವಾರಣೆ ಮಾಡಿದರು.
ಬಾಲಮುರಳಿಕೃಷ್ಣ, ಭೀಮಸೇನ ಜೋಷಿ, ವೆಂಕೋಬ ದಾಸರು ಹಾಗೂ ಎಂ ಎಸ್ ಸುಬ್ಬುಲಕ್ಷ್ಮಿ ಯವರಿಗೆ ನೀಡಿದ ಹರಿದಾಸ ಪ್ರಶಸ್ತಿಯನ್ನು ಪ್ರಾಯೋಜಿಸಿದರು. ನನಗೆ ಆಂಜಿಯೋಪ್ಲಾಸ್ಟಿ ಆದಾಗ ಆಸ್ಪತ್ರೆಗೆ ಆಗಮಿಸಿ ಕ್ಷೇಮ ವಿಚಾರಿಸಿ ಸಹಾಯ ಮಾಡಿದರು.
ಘಟನೆ 4:
70 ವರ್ಷಗಳ ಹಿಂದಿನ ನೆನಪು.
ಜೈ.ಸಿ ರಸ್ತೆಯಲ್ಲಿ ಈಸ್ಟ್ರ ನ್ ಪ್ರೆಸ್ ಇತ್ತು
ಅದರ ಮಾಲಿಕ ಎಂ.ಯಸ್. ಚಿಂತಾಮಣಿಯವರು ಕನ್ನಡ ಪ್ರೇಮಿಯಾಗಿ ವಾಹಿನಿ ಪ್ರಕಾಶವನ್ನು ಆರಂಭಿಸಿದವರು. ಶೇಷಪ್ಪನವರ ಕಿಡಿ ಪತ್ರಿಕೆ, ಅಂದಿನ ಟೆಲಿಫೋನ್ ಡೈರೆಕ್ಟರಿ, ಅನಕೃ, ತರಾಸು, ನಿರಂಜನ ಮುಂತಾದವರ ಕಾದಂಬರಿಗಳು ಅಲ್ಲೆ ಮುದ್ರಣವಾಗುತ್ತಿತ್ತು. ಪ್ರೆಸ್ಸು ಬರೀ ಮುದ್ರಣಾಲಯವಾಗಿರಲಿಲ್ಲ. ಅನೇಕ
ಮಹನೀಯರು ಭೇಟಿಯಾಗುವ ತಾಣವಾಗಿತ್ತು. ಅನಕೃ, ತರಾಸು, ನಾಡಿಗೇರ ಕೃಷ್ಣರಾಯರು, ನಿರಂಜನ, ಮರುಳಪ್ಪ, ಸಿದ್ದವನಳ್ಳಿ ಕೃಷ್ಣಶರ್ಮರು, ತಾತಾಚಾರ್ಯ ಶರ್ಮರು, ಅನಂತಮೂರ್ತಿ ಮುಂತಾದವರಲ್ಲದೆ ಅನೇಕ ಶುದ್ಧ ರಾಜಕೀಯ ವ್ಯಕ್ತಿಗಳು ಬರುತ್ತಿದ್ದು ಪ್ರಮುಖ ವಿಷಯಗಳ ಬಗ್ಗೆ ಅದ್ಭುತವಾದ ಚರ್ಚೆಗಳು ನಡೆಯುತ್ತಿತ್ತು.
ಅದರಲ್ಲಿ ಚಿಂತಾಮಣಿಯವರ ತಾಯಿ ಸಾವಿತ್ರಮ್ಮ ನವರಿಗೂ ಅನಕೃ ಅವರಿಗೂ ಬಹಳ ಸ್ನೇಹ. ಕೃಷ್ಣರಾಯ ಎಂದು ಕೂಗುತ್ತಿದ್ದರು, ಅವರ ಕಾದಂಬರಿಗಳನ್ನು ನನ್ನಿಂದ ಓದಿಸಿ ವಿಮರ್ಶೆ ಮಾಡುವ ಪದ್ದತಿ.
ಅವರ ನಗ್ನ ಸತ್ಯ, ಶನಿ ಸಂತಾನ, ಅಪರಂಜಿ ಮುಂತಾದ ವೇಶ್ಯಾಜೀವನದ ಕಾದಂಬರಿಗಳನ್ನು ಓದಿಸಿ ಕೇಳಿದ ಸಾವಿತ್ರಮ್ಮ (ನನ್ನ ಅಜ್ಜಿ) ಕೃಷ್ಣರಾಯರನ್ನು ತರಾಟೆಗೆ ತೆಗೆದುಕೊಂಡರು, ಆದರೆ ಅನಕೃ ಅವರ ಉತ್ತರದಿಂದ ಸಮಾಧಾನ ಹೊಂದಿದ ಸಾವಿತ್ರಮ್ಮ ಎಲ್ಲರಿಗೂ ಮಾವಿನ ಕಾಯಿ ಚಿತ್ರಾನ್ನ, ಕಡ್ಲೆಬೇಳೆ ಪಾಯಸ ಮಾಡಿ ಬಡಿಸಿದ್ದರು. ಅವರಿಗೆಲ್ಲಾ ಸಪ್ಲೆ ಮಾಡುವ ಕೆಲಸ ನನ್ನದಾಗಿತ್ತು. ಅದೊಂದು ಸ್ಮರಣೀಯ ಕಾಲ. ಇಂದು ಯಾರೂ ಇಲ್ಲ. ಆಗಿನ ನನ್ನ ಅನುಭವ ಒಂದು ಸಮುದ್ರ. ಬರೆದಷ್ಟೂ ಇವೆ
ಮಾನ್ಯ ತಿರು ಶ್ರೀಧರ ಅವರ ತಳುಕಿನ ವೆಂಕಣ್ಣಯ್ಯನವರ ಲೇಖನ ಈ ನೆನಪಿಗೆ ಕಾರಣವಾಯಿತು. ನಮಸ್ಕಾರ.
---
ಪೂಜ್ಯ ಪ್ರಕಾಶ್ ಕೌಶಿಕ್ ಅವರು 2025ರ ಜೂನ್ 28ರಂದು ಈ ಲೋಕವನ್ನಗಲಿದರು. ಅವರು ಅದಕ್ಕೆ ಕೆಲವು ತಿಂಗಳುಗಳ ಹಿಂದೆ ಸಹ ರಾಮಾಯಣದ ಚಿತ್ರಯೋಜನೆ ಮತ್ತು ಇತರ ಹಲವು ವಿಶಾಲವ್ಯಾಪ್ತಿಯ ಯೋಜನೆಗಳ ಕುರಿತಾದ ಉತ್ಸುಕತೆಗಳ ಬಗ್ಗೆ
ನನ್ನೊಡನೆ ದೂರವಾಣಿಯಲ್ಲಿ ಚರ್ಚಿಸಿದ್ದರು.
ಆ ಮಹಾನುಭಾವರ ಸ್ಮರಣೆಗೆ ನನ್ನ ಅನಂತ ನಮಸ್ಕಾರ 🌷🙏🌷
Prakash Kaushik
ಕಾಮೆಂಟ್‌ಗಳು